Pages

Saturday, December 20, 2014

ಚಿರಾಯು

ರೌಡಿಸಂ ಚಿತ್ರಗಳು ನಿರೂಪಣೆಯಲ್ಲಿ ಸ್ವಲ್ಪ ಆಚೀಚೆಯಾದರೆ ಭೂಗತ ಲೋಕದ ಚಿತ್ರವಾಗುವುದಿಲ್ಲ. ಬದಲಿಗೆ ಅದೊಂದು ರೌಡಿಸಂ ಆಧಾರಿತ ಮಸಾಲ ಚಿತ್ರವಾಗಿ ಬಿಡುತ್ತದೆ. ಒಬ್ಬ ನಿರ್ದೇಶಕ ಒಂದು ಕತೆಯನ್ನು ಕಲ್ಪಿಸಿ ದೃಶ್ಯೀಕರಣ ಮಾಡಿಕೊಂಡು ಅಖಾಡಕ್ಕೆ ಇಳಿಯದಿದ್ದರೆ ಸಾದಾರಣ ಚಿತ್ರವಾಗಿ ಬಿಡುತ್ತದೆ.
ಆ ನಿರ್ದೇಶಕನಿಗೆ ಅದು ಮೊದಲ ಸಿನಿಮಾ ಇರಬಹುದೇನೋ? ಆದರೆ ಪ್ರೇಕ್ಷಕನಿಗೆ..?
ಈ ಪ್ರಶ್ನೆ ಇಟ್ಟುಕೊಂಡು ಪ್ರಶಾಂತ್ ಚಿತ್ರ ನಿರ್ದೇಶನ ಮಾಡಿದ್ದರೆ ಚಿತ್ರ ಚಿರಾಯು ಸಹನೀಯವಾಗುತ್ತಿತ್ತು.
ಒರಟ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿರಿಸಿದ ಪ್ರಶಾಂತ್ ಆವತ್ತಿನ ನಟನೆಯನ್ನೇ ಈವತ್ತಿಗೂ ಮುಂದುವೆರೆಸಿಕೊಂಡು ಹೋಗಿದ್ದಾರೆ ಎಂಬುದು ಹೊಗಳಿಕೆಯ ಮಾತಲ್ಲ. ಚಿರಾಯು ಚಿತ್ರದ ಕತೆ ಸರಳ, ಪುನರಾವರ್ತಿತ.
ಒಂದು ಕುಟುಂಬ ಅಲ್ಲೊಬ್ಬ ನಾಯಕ . ಮನೆಯವರ ಪ್ರೀತಿ ಪಾತ್ರ ಅಥವಾ ಉಂಡಾಡಿಗುಂಡ. ಅಲ್ಲೊಬ್ಬ ರೌಡಿ ಒಂದು ಅನಿರೀಕ್ಷಿತ ಘಟನೆ.. ಸಿಡಿದ ನಾಯಕ, ಕೊಲೆ. ಭೂಗತ ಲೋಕಕ್ಕೆ ಎಂಟ್ರಿ. ಆಮೇಲೆ ಅವನನ್ನು ಇಷ್ಟ ಪಡುವ ನಾಯಕಿ. ಅವನ ವಿರುದ್ಧ ಮಸಲತ್ತು ಮಾಡುವ ರೌಡಿಗಳು.. ಹೀಗೆ ಸಾಗುವ ಕತೆ ಚಿರಾಯು ಚಿತ್ರದ್ದು ಕೂಡ. ಹಾಗೆಯೇ ಇಂತಹ ಹಲವಾರು ಚಿತ್ರದ್ದೂ ಕೂಡ. ಒಬ್ಬ ವ್ಯಕ್ತಿ ರೌಡಿಯಾಗುವುದು ಲಾಂಗು ಹಿಡಿದು ಕುಡಿದು ಅಬ್ಬರಿಸಿ ಮಾತಾಡಿ ಅದನ್ನೇ ಹೀರೋಯಿಸ್ಮ್ ಎಂದುಕೊಳ್ಳುವುದು ನಮಗೆ ಹೊಸತಲ್ಲ. ಹಾಗಾಗಿಯೇ ಚಿತ್ರವೂ ಹೊಸತು ಎನಿಸುವುದಿಲ್ಲ.
ಈ ನಡುವೆಯೂ ಒರಟ ಪ್ರಶಾಂತ್ ನಿರೂಪಣೆಯಲ್ಲಿ ಒಂದಷ್ಟು ಕೈ ಚಳಕ ತೋರಿಸಲು ಪ್ರಯತ್ನಿಸಿರುವುದು ಮೆಚ್ಚುಗೆ ಪಡುವ ಅಂಶ ಎನ್ನಬಹುದು. ಚಿತ್ರದ ಕತೆಯನ್ನು ಒಬ್ಬ ನಿರ್ದೇಶಕನ ಮುಖಾಂತರ ಅನಾವರಣಗೊಳಿಸುತ್ತಾರೆ. ಅಲ್ಲಿಂದ ಹಿಮ್ಮುಖವಾಗಿ ಸಾಗುವ ಕತೆ ಚಿತ್ರಕತೆ ನಾಯಕನ ಕತೆಯನ್ನು ಫ್ಲಾಶ್ ಬ್ಯಾಕ್ ತಂತ್ರದೊಂದಿಗೆ ತೆರೆದಿಡುತ್ತಾ ಸಾಗುತ್ತದೆ. ಅಲ್ಲಿಗೆ ಚಿತ್ರದಲ್ಲಿ ಏನೋ ಸ್ವಲ್ಪ ಇರಬಹುದು ಎನಿಸಿದರೂ ಮುಂದಿನ ಆಗುಹೋಗುಗಳು ಸಾದಾರಣ ಎನಿಸುವುದರಿಂದ ಚಿತ್ರ ಆಸಕ್ತಿ ಕಳೆದುಕೊಳ್ಳುತ್ತದೆ.
ಒರಟ ಪ್ರಶಾಂತ್ ತಮ್ಮ ಪಾತ್ರದ ವೈಭವೀಕರಣದ ನಿಟ್ಟಿನಲ್ಲಿ ಫುಲ್ ಮಾರ್ಕ್ಸ್ ಗಳಿಸುತ್ತಾರೆ. ಆದರೆ ಪಾತ್ರವನ್ನು ಅದರ ಒಳ ತುಮುಲವನ್ನು ಪಕ್ಕಕ್ಕಿrisiರಿಸಿಬಿಡುತ್ತದೆ ಎಂಬ ಅಂಶವನ್ನು ಪಕ್ಕಕ್ಕಿಟ್ಟಿದ್ದಾರೆ. ಹಾಗಾಗಿ ಇಲ್ಲಿ ಹೀರೋಯಿಸ್ಮ್ ಕಾಣಿಸುತ್ತದೆ. ರೌಡಿಸಂ ಪಕ್ಕಕ್ಕೆ ಸರಿಯುತ್ತದೆ. ಚಿತ್ರ ಮಸಾಲೆ ಹೊಡೆದಾಟದ ಚಿತ್ರ ಎನಿಸಿಕೊಳ್ಳುವಲ್ಲಿಗೆ ಸುಸ್ತಾಗುತ್ತದೆ.
ಪ್ರಶಾಂತ್ ಹೊಡೆದಾಟದಲ್ಲಿ ಗಮನ ಸೆಳೆಯುತ್ತಾರೆ. ಆದರೆ ಇಂತಹ ಚಿತ್ರಗಳಿಗೆ ಬೇಕಾದ ಸಾಹಸ ಸಂಯೋಜನೆ ಕಾಣಸಿಗದು. ಶುಭಾ ಪೂಂಜಾ ಪಾತ್ರದಲ್ಲಿ ಅಂತಹ ಸತ್ವವಿಲ್ಲ. ಒಂದಷ್ಟು ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ ಎಣಿಸುವುದನ್ನು ಬಿಟ್ಟರೆ ಅವರ ಬಗೆಗೆ ಬೇರೇನೂ ಹೇಳಲು ಸಾಧ್ಯವಿಲ್ಲ. ಉಳಿದ ನುರಿತ ಕಲಾವಿದರಾದ ಅವಿನಾಶ್, ಮುನಿ, ಪವಿತ್ರಾ ಲೋಕೇಶ್, ಪದ್ಮ ವಾಸಂತಿ, ಓಂ ಪ್ರಕಾಶ್ ರಾವ್ ತಮ್ಮ ಅನುಭವದಲ್ಲಿ ಇಂತಹ ಪಾತ್ರಗಳನ್ನೂ ಈಗಾಗಲೇ ನಿರ್ವಹಿಸಿರುವುದರಿಂದ ಲೀಲಾಜಾಲವಾಗಿ ತಾಮ ಪಾತ್ರಗಳನ್ನೂ ನಮ್ಮ ಮುಂದಿರಿಸಿದ್ದಾರೆ.
ಸಂಗೀತ ಮತ್ತು ಛಾಯಾಗ್ರಹಣ ಸಾದಾರಣ.

ಒರಟ ಪ್ರಶಾಂತ್ ಈ ಚಿತ್ರದ ನಿರ್ದೇಶನದ ಜೊತೆಗೆ ನಾಯಕನಾಗಿ ಜೊತೆಗೆ ಬರಹಗಾರನಾಗಿಯೂ ಎಂಟ್ರಿ ಕೊಟ್ಟಿದ್ದಾರೆ. ಅದೇ ಹೊರೆಯಾಗಿಯೋ ಏನೋ ಎಲ್ಲಾ ವಿಭಾಗಗಳೂ ಪರಿಪೂರ್ಣತೆ ಇಲ್ಲದೆ ಸೊರಗಿವೆ.

No comments:

Post a Comment