Pages

Sunday, November 10, 2013

ಪಿಜ್ಜಾ ಸವಿಯದಿದ್ದವರು ಒಮ್ಮೆ ಶಿಳ್ಳೇ ಹೊಡೀಬಹುದುಃ

ತಮಿಳಿನಲ್ಲಿ ಪಿಜ್ಜಾ ಎನ್ನುವ ಕಡಿಮೆವೆಚ್ಚದ ಭಯಾನಕ-ರೋಮಾಂಚಕ-ಕೌತುಕಮಯ ಕಥಾವಸ್ತುವಿನ ಚಿತ್ರ ಬಂದದ್ದು ನಹುತೇಕ ಕನ್ನಡ ಚಿತ್ರರಸಿಕರಿಗೆ ಗೊತ್ತಿರುವ ಸಂಗತಿ.ಅದನ್ನು ಕನ್ನಡದಲ್ಲಿ ವಿಶಲ್ ಮಾಡಿದ್ದಾರೆ ನಿರ್ದೇಶಕ ಪ್ರಶಾಂತ್ ರಾಜ್. ಪ್ರಶಾಂತ್ ರಾಜ್ ಲವ್ ಗುರು ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪ್ರವೇಶ ಪಡೆದವರು. ತುಂಬಾ ಸರಳ ಕಥೆಯಿದ್ದರೂ ಚಿತ್ರೀಕರಣದಲ್ಲಿ ನಾವೀನ್ಯತೆಯಿದ್ದ ಚಿತ್ರ ಕನ್ನಡದ ಮಟ್ಟಿಗೆ ಹಿಟ್ ಎನಿಸಿಕೊಂಡಿತ್ತು. ಆನಂತರ ಗಾನಾಬಜಾನ ನಿರ್ದೇಶನ ಮಾಡಿದರಾದರೂ ಚಿತ್ರ ಮಕಾಡೆ ಮಲಗಿತ್ತು. ಆನಂತರ ಈಗ ರೀಮೇಕ್ ಚಿತ್ರದೊಂದಿಗೆ ಮತ್ತೆ ಚಿತ್ರಮಂದಿರವನ್ನು ಹೊಕ್ಕಿದ್ದಾರೆ.
ಈಗಾಗಲೆ ತಮಿಳು ಚಿತ್ರ ನೋಡಿದವರಿಗೆ ಚಿತ್ರದ ಬಗ್ಗೆ ಹೇಳುವ ವಿಶೇಷವೇನಿಲ್ಲ. ಅಲ್ಲಿನ ಪಿಜ್ಜಾವನ್ನು ವಸ್ತುನಿಷ್ಠವಾಗಿ ಕನ್ನಡಕ್ಕೆ ತಂದಿದ್ದಾರೆ ಪ್ರಶಾಂತ್. ಪ್ರತಿಯೊಂದು ದೃಶ್ಯ, ಸಂಭಾಷಣೆ ಹೀಗೆ ಎಲ್ಲವೂ ಅಲ್ಲಿಯದ್ದೇ ಭಾಷಾಂತರ.ಚಿತ್ರದ ನಾಯಕ ಪಿಜ್ಜಾ ವನ್ನು ಮನೆಮನೆಗೆ ತಲುಪಿಸುವವನು. ಹಾಗೆಯೇ ದೆವ್ವ ಭೂತಗಳನ್ನು ನಂಬುವ ಅವುಗಳಿಗೆ ಭಯಪಡುವವನು. ಒಂದು ಮನೆಗೆ ಪಿಜ್ಜಾ ಕೊಡಲು ಹೋದಾಗ ಅಲ್ಲಿ ನಡೆಯುವ ಅನೂಹ್ಯ ಘಟನೆಗಳು ಅದರ ಹಿನ್ನೆಲೆಯೇ ಮುಂದಿನ ಕಥೆ. ಮೊದಲಾರ್ಧ ಅಂದರೇ ಚಿತ್ರದ ಕಥೆಯ ಮುಖ್ಯ ಘಟ್ಟಕ್ಕೆ ಬರುವವರೆಗೆ ಚಿತ್ರ ಆಸಕ್ತಿದಾಯಕ ಎನಿಸುವುದಿಲ್ಲ. ಆದರೆ ಒಮ್ಮೆ ಮುಖ್ಯ ಅಂಶಕ್ಕೆ ಬಂದ ಮೇಲೆ ಚಿತ್ರದ್ದು ನಾಗಾಲೋಟ. ಎಲ್ಲಿಯೂ ನಿಲ್ಲುವುದಿಲ್ಲ. ಚಿತ್ರದ ಚಿತ್ರಕಥೆ ಹಾಗಿದೆ. ದೃಶ್ಯದಿಂದ ದೃಶಯಕ್ಕೆ ಕುತೂಹಲ ಕೆರಳಿಸುತ್ತಾ ಸಾಗುವ ಚಿತ್ರ ಪ್ರೇಕ್ಷಕರನ್ನು ಕುರ್ಚಿಯ ತುದಿಗೆ ಕೂರಿಸುತ್ತದೆ.ಅದರ ಸಪೂರ್ಣ ಶಹಬ್ಬಾಸ್ ಅನ್ನು ತಮಿಳು ಚಿತ್ರದ ಚಿತ್ರಕಥೆಗಾರರಿಗೆ ಕೊಡಲೇಬೇಕಾಗುತ್ತದೆ.
ಇನ್ನು ಪ್ರಶಾಂತ್ ರಾಜ್ ಅಲ್ಲಿನ ಕಥೆಯನ್ನು ಇಲ್ಲಿಗೆ ಅದೇ ರೀತಿಯಲ್ಲಿ ಚಿತ್ರೀಕರಿಸಿರುವುದರಿಂದ ಇಲ್ಲಿ ಅವರ ಸ್ವಂತಿಕೆಯೇನೂ ಕಾಣಿಸದು. ಪ್ರತಿಯೊಂದು ಪಕಾತಿಪಕ್ಕವಾದ್ದರಿಂದ ಇಲ್ಲಿ ಬರೇ ಗ್ರಹಿಕೆ-ಚಿತ್ರಿಕೆ ಅಷ್ಟೆ ಅವರ ಕೆಲಸ ಎನ್ನಬಹುದು. ಇನ್ನು ಚಾಯಾಗ್ರಾಹಕ ಸಂತೋಷ್ ರೈ ಪಾತಾಜೆಗೆ ಸವಾಲೆನ್ನಿಸುವ ಕೆಲಸವಾದರೂ ಮಾದರಿಗೆ ತಮಿಳು ಚಿತ್ರವಿರುವುದರಿಂದ ಅಷ್ಟೆ ಚೆನ್ನಾಗಿ, ಚಿತ್ರದ ಆಷಯಕ್ಕೆ ತಕ್ಕಂತೆ ತಮ್ಮ ಬೆಳಕಿನ ವಿನ್ಯಾಸವನ್ನು ಕ್ಯಾಮೆರಾದ ಮೂಲಕ ತೆರೆಯ ಮೇಲೆ ಬಿಡಿಸುವ ಪ್ರಯತ್ನ ಮಾಡಿದ್ದಾರೆ ಮತ್ತು ಯಶಸ್ವಿಯಾಗಿದ್ದಾರೆ.ಹಿನ್ನೆಲೆ ಸಂಗೀತಕ್ಕೂ ಇದೇ ಮಾತು ಅನ್ವಯಿಸುತ್ತದೆ.
ಚಿರಂಜೀವಿ ಸರ್ಜಾ ನಟಿಸಿದ್ದಾರೆ. ಹೆದರುವ ಹುಡುಗನಾಗಿ ಅವರ ಅಭಿನಯ ಓಕೆ. ಪ್ರಣೀತಾ ಬರೀ ದಂತದ ಬೊಂಬೆಯಂತೆ ಗಮನಸೆಳೆಯುತ್ತಾರಾದರೂ ಅಭಿನಯದಲ್ಲಿ ಸ್ವಲ್ಪ ಹಿಂದೆ ಎನ್ನಬಹುದು. ಮಾತು ಮಾತಿಗೆ ಕಣ್ಣರಳಿಸುವ ಅವರದು ಕಣ್ಣ ಭಾಷೆಯೇ ಎಂಬ ಪ್ರಶ್ನೆ ಮೂಡಿಸುತ್ತದೆ. ಮತ್ತಿತರ ತಾರಾಗಣವಾದ ಗುರುಪ್ರಸಾದ್, ಗುರುದತ್, ಹಂಸಗೌಡ ಮುಂತಾದವರವ್ ಪಾತ್ರಗಳು ಚಿಕ್ಕದಾದರೂ ಅವರ ಅಭಿನಯ ಪಾತ್ರೋಚಿತವಾಗಿದೆ.
ತಮಿಳಿನಲ್ಲಿ ಪಿಜ್ಜಾ ಮಾರುತ್ತಿದ್ದ ನಾಯಕ, ಹಾಗಾಗಿ ಚಿತ್ರಕ್ಕೆ ಪಿಜ್ಜಾ ಎನ್ನುವ ಹೆಸರಿತ್ತು. ಈ ಚಿತ್ರದಲ್ಲಿ ನಾಯಕ ವಿಷಲ್ ಹೊಡೆಯುತ್ತಾನೆಯೇ..ಇಲ್ಲವಾದಲ್ಲಿ ವಿಷಲ್ ಎನ್ನುವ ಹೆಸರ್ಯಾಕೆ ಎಂಬ ಪ್ರಶ್ನೆಯನ್ನು ಪ್ರೇಕ್ಷಕರನ್ನು ನಿರ್ದೇಶಕರನ್ನು ಕೇಳಬಹುದೇನೋ...ಅದಕ್ಕುತ್ತರವನ್ನು ನಿರ್ದೇಶಕರೇ ನೀಡಬೇಕು. ಅಥವಾ ಸುಮ್ಮನೆ ಎಂದು ಹುಬ್ಬೇರಿಸಿ ಶಿಳ್ಳೆ ಹೊಡೆಯಬಹುದೇನೋ..?

No comments:

Post a Comment