Pages

Friday, October 31, 2014

ಸೂಪರ್ ರಂಗ

ಒಂದು ಸಿನಿಮಾಕ್ಕೆ ಏನೇನು ಬೇಕು..? ಏನು ಬೇಡ ನಮಗೆ ಮನರಂಜನೆ ಸಾಕು ಎಂದರೆ ಮರುಮಾತಾಡದೆ ಸೂಪರ್ ರಂಗ ಚಿತ್ರಮಂದಿರಕ್ಕೆ ಹೋಗಬಹುದು.
ಸೂಪರ್ ರಂಗ ಚಿತ್ರದ ನಾಯಕನಿಗೆ ಏನೇ ಕೆಲಸ ಮಾಡಿದರೂ ಅದರಲ್ಲಿ ಕಿಕ್ ಇರಲೇಬೇಕು. ಹಾಗಾಗಿ ಉಗುರಲ್ಲಿ ಆಗಿಹೋಗುವ ಕೆಲಸಕ್ಕೆ ಕೊಡಲಿ ಹಿಡಿಯುತ್ತಾನೆ. ಸರಾಗವಾಗಿ ಆಗುವ ಕೆಲಸವನ್ನು ಕಷ್ಟ ಪಟ್ಟು ಮಾಡುವಂತೆ ಮಾಡುತ್ತಾನೆ. ಅದವನ ಹುಟ್ಟುಗುಣ. ಹುಟ್ಟುತ್ತಲೇ ಅದ್ಯಾಕೋ ಆ ಗುಣ ಅವನ ಮೈಮನ ತುಂಬಿಬಿಟ್ಟಿದೆ. ಇಂತಿಪ್ಪ ನಾಯಕ  ನಾಯಕಿಯನ್ನು ಪಟಾಯಿಸುತ್ತಾನೆ. ಪ್ರೀತಿಸುತ್ತಾನೆ. ಪದೇ ಪದೇ ಕೆಲಸ ಬಿಡುತ್ತಾನೆ. ಹೊಡೆದಾಡುತ್ತಾನೆ. ಜೊತೆಗೆ ಸಮಾಜ ಸೇವೆಯ ಕಾರ್ಯವನ್ನೂ ಮಾಡುತ್ತಾನೆ. ಮತ್ತು ಇವಿಷ್ಟನ್ನೂ ತಮಾಷೆಯಾಗಿ ಪ್ರೇಕ್ಷಕರಿಗೆ ಕಿಕ್ ಕೊಡುವ ರೀತಿಯಲ್ಲಿ ಮಾಡುತ್ತಾನೆ. ಇದು ಸೂಪರ್ ರಂಗನ ಕತೆ. ಉಪೇಂದ್ರ ತಮ್ಮ ಚಿತ್ರಗಳಲ್ಲಿ ಸುಖಾ ಸುಮ್ಮನೆ ತಮ್ಮ ಸಂಭಾಷಣೆಗಳಿಂದ ಪ್ರೇಕ್ಷಕರಿಗೆ ಕಿಕ್ ಕೊಟ್ಟವರು. ಇನ್ನು ಈ ಸಿನಿಮಾದಲ್ಲಿ ಬಿಡುತ್ತಾರೆ/ ಇಲ್ಲಿ ಹೆಜ್ಜೆ ಹೆಜ್ಜೆ ಗೂ ಕಿಕ್ ಕೊಡುತ್ತಾರೆ. ನಗಿಸುತ್ತಾರೆ. ಹಾಗಾಗಿ ಪ್ರೇಕ್ಷಕ ಕೊಟ್ಟ ಕಾಸಿಗೆ ಮೋಸವಿಲ್ಲ ಗುರು ಎಂದುಕೊಂಡು ಸಿನಿಮಾ ನೋಡುತ್ತಾನೆ. ನೋಡಿದ ನಂತರ ಹೊರಬಂದರೆ ಬೇಸರವೇನೂ ಆಗುವುದಿಲ್ಲ. ಹಾಗಂತ ಮತ್ತೊಮ್ಮೆ ನೋಡಿ ಮಜಾ ತೆಗೆದುಕೊಳ್ಳೋಣ ಎನಿಸುವುದೂ ಇಲ್ಲ.
ಸೂಪರ್ ರಂಗ ತೆಲುಗಿನ ಕಿಕ್ ಚಿತ್ರದ ರೀಮೇಕ್. ಮೊನ್ನೆ ಮೊನ್ನೆ ಅದರ ಹಿಂದಿ ಅವತರಣಿಕೆ ಸಲ್ಮಾನ್ ಖಾನ್ ಅಭಿನಯದಲ್ಲಿ ಬಂದು ಹಣ ಗಳಿಸಿದ್ದು ಬೇರೆ ಮಾತು. ಈಗ ಕನ್ನಡದಲ್ಲಿ ಬಂದಿದೆ. ಹಿಂದಿಯವರು ಒಂದಷ್ಟು ಬದಲಾವಣೆ ಮಾಡಿದ್ದರು. ಆದರೆ ಕನ್ನಡದ ಸಾಧುಕೋಕಿಲ ಅದ್ಯಾವ ಸಾಹಸಕ್ಕೂ ಕೈ ಹಾಕಿಲ್ಲ. ಹಾಗಾಗಿ ತೆಲುಗಿನ ನಿಷ್ಠಾವಂತ ರೀಮೇಕ್ ಇದಾಗಿದೆ.
ಉಪೇಂದ್ರ ತಮ್ಮ ಪಾತ್ರವನ್ನು ತಮ್ಮದೇ ಮ್ಯಾನರಿಸಂ ನಲ್ಲಿ ಅಭಿನಯಿಸಿದ್ದಾರೆ. ಸಂಭಾಷಣೆ ಒಪ್ಪಿಸಿದ್ದಾರೆ. ಅದರಲ್ಲಿ ಕಿಕ್ ಕೊಡಲು ಪ್ರಯತ್ನಿಸಿದ್ದಾರೆ. ಕೆಲವು ಕಡೆ ಅದು ನಾಟಕೀಯ ಎನಿಸಬಹುದು. ಅದಕ್ಕೆ ಅವರು ಸಂಭಾಶನೆಕಾರರತ್ತ ಕೈ ತೋರಿಸಬಹುದು, ಇನ್ನುಳಿದ ಕಲಾವಿದರ ಬಳಗ ತಮ್ಮ ತಮ್ಮ ಪಾತ್ರಗಳನ್ನೂ ಅಚ್ಚುಕಟ್ಟಾಗಿ ನಿಭಾಯಿಸಿದೆ. ಹಾಗಾಗಿ ಮೊದಲಾರ್ಧ ಕಿಕ್ ಕೊಡುತ್ತಾ ಸಾಗುವ ರಂಗ ದ್ವಿತೀಯಾರ್ಧದಲ್ಲಿ ಸ್ವಲ್ಪ ಕಿಕ್ ಕಡಿಮೆ ಮಾಡುತ್ತದೆ, ಕೆಲವು ಹಾಸ್ಯ ಪ್ರಸಂಗಗಳು ನಗೆ ತರಿಸಿದರೆ ಕೆಲವು ಕನಿಕರ ಮೂಡಿಸುತ್ತವೆ.
ಅಶೋಕ್ ಕಶ್ಯಪ್ ಛಾಯಾಗ್ರಹಣ, ಅರ್ಜುನ್ ಜನ್ಯ ಸಂಗೀತ ಚಿತ್ರಕ್ಕೆ ಪೂರಕವಾಗಿವೆ. ಇನ್ನು ಸಾಧುಕೋಕಿಲ ನಟರಾಗಿ ನಿರ್ದೇಶಕರಾಗಿ ಆಯಾ ಕೆಲಸಕ್ಕೆ ಚ್ಯುತಿ ಬರದಂತೆ ಮಾಡಿದ್ದಾರೆ.
ಎಲ್ಲಾ ಸರಿ . ಒಂದು ರೀಮೇಕ್ ಚಿತ್ರ ಎಂದಾಗ ಏನನ್ನು ನಿರೀಕ್ಷೆ ಮಾಡಬಹುದು ಎನ್ನುವ ಪ್ರಶ್ನೆ ಎದುರಾಗುತ್ತದೆ. ಇವೆಲ್ಲವನ್ನೂ ಹೊರತು ಪಡಿಸಿದಾಗ ಸೂಪರ್ ರಂಗ ಸುಮ್ಮನೆ ಮನರಂಜಿಸುವ ಚಿತ್ರವಾಗಿಯಷ್ಟೇ ಪ್ರೇಕ್ಷಕರ ಗಮನ ಸೆಳೆಯುತ್ತದೆ. ಅದರಾಚೆಗೆ ಏನನ್ನೂ ಸಾಧಿಸಲು ಪ್ರಯತ್ನಿಸುವುದಿಲ್ಲ. ಒಂದಷ್ಟು ತಮಾಷೆ ಒಂದಷ್ಟು ಹಾಸ್ಯ, ಹೊಡೆದಾಟ ಪ್ರೀತಿ ಇದು ತೆಲುಗರ ಮೂಲಮಂತ್ರ. ಅದು ಕನ್ನಡದ್ದೇ ಆಗಿರುವುದು ಮತ್ತು ಇತ್ತೀಚಿಗೆ ಆ ತರಹದ ಚಿತ್ರಗಳು ಗೆಲ್ಲುತ್ತಿರುವುದು ನಮ್ಮ ಸೌಭಾಗ್ಯವಂತೂ ಅಲ್ಲ. ಯಾಕೆಂದರೆ ಸಿನಿಮಾ ನೋಡುತ್ತಾ ಮನರಂಜಿಸುತ್ತದೆ ಆದರೆ ನೋಡಾದ ಮೇಲೆ ಯಾವುದೇ ರೀತಿಯಲ್ಲೂ ಕಾಡುವುದಿಲ್ಲ  ಮತ್ತು ಈ ತರಹದ ತೀರಾ ಮನರಂಜನಾತ್ಮಕ ಸಾದಾರಣ ಚಿತ್ರ ಮಾಡಲು ಕನ್ನಡ ಖ್ಯಾತ ನಟ ನಿರ್ದೇಶಕರು ದೊಡ್ಡ ನಿರ್ಮಾಪಕರು ಬೇಕಿತ್ತಾ ಎಂಬ ಪ್ರಶ್ನೆ ಕಾಡುತ್ತದೆ. ಸಿನಿಮಾ ಗೆಲ್ಲುತ್ತದೆ, ಹಣ ಮಾಡುತ್ತದೆ ಎನ್ನುವುದನ್ನು ಬಿಟ್ಟರೆ ಚಿತ್ರರಂಗಕ್ಕೆ ಅದರ ಗುಣ ಮಟ್ಟಕ್ಕೆ ಏನು ಕೊಡುಗೆ ನೀಡುತ್ತದೆ ಎಂಬುದು ಪ್ರಶ್ನೆಯಾಗಿಯೇ ಉಳಿಯುತ್ತದೆ. ಇನ್ನಾದರೂ ಸುಖಾ ಸುಮ್ಮನೆ ಇಂತಹ ಸಾದಾರಣ ಸಿನಿಮಾ ಮಾಡುವುದನ್ನು ಕಡಿಮೆ ಮಾಡಿ ಕನ್ನಡದ ಖ್ಯಾತ ಚಿತ್ರಕರ್ಮಿಗಳು ಗುಣಮಟ್ಟದ ಸಿನಿಮಾದ ಕಡೆಗೂ ಗಮನ ಹರಿಸಲಿ ಎಂಬುದು ಪ್ರೇಕ್ಷಕ ಹಪಾಹಪಿಯಾಗಿದೆ. 

No comments:

Post a Comment