Pages

Sunday, April 13, 2014

ಎಂದೆಂದೂ ನಿನಗಾಗಿ

ಒಬ್ಬ ವಿದ್ಯಾರ್ಥಿಗೆ ಒಂದು ಪುಟದ ಬರಹ ಕೊಟ್ಟು ಅದನ್ನು ನಕಲು ಮಾಡುವಂತೆ ಹೇಳಿದರೆ, ಆತ ಅದನ್ನು ನಕಲು ಮಾಡಿದರೆ ಅದರ ಮೌಲ್ಯ ಮಾಪನ ಹೇಗೆ?ಆತನಿಗೆ ಅಂಕವನ್ನು ಕೊಡುವುದಾಗಲೀ ಅಥವಾ ಬೈಯ್ಯುವುದಾಗಲಿ ಹೇಗೆ? ಎಂದೆಂದೂ ನಿನಗಾಗಿ ನೋಡಿದಾಕ್ಷಣ ಎನಿಸುವ ಅನಿಸಿಕೆ ಇದು. ಯಾಕೆಂದರೆ ಎಂದೆಂದೂ ನಿನಗಾಗಿ ಎಲ್ಲರಿಗೂ ಗೊತ್ತಿರುವಂತೆ ತಮಿಳಿನ ಎಂಗೆಯುಂ ಎಪ್ಪೋದಂ ಚಿತ್ರದ ಕನ್ನಡ ಅವತರಣಿಕೆ. ಒಂದು ಲವಲವಿಕೆಯಾದ ಪ್ರೇಮಕತೆಗೆ ಒಂದು ತೀವ್ರತರವಾದ ಅಂತ್ಯ ಕೊಡುವ ಶೈಲಿ ತಮಿಳರಿಗೆ ಹೊಸದಲ್ಲ. ಹೊಸಬರನ್ನು ಇಟ್ಟುಕೊಂಡು ಇದೇ ಹಾದಿಯಲ್ಲಿ ಅವರು ಮಾಡಿದ ಬಹುತೇಕ ಚಿತ್ರಗಳು ಯಶಸ್ವಿಯಾಗಿವೆ. ಬೇರೆ ಭಾಷೆಗಳಿಗೆ, ಹೆಚ್ಚಾಗಿ ಕನ್ನಡಕ್ಕೆ ರೂಪಾಂತರವಾಗಿವೆ. ಯಾಕೆಂದರೆ ನಮ್ಮವರು ಆ ರೀತಿಯ ಕತೆಯನ್ನು ಮಾಡುವ ರಿಸ್ಕು ತೆಗೆದುಕೊಳ್ಳುವುದಿಲ್ಲ.
ಹಾಗಾಗಿ ಚಿತ್ರ ಇಷ್ಟವಾದರೆ ಅದರ ಕ್ರೆಡಿಟ್ಟೂ ಪೂರ್ಣವಾಗಿ ತಮಿಳು ಚಿತ್ರ ತಂತ್ರಜ್ಞರಿಗೆ ಸಲ್ಲಬೇಕಾಗುತ್ತದೆ. ಯಾಕೆಂದರೆ ಅಲ್ಲಿನ ಚಿತ್ರವನ್ನು ಯಥಾವತ್ತಾಗಿ ಕನ್ನಡೀಕರಿಸಿರುವ ನಿರ್ದೇಶಕ ಮಹೇಶ್ ರಾವ್ ಅದರಾಚೆಗೆ ಏನನ್ನೂ ಮಾಡಲು ಹೋಗಿಲ್ಲ. ಸುಮ್ಮನೆ ನೋಡಿಸಿಕೊಂಡು ಹೋಗುವ ಚಿತ್ರವಾಗಿ ಎಂದೆಂದೂ ನಿನಗಾಗಿ ಗಮನ ಸೆಳೆಯುತ್ತದೆಯೇ ಹೊರತು ಕಾಡುವ ಚಿತ್ರವಾಗುವುದಿಲ್ಲ.
ಚಿತ್ರದಲ್ಲಿ ಎರಡೂ ಜೋಡಿಗಳ ಕತೆಯಿದೆ. ಎರಡೂ ಭಿನ್ನ ಭಿನ್ನ ಪಾತ್ರಗಳ ಪ್ರೇಮವಿದೆ. ಮತ್ತು ಜೀವನದ ಆಕಸ್ಮಿಕವನ್ನು ಮತ್ತು ಅನಿಶ್ಚಿತೆಯನ್ನು ಸೂಚಿಸುವ ಅಪಘಾತವಿದೆ. ಚಿತ್ರ ತೆರೆದುಕೊಳ್ಳುವುದೇ ಅಪಘಾತದಿಂದ. ಹಾಗಾಗಿ ಕೊನೆಗೆ ಏನು ಎನ್ನುವ ಪ್ರಶ್ನೆಗೆ ಇಲ್ಲಿ ಹೆಚ್ಚು ಮಹತ್ವವಿಲ್ಲ. ಇರುವೆರೆಡು ಜೋಡಿಗಳಲ್ಲಿ ಯಾರು ಬದುಕುತ್ತಾರೆ ಎಂಬುದಷ್ಟೇ ಕುತೂಹಲಕಾರಿ ಪ್ರಶ್ನೆ ಎನ್ನಬಹುದು.
ಮೊದಲ ಬಾರಿಗೆ ನಾಯಕ ನಟನಾಗಿ ಅಭಿನಯಿಸಿರುವ ವಿವೇಕ್ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಲು ತಕ್ಕ ಮಟ್ಟಿಗೆ ಪ್ರಯತ್ನಿಸಿದ್ದಾರೆ. ದೀಪಾ ಸನ್ನಿಧಿ,ಅನೀಸ್ ತೆಜೇಶ್ವರ್, ಸಿಂಧು ಲೋಕನಾಥ್ ತಮ್ಮ ಪಾತ್ರಗಳನ್ನೂ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಜೈ ಆನಂದ್ ಅವರ ಛಾಯಾಗ್ರಹಣ ಮತ್ತು ವಿ.ಹರಿಕೃಷ್ಣ ಅವರ ಸಂಗೀತ ಚಿತ್ರದ ಪ್ಲಸ್ ಪಾಯಿಂಟ್ ಎನ್ನಬಹುದು.
ಮೂಲ ಚಿತ್ರ ನೋಡಿಲ್ಲದೆ ಇರುವ ಪ್ರೇಕ್ಷಕರು ಒಮ್ಮೆ ನೋಡಬಹುದು. ಹಾಗೆ ಮೂಲ ಚಿತ್ರವನ್ನು ನೋಡಿರುವವರು ಕನ್ನಡದ ಚಿತ್ರ ಹೇಗಿರಬಹುದು ಎಂಬ ಕುತೂಹಲಕ್ಕಾಗಿಯಾದರೂ ಒಮ್ಮೆ ನೋಡಬಹುದು.

ಕೊನೆಯದಾಗಿ ಹೇಳುವುದಾದರೆ ಒಂದು ಚಿತ್ರವನ್ನು ನಿರ್ಮಿಸಬೇಕು ಎಂದುಕೊಳ್ಳುವ ನಿರ್ಮಾಪಕರು ಅದಕ್ಕಾಗಿ ಉತ್ತಮ ಕತೆಯನ್ನು ಹುಡುಕುವುದು ಸರಿ. ಆ ನಿಟ್ಟಿನಲ್ಲಿ ಒಂದೊಳ್ಳೆ ಕತೆಯ ಪರಭಾಷೆಯ ಚಿತ್ರವನ್ನು ರೀಮೇಕ್ ಮಾಡುವುದೂ ತಪ್ಪಲ್ಲ. ಆದರೆ ತೀರಾ ಸರಳವಾದ ಕತೆಯ ಚಿತ್ರವನ್ನು ಕನ್ನಡೀಕರಿಸುವುದು ಎಷ್ಟರ ಮಟ್ಟಿಗೆ ಸರಿ ಎನ್ನುವುದೇ ಪ್ರಶ್ನೆ. ? ನಿರ್ದೇಶಕ ಮಹೇಶ್ ರಾವ್ ಅತೀ ಕಡಿಮೆ ಅವಧಿಯಲ್ಲಿ ಹೆಚ್ಚು ರೀಮೇಕ್ ಮಾಡುತ್ತಾ ಸಾಗುತ್ತಿರುವ ನಿರ್ದೇಶಕ. ಮೊನ್ನೆ ಕೇಸ್ ನಂಬರ್ 18/9 ಮಾಡಿದ್ದರು. ಈಗ ಎಂದೆಂದೂ ನಿನಗಾಗಿ, ಮುಂದಿನವಾರಕ್ಕೆ ಕ್ವಾಟಲೇ ಸತೀಶ ಮಾಡಿದ್ದಾರೆ. ಹೀಗೆ ಮುಂದುವರೆದರೆ ಅವರ ಹೆಚ್ಚುಗಾರಿಕೆ, ಸ್ವಂತಿಕೆ ಗಿಂತ ಸಿನಿಮಾ ಸಂಖ್ಯೆ ಹೆಚ್ಚಾಗಬಹುದಷ್ಟೇ..?

No comments:

Post a Comment