Pages

Sunday, November 10, 2013

ಬೆಳದಿಂಗಳಿಲ್ಲದ ಚಂದ್ರ.

ಚಂದಿರನಿಲ್ಲದ ಆ ಬಾನಿನಲ್ಲಿ ಬೆಳದಿಂಗಳ ಹುಡುಕುವ ಕುರುಡನು ನಾನಿಲ್ಲಿ..ಈ ಹಾಡಿಗೂ ರೂಪ ಅಯ್ಯರ್ ನಿರ್ದೇಶನದ ಚಂದ್ರ ಚಿತ್ರಕ್ಕೂ ಸಂಬಂಧವಿಲ್ಲ. ಆದರೂ ಚಿತ್ರ ನೋಡಿದ ಪ್ರೇಕ್ಷಕ ಹೀಗೆ ತನಗೆ ಹೇಳಿಕೊಂಡರೆ ಅದು ಚಂದ್ರ ಚಿತ್ರದ ಒನ್ ಲೈನ್ ವಿಮರ್ಶೆಯಾಗಬಹುದು.
ಆಕೆ ರಾಜವಂಶಸ್ಥೆ. ಹೆಸರು ಅಮ್ಮಣ್ಣಿ ಚಂದ್ರಾವತಿ. ಆತ ಚಂದ್ರಹಾಸ. ಆಸ್ಥಾನದಲ್ಲಿನ ಸಂಗೀತ ಶಿಕ್ಷಕರ ಮಗ. ಸುಂದರ. ಇಬ್ಬರೂ ಪ್ರೀತಿಯಲ್ಲಿ ಬಿದ್ದರೆ ಆಗುವ ಅನಾಹುತಗಳಿಗೇನೋ ಕಡಿಮೆಯಿಲ್ಲ. ಇಲ್ಲೂ ಅದು ಆಗುತ್ತದೆ. ಹಾಗಾದರೆ ಆ ಪ್ರೇಮಿಗಳು ಒಂದಾಗುತ್ತಾರಾ..? ಎನ್ನುವ ಪ್ರಶ್ನೆಗೆ ಚಿತ್ರದ ಪೋಸ್ಟರ್ ನಲ್ಲಿಯೇ ಉತ್ತರವಿದ್ದರೂ ನೋಡಿಯೇ ತೀರಬೇಕೆಂಬ ಹಠವಿದ್ದವರು ಒಮ್ಮೆ ಚಿತ್ರಮಂದಿರಕ್ಕೆ ನಿಧಾನಕ್ಕೆ ಹೋಗಬಹುದು.
ಚಿತ್ರದ ಕಥೆ ಇಷ್ಟೇ. ಹಾಗೆ ಚಿತ್ರಕಥೆಯೂ ಇಷ್ಟರಲ್ಲೇ ಸುತ್ತುತ್ತದೆ. ನಿರೂಪಣೆಯೂ ಅಲ್ಲಿಯೇ ಇರುತ್ತದೆ. ಹಾಗಾಗಿ ಇಡೀ ಸಿನಿಮಾಕ್ಕೆ ಆಮೆಯ ವೇಗ. ಹಾಗಂತ ಅದು ಮೊಲವನ್ನೇ ಸೋಲಿಸಿತಲ್ಲ ಎಂಬ ನೀತಿ ಕಥೆ ಇಲ್ಲಿ ಉಪಯೋಗಕ್ಕೆ ಬರುವುದಿಲ್ಲ. ಮಂದಗತಿಯ ನಿರೂಪಣೆ ಪ್ರೇಕ್ಷಕನ ತಾಳ್ಮೆ ಪರೀಕ್ಷಿಸುತ್ತದೆ. ಅದು ಮೊದಲು ಆಕಳಿಕೆ ತರಿಸುತ್ತದೆ ಅದೇ ಆಕಳಿಕೆ ಬೇಸರ ಕೋಪಕ್ಕೆ ತಿರುಗಿ ಸಿನಿಮಾವೇ ಒಂದು ಹಿಂಸೆಯ ಮಾದರಿಯಂತೆ ಕಾಣತೊಡಗುತ್ತದೆ ಎಂದರೆ ರೂಪ ಅಯ್ಯರ್ ಕೋಪ ಮಾಡಿಕೊಳ್ಳಬಾರದು.
ಹಾಗಂತ ಇಡೀ ಚಿತ್ರದಲ್ಲಿ ನೋಡತಕ್ಕದ್ದು ಏನೂ ಇಲ್ಲವೇ ಎಂಬ ಪ್ರಶ್ನೆ ನಿಮ್ಮನ್ನು ಕಾಡಬಹುದು. ಇದೆ. ಅದು ನಾಯಕಿ ಶ್ರೇಯಾ ಶರಣ್ ಸೌಂದರ್ಯ. ಹೌದು. ಅವರ ಮೈಮಾಟವನ್ನು ಎಲ್ಲೂ ಅಶ್ಲೀಲತೆಗೆ ಎಡೆಮಾಡದಂತೆ ಶೃಂಗಾರಮಯವಾಗಿ ಬಹಳ ನಾಜೂಕಾಗಿ ನಮ್ಮ ಮುಂದೆ ಹರವಿದ್ದಾರೆ ನಿರ್ದೇಶಕರು. ಅದಕ್ಕೆ ನಾವು ಶಹಬ್ಬಾಸ್ ಹೇಳಲೇಬೇಕಾಗುತ್ತದೆ. ಹಾಗೆ ಶ್ರೀಮಂತಿಕೆಯನ್ನು ತೋರ್ಪಡಿಸುವ ದೃಶ್ಯ ವೈಭವವಿದೆ.ಆದರೆ ಇವಿಷ್ಟೇ ಎರಡು ಗಂಟೆ ಎಂಟು ನಿಮಿಷಗಳ ಚಿತ್ರಕ್ಕೆ ಸಾಲುವುದಿಲ್ಲವಲ್ಲ.
ಚಿತ್ರದಲ್ಲಿ ಪ್ರೇಮಕಥೆಯಿದೆ. ಅಂತಸ್ತಿನ ನಡುವೆ ಸಿಕ್ಕಿ ಒದ್ದಾಡುವ ಪ್ರೇಮಿಗಳಿದ್ದಾರೆ. ಆದರೆ ಅವರ ಪ್ರೀತಿ ಮೂಡುವ ಬಗೆಯಾಗಲಿ, ಆ ಪ್ರಾರಂಭದ ಆಹ್ಲಾದತೆಯಾಗಲಿ ಚಿತ್ರದಲ್ಲಿ ಕಾಣಿಸುವುದಿಲ್ಲ. ಹಾಗಾಗಿ ಪ್ರೇಮನಿವೇದನೆ, ಸಲ್ಲಾಪಗಳು ಮುದ ಕಣ್ತನಿಸುವಂತಿದ್ದರೂ ಮುದ ನೀಡುವಂತಿಲ್ಲ.ಅವರ ತುಮುಲಗಳು ಪ್ರೇಕ್ಷಕನನ್ನು ತಟ್ಟುವುದಿಲ್ಲ. ಹಾಗಾಗಿ ಇಡೀ ಚಿತ್ರದ ಒಟ್ಟಾರೆ ಆಶಯ ಪೇಲವವಾಗಿದೆ. ಹಾಗೆ ಪ್ರೇಮಕಥೆಗೆ ಬೇಕಾದ ಭಾವನಾತ್ಮಕ ದೃಶ್ಯಗಳು ಚಿತ್ರದಲ್ಲಿ ಕಾಣಸಿಗುವುದಿಲ್ಲ. ಹಾಗೆ ಚಿತ್ರದ ಸಂಭಾಷನೆಯಂತೂ ತೀರಾ ಸಾದಾರಣ.
ಇಡೀ ಚಿತ್ರವನ್ನು ಶ್ರೇಯಾ ಶರಣ್ ಪಾತ್ರದ ಮೇಲೆಯೇ ಕೇಂದ್ರಿಕರಿಸಿರುವುದರಿಂದ ಪ್ರೇಂ ಪಾತ್ರವನ್ನೂ ಸೇರಿಸಿ ಉಳಿದೆಲ್ಲಾ ಪಾತ್ರಗಳಿಗೆ ಪ್ರಾಮುಖ್ಯತೆ ಕಡಿಮೆಯಾಗಿದೆ. ಇಲ್ಲಿ ಶ್ರೇಯಾ ಶರಣ್ ಸಿನೆಮಾದಲ್ಲಿನ ಕಥೆಯ ಒಂದು ಭಾಗವಾಗಿಲ್ಲ. ಇಡೀ ಸಿನಿಮಾವೇ ಅವರಾಗಿಬಿಟ್ಟಿದ್ದಾರೆ. ತಾರಾಗಣದಲ್ಲಿ ಶ್ರೀನಾಥ್, ಗಣೇಶ್ ವೆಂಕಟರಾಮನ್, ವಿವೇಕ್, ಸಾಧುಕೋಕಿಲ ಮುಂತಾದವರಿದ್ದರೂ ಅವರ ಪಾತ್ರ ಪೋಷಣೆ ಅಷ್ಟಕಷ್ಟೇ. ತಾಂತ್ರಿಕ ವಿಷಯಕ್ಕೆ ಬಂದರೆ ಛಾಯಾಗ್ರಹಣಕ್ಕೆ ಮೆಚ್ಚುಗೆಯ ಮಾತನ್ನಾಡಬಹುದು. ಸಂಗೀತ ಸಾದಾರಣ ಮಟ್ಟಕ್ಕಿಂತ ಮೇಲೆ ಹೋಗಿಲ್ಲ. ಇನ್ನು ಸಂಕಲನ ಚಿತ್ರದ ಮಂದಗತಿಗೆ ತನ್ನ ಕೊಡುಗೆಯನ್ನು ನೀಡಿದೆ.
ಮುಖಪುಟ ಚಿತ್ರವನ್ನೂ ಎಳಸು ಎಳಸಾಗಿ ನಿರ್ದೇಶನ ಮಾಡಿ ದೊಡ್ಡ ದೊಡ್ಡ ಮಾತಾಡಿದ್ದ ನಿರ್ದೇಶಕಿ ರೂಪಾ ಅಯ್ಯರ್, ಚಂದ್ರ ಚಿತ್ರವನ್ನು ದೊಡ್ಡದಾಗಿ ಮಾಡಿದ್ದಾರೆ. ಆದರೆ ಅವರ ನಿರೂಪಣೆಯಲ್ಲಿ ಪ್ರಬುದ್ಧತೆಯಿಲ್ಲ. ಅವರ ಮುಂದಿನ ಚಿತ್ರದಲ್ಲಾದರೂ ಕಥೆ, ಚಿತ್ರಕಥೆಯಲ್ಲಿ ಪ್ರಬುದ್ಧತೆ ಇರಲಿ ಎನ್ನುವ ಆಶಯ ಚಿತ್ರ ಪ್ರೇಮಿಯದ್ದು.

No comments:

Post a Comment