Pages

Sunday, November 10, 2013

ದೇವರ ಆಶೀರ್ವಾದ-ಇರಲೇಬೇಕು ನೋಡಿಯಾದ ಮೇಲೆ

ಸಿಲ್ಕ್ ಸಖತ್ ಹಾಟ್ ಮಗಾ ಚಿತ್ರ ದೊಡ್ಡ ಮಟ್ಟದಲ್ಲಿ ಒಳ್ಳೆಯ ಬಜೆಟ್ಟಿನಲ್ಲಿ ತಯಾರಾದ ಹಸಿಬಿಸಿ ಚಿತ್ರವಾದರೆ ಆಶೀರ್ವಾದ ಅದೇ ರೀತಿಯ ಕಡಿಮೆ ವೆಚ್ಚದ ಚಿತ್ರ. ಮೊದಲಿಗೆ ನಿಮ್ಮನ್ನು ಆಶ್ಚರ್ಯಕ್ಕೆ ದೂಡುವುದು ಚಿತ್ರದ ಶೀರ್ಷಿಕೆ. ಯಾಕೆಂದರೆ ಆಶೀರ್ವಾದಕ್ಕೂ ಒಳಗಿನ ಕಥೆಗೂ ಅಂತಹ ಸಂಬ೦ಧವೇನಿಲ್ಲ. ಸ್ವಾಮೀಜಿಯೋಬ್ಬನ ಕಥೆಯಾಗಿರುವುದರಿ೦ದ ಅದಕ್ಕೆ ಆ ಹೆಸರು ಎಂಬ ಸಮರ್ಥನೆಯನ್ನು ನಿರ್ದೇಶಕರು ಕೊಡಬಹುದು.
ಇಷ್ಟಕ್ಕೂ ಈ ಚಿತ್ರ ನಿರ್ಮಾಣದ ಹಿಂದಿನ ಉದ್ದೇಶವೇನು? ಎಂಬ ಪ್ರಶ್ನೆ ಕಾಡುವುದು ಸಹಜ. ಕಾರಣ ಹೊಸಬರು ಚಿತ್ರ ಮಾಡುವಾಗ ಆದರಲ್ಲಿ ಅವರದೇ ಆದ ಕನಸುಗಳಿರುತ್ತವೆ. ಆದರೆ ಇಲ್ಲ್ಲಿ ಆತರಹದ ಯಾವ ಕನಸನ್ನೂ ನೀವು ನಿರೀಕ್ಷಿಸುವ ಹಾಗಿಲ್ಲ. ಚಿತ್ರದ ಪ್ರಾರಂಭದಲ್ಲಿ ಒಂದು ದೃಶ್ಯ ಬರುತ್ತದೆ. ಅದನ್ನು ನೋಡು ನೋಡುತ್ತಾ ಓ ಇದ್ಯಾವುದೋ ಸಸ್ಪೆನ್ಸ್ ಥ್ರಿಲ್ಲರ್ ಇರಬಹುದಾ ಎನ್ನುವ ಸಂಶಯ ನಿಮಗೆ ಬರಬಹುದು. ಆದರೆ ನಿರ್ದೇಶಕರು ಅದನ್ನೇ ರಹಸ್ಯವಾಗಿತ್ತು ಬಿಡುತ್ತಾರೆ. ಹಾಗಾಗಿ ಮೊದಲ ದೃಶ್ಯದ ನಂತರ ಅದಕ್ಕೆ ಸಂಬಂಧ ಪಟ್ಟ ಯಾವ ದೃಶ್ಯವೂ ನಿಮಗೆ ಸಿಗುವುದಿಲ್ಲ. ಹೋಗಲಿ ಅದರ ಹಿನ್ನೆಲೆಯಲ್ಲಿ ಕಥೆಯಿದೆಯಾ...?
ಯುವಕನೊಬ್ಬ ಪ್ರೀತಿಸದ ಹುಡುಗಿಯನ್ನು ತೊರೆದು ಸ್ವಾಮೀಜಿಯಾಗುತ್ತಾನೆ. ಆತನ ಉದ್ದೇಶವೇನು..?ತನ್ನದೇ ಆದ ಆಶ್ರಮ ಕಟ್ಟುತ್ತಾನೆ, ಹಣ ಮಾಡುತ್ತಾನೆ. ರಾಜಕೀಯ ಪ್ರಭಾವಿ ವ್ಯಕ್ತಿಗಳಿಗೆ ಬೇಕಾದವನಾಗುತ್ತಾನೆ.ಆಮೇಲೆ ಒಂದು ಸಿಡಿ ಪ್ರಕರಣ ಬರುತ್ತದೆ. ಒಂದಷ್ಟು ರಾಜಕೀಯ ನಾಯಕರ ಬಗ್ಗೆ ಚುಚ್ಚುವ ಮಾತುಗಳೂ ಬರುತ್ತದೆ. ಅದೆಲ್ಲ ಸರಿ ಮಾರಾಯಾ ಕಥೆ ಏನು ಎಂಬ ಪ್ರಶ್ನೆಯನ್ನು ನೀವು ಕೇಳಿದರೆ ಅದನ್ನು ಹೇಳಲೇ ಇಷ್ಟು ಗೊಂದಲ ಎಂಬ ಉತ್ತರ ಕೊಡಬೇಕಾಗುತ್ತದೆ. ಕಾರಣ ನಿರ್ದೇಶಕರೇ ಗೊಂದಲಕ್ಕೊಳಗಾಗಿದ್ದಾರೆ. ಕೆಲವೊಮ್ಮೆ ನಾನೇನು ಮಾಡಲು ಹೊರಟಿದ್ದೀನಿ ಎನ್ನುವ ಆಶಯವನ್ನೇ ಮರೆತಿದ್ದರೆನೋ ಎನ್ನುವಷ್ಟರ ಮಟ್ಟಿಗೆ ಚಿತ್ರಕಥೆ ಸೂತ್ರ ಕಿತ್ತ ಗಾಳಿಪಟದಂತಾಗಿದೆ.ಚಿತ್ರದಲ್ಲಿ ಬರುವ ಹಲವಾರು ದೃಶ್ಯಗಳಿವೆ. ಅವುಗಳಲ್ಲಿ ಯಾವುದನ್ನು ಕಥೆಗೆ ಸೇರಿಸಿಕೊಳ್ಳಬೇಕು, ಯಾವುದನ್ನು ಸೇರಿಸಿಕೊಳ್ಳಬಾರದು ಎಂಬುದನ್ನು ನಾವುಗಳೇ ನಿರ್ಧಾರ ಮಾಡಬೇಕಾಗುತ್ತದೆ.ಸಂಭಾಷಣೆಗಳು ಸೊಂಟದ ಕೆಳಗೂ ಇವೆ. ಅವುಗಳನ್ನು ಕೇಳಿಸಿಕೊಳ್ಳುವ ಕಿವಿ ನಿಮ್ಮದಾಗಬೇಕಷ್ಟೇ. ಹಾಗೆಯೇ ಈಜುಕೊಳದಲ್ಲಿ ನಾಯಕ ನಾಯಕಿ ತಬ್ಬಿಕೊಂಡು ಉರುಳಾಡುವ ಈಜಾಡುವ ದೃಶ್ಯಗಳಿವೆ. ನಾಯಕಿ ದಿಶಾ ಪೂವಯ್ಯ ಅಭಿನಯದ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ನಿರ್ದೇಶಕರೇ ಅದೆಲ್ಲ ಬೇಡಾ ಬರೀ ಎಕ್ಸ್ ಪೋಸ್ ಸಾಕು ಎಂದು ಹೇಳಿರಬಹುದಾ ಎಂಬ ಅನುಮಾನ ಹುಟ್ಟಿಸುವ ಮಟ್ಟಿಗೆ ತಮ್ಮ ಮೈಮಾಟವನ್ನು ತೆರೆದಿಟ್ಟಿದ್ದಾರೆ. ಅಭಿನಯವನ್ನು ಮುಚ್ಚಿಟ್ಟಿದ್ದಾರೆ.ಇನ್ನು ನಾಯಕನಾಗಿರುವ ನಿರ್ಮಾಪಕನೂ ಆಗಿರುವ ಸೂರ್ಯ ಮೋಹನ್ ಅಭಿನಯಿಸಿಲ್ಲ. ಕ್ಯಾಮೆರಾ ಮುಂದೆ ಸುಮ್ಮನೆ ನಿಂತು ನಿರ್ದೇಶಕರು ಹೇಳಿದ್ದನ್ನು ಕೇಳುವ ಪ್ರಯತ್ನ ಮಾಡಿದ್ದಾರೆ.ಅವರ ವೇಷ ಭೂಷಣ, ಸಂಭಾಷಣೆ ಒಪ್ಪಿಸುವ ಪರಿ ಯಾವುದರಲ್ಲೂ ಕಸುಬುದಾರಿಕೆ ಇಲ್ಲ. ಇನ್ನುಳಿದ ಕಲಾವಿದರ ಬಗ್ಗೆ ಬರೆಯುವುದಿರುವುದೇ ಲೇಸು.
ಚಿತ್ರದ ಛಾಯಾಗ್ರಹಣಕ್ಕೆ ನೆರಳು ಬೆಳಕೆಂಬ ವ್ಯತ್ಯಾಸವಿಲ್ಲ. ಎಲ್ಲಿ ಬೇಕೆಂದರಲ್ಲಿ ಚಿತ್ರೀಕರಿಸಿದ್ದರೆನೋ ಎನ್ನುವ ಅನುಮಾನ ಹುಟ್ಟಿಸುವಂತಿವೆ ಚಿತ್ರೀಕರಣ ಸ್ಥಳಗಳು. ಹಾಡುಗಳು ಹಿನ್ನೆಲೆ ಸಂಗೀತ, ಸಂಕಲನ ಎಲ್ಲವೂ ಒಂದು ಸಿನಿಮಾದಲ್ಲಿ ಅಡಕವಾಗಿರಬೇಕಾದ್ದರಿಂದ ಈ ಚಿತ್ರದಲ್ಲೂ ಇವೆ ಎನ್ನಬಹುದಷ್ಟೇ.
ಬರೀ ಮೈಮಾಟ ಪ್ರದರ್ಶನ, ಶೃಂಗಾರವಷ್ಟೇ ಚಿತ್ರವಲ್ಲ. ಅದಕ್ಕೊಂದು ಕಥೆಯಿದ್ದಾಗ ನಿರ್ದೇಶಕ ಸೂಕ್ಷ್ಮಮತಿಯಾಗಿದ್ದಾಗ ಎಲ್ಲವೂ ಇದ್ದ ಮರ್ಡರ್ ತರಹದ ಚಿತ್ರ ಮೂಡಿಬರುತ್ತದೆ. ಇಲ್ಲವಾದಲ್ಲಿ ಈ ತರಹದ ಚಿತ್ರಗಳನ್ನು ಪ್ರೇಕ್ಷಕ ನೋಡಬೇಕಾಗುತ್ತದೆ.

No comments:

Post a Comment