Pages

Sunday, December 14, 2014

ಜೈ ಭಜರಂಗ್ ಬಲಿ

ರವಿವರ್ಮ ಗುಬ್ಬಿ ಅವರ ಮೊದಲ ನಿರ್ದೇಶನದ ಸಂಗಮ ಕೂಡ ಎಲ್ಲಾ ಇದ್ದೂ ಏನೋ ಕೊರತೆಯಿತ್ತು ಎನಿಸಿಕೊಂಡಿದ್ದ ಸಿನಿಮಾ. ಈಗ ಅವರದೇ ನಿರ್ದೇಶನದ ಮಾತೊಂದು ಚಿತ್ರ ಕೂಡ ಅದೇ ನಿಟ್ಟಿನಲ್ಲಿರುವುದು ವಿಷಾದನೀಯ. ಅವನು ಪೋರಕಿ. ದುಡ್ಡು ಮಾಡಲು ಗೆಳೆಯರ ಜೊತೆ ಗೂಡಿ ನಾಟಕ ಆಡುತ್ತಾನೆ. ಕಳ್ಳತನ ಮಾಡುತ್ತಾನೆ. ಅವನಿಗೆ ಕನ್ನಡದ ವಿದೇಶಿ ಬೆಡಗಿ ಸಿಗುತ್ತಾಳೆ. ಸಮಯದ ಅಭಾವವಿಲ್ಲದೆ ಬೇಗನೆ ಹತ್ತಿರ ಆಗುತ್ತಾರೆ. ಆಮೇಲೆ ಕಳ್ಳತನದ ಆರೋಪ. ಅದು ದೇವಾಲಯದ ವಿಗ್ರಹದ ಕಳವಿನ ಆರೋಪ. ಈಗ ಆರೋಪಮುಕ್ತ ನಾಗುವುದರ ಜೊತೆಗೆ ಕಳ್ಳರನ್ನು ಹಿಡಿಯುವ ಬಡಿಯುವ ಕೆಲಸ ನಾಯಕನಿಗಿದೆ. ಜೊತೆಯಲ್ಲಿಯೇ ನಾಯಕಿಯೂ ಇರುವುದರಿಂದ ಹಾಡಿಗಾಗಿ ಕುಣಿದಾಡುವುದು ಉಂಟು.
ಒಂದು ಆಕ್ಷನ್ ಚಿತ್ರ ಎಂದಾಗ ಹೀಗೆಯೇ ತೆರೆದುಕೊಳ್ಳಬೇಕು ಎಂಬ ಸಿದ್ಧ ಸೂತ್ರವೊಂದಿದೆ. ಪ್ರಾರಂಭದಲ್ಲಿ ಹುಡುಗಾಟ, ಹಾಸ್ಯ, ಆಮೇಲೆ ಹುಡುಗಿ ಕುಣಿದಾಟ. ಮಧ್ಯಂತರಕ್ಕೆ ಒಂದು ಟ್ವಿಸ್ಟು..ಮುಂದಿನದ್ದು ಕೇಡಿಗಳ ಪರದಾಟ ನಾಯಕನ ಹೊಡೆದಾಟ. ಜೈ ಭಜರಂಗ್ ಬಲಿ ಈ ಸಿದ್ಧ ಸೂತ್ರವನ್ನು ಒಂದು ದಾರದ ಎಳೆಯೂ ಮಿಸ್ ಮಾಡದಂತೆ ನಿರೂಪಿಸಲಾಗಿದೆ.
ಪ್ರಾರಂಭದಲ್ಲಿ ಒಂದಷ್ಟು ದೃಶ್ಯಗಳು ಫ್ರೆಶ್ ಎನಿಸುತ್ತವೆ. ಆದರೆ ಬರುಬರುತ್ತಾ ಚಿತ್ರ ನೀರಸ ಎನಿಸಿಕೊಳ್ಳುತ್ತದೆ. ನಾಯಕ ನಾಯಕಿ ಜೋಡಿಯಾಗುವುದು ಮತ್ತು ಇಂಟರ್ವಲ್ ಟ್ವಿಸ್ಟ್ ಗಾಗಿ ಇಡೀ ಚಿತ್ರದ ಪಾತ್ರಧಾರಿಗಳು ಕಾಯುವುದು ಚಿತ್ರವನ್ನು ಅಲ್ಲಲ್ಲಿ ಆಕಳಿಕೆ ತರುವಂತೆ ಮಾಡುತ್ತದೆ. ಆದರೆ ದ್ವಿತೀಯಾರ್ಧದಲ್ಲಿ ಮತ್ತೆ ತೀವ್ರಗತಿ ಪಡೆದುಕೊಳ್ಳಬೇಕಿದ್ದ ಸಿನಿಮಾ ಅಲ್ಲೂ ನೀರಸವಾಗುವುದು ಚಿತ್ರದ ದೊಡ್ಡ ಋಣಾತ್ಮಕ ಅಂಶ.
 ಒಂದು ಆಕ್ಷನ್ ಸಿನಿಮಾ ಎಂದಾಕ್ಷಣ ಒಂದಷ್ಟು ಅದ್ದೂರಿ ಹೊಡೆದಾಟ ಇಟ್ಟುಬಿಟ್ಟರೆ ಮುಗಿಯಿತು ಎಂದುಕೊಂಡಿರಬೇಕು ನಿರ್ದೇಶಕರು. ಹಾಗಾಗಿ ಹೊಡೆದಾಟವನ್ನು ಚಿತ್ರೀಕರಿಸಲು ತುಂಬಾ ಶ್ರಮ ಹಣ ಸಮಯ ವ್ಯಯಿಸಿದ್ದಾರೆ. ನಾಯಕ ಅಜಯ್ ರಾವ್ ಕೂಡ ತಮ್ಮ ಸಾಹಸ ಪ್ರದರ್ಶನ ಮಾಡಿದ್ದಾರೆ. ಆದರೆ ಹೊಡೆದಾಟದಲ್ಲೂ ಹೊಸತನವಿಲ್ಲದಿರುವುದು ಚಿತ್ರವನ್ನು ಸಾದಾರಣ ಸಾಹಸಮಯ ಚಿತ್ರವನ್ನಾಗಿ ಮಾಡಿದೆ.
ಚಿತ್ರದ ಹಿನ್ನೆಲೆ ಸಂಗೀತಕ್ಕೆ ಧಂ ಇರಬೇಕಿತ್ತು. ಹಾಗೆಯೇ ಹಾಡುಗಳಲ್ಲೂ ಮಜವಿಲ್ಲ. ರವಿವರ್ಮ ಮತ್ತು ಹರಿಕೃಷ್ಣ ಇಬ್ಬರೂ ಸಂಗೀತ ಲೋಕದವರೇ. ಆದರೂ ಅವರದೇ ಚಿತ್ರದಲ್ಲಿ ಅದರ ಶಕ್ತಿ ಕಳೆಗುಂದಿರುವುದು ವಿಪರ್ಯಾಸ.

ಅನಂತ್ ನಾಗ್ ರವಿಶಂಕರ್,  ಲೋಕೇಶ್, ಶೋಭಾರಾಜ್, ನಾಯಕಿ ಸಿಂಧು ಲೋಕನಾಥ್, ಶ್ರುತಿ ನಾಯ್ಡು ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಸಾಹಸ ಸಂಯೋಜನೆ ಚೆನ್ನಾಗಿದೆಯಾದರೂ ಹೊಸತನವಿಲ್ಲ. ಒಂದಷ್ಟು ಅನಾವಶ್ಯಕ ದೃಶ್ಯಗಳನ್ನು ಕತ್ತರಿಸಬಹುದಾಗಿತ್ತು ಸಂಕಲನಕಾರರು. ಇಷ್ಟೆಲ್ಲಾ ಕಷ್ಟದ ನಡುವೆ ಸಮಯ ಕಳೆಯಲು, ಒಂದಷ್ಟು ಹೊಡೆದಾಟ ನೋಡಲು ಮನಸ್ಸಿದ್ದರೆ ಜೈ ಭಜರಂಗ್ ಬಲಿಗೆ ನೀವು ಜೈ ಎನ್ನಬಹುದು.

No comments:

Post a Comment