Pages

Friday, October 31, 2014

ಇಂಗಳೆ ಮಾರ್ಗ ಚಿತ್ರವಿಮರ್ಶೆ

ಒಂದು ಕಲಾತ್ಮಕ ಚಿತ್ರ ಎಂದಾಗ ಅದರಲ್ಲಿ ಮನರಂಜನಾ ಅಥವಾ ಮಸಾಲ ಅಂಶಗಳು ಕಡಿಮೆ ಎನ್ನಬಹುದು. ಯಾಕೆಂದರೆ ಚಿತ್ರ ವಸ್ತುನಿಷ್ಠವಾಗಿರುವುದರಿಂದ. ಇಂಗಳೆ ಮಾರ್ಗ ಕೂಡ ಕಲಾತ್ಮಕ ಎನಿಸುತ್ತದೆ ಹಾಗೆಯೇ ಅದೊಂದು ಜೀವನಚರಿತ್ರೆಯಾದ್ದರಿಂದ ಇಲ್ಲಿ ವ್ಯಕ್ತಿಯ ಜೀವನ ಕತೆಯಷ್ಟೇ ಮುಖ್ಯವಾಗುತ್ತದೆ.
ದಲಿತರ ಉದ್ದಾರಕ್ಕೆ ಶ್ರಮಿಸಿದವರು ದೇವರಾಯ ಇಂಗಳೆ. ಸಮಾಜದಲ್ಲಿನ ಜಾತಿ ಮತ ಬೇಧವನ್ನು ಕಿತ್ತೊಗೆಯಬೇಕು ಎಲ್ಲರೂ ಸಮಾನರು ಎಂಬುದನ್ನು ಸಮಾಜದಲ್ಲಿ ಜಾರಿಗೆ ತರಬೇಕು. ಅಸ್ಪೃಶ್ಯತೆಯನ್ನು ಸಮಾಜದಿಂದ ಕಿತ್ತೊಗೆಯಬೇಕು ಎಂದ ವ್ಯಕ್ತಿ ದೇವರಾಯ ಇಂಗಳೆ. ಅಷ್ಟೇ ಅಲ್ಲ. ಅದನ್ನು ಪ್ರಾಯೋಗಿಕವಾಗಿ ತರಲು ಶ್ರಮಿಸಿದ ವ್ಯಕ್ತಿ. ಇಂಗಳೆಮಾರ್ಗದ ಕತೆ ದೇವರಾಯ ಇಂಗಳೆಯದ್ದು. ಇದೊಂದು ಆತ್ಮಚರಿತ್ರೆಯನ್ನು ಆಧರಿಸಿದ ಸಿನಿಮ. ಹಾಗಾಗಿ ಹಾಗೆ ತೆರೆದುಕೊಳ್ಳುವ ಕತೆ ದೇವರಾಯನ ಸುತ್ತಲೇ ಸುತ್ತುತ್ತದೆ. ಜನರನ್ನು ಸಂಘಟಿಸಿ ಅವರಲ್ಲಿ ಜಾಗೃತಿ ಮೂಡಿಸುವುದು, ತನ್ನ ಸ್ವಹಿತ ನೋಡಿಕೊಳ್ಳದೆ ಇದ್ದ ಕೆಲಸವನ್ನು ತ್ಯಜಿಸುವುದು, ಊರೂರು ಅಲೆಯುವುದು, ಎಲ್ಲವೂ ಚಿತ್ರದಲ್ಲಿ ಮೂಡಿ ಬಂದಿದೆ. ಹಾಗೆಯೇ ಸ್ವಲ್ಪ ಮಟ್ಟಿಗೆ ಅವನ ವೈಯಕ್ತಿಕ ಬದುಕನ್ನೂ ಚಿತ್ರದಲ್ಲಿ ಕಟ್ಟಿ ಕೊಡಲು ನಿರ್ದೇಶಕರು ಪ್ರಯತ್ನಿಸಿದ್ದಾರೆ.
ಚಿತ್ರ ಏರಿಳಿತವಿದ್ದರೂ ಮಂದಗತಿಯಲ್ಲಿ ಸಾಗುವುದರಿಂದ ಸಾಕ್ಷ್ಯಚಿತ್ರದಂತೆ ಭಾಸವಾಗುತ್ತದೆ.  ಹಾಗೆಯೇ ಇಡೀ ಕತೆ ಸ್ವಾತಂತ್ರ್ಯಪೂರ್ವದ್ದಾದ್ದರಿಂದ ಚಿತ್ರತಂಡ ಆ ಕಾಲಮಾನವನ್ನು ಕಟ್ಟಿಕೊಡಲು ಶ್ರಮಿಸಿದೆ. ರೇಡಿಯೋ, ಉಡುಪು ವಸ್ತ್ರ, ಊರು ಬೀದಿ, ಮನೆಯ ಒಳಾಂಗಣ ಮುಂತಾದವುಗಳಲ್ಲಿ ಆ ಕಾಲಮಾನವನ್ನು ಕಟ್ಟುವ ಪ್ರಯತ್ನದಲ್ಲಿ ಸಾಕಷ್ಟು ಯಶಸ್ವಿಯೂ ಆಗಿದ್ದಾರೆ.
ಆದರೆ ಚಿತ್ರದ ಮಿತಿ ಸಂದೇಶದಲ್ಲಿಯೇ ಇದೆ. ಅದೇ ಸಂದೇಶ ಕ್ಲೀಷೆ ಎನಿಸಿದರೂ ಇಂಗಳೆಯ ಕಥನ ರೋಚಕವಾಗಬಹುದಿತ್ತೇನೋ? ಯಾಕೆಂದರೆ ಒಂದು ಅನಿಷ್ಟ ಪದ್ಧತಿಯನ್ನು ಆವತ್ತಿನ ಕಾಲಮಾನದಲ್ಲಿ ಅಳಿಸಿಹಾಕುವ ಪ್ರಯತ್ನ ಮಾಡುವುದು ಸುಲಭದ ಕೆಲಸವಲ್ಲ. ಆವತ್ತಿನ ಅಡೆತಡೆ ವೈರುಧ್ಯಗಳು ಏನೇನಿದ್ದವೋ ಅವುಗಳನ್ನೆಲ್ಲಾ ಮೀರಿ ಕಾರ್ಯ ಸಾಧನೆ ಮಾಡುವುದು ಕಷ್ಟ ಸಾಧ್ಯದ ಕೆಲಸ. ಇಂಗಳೆ ಆದರ್ಶಮಯ ಬದುಕು ಹೋರಾಟದ ಬದುಕು ಹೌದು. ಬರೀ ಸಮಾಜ ಸುಧಾರಕನಲ್ಲ ಇಂಗಳೆ, ಆ ನಿಟ್ಟಿನಲ್ಲಿ ಕ್ರಾಂತಿಕಾರಿ ಕೂಡ. ಚಿತ್ರದಲ್ಲಿ ಈ ಅಂಶಗಳನ್ನು ಸ್ವಲ್ಪ ಹೆಚ್ಚುಗಾರಿಕೆಯಿಂದ ಅಳವಡಿಸಿದ್ದರೆ ಚಿತ್ರಕ್ಕೊಂದು ಫೋರ್ಸ್ ಬರುತ್ತಿತ್ತೇನೋ?
ಒಟ್ಟಿನಲ್ಲಿ ಈ ಮಸಾಲಾ ಚಿತ್ರಜಗತ್ತಿನಲ್ಲಿ ಸಾಧಕರ ಕಥನವನ್ನು ತೆರೆಯ ಮೇಲೆ ತರುವ ಪ್ರಯತ್ನ ನಿಜಕ್ಕೂ ಶ್ಲಾಘನೀಯವಾದದ್ದು.  ಹಾಗಾಗಿ ಕೆಲವು ಮಿತಿಗಳ ನಡುವೆಯೂ ಇಂತಹ ಚಿತ್ರವನ್ನು ಪೋಷಿಸಬೇಕಾಗುತ್ತದೆ.
ನಿರ್ಮಾಪಕ ಘನಶ್ಯಾಂ ಬಾಂದಗೆ ಚಿತ್ರವನ್ನು ನಿರ್ಮಿಸಿದ್ದಾರೆ. ವಿಶಾಲ್ ರಾಜ್ ತಮ್ಮ ಇತಿಮಿತಿಯಲ್ಲಿ ಚಿತ್ರವನ್ನು ಕಟ್ಟಿಕೊಡುವ ಪ್ರಯತ್ನ ಪಟ್ಟಿದ್ದಾರೆ. ಇಂಗಳೆಯಾಗಿ ಸುಚೇಂದ್ರ ಪ್ರಸಾದ್, ಆತನ ಪತ್ನಿಯಾಗಿ ಶಿವಾನಿ ಅಚ್ಚುಕಟ್ಟಾದ ಅಭಿನಯ ನೀಡಿದ್ದಾರೆ

No comments:

Post a Comment