Pages

Monday, April 14, 2014

ಮರ್ಯಾದೆ:

ಮಂಗಳಮುಖಿಯನ್ನೇ ಮುಖ್ಯ ಪಾತ್ರದಲ್ಲಿರಿಸಿಕೊಂಡ ಸುಮಾರಷ್ಟು ಚಿತ್ರಗಳು ಇತ್ತೀಚಿಗೆ ಬಂದಿವೆ ಎನ್ನಬಹುದು. ಅದು ಭಿನ್ನ ಪ್ರಯತ್ನವಾಗುತ್ತದೆ ಎಂಬುದು ನಿರ್ದೇಶಕರ ಕಲ್ಪನೆ ಇರಬಹುದು. ಕಲ್ಪನಾ, ಚತುರ್ಭುಜ ಮುಂತಾದ ಚಿತ್ರಗಳು ಮಂಗಳಮುಖಿಯನ್ನೇ ಪ್ರಮುಖ ಪಾತ್ರವನ್ನಾಗಿಸಿದ್ದವು.
ಹಾಗೆಯೇ ಮರ್ಯಾದೆ ಕೂಡ ಮಂಗಳಮುಖಿಯ ಕತೆ . ಆದರೆ ಇದ್ಯಾವ ವಿಭಾಗಕ್ಕೆ ಸೇರುತ್ತದೆ ಎಂಬುದನ್ನು ನಿರ್ದೇಶಕರೇ ಹೇಳಬೇಕೆನೋ? ಯಾಕೆಂದರೆ ಒಬ್ಬ/ಳು ಮಂಗಳಮುಖಿ ಎಂದಾಗ ಅದರ ಹೂರಣ ಬೇರೆಯಾಗಿರುತ್ತದೆ. ಇಲ್ಲಿ ಹೂರಣ ಇಷ್ಟೇ. ಮಂಗಳಮುಖಿಯರಿಗೆ ಸಮಾಜದಲ್ಲಿ ಸ್ಥಾನಮಾನವಿಲ್ಲ ಎಂಬುದು. ಆದರೆ ಅದನ್ನು ಸೂಕ್ತ ಚಿತ್ರಕತೆಯ ಜೊತೆಗೆ ನಿರೂಪಿಸಲು ನಿರ್ದೇಶಕರಿಗೆ ಸಾಧ್ಯವಾಗಿಲ್ಲ. ಹಾಗಾಗಿಯೇ ಚಿತ್ರ ಅರೆಬೆಂದ ಅಡುಗೆ ಎನ್ನಬಹುದು.
ಚಿತ್ರದಲ್ಲಿ ಒಂದು ಪ್ರೇಮಕತೆಯಿದೆ. ಅದನ್ನು ನಿರ್ದೇಶಕರು ಇಷ್ಟ ಬಂದ ಹಾಗೆ ನಿರೂಪಿಸಿದ್ದಾರೆ. ಹೊಡೆದಾಟ ಇದೆ. ಅದಕ್ಕೆ ಕಾರಣ ಈಗಾಗಲೇ ಸಾವಿರಾರು ಸಿನಿಮಾದಲ್ಲಿ ಬಂದಿರುವಂತಹದ್ದೇ. ಹೊಡೆದಾಡುವ ನಾಯಕ ನಾಯಕಿಯನ್ನು ಪ್ರೀತಿಸದೇ ಇರುತ್ತಾನೆಯೇ. ಪ್ರೀತಿಸಿದ ಮೇಲೆ ಹಾದಿ ಕುಣಿಯದಿದ್ದರೆ ಏನು ಚೆನ್ನ. ಹಾಗಾಗಿ ಹಾಡುಗಳೂ ಇವೆ. ಅದೆಲ್ಲ ಸರಿ. ಇಷ್ಟೆಲ್ಲಾ ಇದ್ದ ಮೇಲೆ ನಗಬಾರದೇ ಎಂದು ಪ್ರೇಕ್ಷಕ ಕೇಳಿ ಬಿಡುತ್ತಾನೇನೋ ಎಂಬ ಭಯದಿಂದ ಅದನ್ನೂ ಅಲ್ಲಲ್ಲಿ ತೂರಿಸಿದ್ದಾರೆ. ನಗು ಬಂದರೆ ನಗಬಹುದು.
ಇದೆಲ್ಲದರ ಜೊತೆಗೆ ಅದೇಕೆ ಇದೇಕೆ ಎಂಬ ಪ್ರಶ್ನೆ ಹುಟ್ಟುವುದಕ್ಕೂ ಒಂದಷ್ಟು ಅನಗತ್ಯ ದೃಶ್ಯಗಳನ್ನು ತುಂಬುವ ಮೂಲಕ ಅವಕಾಶ ಮಾಡಿಕೊಟ್ಟಿದ್ದಾರೆ ನಿರ್ದೇಶಕರು. ಹಾಗೆಯೇ ಬಾಲಿಶ ಎನಿಸುವ ದೃಶ್ಯವೂ ಅವಾಸ್ತವ ಎನಿಸುವ ದೃಶ್ಯವೂ ಇದೆ.
ನಾಯಕನಾಗಿ ಅಭಿನಯಿಸಿರುವ ನಾಗರಾಜ್ ಅಭಿನಯಿಸುವ ಪ್ರಯತ್ನ ಮಾಡಿದ್ದಾರೆ. ಅದೆಷ್ಟರ ಮಟ್ಟಿಗೆ ಯಶಸ್ವಿಯಾಗಿದೆ ಎಂಬುದನ್ನು ನೋಡುಗನಿಗೆ ಬಿಟ್ಟದ್ದು. ನಾಯಕಿಯಾಗಿ ಹರ್ಷಿಕಾ ಪೂಣಚ್ಚ, ಮಂಗಳಮುಖಿಯಾಗಿ ರವಿ ಚೇತನ್ ನಟಿಸಿದ್ದಾರೆ.ಲಯೆಂದ್ರರ ಹಾಸ್ಯಕ್ಕೆ ಅವರೇ ನಗಬೇಕೇನೋ? ತಾಂತ್ರಿಕವಾಗಿ ಚಿತ್ರ ಸಾದಾರಣ. ಕತೆ ಚಿತ್ರಕತೆ ಸಂಭಾಷಣೆ ಬರೆದು ನಿರ್ದೇಶನ ಮಾಡಿರುವ ಮಹಾರಾಜ್ ಇನ್ನೂ ಪಳಗಬೇಕಿದೆ.

ಒಂದು ಹೊಸ ಚಿತ್ರ ಹೊಸಬ ನಿರ್ದೇಶಕರ ಚಿತ್ರಕ್ಕೆ ಇಷ್ಟೆಲ್ಲಾ ಪೋಸ್ಟ್ ಮಾರ್ಟಂ ಮಾಡಬೇಕೆ? ಎನ್ನುವುದು ಪ್ರಶ್ನೆ. ಆದರೆ ಒಬ್ಬ ಪ್ರೇಕ್ಷಕ ಸಿನಿಮಾ ನೋಡಲು ಹಣ ಸಮಯ ವ್ಯಾಯ ಮಾಡುವಾಗ ಮಾಡಲೇಬೇಕಾಗುತ್ತದೆ ಎಂಬ ಉತ್ತರ ಬರಬಹುದು. ಒಂದು ಕತೆಯನ್ನು ಸಿನಿಮಾವಾಗಿಸುವ ಮುನ್ನ ಯಾವ ವಿಭಾಗಕ್ಕೆ ನಾವು ಸಿನಿಮಾ ಮಾಡುತ್ತಿದ್ದೇವೆ ಎಂಬ ಪ್ರಶ್ನೆಯನ್ನು ತಮ್ಮನ್ನೇ ಕೇಳಿಕೊಂಡು ಅದಕ್ಕೆ ಸ್ಪಷ್ಟ ಉತ್ತರ ಕಂಡುಕೊಂಡ ನಂತರ ನಿರ್ದೇಶಕ ಮುಂದುವರೆಯಬೇಕಾಗುತ್ತದೆ. ತಾನಂದುಕೊಂಡಿದ್ದೆ ಸರಿ ಎಂಬ ನೇರ ನಿರ್ಧಾರ ಇಂತಹ ಸಿನಿಮಾಗಳಿಗೆ ಕಾರಣವಾಗುತ್ತವೆ. ಇಂತಹ ಸಿನಿಮಾಗಳಿಂದ ಯಾರಿಗೂ ಲಾಭವಿಲ್ಲ. ಚಿತ್ರರಂಗಕ್ಕೂ ನಷ್ಟವೇ?

No comments:

Post a Comment