Pages

Friday, October 31, 2014

ನೆನಪಿದೆಯೇ

ಜೊತೆಯಾಗಿ ಹಿತವಾಗಿ ಚಿತ್ರ ನಿರ್ದೇಶನ ಮಾಡಿದ್ದ ಎಸ್.ಕೆ.ಶ್ರೀನಿವಾಸ್ ನೆನಪಿದೆಯೇ ಎಂದು ಕೇಳುತ್ತಿದ್ದಾರೆ. ಅವರ ನೆನಪಿದೆಯೇ ಚಿತ್ರ ನೋಡಿದ ಮೇಲೆ ನೆನಪಿಸಿಕೊಳ್ಳುವನ್ತಹದ್ದು ಏನು ಎಂದು ನಮ್ಮನ್ನು ಕೇಳುತ್ತಿದ್ದಾರಾ ಎಂಬ ಪ್ರಶ್ನೆ ಪ್ರೇಕ್ಷಕರನ್ನು ಕಾಡದೆ ಇರದು.
ಅದೊಂದು ಎಸ್ಟೇಟ್. ಅಲ್ಲಿ ದೆವ್ವ ಭೂತದ ಕಾಟವಿದೆ ಎಂದು ಜನ ಮಾತನಾಡಿಕೊಳ್ಳುತ್ತಾರೆ. ಬರೀ ಮಾತನಾಡಿಕೊಳ್ಳುವುದಿಲ್ಲ. ಅಲ್ಲಿಗೆ ಹೋಗಲು ಹೆದರುತ್ತಾರೆ. ಅಲ್ಲಿ ನಿಜಕ್ಕೂ ಗೆಜ್ಜೆ-ಹೆಜ್ಜೆ ಸಪ್ಪಳ ಕೇಳಿಸುತ್ತದೆ.  ಅದ್ಯಾರೋ ಅಲ್ಲಿ ಓಡಾಡುತ್ತಾರೆ. ಯಾರು ಎಂಬುದನ್ನು ನೋಡುವಷ್ಟರಲ್ಲಿ ಅವರು ಮಾಯಾ. ಬದಲಿಗೆ ಅಲ್ಲೊಂದು ಹೆಣ ಸಿಗುತ್ತದೆ. ಇದ್ಯಾರು ಕೊಲೆ ಮಾಡಿದವರು..? ಅದ್ಯಾವ ದೆವ್ವ..? ಎಂದೆಲ್ಲಾ ಪ್ರೇಕ್ಷಕರು ತಲೆಕೆಡಿಸಿಕೊಳ್ಳುವ ಹೊತ್ತಿಗೆ  ನಾಯಕನೂ ಬರುತ್ತಾನೆ. ಅವನೂ ತಲೆಕೆಡಿಸಿಕೊಂಡು  ಹುಡುಕಲು ಪ್ರಾರಂಭಿಸುತ್ತಾನೆ.
ಚಿತ್ರದ ಕತೆ ಹಾರರ್ ಥ್ರಿಲ್ಲರ್. ಹಾಗಾಗಿ ಅದಕ್ಕೆ ಬೇಕಾದ ಭಾವವನ್ನು ಕಟ್ಟಿಕೊಡಲು ನಿರ್ದೇಶಕರು ಪ್ರಯತ್ನಿಸಿದ್ದಾರೆ. ಒಂದು ಮನೆ..ಕತ್ತಲು.. ಅದೇನೋ ಧಗ್ ಎನಿಸುವ ಸದ್ದು.. ಇನ್ಯಾರದೋ ನೆರಳು ಹೀಗೆ ಚಿತ್ರ ಹಾರರ್ ಚಿತ್ರಗಳ ಸಿದ್ಧ ಸೂತ್ರಗಳನ್ನು ಅನುಸರಿಸಿ ಸಾಗುತ್ತದೆ. ಆದ್ರೆ ಚಿತ್ರಕತೆಯಲ್ಲಿ ಬಿಗಿಯಿಲ್ಲದೆ ಇರುವುದು ಮತ್ತು ಅದೇ ಜಾಡಿನಲ್ಲಿ ಸಾಗುವುದು ಚಿತ್ರದ ಋಣಾತ್ಮಕ ಅಂಶ ಎನ್ನಬಹುದು.
ಪ್ರಾರಂಭದಲ್ಲಿ ನೀರಸವಾಗಿ ತೆರೆದುಕೊಳ್ಳುತ್ತದೆ. ಸಿನಿಮಾ ಕೆಲವು ದೃಶ್ಯಗಳಿಗೂ ಚಿತ್ರಕ್ಕೂ ಸಂಬಂಧ ಏನು ಎಂಬ ಪ್ರಶ್ನೆ ಹುಟ್ಟುಹಾಕುತ್ತದೆ.  ಆದರೆ ಚಿತ್ರ ಮುಂದುವರೆದಂತೆ ಒಮ್ಮೆ ಕೊಲೆಗಳ ಸರಣಿ ಪ್ರಾರಂಭವಾಗುತ್ತಿದ್ದಂತೆ ಕತೆ ಒಂದು ಹಿಡಿತಕ್ಕೆ ಬರುತ್ತದೆ, ಉಳಿದ ಪ್ರಶ್ನೆಗಳಾದ ಏನು? ಯಾಕೆ? ಯಾರು ಗಳಿಗೆ ಚಿತ್ರದ ಅಂತ್ಯದಲ್ಲಿ ಉತ್ತರ ಸಿಗುತ್ತದೆ.
ನಾಯಕ ಇಲ್ಲಿ ಪ್ರೇಮಿಸುವ ದೆವ್ವ ಹುಡುಕುವ ಎರಡೂ ಕೆಲಸ ನಿಭಾಯಿಸಿದ್ದಾರೆ. ಪ್ರೀತಿಸುವ ಉತ್ಸಾಹದಲ್ಲಿ ಗಂಭೀರವಾದ ಸನ್ನಿವೇಶಗಳಲ್ಲಿ ಸೋಲುತ್ತಾರೆ. ಉಳಿದ ಕಲಾವಿದರು ಅಲ್ಲಲ್ಲಿ ಕಾಣಿಸಿಕೊಳ್ಳುತ್ತಾರೆ. ಮಾತಾಡಿ ತಮ್ಮ ಕೆಲಸ ಮುಗಿಸಿ ಸಾಗುತ್ತಾರೆ.
ನೀಲ್ ಸಂಗೀತದಲ್ಲಿ ಹಾಡು ಕೇಳುವಂತಿದ್ದರೂ  ಹಿನ್ನೆಲೆ ಸಂಗೀತ ಇನ್ನೂ ಪರಿಣಾಮಕಾರಿಯಾಗಿರಬೇಕು ಎನಿಸುತ್ತದೆ. ಯಾಕೆಂದರೆ ಹಾರರ್ ಚಿತ್ರದಲ್ಲಿ ಶಬ್ಧದಷ್ಟೇ ಪ್ರಾಮುಖ್ಯತೆ ನಿಶ್ಯಬ್ಧಕ್ಕೂ ಇರುತ್ತದೆ.
ಒಟ್ಟಾರೆಯಾಗಿ ಒಂದು ಹಾರರ್ ಕತೆಯಲ್ಲಿನ ಪ್ರೇಮಕತೆ ನೋಡಲು ಅಥವಾ ಪ್ರೆಮಕತೆಯಲ್ಲಿನ ಹಾರರ್ ಸಿನಿಮ ನೋಡಲು ಇಚ್ಚಿಸಿದವರು ನೆನಪಿದೆಯಾ ಚಿತ್ರವನ್ನೊಮ್ಮೆ ನೋಡಬಹುದು.

No comments:

Post a Comment