Pages

Sunday, November 10, 2013

ಎಲೆಕ್ಷನ್ :



ಮಾಲಾಶ್ರೀ ಓಂ ಪ್ರಕಾಶ್ ರಾವ್ ಮತ್ತು ರಾಮು-ಈ ಮೂವರು ಒಂದೆಡೆ ಸೇರಿ ಸಿನಿಮಾ ಮಾಡಿದಾಗ ಸಿನಿಮಾ ಮೇಲೆ ನಿರೀಕ್ಷೆ ಮತ್ತು ಊಹೆ ಎರಡೂ ಇರುತ್ತದೆ. ಅದ್ದೂರಿತನ ಹೊಡೆದಾಟ ಚಿತ್ರದ ಮುಖ್ಯ ಅಂಶ ಎಂಬುದು ಕನ್ನಡ ಚಿತ್ರರಸಿಕರೆಲ್ಲರಿಗೂ ಗೊತ್ತಾಗಿಹೋಗಿರುತ್ತದೆ. ಅದೇ ಹೊಡೆದಾಟ, ಸಾಹಸಮಯ ದೃಶ್ಯಗಳು ಒಂದೊಳ್ಳೆ ಕಥೆಯ ಜೊತೆ ಮಿಳಿತಗೊಂಡಾಗ ಅದಕ್ಕೆ ಮೆರುಗು ಜಾಸ್ತಿಯಾಗುತ್ತದೆಯೇ ಹೊರತು ಬರೀ ಹೊಡೆದಾಟವೆ ಸಂಪೂರ್ಣ ಸಿನಿಮಾದ ಆಸ್ತಿಯಾಗುವುದಕ್ಕೆ ಸಾಧ್ಯವಿಲ್ಲ.
ಈ ಚಿತ್ರದ ಹೆಸರು 'ಎಲೆಕ್ಷನ್’. ಮಾಲಾಶ್ರೀ ಇಲ್ಲಿ ಚುನಾವಧಿಕಾರಿ...ಇಷ್ಟಾದ ಮೇಲೂ ಅದೇನಿದೆ ಕಥೆ ಹೇಳಿ ಎಂದರೆ ಚುನಾವಣೆ ಘೋಷಣೆಯಾದಾಗ, ರಾಜಕಾರಣಿಗಳು ಗೆಲ್ಲಲು ಮಾಡುವ ಕುತಂತ್ರಗಳು ಅವುಗಳನ್ನು ಕಮೀಷನರ್ ತಡೆದು ಹೊಡೆದು ಬಡಿದು ಸರಿಮಾಡುವುದೇ ಚಿತ್ರದ ಕಥೆ ಎಂದು ಒಂದು ಲೈನಿನಲ್ಲಿ ಹೇಳಿ ಕೈತೊಳೆದುಕೊಳ್ಳಬಹುದು. ಅದನ್ನು ಮೀರಿ ಚಿತ್ರದಲ್ಲಿರುವುದು ಹೊಡೆದಾಟಗಳು...ಹೊಡೆದಾಟಗಳಲ್ಲಿ ಒದೆ  ತಿನ್ನಲಾಗಲಿ, ಮೇಲೆಗರುವುದಕ್ಕಾಗಲಿ ಖಳರಿಗೆ ಕೊರತೆಯಿಲ್ಲ. ಚುನಾವಣಾ ನೀತಿ ಸಂಹಿತೆಯನ್ನು ಲೆಕ್ಕಿಸದೆ ರಾಜಕಾರಣಿಗಳು ಚುನಾವಣೆಯಲ್ಲಿ  ಗೆಲ್ಲಲು ಮಾಡಬಾರದ್ದನ್ನೆಲ್ಲಾ ಮಾಡುತ್ತಾರೆ. ಚಿತ್ರದ ಪ್ರಾರಂಭದ ಅರ್ಧ ಗಂಟೆ ರಾಜಕಾರಣಿಗಳ ದೊಂಬರಾಟಕ್ಕೆ ಮೀಸಲಿಡಲಾಗಿದೆ.ಇಲ್ಲಿ ಹೆಚ್ಚು ಕಡಿಮೆ ರಾಜಕಾರಣಿಗಳೆಂದರೆ ಕೆಟ್ಟವರು, ಭ್ರಷ್ಟರು , ಕೊಲೆಗಡುಕರು ಮೋಸಗಾರರು ಎಂಬಂತೆ ಚಿತ್ರಿಸಲಾಗಿದೆ. ಇಲ್ಲಿನ ರಾಜಕೀಯ ಪಕ್ಷಗಳೂ ಕೂಡ ನಮ್ಮದೇ ಪಕ್ಷಗಳನ್ನು ಹೋಲುತ್ತವೆ. ಪಾತ್ರಗಳೂ ಅಷ್ಟೇ..ನಮ್ಮಲ್ಲಿನ ನಿಜ ರಾಜಕಾರಣಿಗಳ ನಕಲಿರೂಪಗಳಂತೆ ಭಾಸವಾಗುವುದು ಕಾಕತಾಳೀಯವೋ ಉದ್ದೇಶಪೂರ್ವಕವೋ ನಿರ್ಧರಿಸುವುದು  ಜನರಿಗೆ ಬಿಟ್ಟ ವಿಷಯ, ಪಕ್ಷ ಗೆಲ್ಲಲು ರಾಜಕಾರಣಿಗಳು ದುಡ್ಡಿನ  ಹೊಳೆ ಹರಿಸುತ್ತಾರೆ.ಪ್ರಚಾರಕ್ಕಾಗಿ ಇಬ್ಬರು ನಟರನ್ನು ಬಳಸಿಕೊಳ್ಳುತ್ತಾರೆ..ಅವರೂ ಕೂಡ ಹಣಕ್ಕಾಗಿ ಹೊಗಳುಭಟ್ಟರಾಗುತ್ತಾರೆ. ಇನ್ನೇನು ಇವರ ಆಟಗಳಿಗೆ ಕೊನೆಯಿಲ್ಲವೇ ಎನ್ನುವಷ್ಟರಲ್ಲಿ ಮಾಲಾಶ್ರೀ ಅದ್ದೂರಿಯಾಗಿ ಎಂಟ್ರಿ ಕೊಡುತ್ತಾರೆ, ‘ನಾನು ಇಂದಿರಾ...ಗಾಂಧೀ ಅಲ್ಲ’ ಎನ್ನುವ ಪಂಚಿಂಗ್ ಡೈಲಾಗ್ ನೊಂದಿಗೆ,.
ಆಮೇಲೆ ಸಿನಿಮಾ ನಾಗಾಲೋಟದಲ್ಲಿ ಮುಂದುವರೆಯುತ್ತದೆ...ಪಂಚ್ ಮತ್ತು ಪಂಚಿಂಗ್ ಡೈಲಾಗ್ ಎರಡನ್ನೂ ಸಮಪ್ರಮಾಣದಲ್ಲಿ ತೆರೆಮೇಲಿರುವಷ್ಟು ಹೊತ್ತೂ ಮಾಲಾಶ್ರೀ ಕೈ ಬಾಯಿ ಮೂಲಕ ಕೊಡುತ್ತಲೇ ಇರುತ್ತಾರೆ. ಈವತ್ತಿನ ರಾಜಕೀಯ ಪರಿಸ್ಥಿತಿಯ ವ್ಯಂಗ್ಯ ಕಂಡುಬಂದರೂ ಅದೇ ಚಿತ್ರದುದ್ದಕ್ಕೂ ಹಾಸಿಹೋಗಿ ಕಥೆಯ ಸತ್ವವನ್ನು ಕಡಿಮೆಮಾಡಿಬಿಟ್ಟಿದೆ. ಹಾಗಾಗಿಯೇ  ಮೊದಲಾರ್ಧದ ನಂತರ ಕಥೆಯಲ್ಲೇನೂ ಆಸಕ್ತಿ ಉಳಿಯುವುದೇ ಇಲ್ಲ..ಅಥವಾ ಆಸಕ್ತಿಕರ ಚಿತ್ರಕಥೆ ಚಿತ್ರದಲ್ಲಿಲ್ಲ. ದಾಂ ಧೂಂ ಡಿಶುಂ ಡಿಶುಂ ಅಷ್ಟೇ ಚಿತ್ರದ ಬಹುಭಾಗವನ್ನು ಆಕ್ರಮಿಸಿಕೊಳ್ಳುತ್ತದೆ. ಮಧ್ಯ ಮಧ್ಯದಲ್ಲಿ ಬರುವ ವಿಡಂಬನೆ ಕೆಲವೊಮ್ಮೆ ನಗೆ ಉಕ್ಕಿಸುತ್ತಾದರೂ ಚಿಂತನೆಗೆ ದೂಡುವುದಿಲ್ಲ. ಒಟ್ಟಾರೆಯಾಗಿ ಈ ಏಕಾಂಗಿ ಧೀರೆಯ ಹೋರಾಟ ಸಿನಿಮಾದಲ್ಲಷ್ಟೇ ಸಾಧ್ಯ ಎನ್ನುವ ಭಾವವನ್ನು ಮೂಡಿಸುವುದು ಚಿತ್ರದ ಕಥೆಯ ಋಣಾತ್ಮಕ ಅಂಶವಾಗಿ ಸಿನಿಮಾ ಎಲ್ಲೂ ಆಪ್ತ  ಎನಿಸುವುದಿಲ್ಲ.
ತಾಂತ್ರಿಕ ಅಂಶಗಳು ಅದ್ದೂರಿಯಾಗಿಯೇ ಇವೆ. ಸಂಕಲನವಂತೂ ಕಣ್ಣಿಗೆ ತ್ರಾಸುಕೊಡುವಷ್ಟರ ಮಟ್ಟಿಗೆ ಪರಿಣಾಮ[?]ಕಾರಿಯಾಗಿದೆ.ಹಂಸಲೇಖರ ಸಂಗೀತದಲ್ಲಿ ಅಬ್ಬರವೇ ಹೆಚ್ಚು. ಹೊಡೆದಾಟದಲ್ಲಿ, ಬೈದು ಬುದ್ದಿವಾದ ಹೇಳುವುದರಲ್ಲಿ ತಂಪು ಕನ್ನಡಕ ಧರಿಸಿ ಸ್ಟೈಲಾಗಿ ಓಡಾಡುವುದರಲ್ಲಿ ಮಾಲಾಶ್ರೀ ಮಿಂಚಿದ್ದಾರೆ.ಶ್ರೀನಿವಾಸಮೂರ್ತಿ, ಪ್ರದೀಪ್ ರಾವತ್, ಸಾಧುಕೋಕಿಲ, ಬುಲೆಟ್ ಪ್ರಕಾಶ್ ಶೋಭರಾಜ್ ತಮ್ಮ ತಮ್ಮ ಪಾತ್ರಗಳನ್ನೂ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ರಾಮು ಕೋಟಿರಾಮು ಎನ್ನುವ ಹೆಸರನ್ನು ಹಣ ಸುರಿಯುವ ಮೂಲಕ ಸಾಬೀತು ಮಾಡಿಕೊಂಡಿದ್ದಾರೆ.
ಕೊನೆಯದಾಗಿ ಒಂದು ಮಾತು ಹೇಳಬೇಕೆಂದರೆ ಮಾಲಾಶ್ರೀ ಅಭಿನಯದ  ಇತ್ತೀಚಿನ ಸಿನೆಮಾಗಲೆಲ್ಲವೂ ಒಂದೇ ರೀತಿಯಲ್ಲಿವೆ. ಅದಕ್ಕೆ ಕಾರಣ ಸಶಕ್ತ ಕಥೆಯ ಕೊರತೆ.. ಅವರ ಮುಂದಿನ ಚಿತ್ರದಲ್ಲಾದರೂ ಸಶಕ್ತ ಗಟ್ಟಿ ಕಥೆಯಿದ್ದರೆ ರಾಮು ನಿರ್ಮಾಣಕ್ಕೆ ಮಾಲಾಶ್ರೀ ಆಕ್ಷನ್ ಇಮೇಜಿಗೆ ಪ್ರೇಕ್ಷಕರ   ನಿರೀಕ್ಷೆಗೆ ನ್ಯಾಯ ಸಿಕ್ಕಂತಾಗುತ್ತದೆ.

No comments:

Post a Comment