Pages

Friday, October 31, 2014

ನಮಸ್ತೆ ಮೇಡಂ

ಒಂದು ರಿಮೇಕ್ ಚಿತ್ರವನ್ನು ಹೇಗೆ ವಿಮರ್ಶಿಸಬಹುದು..? ಮೂಲ ಚಿತ್ರಕ್ಕೆ ಹೋಲಿಕೆ ಮಾಡಿ ನೋಡುವುದರಿಂದಲೋ ಅಥವಾ ಅದನ್ನೆಲ್ಲಾ ಮರೆತು ಬರೀ ಸಿನಿಮಾ ಎಂದು ನೋಡುವುದರಿಂದಲಾ? ಎಂಬುದು ಮೂಲಭೂತ ಪ್ರಶ್ನೆ.
'ನಮಸ್ತೆ ಮೇಡಂ' ಸುಮಾರು ವರ್ಷಗಳ ಹಿಂದೆ ತೆಲುಗಿನಲ್ಲಿ ತೆರೆಕಂಡಿದ್ದ 'ಮಿಸ್ಸಮ್ಮ' ಚಿತ್ರದ ರಿಮೇಕ್. ನಿರ್ದೇಶಕ ರಘುರಾಜ್ ಮಿಸ್ಸಮ್ಮ ಹೇಗಿತ್ತೋ ಹಾಗೆಯೇ ಏನೂ ಬದಲಾವಣೆ ಮಾಡದೆ ಕನ್ನಡೀಕರಿಸಿದ್ದಾರೆ. ಆದರೆ ಹಳೆಯ ಚಿತ್ರವನ್ನು ಈವತ್ತಿಗೆ ರೂಪಾಂತರ ಮಾಡುವಾಗ ಅಥವಾ ಪುನರ್ನಿರ್ಮಾಣ ಮಾಡುವಾಗ ವಹಿಸಬೇಕಾದ ಗಮನವನ್ನು ತಲೆ ಕೆಡಿಸಿಕೊಳ್ಳದೆ ಚಿತ್ರ ನಿರ್ದೇಶನ ಮಾಡಿದ್ದಾರೆ. ಹಾಗಾಗಿ ಆವತ್ತಿನ ಕತೆ ಆವತ್ತಿನಂತೆಯೇ ಇದೆ.
ಅಥವಾ ಬರೀ ಒಂದು ಚಿತ್ರವಾಗಿ ನಮಸ್ತೆ ಮೇಡಂ ಚಿತ್ರವನ್ನು ವೀಕ್ಷಿಸಿದರೆ ಸಾದಾರಣ ಚಿತ್ರ ಎನಿಸುತ್ತದೆ. ಪ್ರಖ್ಯಾತ ಕಂಪನಿಯೊಂದರ ಮುಖ್ಯಸ್ಥೆ ತನ್ನ ಕಂಪನಿಯಲ್ಲಿ ಕೆಲಸ ಮಾಡುವ ನಾಯಕನನ್ನು ಮದುವೆಯಾಗುವಂತೆ ದುಂಬಾಲು ಬೀಳುತ್ತಾಳೆ. ಆದರೆ ಈಗಾಗಲೇ ನಾಯಕನಿಗೆ ಮದುವೆಯಾಗಿದೆ. ಏನು ಮಾಡುವುದು. ನಾಯಕ ಏಕ ಪತ್ನಿ ವ್ರತಸ್ಥ. ಹಾಗಾಗಿ ನಾಯಕ ಇಬ್ಬರ ನಡುವೆ ಸಿಲುಕಿ ಒದ್ದಾಡುತ್ತಾನೆ.
ಅದೆಲ್ಲಾ ಸರಿ. ಇದನ್ನೆಲ್ಲಾ ನಾಯಕಿ ಏಕೆ ಮಾಡುತ್ತಾಳೆ. ಅವಳ ಹಿಂದಿನ ಕತೆಯೇನು? ಎಂಬುದಕ್ಕೆ ಬೇರೆಯದೇ ಆದ ಕತೆಯಿದೆ. ಅದೇನು ಎಂಬುದನ್ನು ಚಿತ್ರ ನೋಡಿ ಕುತೂಹಲ ತಣಿಸಿಕೊಳ್ಳಬಹುದು. ಶ್ರೀನಗರ ಕಿಟ್ಟಿ ತಮ್ಮ ಪಾತ್ರವನ್ನು ತುಂಬಾ ಸಮರ್ಥವಾಗಿ ನಿಭಾಯಿಸಿದ್ದಾರೆ. ಸವಾಲೆನಿಸುವ ಪಾತ್ರವಲ್ಲವಾದರೂ ಅದನ್ನು ಅಷ್ಟೇ ನಿಜವಾಗಿ ನಿರ್ವಹಿಸಿ ಚಿತ್ರವನ್ನೂ ಸಹನೀಯ ಮಾಡಿದ್ದಾರೆ. ಹೆಂಡತಿ ಮತ್ತು ಬಾಸ್ ನಡುವೆ ಸಿಲುಕಿ ತೊಳಲಾಡುವ ಪಾತ್ರದಲ್ಲಿ, ಸಂಭಾಷಣೆ ಒಪ್ಪಿಸುವ ಶೈಲಿಯಲ್ಲಿ ಮೊದಲಿನಿಂದಲೂ ಕೊನೆಯವರೆಗೂ ಪ್ರೇಕ್ಷಕರನ್ನು ತಮ್ಮೆಡೆಗೆ ಸೆಳೆಯುವ ಪ್ರಯತ್ನ ಮಾಡಿದ್ದಾರೆ ಮತ್ತು ಅದರಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ರಾಗಿಣಿ ಕೂಡ ತುಂಡುಡುಗೆ ಧರಿಸಿ ಅಲ್ಲಲ್ಲಿ ಗಮನ ಸೆಳೆಯುತ್ತಾರೆ. ಉಳಿದ ಕಲಾವಿದರುಗಳು ತಮ್ಮ ತಮ್ಮ ಪಾತ್ರಗಳನ್ನೂ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.
ಆದರೆ ಚಿತ್ರದ ಕತೆಯನ್ನು ಸ್ವಲ್ಪ ಈವತ್ತಿನ ಸ್ಥಿತಿಗತಿಗೆ ಮತ್ತು ಕನ್ನಡದ ಸೊಗಡಿಗೆ ಪರಿವರ್ತಿಸಬೇಕಾದ ಅಗತ್ಯ ತುಂಬಾ ಇತ್ತು. ಯಾಕೆಂದರೆ 'ಮಿಸ್ಸಮ್ಮ' ಚಿತ್ರದ ಕತೆಯಲ್ಲಿನ ತಿರುಳು ಚೆನ್ನಾಗಿದ್ದರೂ ಅದನ್ನು ಪ್ರೆಸೆಂಟ್ ಮಾಡಿರುವ ಶೈಲಿ ಹಳೆಯದು ಎನಿಸುತ್ತದೆ. ಬರೀ ಸೊಂಟ ಬಳುಕಿಸಿ ಕುಣಿದು ಕುಪ್ಪಳಿಸಿ ನಾಯಕಿ ನಾಯಕನನ್ನು ಪಟಾಯಿಸಲು ಹೆಣೆಯುವ ತಂತ್ರಗಳು ಹಳೆಯದು ಎನಿಸುತ್ತವೆ. ಇನ್ನೇನು ಬೇಕಿತ್ತು ಎನಿಸುತ್ತವೆ.
ಛಾಯಾಗ್ರಹಣ, ಸಂಗೀತ ನೃತ್ಯ ಎಲ್ಲಾ ವಿಭಾಗದಲ್ಲೂ ಕಸುಬುದಾರಿಕೆಯಿದೆ. ಸಂಕಲನದಲ್ಲಿ ಏನಾದರೂ ಭಿನ್ನತೆ ಮಾಡಬೇಕು ಎನಿಸುವ ಸಂಕಲನಕಾರರ ಕೈಚಳಕ ಹೆಚ್ಚಾಗಿ ಅದೇ ಚಿತ್ರದ ಓಘಕ್ಕೆ ಅಡೆತಡೆಯಾಗಿದೆ.
ಒಟ್ಟಿನಲ್ಲಿ ಎಲ್ಲಾ ಇದ್ದು  ಇನ್ನೇನು ಯಾರಬೇಕಿತ್ತು ಎನಿಸುವ ನಮಸ್ತೆ ಮೇಡಂ ಒಮ್ಮೆ ನೋಡಬಹುದಾದ ಚಿತ್ರವಾಗಿದೆ.
ರವಿಗರಣಿ ಶುಭಂ ಎನ್ನುವ ಚಿತ್ರವನ್ನು ನಿರ್ಮಿಸಿ ನಿರ್ದೇಶನ ಮಾಡಿದ್ದರು. ಆದರೆ ಆ ಚಿತ್ರ ಸೋತಾಗ ಕಿರುತೆರೆಯಲ್ಲಿ ತೊಡಗಿಸಿಕೊಂಡು ಹೆಸರು ಮಾಡಿದವರು. ಈಗ ಅವರದೇ ಸಂಸ್ಥೆಯಿಂದ ನಮಸ್ತೆ ಮೇಡಂ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಹಳೆಯ ಚಿತ್ರವನ್ನು ಏನೇನೋ ವಿಶೇಷವಿಲ್ಲದ ಚಿತ್ರವನ್ನು ರಿಮೇಕ್ ಯಾಕೆ ಮಾಡಬೇಕಿತ್ತು ಎಂಬುದೇ ಪ್ರಶ್ನೆ. ಅದಕ್ಕೆ ಅವರೇ ಉತ್ತರ ಹೇಳಬೇಕಾಗಿದೆ.

No comments:

Post a Comment