Pages

Sunday, November 10, 2013

ಬಿಡಲಾರೆ ಎಂದೂ ನಿನ್ನ:



ದೆವ್ವ ಭೂತಗಳ ಅಸ್ತಿತ್ವದ ಬಗ್ಗೆ ಅದೆಷ್ಟೇ ವಾದವಿವಾದ ನಡೆದರೂ ಅವುಗಳನ್ನಾಧರಿಸಿದ ಚಿತ್ರಗಳಿಗೆ ಚಲನಚಿತ್ರರಂಗದಲ್ಲಿ ವಿಶೇಷವಾದ ಸ್ಥಾನಮಾನವಿದೆ. ಹಾಗೆ ಅದರದೇ ಆದ ಪ್ರೇಕ್ಷಕರೂ ಇದ್ದಾರೆ.ಚಿತ್ರರಂಗ ಬದಲಾದಂತೆ ತಾಂತ್ರಿಕತೆಯ ಅನುಗುಣವಾಗಿ ದೆವ್ವಭೂತಗಳ ದರ್ಶನ ಚಿತ್ರಗಳಲಿ ಬದಲಾಯಿತಾದರೂ ದೆವ್ವ ದೆವ್ವವೇ. ಅವುಗಳ ಕೆಲಸ ಕಾಡುವುದು, ಕೊಲ್ಳುವುದು ಹೆದರಿಸುವುದು.
ಬಿಡಲಾರೆ ಎಂದೂ ನಿನ್ನ ಚಿತ್ರದ ಕಥೆ ಹೆಸರೇ ಹೇಳುವಂತೆ ಬಿಡಲಾರದ ಹೆಣ್ಣೊಬ್ಬಳು ದೆವ್ವವಾಗಿ ಕಾಡುವ ಕಥೆ. ಚಿತ್ರದ ನಾಯಕ ಲೋಕಿ  ಸಂಗೀತ ಗೋಷ್ಠಿಯಲ್ಲಿ ನರ್ತಿಸಿದರೆ ನಾಯಕಿ ಲಕ್ಷ್ಮಿ ಹಾಡುತ್ತಿರುತ್ತಾಳೆ, ಅವಳಿಗೆ ಅವನ ಮೇಲೆ ಕಣ್ಣು, ಅವನಿಗೆ ನಮಗೂ ಗೊತ್ತಿಲ್ಲ, ಅವನಿಗೂ ಗೊತ್ತಿಲ್ಲ. ಆವಾಗವಾಗ ನಾನು ನಿನ್ನನ್ನು ಪ್ರೀತಿಸುತ್ತೇನೆ ಎಂದರೂ ನಾಯಕ ಅದಕ್ಕೆ ಸೊಪ್ಪು ಹಾಕುವುದಿಲ್ಲ. ಇಂತಹ ಸಂದರ್ಭದಲ್ಲಿ ಒಂದು ದಿನ ಪ್ರೇಮ ನಿವೇದನೆ ಅತಿರೇಕಕ್ಕೆ ಹೋಗಿ ಅವಳು ನಾಯಕ ಲೋಕಿಯಿಂದ ತಿರಸ್ಕೃತಳಾಗಿ ಬೆಟ್ಟದಿಂದ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ಆನಂತರ ದೆವ್ವವಾಗುತ್ತಾಳೆ.. ಆಮೇಲೆ ಹೆದರಿಸುವುದು ಕಾಡಿಸುವುದೂ.. ಇತ್ಯಾದಿ. ಮುಂದಿನದರ ಬಗ್ಗೆ ಓದುವುದಕ್ಕಿಂತ ನೋಡಿದರೆ ಉತ್ತಮ.
ಚಿತ್ರದ ಕೆಲವು ಅಂಶಗಳನ್ನು ಹೊರತು ಪಡಿಸಿದರೆ ಉಮೇಶ ಬಾದರದಿನ್ನಿಯವರಿಗೆ ಮೊದಲ ಪ್ರಯತ್ನಕ್ಕೆ ಶಹಬ್ಬಾಸ್ ಎನ್ನಬಹುದು. ಆದರೂ ಕೆಲವು ಅನಾವಶ್ಯಕ ದೃಶ್ಯಗಳು ನಗು ತರಿಸದೇ ಇರುವುದಿಲ್ಲ.ಉದಾಹರಣೆಗೆ ಇನ್ನೊಬ್ಬ ನಾಯಕಿಯೂ ಅತ್ತೆ ಮಗನ ಪಕ್ಕ ಕುಳಿತು ನಾಯಕನ ನರ್ತನ ನೋಡುತ್ತಾ ಕನಸಿನ ಲೋಕಕ್ಕೆ ಜಾರಿ ಅಲ್ಲಿ ಅವನೊಂದಿಗೆ ನರ್ತಿಸುವುದು ಹಾಸ್ಯಾಸ್ಪದ. ಹಾಗೆಯೇ ಮೊದಲಿಗೆ ಕಂಡು ಬರುವ ಭಯಾನಕ ದೆವ್ವದ ದೃಶ್ಯಗಳು ಟಿವಿಯಲ್ಲಿ ಬರುವಂತಹವು, ಅಮೇಲಿನದು ಯಾರೋ ಒಬ್ಬ ಇನ್ನೊಬ್ಬನಿಗೆ ಹೇಳುವ ಕಥೆ..ಹೀಗೆ ನಿಜವಾದ ಕಥೆ ಏನು ಎಂಬುದನ್ನು ನಿರ್ದೇಶಕರು ತಲೆಕೆಡಿಸಿಕೊಂಡಂತೆ ಕಾಣುವುದಿಲ್ಲ. ಜೈಜಗದೀಶ್, ರಾಜು ತಾಳಿಕೋಟೆ, ಕರಿಸುಬ್ಬು ಒಂದೊಂದೆ ದೃಶ್ಯದಲ್ಲಿ ಬಂದುಹೋಗುತ್ತಾರಾದರೂ ದೆವ್ವದ ಕಥೆಗೆ ಮುನ್ನುಡಿ ಬರೆದು ಹೋಗುತ್ತಾರೆ. ಆಮೇಲಿನದೆಲ್ಲ ನಾಯಕನಟ ನವೀನ ಕೃಷ್ಣರವರ ಆಟ, ಪರದಾಟ.
ಚಿತ್ರದ ಆರಂಭದಲ್ಲಿ ಬರುವ ಮಗುವಿನ ದೆವ್ವ, ಆಮೇಲಿನ ದೆವ್ವಕ್ಕೂ ಯಾವುದೇ ಸಂಬಂಧವಿಲ್ಲ. ಹಾಗೆಯೇ ಕಥೆಗೂ ಸಂಬಂಧವಿಲ್ಲ.
ಚಿತ್ರ ದೆವ್ವದ ವಿಷಯಕ್ಕಾಗಿ ಅಲ್ಲಲ್ಲಿ ಕಾಯುವಂತೆ ಮಾಡುತ್ತಾದರೂ ರಹಸ್ಯವಿಲ್ಲವಾದ್ದರಿಂದ ಕುತೂಹಲ ಕೆರಳಿಸುವುದಿಲ್ಲ. ಕಥೆಯನ್ನು ಪ್ರಾರಂಭದಿಂದ ನೇರವಾಗಿ ಹೇಳಿರುವುದರಿಂದ ಯಾಕೆ ಹೀಗಾಯ್ತು, ಯಾರು ಇವರು ಎಂಬೆಲ್ಲಾ ಪ್ರಶ್ನೆಗಳು ಹುಟ್ಟುವುದಕ್ಕೆ ಆಸ್ಪದವೇ ಇಲ್ಲ. ಆದರೆ ಮುಂದೇನಾಗುತ್ತದೋ ಎಂಬ ಉದ್ವೇಗ ಭಯಕ್ಕಾದರೂ ಒಂದಷ್ಟು ದೃಶ್ಯಗಳಿರಬೇಕಾಗಿತ್ತು. ಚಿತ್ರದಲ್ಲಿ ಅದಿಲ್ಲ. ಹಾಗಾಗಿ ಚಿತ್ರ ಭಯಾನಕವಾಗದೆ, ತೀರಾ ಸಾಮಾನ್ಯ ಎನಿಸುತ್ತದೆ.
ಕಲಾವಿದರುಗಳ ಅಭಿನಯದಲ್ಲಿ ಹೊಸತನವೇನಿಲ್ಲ. ಹಾಗೆಯೇ ರೇಣುಕುಮಾರರ  ಛಾಯಾಗ್ರಹಣವೂ ಸಾದಾರಣ. ಹಿನ್ನೆಲೆ ಸಂಗೀತ ಕೆಲವೊಂದು ಕಡೆ ಪರಿಣಾಮಕಾರಿ ಎನಿಸಿದರೆ ಕೆಲವೊಂದು ಕಡೆ ಅಬ್ಬರ ಎನಿಸುತ್ತದೆ.ಸಂಕಲನ ಇನ್ನೂ ಸ್ವಲ್ಪ ಚುರುಕಾಗಿದ್ದರೆ ಚೆನ್ನಾಗಿರುತ್ತಿತ್ತು. ಒಟ್ಟಿನಲ್ಲಿ ಹಾರರ್ ವಿಭಾಗದ ಸಾದಾರಣ ಚಿತ್ರ ಬಿಡಲಾರೆ ಎಂದೂ ನಿನ್ನ ಎನ್ನಬಹುದು.

No comments:

Post a Comment