Pages

Sunday, November 10, 2013

ಚಿತ್ರಮಂದಿರದಲ್ಲಿ

ಒಂದು ಪ್ರಯೋಗಾತ್ಮಕ ಚಿತ್ರದಲ್ಲಿ ಮನರಂಜನೆ ಇರಕೂಡದಾ ಅಥವಾ ಒಂದು ಕಲಾತ್ಮಕ ಚಿತ್ರದಲ್ಲಿ ಮಜಾ ಇರಬಾರದಾ? ಎಂಬ ಪ್ರಶ್ನೆಯನ್ನು ಮುಂದಿಟ್ಟುಕೊಂಡು ಚಿತ್ರಮಂದಿರದಲ್ಲಿ ಸಿನೆಮಾವನ್ನು ನೋಡಬೇಕಾಗುತ್ತದೆ. ಯಾಕೆಂದರೆ ಮೇಲ್ನೋಟಕ್ಕೆ ಮತ್ತು ಚಿತ್ರಮಂದಿರದ ಒಳಗೂ ಪ್ರಯೋಗಾ ಎದ್ದು ಕಾಣುತ್ತದೆ. ಹಾಗೆಯೇ ನಿರ್ದೇಶಕರು ಮಾಮೂಲಿ ರೀತಿಯ ಸಿನೆಮಾ ಚಿತ್ರಕಥೆಗಿಂತ ಭಿನ್ನವಾದ ಹಾದಿ ಹಿಡಿದಿದ್ದಾರೆ. ಹಾಗಾಗಿ ಅವರಲ್ಲಿ ಒಂದು ಹೊಸತನದ ತುಡಿತವಿದೆ ಎನ್ನಬಹುದು.ಆದರೆ ಅದನ್ನು ಅಷ್ಟೇ ಸಮಂಜಸವಾಗಿ ನಮ್ಮ ಮುಂದಿಡಲು ಯಶಸ್ವಿಯಾಗಿದ್ದಾರಾ..?
ಚಿತ್ರ ಪ್ರಾರಂಭವಾಗಿ ಹತ್ತು ನಿಮಿಷಕ್ಕೆ ನಿಮಗೆ ಆಕಳಿಕೆ ತರಿಸಲು ಪ್ರಾರಂಭಿಸುತ್ತದೆ. ಇದೇನು ಧಾರಾವಾಹಿಯಾ ಸಿನೆಮಾವಾ ನಾಟಕವಾ ಹೀಗೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ.ಚಿತ್ರದಲ್ಲಿನ ದೃಶ್ಯಗಳು ಮಜಾ ಕೊಡುವುದಿಲ್ಲ..ಹಾಗಂತ ಅವುಗಳಲ್ಲಿ ಸತ್ವ ಇಲ್ಲ ಎಂದಲ್ಲ. ಇದೆ. ಆದರೆ ಅದಾವುದೂ ಚಿತ್ರದ ಕಥೆಗೆ ಆಶಯಕ್ಕೆ ಪೂರಕ ಎನಿಸುವುದಿಲ್ಲ.
ಚಿತ್ರದ ಕಥೆ ಒಬ್ಬ ಸಿನಿಮಾ ನಿರ್ದೇಶಕನ ಸುತ್ತ ಸುತ್ತುತ್ತದೆ. ಆತ ಒಬ್ಬ ಪ್ರತಿಭಾವಂತ. ಚಿತ್ರದಲ್ಲಿ ಏನನ್ನಾದರೂ ಹೊಸದನ್ನು ಸಾಧಿಸಬೇಕೆಂಬ ಛಲ ಹೊಂದಿರುವ ವ್ಯಕ್ತಿ. ಆದರೆ ಸಿನೆಮಾ ರಂಗದ ನಿರ್ಮಾಪಕರು ಇತರರು ಆತನ ಕನಸಿಗೆ ಎಳ್ಳು ನೀರು ಬಿಡುತ್ತಾರೆ.ಚಿತ್ರರಂಗದಲ್ಲಿ ಹೊಸತನಕ್ಕೆ ಬೆಲೆಯಿಲ್ಲ ಎನ್ನುವ ಬೇಸರದಿಂದ ಬರುವ ನಿರ್ದೇಶಕ ಹತಾಶನಾಗುತ್ತಾನೆ. ಆ ಸಮಯದಲ್ಲಿ ಅವನು ತಾನಿನ್ನು ಹೆಚ್ಚು ದಿನ ಬದುಕುವುದಿಲ್ಲ ಎನ್ನುವ ವಿಷಯ ಗೊತ್ತಾಗುತ್ತದೆ. ಇರುವ ಎರಡೇ ದಿನದಲ್ಲಿ ತನ್ನ ಕನಸನ್ನು ಹೇಗೆ ಈಡೇರಿಸಿಕೊಳ್ಳುವುದು..?
ಚಿತ್ರದ ಕಥೆ ಇದು. ಉಪೇಂದ್ರ ನಿರ್ದೇಶನದ 'ಎ' ಚಿತ್ರದಲ್ಲಿ ಕೂಡ ನಿರ್ದೇಶಕನೇ ನಾಯಕನಾಗಿದ್ದ. ಈ ಚಿತ್ರದಲ್ಲೂ ನಿರ್ದೇಶಕನೇ ನಾಯಕ. ಆದರೆ ಚಿತ್ರದಲ್ಲಿ ಯಾವೊಂದು ಅಂಶವೂ ಸಾವಧಾನವಾಗಿ ನೋಡಿಸಿಕೊಂಡು ಹೋಗುವುದಿಲ್ಲ. ಬದಲಿಗೆ ಇದೇನು..ಇದು ಇಷ್ಟುಕಷ್ಟವಾ ಎನ್ನುವ ಹಾಗೆ ತನ್ನದೇ ಆದ ಪ್ರಶ್ನೆಯನ್ನು ಪ್ರೇಕ್ಷಕರಿಗೆ ದಾಟಿಸುತ್ತಾ ಹೋಗುತ್ತದೆ. ಒಬ್ಬ ಸಾಮಾನ್ಯ ಪ್ರೇಕ್ಷಕ ಚಿತ್ರದ ಕಥೆಯ ಗೊಂದಲದ ಹೊಡೆತ ತಾಳಲಾರದೆ ಎದ್ದು ಹೊರ ಹೋಗಿಬಿಡುತ್ತಾನೆ.
ಇತ್ತೀಚಿಗೆ ಲೂಸಿಯಾ ಚಿತ್ರ ಕೂಡ ಪ್ರಯೋಗಾತ್ಮಕ ಚಿತ್ರವೇ ಆದರೂ ಅದರಲ್ಲಿ ಒಂದಷ್ಟು ರಂಗು ರಂಗಿನ ವಿಷಯಗಳಿದ್ದವು. ಚಿತ್ರದ ಅರ್ಧ ಕಥೆ ಸಿನೆಮಾ ಮಂದಿರದಲ್ಲಿ ಸುತ್ತಿದರೆ, ಇನ್ನರ್ಧ ಚಿತ್ರದಲ್ಲಿನ ಸ್ಟಾರ್ ಕಥೆ ಹೇಳುತ್ತಿತ್ತು.ಇಲ್ಲೂ ಅದೇ ಇದೆ. ಆದರೆ ರಂಜಿಸುವುದಿಲ್ಲ. ಕಥೆಯ ಆಶಯದಲ್ಲಿ ಕಳಕಳಿ, ಆರ್ದ್ರತೆ ಇದೆಯಾದರೂ ಅದು ಗಮನ ಸೆಳೆಯುವುದಿಲ್ಲ. ಹಾಗಾಗಿ ಚಿತ್ರ ಸಾದಾರಣ ಚಿತ್ರವೂ ಆಗದೆ ಭಿನ್ನ ಚಿತ್ರವೂ ಆಗದೆ ತ್ರಿಶಂಕು ಸ್ಥಿತಿಯಲ್ಲಿದೆ ಎನ್ನಬಹುದು.
ನಾಯಕ ಶಂಕರ್ ಆರ್ಯನ್ ಚೆನ್ನಾಗಿ ಅಭಿನಯಿಸಿದ್ದಾರೆ. ಅದಕ್ಕಾಗಿ ಅವರ ತನ್ಮಯತೆ ಎದ್ದು ಕಾಣುತ್ತದೆ. ನಾಯಕಿಅಂತಹ ಆಕರ್ಷಕ ಎನಿಸುವುದಿಲ್ಲ. ಒಂದಷ್ಟು ಪಾತ್ರಗಳು ಅಲ್ಲಲ್ಲಿ ಬಂದು ಹೋದರೂ ಅವು ಗಮನ ಸೆಳೆಯುವುದಿಲ್ಲ.
ಒಟ್ಟಿನಲ್ಲಿ ನಿರ್ದೇಶಕ ಚಲ ಒಳ್ಳೆಯ ಭಿನ್ನ ಸಿನಿಮಾ ಮಾಡುವ ಆಶಯ ಹೊಂದಿದ್ದಾರೆ ಎಂಬುದು ಗೊತ್ತಾಗುತ್ತದೆ. ಆದರೆ ಆ ನಿಟ್ಟಿನಲ್ಲಿ ಅವರು ಪಳಗಿಲ್ಲ, ದೃಶ್ಯ ಮಾಧ್ಯಮದ ಹೊಳಹುಗಳನ್ನು ಇನ್ನಷ್ಟು ತಮ್ಮದಾಗಿಸಿಕೊಳ್ಳಬೇಕಿದೆ.

No comments:

Post a Comment