Pages

Friday, February 13, 2015

ಡಿಕೆ:

ನಿರ್ದೇಶಕ ಪ್ರೇಮ್ ನಟನೆಯಲ್ಲಿಯೂ ತಮ್ಮ ಖದರ್ ತೋರಿಸಿಯೆ ಬಿಡಬೇಕು ಎಂದು ನಿಂತುಬಿಟ್ಟಿದ್ದಾರೆ. ಆದರೆ ಡಿಕೆ ಚಿತ್ರ ನೋಡಿದವರು ಆಗಾಗ ಸಿನಿಮಾ ನೋಡುವುದಾ ಎದ್ದು ಹೋಗುವುದಾ ಎಂಬ ಯೋಚನೆಯಲ್ಲಿ ನಿಂತು ಕುಳಿತು ಮಾಡುತ್ತಲೇ ಇರುತ್ತಾರೆ. ಅದ್ಯಾಕೆ ಎಂದರೆ ಇಲ್ಲಿ ಪ್ರೇಮ್ ಅವರನ್ನು ತೋರಿಸುವುದಕ್ಕಿಂತ ನಿರ್ದೇಶಕರಿಗೆ ನೇರ ಬೆರಳು ತೋರಿಸಬಹುದು. ಸಿನಿಮಾ ಹಾಸ್ಯ ಚಿತ್ರವಾ.. ರಾಜಕೀಯ ವಿಡಂಬನೆಯಾ..ಸಾಹಸಮಯವಾ? ಎಂಬೆಲ್ಲಾ ಪ್ರಶ್ನೆಗಳಿಗೆ ಹೌದು ಮತ್ತು ಇಲ್ಲ ಎನ್ನುವ ಉತ್ತರ ಸೂಕ್ತ ಎನಿಸುತ್ತದೆ.
ಚಿತ್ರದ ನಾಯಕ ಡಿಕೆ ಖದರ್ ಖಾನ್. ರಾಜಕೀಯ ಆಕಾಂಕ್ಷಿ. ನಾಯಕಿ ರಾಜಕಾರಣಿಯ ಕೊಬ್ಬಿನ ಮಗಳು. ತನ್ನ ಡೋಂಟ್ ಕೇರ್ ವ್ಯಕ್ತಿತ್ವದಿಂದ ರಾಜಕಾರಣಿ ಶಿವೇಗೌಡನ ಮೇಲೆ ಸವಾಲಿಗೆ ಬೀಳುವ ನಾಯಕ ಮಗಳ ಮೇಲೆ ಕಣ್ಣುಹಾಕಿದರೆ, ಶೋಭರಾಜ್ ಜನಪ್ರಿಯತೆಯ ಹಪಾಹಪಿಯಲ್ಲಿ ಡಿಕೆಯನ್ನು ಬಳಸಿಕೊಂಡು ಮುಂದೆ ಬರಲು ಯೋಚಿಸುತ್ತಾನೆ. ಇಲ್ಲಿ ಎಲ್ಲರೂ ಅವರವದೇ ಪ್ಲಾನ್ ಮಾಡಿ ಒಬ್ಬರನ್ನೊಬ್ಬರು ಬಳಸಿಕೊಂಡು ರಾಜಕೀಯದಲ್ಲಿ ತಮ್ಮ ಅಸ್ತಿತ್ವ ಕಂಡುಕೊಳ್ಳಲು ಹೆಣಗಾಡುತ್ತಾರೆ. ಕೊನೆಗೆ ಅನಿರೀಕ್ಷಿತ ಬೆಳವಣಿಗೆಯೊಂದಿಗೆ ಚಿತ್ರ ಸುಖಾಂತ್ಯವಾಗುತ್ತದೆ.
ಒಂದು ರಾಜಕೀಯ ವಿಡಂಬನಾತ್ಮಕ ಸಿನಿಮಾ ಮಾಡಬೇಕೆಂಬ ಆಶಯದಲ್ಲಿ ನಿರ್ದೇಶಕ ವಿಜಯ್ ಹಂಪಾಳಿ ಕತೆ ಹೆಣೆದಿದ್ದಾರೆ. ಆದರೆ ಅವರು ಸೋತಿರುವುದು ಕುತೂಹಲಕಾರಿ ನಿರೂಪಣೆಯಲ್ಲಿ ಸಶಕ್ತ ಪಾತ್ರ ಸೃಷ್ಟಿಯಲ್ಲಿ. ಪ್ರತಿ ಪಾತ್ರವೂ ತನ್ನದೇ ಆದ ಬಿಲ್ಡ್ ಅಪ್ ತೆಗೆದುಕೊಂಡರೂ ಯಾವುದೂ ಕೊನೆಯವರೆಗೆ ತಮ್ಮತನವನ್ನು ಕಾಯ್ದುಕೊಳ್ಳುವುದಿಲ್ಲ. ಹಾಗಾಗಿ ಚಿತ್ರ ಪ್ರಾರಂಭವಾದ ನಂತರ ಕತೆ ಪ್ರೇಕ್ಷಕನ ಹಿಡಿತಕ್ಕೂ ಸಿಕ್ಕದೆ, ನಿರ್ದೇಶಕನ ಹಿಡಿತಕ್ಕೂ ಸಿಕ್ಕದೆ ಸೂತ್ರ ಹರಿದ ಗಾಳಿಪಟವಾಗುತ್ತದೆ. ಹಾಸ್ಯ ಅಪಹಾಸ್ಯವಾಗುತ್ತದೆ. ಪಾತ್ರ ಪೋಷಣೆಯಲ್ಲಿಯೇ ಹೊಯ್ದಾಟವಿದೆ. ಖದರ್ ಆಗುವ ಡಿಕೆ ಪಾತ್ರ ಅಲ್ಲಲ್ಲಿ ಇಷ್ಟ ಬಂದ ಹಾಗೆ ಮಾಡುತ್ತದೆ, ಆಡುತ್ತದೆ. ಶೋಭರಾಜ್ ಪಾತ್ರವನ್ನು ಈವತ್ತಿನ ರಾಜಕೀಯ ದೊಂಬರಾಟ ಮತ್ತು ಜನರ ಮನಸ್ಥಿತಿಯನ್ನು ವ್ಯಕ್ತಪಡಿಸಲು ವಿಡಂಬನಾತ್ಮಕವಾಗಿ ಸೃಷ್ಟಿಸಿದೆಯಾದರೂ ಅದು ಅಪಹಾಸ್ಯಕ್ಕೆ ಎಡೆಮಾಡಿಕೊಟ್ಟಿದೆ. ಶರತ್ ಲೋಹಿತಾಶ್ವ ಪಾತ್ರ ವಾಸ್ತವಕ್ಕೆ ದೂರ ಎನಿಸುತ್ತದೆ. ಇತ್ತ ವಿಲನ್ ಆಗದ ಹೀರೋ ಆಗದ ಕಾಮಿಡಿ ಪಾತ್ರವೂ ಆಗದೆ ತ್ರಿಶಂಕು ಸ್ಥಿತಿಯಲ್ಲಿಯೇ ಕೊನೆಯಾಗುತ್ತದೆ. ನಾಯಕಿ ಚೈತ್ರ ಜಂಭದ ಹುಡುಗಿಯಾಗಿದ್ದವಳು ಡಿಕೆಗೆ ಮನಸೋಲುವಾಗ ಇದು ರಾಜಕೀಯ ಹುನ್ನಾರ ಎನಿಸುತ್ತದೆ. ಆದರೆ ಅದನ್ನು ಹೌದು ಇಲ್ಲಗಳ ನಡುವೆ ನಿರ್ದೇಶಕರು ನಿರೂಪಿಸುತ್ತಾ ಸಾಗುವುದರಿಂದ ನಿಜವಾ ಸುಳ್ಳಾ ಎನ್ನುವ ಗೊಂದಲದಲ್ಲಿ ಚಿತ್ರ ಮುಗಿದ ಮೇಲೂ ಪ್ರೇಕ್ಷಕ ತಲೆ ಕೆರೆದುಕೊಳ್ಳದೆ ಇರುವುದಿಲ್ಲ. ಇನು ಸ್ವಾಮೀಜಿ ಪಾತ್ರವಂತೂ ಅದ್ವಾನ..
ನಿರ್ದೇಶಕ ಪ್ರೇಮ್ ಗೆ ತಮ್ಮ ಚಿತ್ರ ಎಂದರೆ ಅದಕ್ಕೆ ಗಿಮಿಕ್ ಮಾಡಲೇಬೇಕು. ಡಿಕೆ ಚಿತ್ರಕ್ಕೂ ಅವರು ಅದನ್ನೇ ಮಾಡಿದ್ದಾರೆ. ಮೊದಲಿಗೆ ಹೆಸರಿನ ಗೊಂದಲ ಸೃಷ್ಟಿಸಿ ಇದು ಡಿಕೆಶಿವಕುಮಾರ್ ಸಂಬಂಧಿ ಕತೆ ಎಂತಲೂ ಇಲ್ಲ ಇದು ಹೆಚ್ ಡಿ ಕುಮಾರ್ ಸ್ವಾಮಿ ಕತೆ ಎಂತಲೂ ವಿವಾದ ಮಾಡಲು ನೋಡಿದರು. ಆನಂತರ ಸನ್ನಿಲಿಯಾನ್ ಕರೆತಂದು ಸುದ್ದಿ ಮಾಡಿದರು. ಇದೆಲ್ಲವೂ ಪ್ರೇಕ್ಷಕನನ್ನು ಚಿತ್ರಮಂದಿರಕ್ಕೆ ಕರೆತರುವಲ್ಲಿ ಮಾತ್ರ ಸಹಾಯಕವಾಗುತ್ತದೆ. ಆದರೆ ಚಿತ್ರಮಂದಿರದಲ್ಲಿ ಚಿತ್ರ ಮುಗಿಯುವವರೆಗೆ ಕೂರಿಸಲು ಕತೆ ಚಿತ್ರಕತೆ ಬೇಕಾಗುತ್ತದೆ. ನಟ ಪ್ರೇಮ್ ಆಗಲಿ, ನಿರ್ದೇಶಕ ವಿಜಯ್ ಹಂಪಾಳಿ ಆಗಲಿ ಇದನ್ನು ಅರ್ಥ ಮಾಡಿಕೊಳ್ಳಬೇಕು. ಇಲ್ಲವಾದಲ್ಲಿ ಆರಂಭ ಅಬ್ಬರ.. ಆಮೇಲೆ ತತ್ತರ ಎನ್ನಬೇಕಾಗುತ್ತದೆ.
ಛಾಯಾಗ್ರಹಣ ಹಾಡುಗಳಲ್ಲಿ ಕಲರ್ ಫುಲ್ ಎನಿಸುತ್ತದೆ. ಅರ್ಜುನ್ ಜನ್ಯ ಸಂಗೀತದಲ್ಲಿ ಟೈಟಲ್ ಟ್ರ್ಯಾಕ್ ಚೆನ್ನಾಗಿದೆ. ಉಳಿದಂತೆ ಚಿತ್ರಮಂದಿರದಿಂದ ಹೊರಬರುವಷ್ಟರಲ್ಲಿ ಮರೆತುಹೋಗುತ್ತದೆ. ಸಾಹಸ ದೃಶ್ಯಗಳು ಓಕೆ. ಪ್ರೇಂ ಮಾತಿನಲ್ಲಿ ಗಮನ ಸೆಳೆಯುತ್ತಾರೆ. ಉಳಿದಂತೆ ಉಳಿದವರೆಲ್ಲರೂ ಅಲ್ಲಲ್ಲಿ ಮಂಗನಾಟ ಆದಿ ಅದೇ ಅಭಿನಯ ಎಂದು ನಂಬಿಸಲು ಪ್ರಯತ್ನಿಸಿದ್ದಾರೆ. ನಾಯಕಿ ಚೈತ್ರ ಗಯ್ಯಾಳಿ ಹುಡುಗಿಯಾಗಿ ಗಮನ ಸೆಳೆಯುತ್ತಾರೆ. ಶರತ್ ಲೋಹಿತಾಶ್ವ ಮತ್ತು ಶೋಭರಾಜ್ ಮತ್ತವರ ಅನುಯಾಯಿಗಳದು ಪಾತ್ರೋಚಿತ ಆಟೋಟ. ಸನ್ನಿ ಲಿಯಾನ್ ಬಂದದ್ದು ಹೋದದ್ದು ಏನೂ ಪ್ರಭಾವ ಬೀರದೆ ಇರುವುದಕ್ಕೆ ಖಂಡಿತ ಸನ್ನಿಲಿಯಾನ್ ಕಾರಣರಲ್ಲ. ಒಟ್ಟಾರೆ ಡಿಕೆ ತೂಕಡಿಕೆಯಾಗದಿದ್ದರೂ ನಡಿ ಆಚೆಕಡಿಕೆಎನ್ನುವಂತೆ ಮಾಡುತ್ತದೆ ಎಂಬುದು ಒಂದು ಸಾಲಿನ ವಿಮರ್ಶೆ.

No comments:

Post a Comment