Pages

Saturday, December 20, 2014

ಕೋಲಾಹಲ

ಚಿತ್ರದ ಶೀರ್ಷಿಕೆ ನೋಡಿದಾಕ್ಷಣ ನೋಡುಗರ ಮನಸ್ಸಿನಲ್ಲಿ ಕೋಲಾಹಲ ಉಂಟಾಗುವುದಿಲ್ಲ. ಆದರೆ ಚಿತ್ರ ನೋಡುತ್ತ ನೋಡುತ್ತ ಉಂಟಾದರೆ ಅದಕ್ಕೆ ನಿರ್ದೇಶಕರೇ ಜವಾಬ್ದಾರಿ ಎನ್ನದೆ ಬೇರೆ ದಾರಿಯಿಲ್ಲ.
ಪ್ರಶ್ನೆ-1: ಚಿತ್ರ ಯಾವ ವಿಭಾಗಕ್ಕೆ ಸೇರುತ್ತದೆ
ಉತ್ತರ1: ಚಿತ್ರದಲ್ಲಿ ಕಾಮಿಡಿಯಿದೆ. ಅದು ನಗಿಸುತ್ತದೋ ಇಲ್ಲವೋ ಅದು ಬೇರೆ ಮಾತು ಅಂತೂ ಕಾಮಿಡಿ ಇದೆ. ಹಾಗಾಗಿ ಇದು ಕಾಮಿಡಿ ಚಿತ್ರ.
ಉತ್ತರ2: ಚಿತ್ರದಲ್ಲಿ ಒಬ್ಬ ಒಂದು ಅಪರಾಧ ಮಾಡಿ ಪರಾರಿ. ಅವನ ಹಿಂದೆ ಇನ್ನೊಬ್ಬ ದೌಡು. ಹುಡುಕಾಟ. ಸಿಗುತ್ತಾನಾ ಇಲ್ಲವಾ? ಸಸ್ಪೆನ್ಸ್. ಈ ನಿಟ್ಟಿನಲ್ಲಿ ಇದೊಂದು ಥ್ರಿಲ್ಲರ್.
ಉತ್ತರ-3: ಚಿತ್ರದಲ್ಲಿ ನಾಯಕಿಯರಿದ್ದಾರೆ. ಹಾಡಿದೆ. ಕುಣಿತವಿದೆ. ಹಾಗಾಗಿ ಇದೊಂದು ರೋಮ್ಯಾಂಟಿಕ್ ಸಿನಿಮಾ ಎನ್ನಲೂ ಬಹುದು.
ಉತ್ತರ-4: ಚಿತ್ರದಲ್ಲೊಬ್ಬ ಡಾನ್ ಇದ್ದಾನೆ . ಹಾಗಾಗಿ ಚಿತ್ರಕ್ಕೆ ಭೂಗತ ನೆರಳಿನ ಚಿತ್ರ ಎನ್ನುವ ಹಣೆಪಟ್ಟಿಯನ್ನು ಕೊಡಬಹುದು.
ಹೀಗೆ ಚಿತ್ರ ನೋಡಿ ಈ ರೀತಿ ಪಟ್ಟಿ ಮಾಡುತ್ತಾ ಹೋದರೆ ಅದೇಗೆ ಓದುಗರಿಗೆ ಅವರ ಮನಸಿನಲ್ಲಿ ಕೋಲಾಹಲ ಉಂಟಾಗುತ್ತದೋ ಚಿತ್ರ ನೋಡುವಾಗಲೂ ಉಂಟಾಗುತ್ತದೆ. ನಿರ್ದೇಶಕ ಭಾಸ್ಕರ್ ತಮ್ಮ ಚಿತ್ರಕ್ಕಾಗಿ ಚಿಕ್ಕ ಕತೆಯನ್ನು ಆರಿಸಿಕೊಂಡಿದ್ದಾರೆ. ಆದರೆ ಅವರಿಗೆ ಚಿತ್ರವನ್ನು ಒಂದೇ ಜಾನರ್ ಗೆ ಸೀಮಿತಗೊಳಿಸಲು ಇಷ್ಟವಾಗಿಲ್ಲ. ಹಾಗಾಗಿ ಏನೇನೋ ಸಾಧ್ಯವೋ ಎಲ್ಲವನ್ನು ಚಿತ್ರಕ್ಕೆ ಚಿತ್ರದ ಕತೆಗೆ ಬೇಕೋ ಬೇಡವೋ ಸೇರಿಸಲು ಶಕ್ತಿ ಮೀರಿ ಪ್ರಯತ್ನಿಸಿದ್ದಾರೆ. ಹಾಗಾಗಿ ಚಿತ್ರ ಚಿತ್ರಾನ್ನ.
ಬರೆದದ್ದೇ ಕತೆ ಅಂದುಕೊಂಡಿದ್ದೆ ಚಿತ್ರಕತೆ ತೆಗೆದದ್ದೇ ಚಿತ್ರ ಎನ್ನಬಹುದು ನಿರ್ದೇಶಕರು.ಆದರೆ ಚಿತ್ರಕ್ಕೊಂದು ಕುಸುರಿ ಕೆಲಸದ ನೈಪುಣ್ಯತೆ ಬೇಕು. ಕಸುಬುದಾರಿಕೆ ಬೇಕು. ಈವತ್ತು ಚಿತ್ರದ ಬಗ್ಗೆ ಕಲಿಯಲು ಬೇರೆಯ ಚಿತ್ರಗಳೇ ಸಾಕು. ಅವುಗಳ ಏಳು ಬೀಳು, ಸೋಲು ಗೆಲವು ಗಮನಿಸಿದರೆ ಚಿತ್ರದ ಬಗ್ಗೆ ಅದ್ಯಯನ ಮಾಡಿದಂತೆಯೇ. ಅದೆಲ್ಲಾ ಇದ್ದೂ ಈವತ್ತಿಗೂ ಹೀಗೆ ಸಿನಿಮಾ ಮಾಡಿದಾಗ ಬೇಕಾಬಿಟ್ಟಿಸಿನಿಮಾ ಮಾಡಿದ್ದಾರಾ ನಿರ್ದೇಶಕರು ಎನಿಸದೇ ಇರದು.
ಚಿತ್ರದಲ್ಲಿ ಕುರಿ ಸುನೀಲ್ ಹೆಚ್ಚು ಕಾಣಲು ಸಿಗುತ್ತಾರೆ. ಉಳಿದ ಪಾತ್ರಗಳಲ್ಲಿ ಹೊಸಬರಿದ್ದಾರೆ. ಹಳಬರಿದ್ದಾರೆ. ಆದರೆ ಚಿತ್ರದ ಕತೆಯಿಂದಾಗಿ ಯಾವುದು ಯಾರೂ ಮನಸ್ಸಿನಲ್ಲಿ ಉಳಿಯುವುದಿಲ್ಲ.

ಚಿತ್ರವನ್ನು ಮೊದಲಾರ್ಧ ದ್ವಿತೀಯಾರ್ಧ ಹೀಗೆ ವಿಂಗಡಿಸಿರುವ ನಿರ್ದೇಶಕರು ಮೊದಲಾರ್ಧವನ್ನು ಬೋರ್ ಮಾಡಿಸುತ್ತಾರೆ. ದ್ವಿತೀಯಾರ್ಧವನ್ನು ನೀರಸ ಮಾಡುತ್ತಾರೆ.

ಒಂದಷ್ಟು ಮತ್ತಗಿನ ಅದ್ಯಯನ, ಸಿನಿಮಾ ವೀಕ್ಷಣೆ, ವಿಸ್ತೃತ ಚರ್ಚೆ ಇಲ್ಲದಿದ್ದರೆ ಇಂತಹ ಇನ್ನಷ್ಟು ಚಿತ್ರಗಳಿಗೆನೂ ಕನ್ನಡ ಚಿತ್ರರಂಗದಲ್ಲಿ ಬರವಿಲ್ಲ ಎನಿಸುತ್ತದೆ.

No comments:

Post a Comment