Pages

Saturday, April 19, 2014

ಅಗ್ರಜ:

ಜಗ್ಗೇಶ್ ಎಂದಾಕ್ಷಣ ಅದೊಂದು ಹಾಸ್ಯ ಚಿತ್ರ ಎನ್ನುವುದು ಈವತ್ತಿಗೆ ಜನಜನಿತ ಸಂಗತಿ. ಅವರು ಸಾಕಷ್ಟು ಕೌಟುಂಬಿಕ ಚಿತ್ರಗಳಲ್ಲಿ ಅಭಿನಯಿಸಿದ್ದರೂ ಅವರ ಚಿತ್ರವೆಂದರೆ ಒಂದಷ್ಟಾದರೂ ಹಾಸ್ಯ ಇರಲೆಬೇಕು. ಆದರೆ ಅಗ್ರಜ ಅದಕ್ಕೊಂದು ಅಪವಾದ ಎನ್ನಬಹುದು. ಹಾಗೆಯೇ ತನ್ನ ಇಮೇಜ್ ಬದಲಿಸಿ ಖಳ ಛಾಯೆಯ ಪಾತ್ರವನ್ನು ಒಪ್ಪಿಕೊಂಡು ಅದನ್ನು ಸಮರ್ಥವಾಗಿ ನಿರ್ವಹಿಸಿರುವ ಜಗ್ಗೇಶ್ ಅವರನ್ನು ಅಭಿನಂದಿಸಲೇ ಬೇಕಾಗುತ್ತದೆ.
ಅಗ್ರಜ ಒಂದು ಭ್ರಷ್ಟಾಚಾರ ವಿರೋಧಿ ಚಿತ್ರ. ಕತೆಯ ವಿಷಯಕ್ಕೆ ಬಂದರೆ ಒಬ್ಬ ಭ್ರಷ್ಟಾಚಾರಿ ಮನಬದಲಿಸಿ ಅದರ ವಿರುದ್ಧವೇ ಸಿಡಿದು ನಿಲ್ಲುವ ಕತೆ ಚಿತ್ರದ್ದು. ಇಲ್ಲಿ ಜಗ್ಗೇಶ್ ಅವರದು ಮಧ್ಯವರ್ತಿ ಪಾತ್ರ. ರಾಜಕಾರಣಿಗಳು, ಅಧಿಕಾರಿಗಳು ಮತ್ತು ಉದ್ಯಮಿಗಳ ನಡುವೆ ಸೇತುವಾಗಿ ಹಣ ಹೆಣ್ಣು ಆಮಿಷವೊಡ್ಡಿ ಕೆಲಸಗಳನ್ನು ಮಾಡಿಸಿಕೊಡುವ ಮಧ್ಯವರ್ತಿ ಸಿದ್ಧನ ಕತೆ ಇದು. ಕುಡಿಯುವ, ಲಂಚಕೊಡುವ ತಲೆ ಹಿಡಿಯುವ, ಅನೈತಿಕ ಸಂಬಂಧವುಳ್ಳ ನಾಯಕನ ಪಾತ್ರದಲ್ಲಿ ಜಗ್ಗೇಶ್ ಮಿಂಚಿದ್ದಾರೆ. ಎಲ್ಲೂ ತಮ್ಮ ಪಾತ್ರಕ್ಕೆ ಕಾಮಿಡಿ ಸ್ಪರ್ಶ ಕೊಡದೆ ಪಾತ್ರವನ್ನು ಹೇಗೆ ಬೇಕೋ ಹಾಗೆಯೇ ನಿರ್ವಹಿಸಿದ್ದಾರೆ. ಹಾಗಾಗಿಯೇ ಚಿತ್ರ ಕತೆಗೆ ಒಂದು ಬಲ ಬಂದಿದೆ ಎನ್ನಬಹುದು.
ಅಂದ ಹಾಗೆ ಅಗ್ರಜ ಒಂದು ರೀಮೇಕ್ ಚಿತ್ರ. ತೆಲುಗು ಭಾಷೆಯಲ್ಲಿ 2010 ರಲ್ಲಿ ತೆರೆಗೆ ಬಂದ ಬ್ರೋಕರ್ ಚಿತ್ರದ ಕನ್ನಡದ ಅವತರಣಿಕೆ. ಇದನ್ನು ಸಂಗೀತ ನಿರ್ದೇಶಕ ಆರ್.ಪಿ. ಪಟ್ನಾಯಕ್ ನಿರ್ದೇಶನ ಮಾಡಿದ್ದರು. ಅದನ್ನೇ ಕನ್ನಡಕ್ಕೆ ಅದ್ದೂರಿಯಾಗಿ ತಂದಿದ್ದಾರೆ ನಿರ್ಮಾಪಕ ಗೋವರ್ಧನ್ ಮತ್ತು ನಿರ್ದೇಶಕ ಶ್ರೀನಂದನ್.
ಚಿತ್ರ ಪ್ರಾರಂಭದಿಂದ ಅಂತ್ಯದವರೆಗೆ ನೋಡಿಸಿಕೊಂದು ಹೋಗುವ ಗುಣವಿದೆಯಾದರೂ ಚಿತ್ರದ ಸ್ವಾರಸ್ಯ ಮುಕ್ಕಾಲು ಭಾಗದಲ್ಲೇ ಗೊತ್ತಾಗಿಬಿಡುತ್ತದೆ.ಚಿತ್ರದಲ್ಲಿ ಭ್ರಷ್ಟಾಚಾರದ ಎಲ್ಲಾ ಮಜಲುಗಳನ್ನೂ ತೋರಿಸಿಬಿಡಬೇಕು ಎನ್ನುವ ಧಾವಂತ ಎದ್ದು ಕಾಣುತ್ತದೆ. ಹಾಗಾಗಿಯೇ ಗಂಭೀರವಾಗಿ ಪರಿಣಾಮ ಬೀರಬೇಕಾದ ದೃಶ್ಯಗಳು ಕೆಲವು ಕಡೆ ಕ್ಲೀಷೆ ಎನಿಸುತ್ತದೆ. ಅಂತವುಗಳಲ್ಲಿ ಮೇಷ್ಟರ ಪಿಂಚಿಣಿ ಪ್ರಹಸನವೂ ಒಂದು. ಇದೆಲ್ಲವನ್ನೂ ಹೊರತು ಪಡಿಸಿದರೆ ಅಗ್ರಜ ಕೊತ್ತ ಕಾಸಿಗೆ ಮೋಸ ಮಾಡುವ ಚಿತ್ರವಲ್ಲ. ಅಂದರೆ ಪೂರ್ಣ ಪ್ರಮಾಣದ ಮನರಂಜನೀಯ ಚಿತ್ರ ಎನ್ನುವುದಕ್ಕಿಂತ ಪೂರ್ಣ ಪ್ರಮಾಣದ ಲತೆಯುಲ್ಲ ಚಿತ್ರ ಎನ್ನಬಹುದು. ಸಂಭಾಷಣೆ ಇನ್ನಷ್ಟು ಮೊನಚಾಗಿರಬೇಕಿತ್ತೇನೋ ಎನಿಸಿದರೂ ಕೆಲವು ಕಡೆ ಗಮನ ಸೆಳೆಯುತ್ತದೆ. ಅಲ್ಲಲ್ಲಿ ದ್ವಂದ್ವಾರ್ಥ ಮೇರೆ ಮೀರಿ ಸ್ವಲ್ಪ ಇರುಸು ಮುರುಸಾಗುತ್ತದೆ. ಅದರಲ್ಲೂ ನಿರ್ದೇಶಕ ಓಂ ಪ್ರಕಾಶ್ ದೃಶ್ಯಗಳಲ್ಲಿ ಬರುವ ಮಾತುಗಳು ಅಸಹನೀಯ.
ದರ್ಶನ್ ಪುಟ್ಟದಾದ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಒಂದೂವರೆ ಹಾಡು ಒಂದು ಹೊಡೆದಾಟ, ಒಂದೆರೆಡು ದೃಶ್ಯಗಳಲ್ಲಿ ಬಂದರೂ ಗಮನ ಸೆಳೆಯುವಂತಹ ಪಾತ್ರವದು. ಇನ್ನುಳಿದಂತೆ ಜಗ್ಗೇಶ್ ಮೇಲೆ ಹೇಳಿದಂತೆ ಪೂರ್ಣ ಪ್ರಮಾಣದಲ್ಲಿ ಗಂಭೀರವಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಅಸಂಖ್ಯಾತ ಪಾತ್ರಗಳು ಬರುವುದರಿಂದ ಅವು ಅಲ್ಲಲ್ಲಿ ಬಂದು ತಮ್ಮ ಝಾಲಕ್ ತೋರಿಸಿ ಹೋಗಿಬಿಡುತ್ತವೆ.

ತಾಂತ್ರಿಕವಾಗಿ ಚಿತ್ರ ಅದ್ದೂರಿಯಾಗಿದೆ. ಕೆಲವು ಕಡೆ ಗ್ರಾಫಿಕ್ಸ್ ಕೈ ಕೊಟ್ಟಿದೆ. ಸಂಗೀತ ಮತ್ತು ಛಾಯಾಗ್ರಹಣ ಸಾದಾರಣ ಮಟ್ಟದಲ್ಲಿವೆ ಎನ್ನಬಹುದು. ಒಟ್ಟಾರೆಯಾಗಿ ಹೇಳುವುದಾದರೆ ಭ್ರಷ್ಟಾಚಾರದ ವಿರುದ್ಧ ತೊಡೆ ತಟ್ಟಿ ನಿಲ್ಲುವ ನಾಯಕನ ಸಿನಿಮಾ ನೋಡಿದ್ದವರು ತನ್ನ ಪಶ್ಚಾತ್ತಾಪದಿಂದ ತಿರುಗಿ ಬೀಳುವ ನಾಯಕನ ಕತೆ ನೋಡಬೇಕಾದರೆ ಅಗ್ರಜನನ್ನು ಆರಾಮವಾಗಿ ನೋಡಬಹುದು.

No comments:

Post a Comment