Pages

Sunday, November 10, 2013

ಜನ್ಮ



ಚಿತ್ರದ ಕಥೆ ಇಂತಿದೆ. ಅವರಿಬ್ಬರು ಗಾಜನೂರಿನ ಮುಗ್ಧ ಪ್ರೇಮಿಗಳು. ತಮ್ಮ ಪ್ರೀತಿಗೆ ಊರಲ್ಲಿ ಉಳಿಗಾಲವಿಲ್ಲವೆಂದಾದಾಗ ಊರು ಬಿಟ್ಟು ಚೆನ್ನೈ ದಾರಿ ಹಿಡಿಯುತ್ತಾರೆ. ಅಲ್ಲಿನ ಜೀವನೋಪಾಯಕ್ಕಾಗಿ ಕೆಲಸದ ಹುಡುಕಾಟದ ಪ್ರಯತ್ನದಲ್ಲಿದ್ದಾಗ ನಾಯಕನಿಗೆ ಕನ್ನಡಿಗ-ಶಂಕರ್ ನಾಗ್ ಅಭಿಮಾನಿಯೊಬ್ಬ ಮದುವೆ ಮಾಡಿಸಲು ಪ್ರಯತ್ನಿಸುತ್ತಾನೆ. ಆದರೆ ಅಲ್ಲಿನ ದುರುಳ, ರೌಡಿಯೊಬ್ಬನ ಕಣ್ಣಿಗೆ ಬೀಳುವ ನಾಯಕಿಯನ್ನು ಆತ ಅತ್ಯಾಚಾರ ಮಾಡಲು ಮುಂದಾಗುತ್ತಾನೆ. ಸರಿ ಸಮಯಕ್ಕೆ ನಾಯಕನ ಆಗಮನ, ಹೊಡೆದಾಟ, ಕೊಲೆ ಆಮೇಲಿಂದ ಜೈಲು..ಇತ್ತ ಗೊತ್ತು ಗುರಿಯಿಲ್ಲದ ಊರಲ್ಲಿ ನಾಯಕಿ ಬೀದಿ ಪಾಲು..ಜೈಲಿಂದ ಬಂದ ನಾಯಕ ನೇರವಾಗಿ ಭೂಗತಲೋಕಕ್ಕೆ ಕಾಲಿಡುತ್ತಾನೆ. ತಪ್ಪಿಸಿಕೊಂಡಿರುವ ತನ್ನುಡುಗಿಗಾಗಿ ಏನಾದರೂ ಮಾಡಲು ಸಿದ್ಧನಾಗಿ ಹೆಣಗಳನ್ನುರುಳಿಸಿ ಪೋಲೀಸರಿಗೆ ಬೇಕಾದವನಾಗುತ್ತಾನೆ..ಇತ್ತ ಹುಚ್ಚಿಯಂತೆ ನಾಟಕವಾಡುವ ನಾಯಕಿಯನ್ನು ಸೂಪರ್ ಸ್ಟಾರ್ ರಜನಿಕಾಂತ್ ಗಾಜನೂರಿಗೆ ತಲುಪಿಸುತ್ತಾರೆ. ಅಲ್ಲಿ ನಾಯಕನ ಅಮ್ಮ,ಅಪ್ಪ ಹುಚ್ಚಿ ನಾಯಕಿಯ ಜೊತೆ ಸೇರಿ ಬೆಂಗಳೂರಿಗೆ ಬಂದು ನಾಯಕನ ಹುಡುಕಾಟಕ್ಕಿಳಿದರೆ, ಅಲ್ಲೆಲ್ಲಾ ಕೊಲೆ ಮಾಡಿದ ನಾಯಕ ಇವರನ್ನೆಲ್ಲಾ ಹುಡುಕಿಕೊಂಡು ತಾನೂ ಬೆಂಗಳೂರಿಗೆ ಬರುತ್ತಾನೆ..ಅಲ್ಲಿ ಎಲ್ಲರ ಸಮಾಗಮವಾಗುತ್ತದಾ,,?
ಪ್ರಾರಂಭದಲ್ಲಿ ಪ್ರೇಮಕಥೆಯಂತೆ ಭಾಸವಾಗುವ ಕಥೆ ಏಕದಮ್ ಭೂಗತಲೋಕದ ದಾರಿ ಹಿಡಿಯುತ್ತದಾದರೂ ಅಲ್ಲಲ್ಲ ತಾಯಿ ಮಗನ ಬಾಂಧವ್ಯದ ತುಣುಕುಗಳು ಕಥೆಯ ಒಂದು ಭಾಗವಾಗಿ ಬರುವುದರಿಂದಾಗಿ ಚಿತ್ರಕ್ಕೆ ಒಂದು ನಿರೀಕ್ಷಿತ ಆಯಾಮ ಸಿಗುವುದಿಲ್ಲ. ಹಾಗೆಯೇ ಚಿತ್ರಕಥೆ ಜಾಳುಜಾಳಾಗಿರವುದರಿಂದ ಚಿತ್ರ ಯಾವ ಹಂತದಲ್ಲೂ ಪ್ರೇಕ್ಷಕನ ಮನಸ್ಸಿಗೆ ನಾಟುವುದಿಲ್ಲ. ಚಿತ್ರದಲ್ಲಿನ ಮತ್ತೊಂದು ಋಣಾತ್ಮಕ ಅಂಶವೆಂದರೆ ದೃಶ್ಯರಚನೆ. ಇತ್ತ ವಾಸ್ತವವೂ ಅಲ್ಲದ, ಅತ್ತ ತೀರಾ ಕಾಲ್ಪನಿಕವೂ ಅನಿಸದ ಎಡಬಿಡಂಗಿ ದೃಶ್ಯಗಳು ಸಿನಿಮಾದ ಒಟ್ಟಾರೆ ಭಾವವನ್ನು ಕೊಡುವಲ್ಲಿ ಸೋತಿವೆ. ಹಾಗೆ ಪಾತ್ರಗಳ ಕಲ್ಪನೆಗಳೂ ಬಾಲಿಶವೆನಿಸುತ್ತವೆ. ಚಿತ್ರದಲ್ಲಿನ ಬಹತೇಕ ಪಾತ್ರಗಳು ಅವುಗಳ ಹಿನ್ನೆಲೆ ಅವುಗಳ ನಡವಳಿಕೆಯ ಬಗ್ಗೆ ನಿರ್ದೇಶಕರಿಗೇ ಸ್ಪಷ್ಟ ಕಲ್ಪನೆ ಇಲ್ಲದಿರುವುದು ಎದ್ದು ತೋರುತ್ತದೆ. ಚೆನ್ನೈನಲ್ಲಿ ಇದ್ದಕ್ಕಿದ್ದಂತೆ ಕನ್ನಡದಲ್ಲೂ ತಮಿಳಿನಲ್ಲೂ ಮಾತಾಡುವ ಖಳನಾಯಕ, ಹುಚ್ಚಿಯಂತೆ ನಾಟಕವಾಡುವ ನಾಯಕಿ, ಒಳ್ಳೆಯವನೋ, ಕೆಟ್ಟವನೋ ಗೊತ್ತಾಗದ ಕುಡುಕ ಅಪ್ಪ, ಅಲ್ಲಲ್ಲಿ ಬರುವ ರೌಡಿಗಳು ಹೀಗೆ ಯಾವೊಂದು ಪಾತ್ರಕ್ಕೂ ಸ್ಪಷ್ಟ ಸ್ವರೂಪ ಇಲ್ಲ. ಹಾಗೆ ಚಿತ್ರದಲ್ಲಿ ಬರುವ ಡಾ.ರಾಜ್ ಮೇಲಿನ ಅಭಿಮಾನದ ದೃಶ್ಯಗಳಾಗಲಿ, ಅವರ ಅಂತ್ಯಸಂಸ್ಕಾರದ ದಿನದ ಘಟನೆಗಳಾಗಲಿ, ಕಾವೇರಿ, ಕರ್ನಾಟಕದ ಮೇಲಿನ ಅಭಿಮಾನತೋರಿಸುವ ದೃಶ್ಯಗಳಾಗಲಿ ಬಲವಂತವಾಗಿ ಚಿತ್ರದೊಳಕ್ಕೆ ತುರುಕಿದಂತಾಗಿದೆಯೇ ಹೊರತು ಕಥೆಗೆ ಎಳ್ಳಷ್ಟೂ ಪೂರಕವಾಗಿಲ್ಲ.ಹಾಗಾಗಿಯೇ ಪ್ರೇಕ್ಷಕ ನಾಯಕ-ನಾಯಕಿ ದುಖಕ್ಕೆ ಮರುಗುವುದಿಲ್ಲ. ಅವರ ಖುಷಿಗೆ ಸ್ಪಂಧಿಸುವುದಿಲ್ಲ. ಅಮ್ಮನ ಮಮತೆಗೆ ಮಿಡಿಯುವುದಿಲ್ಲ. ತನ್ನ ಪಾಡಿಗೆ ಆಕಳಿಸುತ್ತಾ ಅನ್ಯಮನಸ್ಕನಾಗಿರುತ್ತಾನೆ.
ಚಿತ್ರದ ದ್ವೀತೀಯಾರ್ಧದ ಪ್ರಾರಂಭವಂತೂ ಗೊಂದಲಗಳ ಗೂಡಾಗಿದೆ. ಅಷ್ಟೊತ್ತು ನಾಯಕಿಗಾಗಿ ಪರಿತಪಿಸುವ ನಾಯಕನಿಗೆ ಅಮ್ಮನ ನೆನಪು ಬಂದು ಅಲ್ಲಿ ತಾಯಿ ಹಿರಿಮೆ ಸಾರುವ ಒಂದು ಹಾಡು ಬಂದುಹೋಗುತ್ತದೆ. ಆದರೆ ಬರುಬರುತ್ತಾ ಅವಸರಕ್ಕೆ ಬಿದ್ದಂತೆ ಕಾಣಿಸುವ ನಿರ್ದೇಶಕರು ಏನೇನೋ ತೋರಿಸುತ್ತಾರೆ. ಏನೇನೋ ಹೇಳುತ್ತಾರೆ. ಹಳಿ ತಪ್ಪಿದ ಚಿತ್ರಕಥೆಯನ್ನು, ಚಿತ್ರವನ್ನು ಸರಿದಾರಿಗೆ ತರಲು ಶತಪ್ರಯತ್ನ ಪಡುತ್ತಾರೆ. ಆದರೆ ಚಿತ್ರ ಮಾತ್ರ ಬೋರ್ ಹೊಡೆಸುತ್ತಾ ಸಾಗಿ ಯಾವಾಗ ಮುಗಿಯುತ್ತದೋ ಈ ಚಿತ್ರ ಎನಿಸಲು ಪ್ರಾರಂಭಸುತ್ತದೆ.
ಒಂದು ಚಿತ್ರವನ್ನು ಇಷ್ಟರ ಮಟ್ಟಿಗೆ ವಿಮರ್ಶೆ ಮಾಡುವ ಅವಶ್ಯಕತೆ ಇದೆಯೇ ಎಂಬ ಪ್ರಶ್ನೆ ಕಾಡುವುದು ಸಹಜ. ಒಂದು ಚಿತ್ರದ ಕತೆ, ನಿರೂಪನೆ ಹೇಗಿರಬೇಕು ಎಂಬುದು ನಿರ್ದೇಶಕರಿಗೆ ಬಿಟ್ಟ ವಿಚಾರ. ಆದರೆ ಅಂದುಕೊಂಡಿರುವ ಕಥೆಯನ್ನು ಜನಕ್ಕೆ ಅಂದರೆ ಪ್ರೇಕ್ಷಕರಿಗೆ ಒಪ್ಪಿಸುವಲ್ಲಿ ಸೋತಾಗ ಇಂತಹ ಒಂದು ವಿಮರ್ಶೆ ಅತ್ಯಗತ್ಯವಾಗುತ್ತದೆ. ಹಾಗೆಯೇ ಭೂಗತಲೋಕಕ್ಕೇ ನಾಯಕ ಪ್ರವೇಶ ಮಾಡುವುದು ಅದೆಷ್ಟು ಸುಲಭ ಎನ್ನಿಸುವಂತೆ ತೋರಿಸುವುದು, ಚಿತ್ರದ ಅಂತ್ಯವನ್ನು ವಿನಾಕಾರಣ ದು:ಖಾಂತ್ಯ ಮಾಡಿರುವುದು ಮುಂತಾದವುಗಳು ನಿರ್ದೇಶಕರ ಅನನುಭವಕ್ಕೆ ಹಿಡಿದ ಕೈಗನ್ನಡಿಯಗಿದೆ.
ಚಿತ್ರದಲ್ಲಿರುವ ಅಷ್ಟೇ ಕಥೆಯನ್ನ ಒಂದು ಪರಿಣಾಮಕಾರಿಯಾದ ಚಿತ್ರಮಾಡುವ ಎಲ್ಲಾ ಸಾಧ್ಯತೆಗಳೂ ಇದ್ದವು. ಆದರೆ ಪೂರಕ ಚಿತ್ರಕಥೆಯ ಕೊರತೆ ಮತ್ತು ಪರಿಣಾಮಕಾರಿಯಾದ ದೃಶೀಕರಣವಿಲ್ಲದೇ ಇರುವುದರಿಂದ ಚಿತ್ರ ಸಾದಾರಣ ಚಿತ್ರ ಎಂದು ಎನಿಸಿಕೊಳ್ಳಲೂ ಅರ್ಹವೆನಿಸುವುದಿಲ್ಲ. ‘
ಚಿತ್ರದ ನಾಯಕ ಸಂತೋಷ್ ಹೊಡೆದಾಟದ ದೃಶ್ಯಗಳನ್ನ ಚೆನ್ನಾಗಿ ನಿಭಾಯಿಸಿದ್ದಾರಾದರೂ ಭಾವನೆಗಳನ್ನು ವ್ಯಕ್ತಪಡಿಸುವದರಲ್ಲಿ ಇನ್ನು ಪಳಗಬೇಕು. ಅವರು ಸಂಭಾಷಣೆ ಹೇಳುವ ರೀತಿ ಎಲ್ಲೂ ಆಪ್ತವೆನಿಸುವುದಿಲ್ಲ. ನಾಯಕಿ ಮೀನಾಕ್ಷಿ ತೆರೆಯ ಮೇಲೆ ಹೆಚ್ಚು ಕಾಣಸಿಗುವುದಿಲ್ಲ. ಆದರೆ ತಮಗೆ ಸಿಕ್ಕ ಪಾತ್ರವನ್ನು ತುಂಬಾ ಚೆನ್ನಾಗಿ ನಿಭಾಯಿಸಿದ್ದಾರೆ. ಸಿತಾರ ಹಳ್ಳಿ ಹೆಂಗಸಿನ ಹಾಗೆ ಬಲವಂತಕ್ಕೆ ಕಾಣುತ್ತಾರೆ. ಆದರೆ ಅಭಿನಯ ಚೆನ್ನಾಗಿದೆ. ಅನೂಪ್ ಸೀಳಿನ್ ಅವರ ಸಂಗೀತದಲ್ಲಿ ಎರಡು ಹಾಡುಗಳು ಕೇಳುವಂತಿವೆ. ಉಳಿದ ತಂತ್ರಜ್ಞರು ತಮ್ಮ ಕೆಲಸಗಳನ್ನ ಅಚ್ಚುಕಟ್ಟಾಗಿ ಮಾಡಿದ್ದಾರೆ.

No comments:

Post a Comment