Pages

Saturday, December 20, 2014

ಹಗ್ಗದ ಕೊನೆ:

ಒಂದು ಕತೆಯನ್ನು ನಾಟಕಕ್ಕೆ ರೂಪಾಂತರಿಸುವಾಗ ಅದರದೇ ಆದ ಮಿತಿ ಮತ್ತು ವಿಸ್ತಾರದ ನಡುವೆ ಸಾಗಬೇಕಾಗುತ್ತದೆ. ಹಾಗೆಯೇ ನಾಟಕವೂ ಚಿತ್ರರೂಪಕ್ಕೆ ಬಂದಾಗ ಅಲ್ಲೂ ಅದೇ ಪುನರಾವರ್ತನೆಯಾಗುತ್ತದೆ. ಆದರೆ ದೃಶ್ಯ ಮಾಧ್ಯಮದಲ್ಲಿ ಹೆಚ್ಚು ಅವಕಾಶಗಳು ಇರುವುದರಿಂದ ಅದನ್ನು ಮತ್ತಷ್ಟು ಶಕ್ತಿಯುತವನ್ನಾಗಿ ಮಾಡಬಹುದು. ಇದು ಪರ್ವತವಾಣಿಯವರ ಹಗ್ಗದ ಕೊನೆ ನಾಟಕ. ಅರ್ಧ ಶತಮಾನದ ಹಿಂದಿನ ನಾಟಕ ಈವತ್ತಿಗೂ ಪ್ರಸ್ತುತ ಎನಿಸುವುದು ಅದರ ವಸ್ತು ವಿಶಾಲತೆಯ ದೃಷ್ಟಿಯಿಂದ. ಏಕೆಂದರೆ ಈವತ್ತಿಗೂ ಗಲ್ಲುಶಿಕ್ಷೆಯಿದೆ. ಅದರ ಬೇಕು ಬೇಡಗಳ ಬಗ್ಗೆ ವಾದ ವಿವಾದ ಚರ್ಚೆ ಎಲ್ಲವೂ ಇದೆ. ಹಾಗಾಗಿ ಹಗ್ಗದ ಕೊನೆ ಈವತ್ತಿಗೂ ಪ್ರಸ್ತುತ ಚಿತ್ರ ಎನಿಸಿಕೊಳ್ಳುತ್ತದೆ.
ಚಿತ್ರದ ಕತೆ ಸರಳವಾದದ್ದು . ಒಬ್ಬನಿಗೆ ಗಲ್ಲು ಶಿಕ್ಷೆಯಾಗಿದೆ. ಸೆರೆಮನೆಯಲ್ಲಿ ಸಾವಿನ ದಿನಗಳನ್ನು ಎಣಿಸುತ್ತಾ ಕುಳಿತ ಆತ ತನ್ನ ಬದುಕಿನ ಪುಟಗಳನ್ನೂ ತಿರುವಹಾಕುವ ಪ್ರಯತ್ನಕ್ಕೆ ಕೈ ಹಾಕುತ್ತಾನೆ. ತನ್ನ ಈವತ್ತಿನ ಪರಿಸ್ಥಿತಿಗೆ ಕಾರಣಗಳನ್ನು ಅದಕ್ಕೆಡೆಮಾಡಿದ ಪ್ರಸಂಗಗಳನ್ನು ವ್ಯಕ್ತಿಗಳನ್ನು ಕಣ್ಮುಂದೆ ತಂದುಕೊಳ್ಳುತ್ತಾನೆ. ಒಂದು ಘಟನೆಯ ಮೂಲವಾದ ಹಿನ್ನೆಲೆ, ವ್ಯಕ್ತಿಯನ್ನು ಶಿಕ್ಷಿಸದೆ ಕಾರ್ಯರೂಪಕ್ಕೆ ತಂದವನನ್ನು ಮಾತ್ರ ಶಿಕ್ಷಿಸುವ ವ್ಯವಸ್ಥೆಯನ್ನು ಪ್ರಶ್ನಿಸುತ್ತಾನೆ. ಹಾಗಾದಾಗ ಆರೋಪಿ ಸಾಯಬಹುದು, ಆದರೆ ಅದನ್ನು ಸೃಷ್ಟಿಸುವ ವ್ಯವಸ್ಥೆ ಸಾಯುವುದಿಲ್ಲವಲ್ಲ ಎಂಬುದು ಅವನ ಪ್ರಶ್ನೆ. ಅದಕ್ಕೆ ಉತ್ತರ ಸಿನಿಮಾದಲ್ಲಿ ಕಂಡುಕೊಳ್ಳುವ ಪ್ರಯತ್ನ ಮಾಡಬಹುದು. ಅಥವಾ ಸಿನಿಮಾ ನೋಡುತ್ತಾ ನೋಡುತ್ತಾ ಚಿಂತನೆ ಮಾಡಬಹುದು.
ಹಗ್ಗದಕೊನೆ ಚಿತ್ರ ಸಾವಧಾನ ಬಯಸುತ್ತದೆ. ಹಾಗೆಯೇ ಚಿತ್ರವನ್ನು ಸೂಕ್ಷ್ಮವಾಗಿ ಗಮನಿಸುವ ಮನಸ್ಥಿತಿ ಬೇಡುತ್ತದೆ. ಇಲ್ಲಿ ಎಲ್ಲವೂ ಅರ್ಥವಾಗುವುದಿಲ್ಲ. ಅಥವಾ ಅರ್ಥವಾಗಲೂ ಏನೂ ಇಲ್ಲ.ಎಲ್ಲವೂ ಅಂಗೈ ಗೆರೆಯಷ್ಟೇ ನಿಚ್ಚಳ. ಆದರೆ ಕತೆಯ ಹೂರಣದ ಒಳಗೆ ಸತ್ವವಿದೆ. ಅದನ್ನು ಅರ್ಥೈಸಿಕೊಳ್ಳದೆ ಬರೀ ಸಿನಿಮಾವಾಗಿಯಷ್ಟೇ ನೋಡಿದರೆ ಸಿನಿಮಾ ರುಚಿಸಲು ಕಷ್ಟವೇನೋ..? ಹಾಗಂತ ಚಿತ್ರವೇನೂ ಅನಾಸಕ್ತಿ ಉಂಟು ಮಾಡುವುದಿಲ್ಲ. ಪ್ರಾರಂಭದ ಹದಿನೈದು ನಿಮಿಷ ತಡೆದರೆ ಅನಂತರ ಚಿತ್ರ ತನ್ನೆಡೆಗೆ ಸೆಳೆದುಕೊಂಡು ಕೂರಿಸಿಕೊಳ್ಳುತ್ತದೆ.
ಚಿತ್ರದ ಬಹುತೇಕ ಭಾಗ ನಡೆಯುವುದು ಕತ್ತಲೆ ಕೋಣೆಯಲ್ಲಿ.ಛಾಯಾಗ್ರಾಹಕರ ತಮ್ಮ ಕಸುಬುದಾರಿಕೆ ಮೆರೆದಿರುವುದು ಇಲ್ಲೇ. ಹಾಗೆಯೇ ಸಂಗೀತ ಚಿತ್ರಕ್ಕೆ ಶಕ್ತಿ ತುಂಬುವಲ್ಲಿ ಭಾಗಶಃ ಯಶಸ್ವಿಯಾಗಿದೆ.
ಚಿತ್ರದ ಬಹುತೇಕ ಕತೆ ಮಾತನ್ನೇ ನಂಬಿಕೊಂಡಿದೆ. ಇದೆ ಚಿತ್ರದ ಶಕ್ತಿಯೂ ಹೌದು ಹಾಗೆ ದೌರ್ಬಲ್ಯವೂ ಹೌದು. ಆದರೂ ಸಂಭಾಷಣೆ ಬರೆದ ಪರ್ವತವಾಣಿ ಮತ್ತು ನವೀನ ಕೃಷ್ಣ ಅಭಿನಂದನಾರ್ಹರು. ಹಾಗೆಯೇ ಚಿತ್ರದ ಚಿತ್ರಕತೆ ಬಿಗಿಯಾಗಿದೆ. ಕತೆಯ ಜಾಡನ್ನು ಆಚೆ ಈಚೆ ಸರಿಯದೆ ತನ್ನ ದಿಕ್ಕಿನಲ್ಲಿ ಸಾಗುವುದರಿಂದ ಸಿನಿಮದಲ್ಲಿನ ಭಾವ ನೇರವಾಗಿ ಪ್ರೇಕ್ಷಕನ ಮನಸ್ಸು ಮುಟ್ಟುತ್ತದೆ. ಆ ಭಾವ ಪ್ರೇಕ್ಷಕನಿಗೆ ಓಕೆಯಾಗುತ್ತದಾ? ಇದು ಅವರವರ ಭಾವಕ್ಕೆ ಬಿಟ್ಟದ್ದು ಎನ್ನಬಹುದು.
ದಯಾಳ್ ಈ ಹಿಂದೆ ಮಸಾಲ ರೀತಿಯ ಚಿತ್ರಗಳನ್ನು ಕೊಟ್ಟವರು. ಏಕಾಏಕಿ ಮಗ್ಗುಲು ಬದಲಿಸಿದ್ದಾರೆ. ಗಂಭೀರ ಕಥಾವಸ್ತುವಿನ ಸಿನೆಮಾವನ್ನು ಅದರ ಗತಿ ಕಾಯ್ದುಕೊಳ್ಳುತ್ತಾ ನಿರೂಪಿಸುವ ಪ್ರಯತ್ನ ಮಾಡಿದ್ದಾರೆ.ಆ ಮೂಲಕ ವಸ್ತುವಿನ ಘನತೆಗೆ ಚ್ಯುತಿ ಬರದ ಹಾಗೆ ಕಾಪಾಡಿದ್ದಾರೆ.
ನವೀನ ಕೃಷ್ಣಾ ತಾವೊಬ್ಬ ಪ್ರತಿಭಾವಂತರು ಎಂಬುದಕ್ಕೆ ಈ ಚಿತ್ರದಲ್ಲಿ ಮತ್ತೊಮ್ಮೆ ಪುರಾವೆ ಒದಗಿಸಿದ್ದಾರೆ.. ಇನ್ನುಳಿದ ಕಲಾವಿದರುಗಳು ಚಿತ್ರರಂಗದಲ್ಲಿ ನುರಿತವರಾದ್ದರಿಂದ ಪಾತ್ರಕ್ಕೆ ಬಲ ಬಂದಿದೆ. ಸುಚೇಂದ್ರ ಪ್ರಸಾದ್ ಜೈಲರ್ ಆಗಿ ಗಮನ ಸೆಳೆಯುತ್ತಾರೆ.

ಕೊನೆ ಮಾತು: ಕೊಲೆ ಮಾಡಿದರೆ ಅದನ್ನು ಶಿಕ್ಷಿದರೆ ಅದೂ ಕೊಲೆಯಲ್ಲವೇ? ಹಾಗಾದರೆ ಕೊಲೆಗಾರನಿಗೂ ಶಿಕ್ಷೆ ವಿಧಿಸುವವನಿಗೂ ಏನು ವ್ಯತ್ಯಾಸ ಎನ್ನುವ ಪ್ರಶ್ನೆ ಎತ್ತುವ ಚಿತ್ರ ಅದರಾಚೆಗೆ ಕೊಲೆಯಾದವನ ಹಿಂದೆಯೂ ಸಮಾಜವಿದೆ ಎಂಬುದರ ಬಗೆ ಹೆಚ್ಚು ಗಮನ ಹರಿಸಿಲ್ಲದೆ ಇರುವುದು ಎಲ್ಲೂ ಚಿತ್ರ ಸ್ವಲ್ಪ ಮಟ್ಟಿಗೆ ಏಕಮುಖವಾಯಿತು ಎನಿಸುತ್ತದೆ. ಆದರೆ ಎಲ್ಲವನ್ನೂ ಒಂದೇ ಚೌಕಟ್ಟಿನೊಳಗೆ ಸೇರಿಸಲು ಪ್ರಯತ್ನಿಸುವುದು ಕಷ್ಟದ ಕೆಲಸ. ಇರಲಿ. ಕನ್ನಡದಲ್ಲಿ ಕಲಾತ್ಮಕ ಚಿತ್ರಗಳು ಬರುತ್ತವೆ ಹೋಗುತ್ತವೆ. ನಿಧಾನಕ್ಕೆ ಸಾಗುವ ಮಂದಗತಿಯ ನಿರೂಪಣೆ ಜ್ವಲಂತ ಸಮಸ್ಯೆ ಇಂತಹ ಚಿತ್ರಗಳಿಗೆ ಸರಕು. ಆದರೆ ಹಗ್ಗದಕೊನೆ ಅದೇ ನಿಟ್ಟಿನಲ್ಲಿದ್ದರೂ[ನಿರೂಪಣೆ ದೃಷ್ಟಿಯಿಂದ] ಬರುಬರುತ್ತಾ ಥ್ರಿಲ್ಲರ್ ರೀತಿಯಲ್ಲಿ ಭಾಸವಾಗುತ್ತಾ ಹೋಗುತ್ತದೆ ಎಂಬುದು ಚಿತ್ರದ ಪ್ಲಸ್ ಪಾಯಿಂಟ್. ಒಮ್ಮೆ ಸಾವಧಾನಚಿತ್ತರಾಗಿ ಸಿನಿಮಾ ನೋಡಿ ಬರಬಹುದು.

No comments:

Post a Comment