Pages

Sunday, November 10, 2013

ಜಂಗಲ್ ಜಾಕಿ

'ನಮ್ಮ ಬಾಸ್ ಅಪ್ಪುದು ಜಾಕಿ..ನಾನು ಅವರ ಅಭಿಮಾನಿ ನಂದು ಜಂಗಲ್ ಜಾಕಿ ..' ಹೀಗೊಂದು ಮಾತನ್ನು ಅಬ್ಬರಿಸುತ್ತಲೇ ನಾಯಕ ರಾಜೇಶ್ ಖಳರಿಗೆ ಹಿಗ್ಗಾಮುಗ್ಗ ಚಚ್ಚುತ್ತಾನೆ.ನಾವು ಹೊಡೆಯೋದಕ್ಕೆ ಬಂದದ್ದು ಮಾರಾಯ, ನಾವೆಲ್ಲಿ ಅದನ್ನೆಲ್ಲಾ ಕೇಳಿದ್ದು ಎಂದುಕೊಳ್ಳುತ್ತಾರೆ ಖಳರು. ಆದರೆ ಪ್ರೇಕ್ಷಕ ಮಾತ್ರ ಅಪ್ಪು ಹೆಸರಿಗೆ ಶಿಳ್ಳೆ ಹಾಕುತ್ತಾರೆ. ಬಹುಶ ಇಡೀ ಚಿತ್ರದಲ್ಲಿ ಶಿಳ್ಳೆ ಹಾಕಬಹುದಾದ ಅಂಶ ಇದೊಂದೇ ಇರಬೇಕು. ಜಂಗಲ್ ಜಾಕಿ ಚಿತ್ರದ ಕಥೆ ರಾಜೇಶನಿಗಾಗಿ ಬರೆದದ್ದು. ಚಿತ್ರರಂಗದಲ್ಲಿ ಮೊದಲಿಗೆ ಕಥೆ ಬರೆದು ಆನಂತರ ಅದಕ್ಕೆ ತಕ್ಕವನಾದ ನಾಯಕನ್ನು ಆಯ್ಕೆ ಮಾಡುವ, ಅಥವಾ ಮೊದಲಿಗೆ ನಾಯಕನ್ನು ಆಯ್ಕೆ ಮಾಡಿಕೊಂಡು ಆನಂತರ ಕಥೆ ಬರೆಯುವ ಎರಡು ವಿಧಾನಗಳಿವೆ. ಅದ್ಯಾವುದರಲ್ಲೇ ಆಗಲಿ ಕಥೆ ಕಥೆ ಹೆಣೆಯುವ
ಚಿತ್ರಕಥೆಗಾರ/ಚಿತ್ರಸಾಹಿತಿ ಪ್ರತಿಭಾವಂತನಾಗಿದ್ದಾಗ ಕಥೆಗಾರನಾಗಿದ್ದಾಗ ಚಿತ್ರಕ್ಕೆ ಸಂಪೂರ್ಣ ನ್ಯಾಯ ದೊರಕುತ್ತದೆ. ಇರುವ ಒಂದು ಪಾತ್ರಕ್ಕೆ ಕಥೆಯಲ್ಲಿ ಜಾಗ ಮಾಡಿ ಆನಂತರ ಅದಕ್ಕೆ ತಕ್ಕಂತೆ ದೃಶ್ಯಗಳನ್ನು ಜೋಡಿಸುತ್ತಾ ಹೋಗುವುದು ಸುಲಭದ ಮಾತಲ್ಲ. ಹಳ್ಳಿ ಹೈದ ಪ್ಯಾಟೆಗೆ ಬಂದ ಕಾರ್ಯಕ್ರಮವೊಂದು ವಾಹಿನಿಯಲ್ಲಿ ಪ್ರಸಾರವಾಗಿ ಜನಪ್ರಿಯಗೊಂಡು ಆ ಮೂಲಕ ಪ್ರವರ್ಧಮಾನಕ್ಕೆಬಂದವನು ರಾಜೇಶ್. ತನ್ನ ಒರಟುತನ, ಮೊಂಡು ತನ ದಿಂದಾಗಿ ಕಾರ್ಯಕ್ರಮದಲ್ಲಿ ಗೆದ್ದು ಚಿತ್ರರಂಗಕ್ಕೂ ಪಾದಾರ್ಪಣೆ ಮಾಡಿದವನು. ಅದರ ನೆರಳಿನಲ್ಲಿ ಅವನ ಜನಪ್ರಿಯತೆಯನ್ನು ಬಳಸಿಕೊಂಡು ಒಂದು ಚಿತ್ರವನ್ನು ಮಾಡಿ ಮುಗಿಸಿಬಿಡುವ ಎನ್ನುವ ಆಶಯದಿಂದ ತಯಾರಾದ ಚಿತ್ರ ಜಂಗಲ್ ಜಾಕಿ. ಆದರೆ ಚಿತ್ರದ ನಿರ್ಮಾಣ ಬಿಡುಗಡೆ ಮುಂತಾದವುಗಳು ತಡವಾಗಿ ಕಾರ್ಯಕ್ರಮ ಮರೆತೂ ಹೋಗಿರುವುದು ಚಿತ್ರಕ್ಕೆ ಅಂತಹ ಲಾಭತರುವುದಿಲ್ಲ ಎಂಬುದು ಮುಖ್ಯಾಂಶ.ಇಡೀ ಚಿತ್ರ ಆ ಕಾರ್ಯಕ್ರಮದ ಕಥಾ ರೂಪ ಎನ್ನಬಹುದು. ಹಾಗೆಯೇ ಕಥೆಯ ಬಗ್ಗೆ ಮಾತನಾಡಲೇ ಬೇಕೆಂದರೆ ನೀವು ಹಳೆಯ,ಹೊಸದಾದ, ಈ ಭಾಷೆಯ ಅಥವಾ ಯಾವುದೇ ಭಾಷೆಯ ಪ್ರೆಮಕಥೆಯಿರುವ ಚಿತ್ರವನ್ನೊಮ್ಮೆ ನೆನಪಿಸಿಕೊಂಡರೆ ಸಾಕು..ಒಂದಲ್ಲ ನೂರಾರು ಚಿತ್ರಗಳ ಕಥೆಯನ್ನು ಜಂಗಲ್ ಜಾಕಿ ಚಿತ್ರದ ಕಥೆಯೊಂದಿಗೆ ಹೋಲಿಕೆ ಮಾಡಬಹುದು. ಹಳ್ಳಿಯಿಂದ ದಿಲ್ಲಿಗೆ ಬರುವ ನಾಯಕ, ಅವನಿಗೆ ಸಿಗುವ ನಾಯಕಿ, ಶುರುವಾಗುವ ಪ್ರೀತಿ, ಖಳ ಕಾಟ, ಹೊಡೆದಾಟ, ಇದರ ಮದ್ಯ ಮದ್ಯ ಹಾಡು ಕುಣಿತ ಇವಿಷ್ಟೂ ಜಂಗಲ್ ಜಾಕಿ ಚಿತ್ರದ ಮುಖ್ಯ ದ್ರವ್ಯ.ಇದೆ ಕಥೆ ಅಂದರೆ ಕಥೆಯಲ್ಲಿ ಅಂತಹ ಕುತೂಹಲವಾಗಲಿ ರೋಚಕತೆಯಾಗಲಿ ಅಥವಾ ನವಿರುತನವಾಗಲಿ ಹುಡುಕಿದರೂ ಸಿಕ್ಕುವುದಿಲ್ಲ. ಚಿತ್ರ ಪ್ರಾರಂಭವಾಗಿ ಮುಗಿಯುತ್ತದೆ. ಅಷ್ಟೇ. ಅದರ ನಡುವೆ ನೀವು ಯಾವ ಸಂದರ್ಭದಲ್ಲಾದರೂ ಹೊರಬರಬಹುದು.ನಾಯಕ ರಾಜೇಶ್ ಅಭಿನಯಿಸಲು ಒದ್ದಾಡಿದ್ದಾನೆ. ಅಥವಾ ಇರುವಷ್ಟೇ ಅಭಿನಯವನ್ನು ತೆಗೆಸಲು ನಿರ್ದೇಶಕರವಿ ಕಡೂರ್ ಅದೆಷ್ಟು ಒದ್ದಾಡಿದ್ದಾರೋ ಅವರನ್ನೇ ಕೇಳಬೇಕು.ಮಾತುಗಳನ್ನು ಹೇಗೋ ಹೇಳಿ, ಹೇಗೋ ದೃಶ್ಯ ಮುಗಿಸಿದರೆ ಸಾಕು ಎನ್ನುವ ಭಾವ ರಾಜೇಶ ಮುಖದಲ್ಲಿ ಪಾತ್ರದಲ್ಲಿನ ಗೊಂದಲದ ಜೊತೆ ಜೊತೆಗೆ ಕಾಣಸಿಗುತ್ತದೆ. ನಾಯಕ್ ಐಶ್ವರ್ಯ ಸುಮ್ಮನೆ ಸುಲಭವಾಗಿ ಅಭಿನಯಿಸಿದ್ದಾರೆ. ಅವರಿಗೆ ಇದು ಅಂತಹ ಸವಾಲಿನ ಪಾತ್ರವೇನಲ್ಲ. ಉಳಿದ ತಾಂತ್ರಿಕ ವರ್ಗ, ಸಹಕಲಾವಿರುಗಳು ತಮ್ಮ ಕೆಲಸದಲ್ಲಿ ತನ್ಮಯತೆ ತೋರಿಸಿದ್ದಾರೆ.

No comments:

Post a Comment