Pages

Friday, October 31, 2014

ಪರಮಶಿವ

ಒಂದು ಕುಟುಂಬ ಅಲ್ಲೊಬ್ಬ ಯಜಮಾನ. ಅವನ ಒಳ್ಳೆಯತನ, ಧರ್ಪ ಮತ್ತು ಮೀಸೆ ಊರಿಗೆ ಹೆಸರುವಾಸಿ. ಅಂತಹವನ ವಿರುದ್ಧ ಒಬ್ಬ ಖಳನಾಯಕ. ಅವನಿಗೂ ಏನಾದರೂ ಮಾಡಿ ಇವನನ್ನು ಬಗ್ಗು ಬಡಿಯುವ ಆಸೆ... ಈ ಕತೆಯ ಸಾಲನ್ನು ಹೊತ್ತು ತಮಿಳಿನಲ್ಲಿ ಒಂದಷ್ಟು ಚಿತ್ರಗಳು ಬಂದವು ಮತ್ತವುಗಳಲ್ಲಿ ಬಹುತೇಕ ಕನ್ನಡಕ್ಕೂ ರಿಮೇಕ್ ಆದವು.
ಆದರೆ ಕಾಲ ಬದಲಾಗಿದೆ. ಆದರೆ ನಮ್ಮ ನಿರ್ದೇಶಕರು ಬದಲಾಗಿಲ್ಲ. 2001 ರಲ್ಲಿ ತೆರೆಕಂಡಿದ್ದ ಸಮುದ್ರಂ ಚಿತ್ರವನ್ನು ಈಗ ಕನ್ನಡಕ್ಕೆ ತಂದಿದ್ದಾರೆ. ಆವತ್ತಿಗೆ ಆ ಟ್ರೆಂಡಿಗೆ ಓಕೆ ಎನ್ನುವಂತಿದ್ದ ಚಿತ್ರವನ್ನು ಈವತ್ತಿಗೆ ಹಾಗೆಯೇ ಎಲ್ಲಿಯೂ ಬದಲಾಯಿಸದೆ ತೆರೆಗೆ ತಂದಿದ್ದಾರೆ ನಿರ್ದೇಶಕ ಮಹೇಶ್ ಬಾಬು. ಹಾಗಾಗಿ ಚಿತ್ರವನ್ನು ಹತ್ತು ವರ್ಷಗಳ ಹಿಂದಕ್ಕೆ ಹೋಗಿ ಆ ಮನಸ್ಥಿತಿಯಲ್ಲಿ ನೋಡಿದರೆ ಏನಾದರೂ ಅನಿಸಬಹುದೇನೋ..? ಆದರೆ ಈವತ್ತಿಗೆ ?
ಒಬ್ಬ ಅಣ್ಣನ ಮಾತನ್ನು ತಮ್ಮಂದಿರು ಯಾವ ಮಟ್ಟಕ್ಕೆ ಪಾಲಿಸಲು ಸಾಧ್ಯ? ಅದಕ್ಕೊಂದು ದೃಶ್ಯ ಇದೆ. ಅಣ್ಣ ತಮ್ಮಂದಿರನ್ನು ಕರೆದು ವಿಷ ಕುಡಿಯಿರಿ ಎನ್ನುತ್ತಾನೆ. ತಕ್ಷಣ ಏನು ಯಾಕೆ ಎಂದು ಕೇಳದ ತಮ್ಮಂದಿರು ಟೀ ಕುಡಿಯುವ ರೀತಿಯಲ್ಲಿ ವಿಷ ಕುಡಿಯುತ್ತಾರೆ..
ಖಳ ಯಾವ ಮಟ್ಟಿಗೆ ದ್ವೇಷ ಸಾಧಿಸಲು ಸಾಧ್ಯ? ತನ್ನ ಮನೆಗೆ ತನ್ನ ವಿರೋಧಿಯ ಮಗಳನ್ನು ಸೊಸೆಯಾಗಿ ತಂದುಕೊಳ್ಳುತ್ತಾನೆ.. ಹಿಂಸಿಸಲು.  ಹಾಗೆಯೇ ನಾಯಕ ತನ್ನ ತಲೆಯನ್ನೇ ಕೊಡುತ್ತಾನೆ. ಮಾತು ಉಳಿಸಿಕೊಳ್ಳಲು.. ಹೀಗೆ ಅತಾರ್ಕಿಕ, ಅತಿರೇಕದ ಸನ್ನಿವೇಶಗಳು ಅದ್ಯಾರಿಗೆ ಇಷ್ಟವಾಗುತ್ತದೆ ಎಂಬುದನ್ನು ಸ್ವತಃ ನಿರ್ದೇಶಕರೇ ಹೇಳಬೇಕಾಗುತ್ತದೆ.
ಚಿತ್ರದ ಪ್ರಾರಂಭ ಅಂತ್ಯ ಮತ್ತು ಮಾತುಗಳು ಸನ್ನಿವೇಶಗಳು ಎಲ್ಲವೂ ನಿರೀಕ್ಷಿತ. ಮೂರು ಅಣ್ಣಂದಿರು ಒಬ್ಬಳು ತಂಗಿ. ಒಬ್ಬ ಮನೆ ಆಳು. ಎಲ್ಲರೂ ಒಬ್ಬರಿಗಾಗಿ ಒಬ್ಬರು ಮಿಡಿಯುವವರು. ಇವರೆಲ್ಲರ ವಿರುದ್ಧ ಒಬ್ಬ ಖಳ. ಚಿತ್ರ ಇವರ ಸುತ್ತಾ ಸುತ್ತುತ್ತಲೇ ಅವರದೇ ಕತೆ ಹೇಳುತ್ತಾ ಸಾಗುತ್ತದೆ. ಅಲ್ಲಲ್ಲಿ ಸೆಂಟಿಮೆಂಟ್  ತ್ಯಾಗ ದಟ್ಟವಾಗಿ ಎದ್ದು ಕಾಣುತ್ತದೆ. ಬಹುಶ ಇಡೀ ಸಿನಿಮಾದಲ್ಲಿ ನಿಮಗೆ ಎದ್ದು ಕಾಣುವುದು ಪರೋಪಕಾರ ಮತ್ತು ತ್ಯಾಗ. ಇಲ್ಲಿ ಎಲ್ಲಾ ಪಾತ್ರಗಳೂ ತ್ಯಾಗಕ್ಕೆ ಹಪಹಪಿಸುತ್ತವೆ.
ಚಿತ್ರದ ಈ ಅಂಶಗಳನ್ನು ಪಕ್ಕಕ್ಕಿಟ್ಟರೆ ಸಾಂಸಾರಿಕ ಚಿತ್ರಗಳನ್ನು ಇಷ್ಟಪಡುವವರಿಗೆ ಸಿನಿಮಾ ಓಕೆ ಎನ್ನಿಸಬಹುದೇನೋ? ಯಜಮಾನ, ಜಮೀನ್ದಾರು ಸರಣಿಯ ಚಿತ್ರಗಳನ್ನು ನೋಡಿ ಖುಷಿ ಪಟ್ಟವರಿಗೆ ಈ ಚಿತ್ರ ಕೂಡ ಒಂದಷ್ಟು ಹೊತ್ತು ಮನರಂಜಿಸಬಹುದೇನೋ?
ಇಲ್ಲಿ ರವಿಚಂದ್ರನ್ ಅವರದು ದ್ವಿಪಾತ್ರ. ಆದರೆ ಅವರ ಕಂಟಿನ್ಯೂಟಿ ಅಲ್ಲಲ್ಲಿ ಮಿಸ್ ಆಗುತ್ತದೆ. ಯಶಸ್, ರಾಘವೇಂದ್ರ ತಮ್ಮಂದಿರ ಪಾತ್ರ ಮಾಡಿದ್ದಾರೆ.ಶರಣ್ಯ ಮೋಹನ್ ತಂಗಿಯ ಪಾತ್ರದಲ್ಲಿ ಕಣ್ಣೀರ ಕೊಡಿ ಹರಿಸುತ್ತಾರೆ.
ತಾಂತ್ರಿಕವಾಗಿ ಚಿತ್ರ ಹೊಸತನ ಮೆರೆಯುವುದಿಲ್ಲ. ಅದೇ 2000 ಇಸವಿಗೆ ನಮ್ಮನ್ನು ಕರೆದುಕೊಂಡು ಹೋಗುತ್ತದೆ ಎಂಬುದು ಹೊಗಳಿಕೆಯಲ್ಲ ಎಂಬುದನ್ನು ನಾವು ನಿರ್ದೇಶಕರು ಅರ್ಥ ಮಾಡಿಕೊಳ್ಳಬೇಕು. ಇನ್ನು ಅರ್ಜುನ್ ಜನ್ಯ ಸಂಗೀತ ನೀರಸ. ಛಾಯಾಗ್ರಹಣ ಸಂಕಲನ ಗಳಿಗೂ ಇದೆ ಮಾತು ಅನ್ವಯಿಸುತ್ತದೆ.
ಒಂದು ಚಿತ್ರವನ್ನು ರೀಮೇಕ್ ಮಾಡಲು ಒಂದಷ್ಟಾದರೂ ಮಾನದಂಡವಿದೆ. ಕತೆ, ಚಿತ್ರಕತೆ, ಹೊಸತನ ಯಶಸ್ಸು ಹೀಗೆ. ಹಾಗೆ ನೋಡಿದರೆ ಈವತ್ತಿನ ಕಾಲಮಾನಕ್ಕೆ ಸಮುದ್ರಂ ಚಿತ್ರವನ್ನು ರಿಮೇಕ್ ಮಾಡಲು ಯಾವುದೇ ಕಾರಣಗಳು ಮೇಲ್ನೋಟಕ್ಕೆ ಕಾಣುವುದಿಲ್ಲ. ಆದರೂ ಯಾಕೆ ಈ ಚಿತ್ರವನ್ನು ಆಯ್ಕೆ ಮಾಡಿಕೊಂಡರೂ ಎಂಬುದೇ ಚಿತ್ರದ ಒಂದೇ ಒಂದು ಕುತೂಹಲಕಾರಿ ಪ್ರಶ್ನೆ.

No comments:

Post a Comment