Pages

Sunday, April 13, 2014

ಅತಿ ಅಪರೂಪ:

ಒಮ್ಮೊಮ್ಮೆ ವರವಾದವರೇ ಶಾಪವಾಗಿ ಬಿಡುತ್ತಾರೆ ಎಂಬುವುದಕ್ಕೆ ದಿನೇಶ್ ಬಾಬು ಸೂಕ್ತ ಉದಾಹರಣೆ ಎನ್ನ ಬಹುದು.ಅತ್ಯುತ್ತಮ ತಂತ್ರಜ್ಞರಾದ ಬಾಬು ಕನ್ನಡದಲ್ಲಿ ಸುಪ್ರಭಾತ ನಿರ್ದೇಶನ ಮಾಡಿದ್ದವರು. ಇದು ಸಾಧ್ಯ ಎನ್ನುವ ಚಿತ್ರವನ್ನು ಕೇವಲ ನಲವತ್ತೆಂಟು ಗಂಟೆಗಳಲ್ಲಿ ನಿರ್ದೇಶನ ಮಾಡಿ ಸಾಧಿಸಿದ್ದವರು. ಆದರೆ ಅವರ ಸೆಕಂಡ್ ಇನ್ನಿಂಗ್ಸ್ ಕೇವಲ ದುಡ್ಡಿಗಾಗಿ ಮಾಡಿದ್ದೇನೋ ಎನಿಸುವಷ್ಟರ ಮಟ್ಟಿಗೆ ರೀಲು ಸುತ್ತಲು ಶುರು ಮಾಡಿಬಿಟ್ಟರು. ಎರಡು ಕ್ಯಾಮೆರಾ, ಒಂದೇ ಮನೆ ಒಂದಷ್ಟು ಕಲಾವಿದರು ಒಂದು ಸರಳವಾದ ಕತೆಯಲ್ಲದ ಕತೆಯನ್ನು ಇಟ್ಟುಕೊಂಡು ಸಿನಿಮಾ ಮಾಡುತ್ತಾ ಸಾಗಿ ಗುಣಮಟ್ಟವನ್ನು ಕೇಳಬೇಡಿ ಎಂದರು. ಅತಿ ಅಪರೂಪ ಕೂಡ ತಾಂತ್ರಿಕವಾಗಿ ತೀರಾ ಸಾಮಾನ್ಯವಾದ ಚಿತ್ರ. ಹಾಗಾಗಿ ಈ ಚಿತ್ರವೂ ಆ ಕಾಲದಲ್ಲೇ ಬಂದದ್ದು ಎನ್ನಬಹುದು. ಚಿತ್ರಕ್ಕೆ ಮನೋಮುರ್ತಿ ಸಂಗೀತ ಪ್ರೇಂ, ಅನಂತನಾಗ್, ಐ೦ದ್ರಿತಾ ರೈ ಶರಣ್ ಎಲ್ಲಾ ಇದ್ದರೂ ಎಲ್ಲೂ ಹೊಸತನ ಕಾಣುವುದಿಲ್ಲ. ಕತೆ ಕಾಡುವುದಿಲ್ಲ. ಹಾಗಂತ ಇದರಲ್ಲಿ ಅವರ ಅವರ ಅಭಿನಯದ ತಪ್ಪು ಹುಡುಕುವ ಹಾಗಿಲ್ಲ. ಕತೆ ಹಾಗೆಯೇ ಇದೆ. ಇರುವ ಕಲಾವಿದರನ್ನು ಇಟ್ಟುಕೊಂಡು ಒಂದು ಸಿನಿಮಾವನ್ನು ಮಾಡಿಯೇ ಬಿಡಬೇಕು ಎನ್ನುವ ಧಾವಂತ ನಿರ್ದೇಶನದಲ್ಲಿ ಕಾಣುವುದರಿಂದ ಒಂದು ಕತೆ ಅಂದುಕೊಂಡು ಸುಮ್ಮನೆ ದೃಶ್ಯಗಳನ್ನು ಹೆಣೆದಿರುವುದು ಕಾಣುತ್ತದೆ. ಹಾಗಾಗಿ ಇಲ್ಲಿ ಏನೇ ಆಕ್ಷೇಪಣೆ ಇದ್ದರೇ ಅದಕ್ಕೆ ಕಾರಣ ನಿರ್ದೇಶಕರನ್ನು ಹೊಣೆಗಾರರನ್ನಾಗಿ ಮಾಡಬೇಕಾಗುತ್ತದೆ. ಮತ್ತದು ಅವರಿಗೆ ಸಲ್ಲುತ್ತದೆ.
ನಾಯಕ ಅಪ್ಪನ ಪ್ರೀತಿಯಿಂದ ತಿರಸ್ಕೃತ ನೊಂದ ಜೀವಿ. ಅಪಘಾತದ ನೆಪದಲ್ಲಿ ನಾಯಕಿ ಸಿಗುತ್ತಾಳೆ. ಆಕೆ ಕೂಡ ಕುಟುಂಬದಿಂದ ನೊಂದಿರುವವಳು. ಸರಿ. ಮುಂದೇನು ಎಂದರೆ ಭೇಟಿ. ಅಲ್ಲಲ್ಲಿ ಸಿಗುವ ನಾಯಕ ನಾಯಕಿ, ಸಿಕ್ಕಾಗ ಏನಾದರೂ ನಡೆಯಬೇಕಲ್ಲ ಹಾಗಾಗಿ ಹಾಡು ಹೊಡೆದಾಟ ಜಗಳ ನಡೆಯುತ್ತವೆ. ಇವೆಲ್ಲವೂ ಸಿನಿಮಾದ ಉದ್ದವನ್ನು ಕಾಪಾಡಲು ಎಂಬುದು ಪ್ರೇಕ್ಷಕನಿಗೆ ಗೊತ್ತಾಗುವುದು ಚಿತ್ರದ ನಿಜವಾದ ತಿರುವು ಎಷ್ಟೋ ಹೊತ್ತಿನ ನಂತರ ಬಂದ ಮೇಲೆ.ಅದೇನು ಎಂಬುವ ಕುತೂಹಲ ತಣಿಸಬೇಕಾದರೆ ಒಮ್ಮೆ ಚಿತ್ರವನ್ನೊಮ್ಮೆ ನೋಡಬಹುದು.ಇಲ್ಲಿ ನಾಯಕ ನಾಯಕಿ ಭೇಟಿ ಜಗಳ ಮಜಾ ಕೊಡುವುದರಲ್ಲಿ ಸೋಲುತ್ತವೆ. ಹಾಗೆಯೇ ಹೆಸರು ಕೇಳದೆ ಹೇಳದೆ ಹುಟ್ಟುವ ಪ್ರೀತಿಯನ್ನು ನವಿರಾಗಿ ರೂಪಿಸಬಹುದಿತ್ತು. ಆದರೆ ಚಿತ್ರಕತೆಗಾರರು ಅದನ್ನು ಗಂಭೀರವಾಗಿ ತೆಗೆದುಕೊಳ್ಳದೆ ಸೀದಾ ಸಾದಾ ಮಾಡಿಬಿಟ್ಟಿದ್ದಾರೆ. ಹಾಗಾಗಿ ಚಿತ್ರವೂ ಅದರ ನಿರೂಪಣೆಯೂ ಸೊರಗಿದೆ.

ಹಾಗೆ ನೋಡಿದರೆ ಇದು ಸ್ಟಾಕ್ ಕ್ಲಿಯರನ್ಸ್ ಚಿತ್ರ ಎನ್ನಬಹುದು. ಚಿತ್ರ ಶುರುವಾಗಿ ಮುಗಿದು ವರ್ಷಗಳೇ ಕಳೆದಿವೆ ಈಗ ಬಿಡುಗಡೆಯಾಗಿದೆ ಎನ್ನುವುದಾದರೂ ವರ್ಷಗಟ್ಟಲೆ ಡಬ್ಬದಲ್ಲಿದ್ದು ಬಿಡುಗಡೆಯಾಗಿ ಜಯಭೇರಿ ಭಾರಿಸಿದ ಚಿತ್ರಗಳ ಉದಾಹರಣೆ ಇದೆ. ಕತೆ ಚಿತ್ರಕತೆ ಮುಖ್ಯ ಎನ್ನುವುದು ಇದರಿಂದ ಗೊತ್ತಾಗುತ್ತದೆ. ಆದರೆ ಅತಿ ಅಪರೂಪ ಅಪರೂಪ ಎನಿಸದೇ ಸೀದಾ ಸಾದಾರಣ ಚಿತ್ರವಾಗಲು ಕತೆ ಚಿತ್ರಕತೆಯೇ ಕಾರಣ ಎನ್ನಬಹುದು.

No comments:

Post a Comment