Pages

Friday, October 31, 2014

ಬೆಳ್ಳಿ :

ಹಳ್ಳಿಯಿಂದ ಕೆಲಸ ಹುಡುಕಿಕೊಂಡು ಬಂದವ ಭೂಗತ ಲೋಕಕ್ಕೆ ಎಂಟ್ರಿ ಕೊಟ್ಟರೆ ಏನಾಗುತ್ತದೆ ಎಂಬ ಒಂದು ಸಾಲಿನ ಪ್ರಶ್ನೆಯ ಕತೆಯನ್ನು ಹೇಗೆಲ್ಲಾ ತಿರುಗಿಸಿ ಮುರುಗಿಸಿ ಹೇಳಬಹುದು ಎಂಬುದಕ್ಕೆ ಬೆಳ್ಳಿ ಉದಾಹರಣೆ ಎನ್ನಬಹುದು.
ಬೆಳ್ಳಿ ಅಲಿಯಾಸ್ ಬಸವರಾಜ್ ಕೊಳ್ಳೇಗಾಲ ಪಕ್ಕದ ಮಧುವನಹಳ್ಳಿಯ ಪ್ರತಿಭಾವಂತ.ತಾಯಿ ಮನೆ ಮನೆಗೆ ಹಾಲು ಹಾಕಿದರೆ, ತಂಗಿ ಪೋಲಿಯೊ ಪೀಡಿತೆ. ಹಣ ಸಂಪಾದಿಸಿ ಅಮ್ಮ ತಂಗಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂಬ ಉದ್ದೇಶ ಸರಿದಾರಿಯಲ್ಲಿ ಈಡೇರುವುದಿಲ್ಲ ಎನಿಸಿದಾಗ ಅಡ್ಡದಾರಿ ಹಿಡಿಯುತ್ತಾನೆ.. ಮುಂದೆ...
ಲಾಂಗಿ[ಉದ್ದನೆಯ]ನಲ್ಲೇ ಸಿಂಗಾರವಾಗಿರುವ ಕುರ್ಚಿಯಲ್ಲೇ ಡಾನ್ ಕುಳಿತುಕೊಳ್ಳುತ್ತಾನೆ, ನಡು ರಸ್ತೆಯಲ್ಲಿ, ದೇವಸ್ಥಾನದ ಮುಂದೆಯೇ ಕೈಯಲ್ಲಿ ಉದ್ದುದ್ದ ಮಚ್ಚುಗಳನ್ನು ಹಿಡಿದು ಓಡಾಡಿಸುತ್ತಾರೆ ಖಳರುಗಳು, ಕೊಲೆ ಅಲ್ಲಲ್ಲಿ ನಡೆಯುತ್ತಲೇ ಇರುತ್ತದೆ.. ಇದ್ಯಾವ ರಕ್ತ ಚರಿತ್ರಾತ್ಮಕ ಊರಿರಬಹುದು.. ಎಂದರೆ ಅದು ಬೆಂಗಳೂರೇ ಸ್ವಾಮೀ, ಯಾವ ಸಿನಿಮಾ ಎಂದರೆ ಬೆಳ್ಳಿ ಎನ್ನಬಹುದು. ಇವೆಲ್ಲವೂ ಸ್ವಲ್ಪ ಅತಿರೇಕ ಎನಿಸಬಹುದು. ಯಾಕೆಂದರೆ ಶಿವಣ್ಣ ಲಾಂಗ್ ಹಿಡಿದರೆ ಅದರ ಖದರ್ರೆ ಬೇರೆ. ಆದರೆ ಅದೇನೇ ಆದರೂ ಅದರಲ್ಲೊಂದು ನೈಜತೆಯನ್ನು ಪ್ರೇಕ್ಷಕ ನಿರೀಕ್ಷೆ ಮಾಡದೆ ಇರುವುದಿಲ್ಲ. ಆದರೆ ತೀರಾ ಸಿನಿಮೀಯ ಮಾಡಿಬಿಟ್ಟರೆ ಸ್ವಲ್ಪ ಮಟ್ಟಿಗೆ ಜೀರ್ಣಿಸಿಕೊಳ್ಳುವುದು ಕಷ್ಟ.ಬೆಳ್ಳಿ ಚಿತ್ರದ ಅದ್ದೂರಿತನ ಒಂದು ಮಟ್ಟಕ್ಕೆ ಕಳೆಗುಂದಿರುವುದು ಈ ಕಾರಣದಿಂದಲೇ. ಅದನ್ನೆಲ್ಲಾ ಸಹಿಸಿಕೊಳ್ಳುವುದಾದರೆ ಬೆಳ್ಳಿ ಚಿತ್ರ ನೋಡಬಹುದು...
ಶಿವಣ್ಣ ತಮ್ಮ ಪಾತ್ರವನ್ನು ಚೆನ್ನಾಗಿ ಅಭಿನಯಿಸಿದ್ದಾರೆ ಎಂದರೆ ಅದು ಹೊಗಳಿಕೆಯೂ ಅಲ್ಲ. ಯಾಕೆಂದರೆ ಶಿವಣ್ಣ ಅವರು ಈಗಾಗಲೇ ಇಂತಹ ಪಾತ್ರಗಳನ್ನೂ ಬಹುತೇಕ ಮಾಡಿರುವುದರಿಂದ ಆದವರಿಗೆ ಸವಾಲಿನ ಪಾತ್ರವಲ್ಲ. ಆದರೆ ಒಂದಿಡೀ ಸಿನಿಮಾವನ್ನು ತಮ್ಮ ಹೆಗಲ ಮೇಲೆ ಹೊತ್ತುಕೊಳ್ಳುವ ಅವರ ಪರಿಗೆ ಸಲಾಮು. ಇನ್ನುಳಿದಂತೆ ದೀಪಕ್, ವಿನೋದ್ ಪ್ರಭಾಕರ್, ಪ್ರಶಾಂತ್ ವೆಂಕಟೇಶ್ ಮೂರ್ತಿ ಖಳರುಗಳಾದ ಆದಿ ಲೋಕೇಶ್, ಮೈಕೋ ನಾಗರಾಜ್, ರಾಘವ ಉದಯ್, ನಾಯಕಿ ಕೃತಿ ಕರಬಂಧ ಎಲ್ಲರದು ಅನುಭವಿ ನಟನೆ. ಛಾಯಾಗ್ರಹಣ, ಸಂಗೀತ ಮತ್ತು ನಿರ್ಮಾಪಕರ ಧಾರಾಳತನಕ್ಕೆ ನಮಸ್ಕಾರ/ಮೆಚ್ಚುಗೆ ಹೇಳಬಹುದು.
ನಿರ್ದೇಶಕ ಮಹೇಶ್ ಹೆಣೆದಿರುವ ಕತೆಯಲ್ಲಿ ಡಾಳಾಗಿ ಕಾಣಿಸುವುದು ಜೋಗಿ ಛಾಯೆ. ಅದೇ ಅಮ್ಮ ಮಗನ ಸೆಂಟಿಮೆಂಟ್, ಮಗನನ್ನು ಹುಡುಕುವ ತಾಯಿ, ಅಲ್ಲಲ್ಲಿ ಮಿಸ್ ಆಗುವ ಇಬ್ಬರು ಇದೆಲ್ಲಾ ಜೋಗಿಯನ್ನೇ ನೆನಪಿಗೆ ತರುತ್ತದೆ. ಜೊತೆಗೆ ಓಂ ರೀತಿ ಪುಸ್ತಕ ಬರೆಯಲು ಕತೆ ಹುಡುಕುತಾ ಅದೇ ಕತೆಯನ್ನು ನಮಗೆ ಕಂತುಗಳಲ್ಲಿ ಕೊಡುತ್ತಾ ಹೋಗುವುದು ಇದೆ..ಹಾಗೆಯೇ ದೃಶ್ಯ ವೈಭವೀಕರಣಕ್ಕೆ ಹೆಚ್ಚು ಗಮನ ಕೊಟ್ಟಿರುವ ಮಹೇಶ ಮುಸ್ಸಂಜೆ ಹಾಗೆಯೇ ದೃಶ್ಯದ ಸಾಧ್ಯತೆ ಬಾಧ್ಯತೆ ಸಾಮಾಜಿಕ ಬದ್ಧತೆ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿಲ್ಲ. ಹಾಗಾಗಿಯೇ ಇಡೀ ಚಿತ್ರದಲ್ಲಿನ ಕೊಲೆ ರೌಡಿಸಂ ಅನ್ನು  ವೀರಾವೇಶದ ಏನೋ ಘನೋದ್ದೇಶದ ಕಾರ್ಯ ಎಂಬಂತೆ ಬಿಂಬಿಸಲಾಗಿದೆ. ಹಾಗೆಯೇ ಕೊನೆಯಲ್ಲಿ ತಾಯಿಯನ್ನೇ ಮರೆತುಬಿಟ್ಟಿದ್ದಾರೆ ನಿರ್ದೇಶಕರು.

ಭೂಗತಲೋಕದ ಕತೆಯ ಚಿತ್ರಗಳು ಆಕರ್ಷಣೀಯ ಮತ್ತು ನಿರ್ದೇಶಕನ ಕುಸುರಿ ಕೆಲಸಕ್ಕೆ ಸವಾಲಾಗುತ್ತವೆ. ಆದರೆ ಅದರ ಮೂಡ್, ಗತಿಯನ್ನು ಅರ್ಥೈಸಿಕೊಂಡಾಗ ಅದರ ಮಜಾ ಬೇರೆಯೇ ಇರುತ್ತದೆ. ಆ ನಿಟ್ಟಿನಲ್ಲಿ ಮಹೇಶ್ ಪ್ರಯತ್ನ ಪಡಬೇಕಷ್ಟೇ. ಆದರೆ ಒಂದಷ್ಟು ಪ್ರೌಡಿಮೆ ಬೇಡುವ ಇಂತಹ ಕತೆಗಳನ್ನು ಏಳಸುತನದ ರೀತಿಯಲ್ಲಿ ನಿರೂಪಿಸಿದರೆ ಶಿವಣ್ಣ ಅವರಂತಹ ಕಲಾವಿದರ ಸದುಪಯೋಗವಾಗುವುದಿಲ್ಲ ಎಂಬುದನ್ನು ಮಹೇಶ್ ಮನಗಾಣಬೇಕು.

No comments:

Post a Comment