Pages

Friday, October 31, 2014

ಪಂದ್ಯ

ಇದು ಯಾವುದೇ ಮೈದಾನದ ಆಟಕ್ಕೆ ಸಂಬಂಧಿಸಿದ ಚಿತ್ರವಲ್ಲ ಎಂಬುದನ್ನು ಮೊದಲೇ ಹೇಳಿಬಿಡಬೇಕಾಗುತ್ತದೆ. ಯಾಕೆಂದರೆ ಪಂದ್ಯ ಹೆಸರು ನೋಡಿ ಇದ್ಯಾವುದೋ ಕ್ರೀಡೆ ಸಂಬಂಧಿಸಿದ ಚಿತ್ರ ಎಂದುಕೊಂಡು ಸಿನೆಮಾಕ್ಕೆ ಬಂದರೆ ಅಲ್ಲಿ ಸಿಗುವುದು ಪ್ರೇಮದಾಟವೇ ಹೊರತು ಬೇರ್ಯಾವ ಆಟವಲ್ಲ.
ನಾಲ್ವರು ಹುಡುಗರು ಪೋಲಿ ಅಲೆಯುತ್ತಾರೆ. ಅದು ಸಿನಿಮಾಗಳಲ್ಲಿ ಸಾಮಾನ್ಯ. ಸರಿ ಅವರಿಗೆ ಮನೆಯಲ್ಲಿ ಬೈಗುಳ ಕಟ್ಟಿಟ್ಟ ಬುತ್ತಿ. ನಾಯಕನ ಕಣ್ಣಿಗೆ ಹುಡುಗಿ ಬೀಳುತ್ತಾಳೆ. ಅವಳೇ ನಾಯಕಿ. ಅವಳನ್ನು ಕಂಡಾಕ್ಷಣ ಪ್ರೀತಿಗೆ ಬೀಳುತ್ತಾನೆ ನಾಯಕ. ಹಿಂದೆ ಮುಂದೆ ನೋಡದೆ ಒಂದು ಕಲ್ಪನೆಯ ಹಾಡನ್ನು ಹಾದಿ ಬರುತ್ತಾನೆ. ಆಮೇಲೆ..? ಎಲ್ಲರೂ ನಿರೀಕ್ಷಿಸಬಹುದಾದ ಕತೆ ಅದೇ ದಾರಿಯಲ್ಲಿ ಸಾಗುತ್ತದೆ. ಜೀವನ ಬರೀ ಆಟವಲ್ಲ, ಅದೊಂದು ಸವಾಲುಗಳ ಪಂದ್ಯ ಎನ್ನುವುದು ಚಿತ್ರದ ಸಂದೇಶ ಇರಬಹುದು. ಆದರೆ ನಿರ್ದೇಶಕ ದೇವು ಅದಷ್ಟನ್ನೇ ಅಚ್ಚುಕಟ್ಟಾಗಿ ನಿರೂಪಿಸಿದ್ದರೆ ಅದರ ಕತೆಯೇ ಬೇರೆ ಇರುತ್ತಿತ್ತು. ಅವರು ಕತೆಯನ್ನು ಹಾಗಂದುಕೊಂಡೆ ಚಿತ್ರಕತೆಯನ್ನು ಏನೇನೋ ಮಾಡಿದ್ದಾರೆ. ಒಂದಷ್ಟು ಹಾಸ್ಯವಿರಲಿ ಎಂದುಕೊಂಡು ಚಿತ್ರದಲ್ಲಿ ಹಾಸ್ಯ ಪ್ರಸಂಗ ಇಡಲು ಪ್ರಯತ್ನಿಸಿದ್ದಾರೆ. ಅಯ್ಯೋ ಹೀರೋಯಿಸ್ಮ್ ಗೆ ಫೈಟ್ ಇಲ್ಲದಿದ್ದರೆ ಹೇಗೆ .. ಇರಲಿ ಫೈಟ್ ಎಂದು ಅದನ್ನು ಇರಿಸಿದ್ದಾರೆ. ನಾಯಕ ಹೊಡೆದಾಡಿ ಸುಸ್ತಾದ ಮೇಲೆ ಹಾಡಬಾರದೇ.. ಹಾಗಾಗಿ ನಾಯಕಿಯರ ಜೊತೆ ಕುಣಿಸಿದ್ದಾರೆ. ಆದರೆ ಇದಾವುದನ್ನು ಒಂದು ಸರಿಯಾದ ಕ್ರಮದಲ್ಲಿ ಜೋಡಿಸಿದ್ದರೆ ಪಂದ್ಯ ರೋಚಕವಾಗಿರುತ್ತಿತ್ತೇನೋ? ಆದರೆ ಇಷ್ಟಬಂದ ಹಾಗೆ ಆಟ ಆಡಿದರೆ ..ಇರುವ ನಿಯಮಗಳನ್ನೆಲ್ಲಾ ಗಾಳಿಗೆ ತೂರಿದರೆ ಪಂದ್ಯ ಮಜಾ ಕೊಡುವುದಿಲ್ಲ. ಹಾಗೆಯೆ ಸಿನೆಮಾವು...
ಚಿತ್ರದ ನಾಯಕ ಚಂದ್ರು ತಮ್ಮ ಪಾತ್ರವನ್ನು ನಿಭಾಯಿಸಲು ಪ್ರಯತ್ನಿಸಿದ್ದಾರೆ. ಆದರೆ ಪ್ರತಿಯೊಂದು ಹಂತದಲ್ಲೂ ಏನೋ ಕೊರತೆ ಇದೆಯಲ್ಲ ಎಂಬ ಭಾವ ಬರುವಂತೆ ಅಭಿನಯಿಸಿದ್ದಾರೆ. ಇನ್ನು ಸ್ಫೂರ್ತಿ ಮಾನಸಿ ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಚಿತ್ರದ ಪೋಷಕ ಪಾತ್ರವರ್ಗದಲ್ಲಿ ಅನುಭವಿಗಳೇ ಇರುವುದರಿಂದ ಅವರ ಅಭಿನಯದ ಕಡೆ ಬೆರಳು ತೋರುವ ಹಾಗಿಲ್ಲ. ಆದರೆ ಚಿತ್ರದ ಅಡಿಪಾಯವೇ ಶಿಥಿಲವಾಗಿರುವುದರಿಂದ ಚಿತ್ರ ಮಜಾ ಕೊಡುವುದಿಲ್ಲ.
ಮೊದಲ ಬಾರಿಗೆ ಆಕ್ಷನ್ ಕಟ್ ಹೇಳಿರುವ ದೇವು ಇನ್ನೂ ಪಳಗಬೇಕಾಗಿದೆ. ನಿರ್ದೇಶನ ಎಂದರೆ ಬರೀ ಆಕ್ಷನ್ ಕಟ್ ಶಾಟ್ ಡಿವಿಷನ್ ಅಷ್ಟೇ ಅಲ್ಲ. ಅಲ್ಲೊಬ್ಬ ನಿರೂಪಕ ಇರಬೇಕು ಎನ್ನುವುದನ್ನು ಅರಿತುಕೊಳ್ಳಬೇಕಾಗಿದೆ. ಹಾಗೆ ಅರಿತುಕೊಂಡು ತಮ್ಮ ಮುಂದಿನ ಚಿತ್ರವನ್ನು ನಿರ್ದೇಶನ ಮಾಡಿದರೆ ಅವರ ಮೇಲೆ ಭರವಸೆ ಇಡಬಹುದಾಗಿದೆ.

No comments:

Post a Comment