Pages

Sunday, November 10, 2013

ಸಾದಾ ಚಿತ್ತಾರದ ‘ಮದರಂಗಿ’:



ಪುನೀತ್ ರಾಜಕುಮಾರ್ ಅಭಿನಯದ ಹುಡುಗರು ಚಿತ್ರದಲ್ಲಿನ ಮಾತೇ ಇಲ್ಲದ ಆದರೆ ಗಮನಸೆಳೆಯುವ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದ ಸುನೀಲ್ ನಾಗಪ್ಪ ಆನಂತರ ಕಿರುತೆರೆಯಲ್ಲಿ ಕಿಟ್ಟಪ್ಪ ಎಂದೇ ಜನಪ್ರಿಯರಾದವರು.ಅವರು ಮೊದಲ ಬಾರಿಗೆ ಪೂರ್ಣ ಪ್ರಮಾಣದ ನಾಯಕನಾಗಿ ಅಭಿನಯಿಸಿದ ಚಿತ್ರ ‘ಮದರಂಗಿ’. ಇನ್ನು ನಿರ್ದೇಶಕ ಮಲ್ಲಿಕಾರ್ಜುನ ಮುತ್ತಲಗೇರಿ ಈ ಹಿಂದೆ  ‘ಆಟೋ’ ಎನ್ನುವ ಚಿತ್ರವೊಂದನ್ನು ನಿರ್ದೇಶಿಸಿದ್ದರು. ಮದರಂಗಿ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ.
ಸೀದಾ ಸಾದವಾಗಿ ಹೇಳುವುದಾದರೆ ಚಿತ್ರದ ಕಥೆ ಇಂತಿದೆ. ದೊಡ್ಡ ಶ್ರೀಮಂತರ ಮನೆಯಲ್ಲಿ ಅಡಿಗೆ ಕೆಲಸ ಮಾಡುವ ನಾಯಕನಿಗೆ ಕಂಪ್ಯೂಟರ್ ವಿಜ್ಞಾನದಲ್ಲಿ ಪದವಿಗಳಿಸಿದ್ದರೂ ಅಮ್ಮನ ಶಿಫಾರಸ್ಸಿನ ಮೇಲೆ ಶ್ರೀಮಂತನ ಮನೆಯಲ್ಲಿ ಕಾರಿನ ಚಾಲಕನಾಗಿ ಕೆಲಸ ಸಿಗುತ್ತದೆ. ಶ್ರೀಮಂತನಿಗೆ ಇಬ್ಬರು ಹೆಣ್ಣು ಮಕ್ಕಳು. ಒಬ್ಬಳು ಮೃದು ಸ್ವಭಾವದ ಸುಂದರಿ ಮತ್ತೊಬ್ಬಳು ಚೆಲ್ಲುಚೆಲ್ಲಾದ ಚಲುವೆ. ಇಬ್ಬರ ಮನಸನ್ನೂ ನಾಯಕ ಕೆಲವೇ ನಿಮಿಷಗಳಲ್ಲಿ ಗೆದ್ದುಬಿಡುತ್ತಾನಾದರೂ ಚೆಲ್ಲು ಹುಡುಗಿಗೆ ತಾನು ಮನಸೋಲುತ್ತಾನೆ. ಇದು ಶ್ರೀಮಂತನಿಗೆ ಗೊತ್ತಾಗುತ್ತದೆ. ಒಬ್ಬ ಸಾಮಾನ್ಯ ಚಾಲಕನನ್ನು ತನ್ನ ಮನೆ ಅಳಿಯನನ್ನಾಗಿ ಸ್ವೀಕರಿಸಲು ಸಾಧ್ಯವೇ..? ಮುಂದಿನ ಕಥೆಯೇನು..ಚಿತ್ರದ ಅಂತ್ಯದಲ್ಲಿ ಏನಾಗುತ್ತದೆ ಎಂಬ ಕುತೂಹಲವಿದ್ದರೆ ಅದನ್ನು ಚಿತ್ರಮಂದಿರದಲ್ಲೇ ತಣಿಸಿಕೊಳ್ಳುವುದು ಉತ್ತಮ. ಚಿತ್ರದ ಕಥೆಯೇನೋ ಸರಳ ಎಂದು ನಿಮಗನ್ನಿಸಬಹುದು. ಆದರೆ ನಿರೂಪಣೆ ಮತ್ತು ಚಿತ್ರಕಥೆ ಕವಲುಕವಲಿನ ಜೇಡರಬಲೆ. ಇದೆ ಚಿತ್ರದ ಋಣಾತ್ಮಕ ಅಂಶವೂ ಹೌದು..ಕೆಲವು ಕಡೆ ಕುತೂಹಲಕೆರಳಿಸುವ ಧನಾತ್ಮಕ ಅಂಶವೂ ಹೌದು.ನಿರ್ದೇಶಕರು ಇದಿಷ್ಟನ್ನೇ ಕುತೂಹಲಕರವಾಗಿ, ಭಾವನಾತ್ಮಕ ನೆಲೆಗಟ್ಟಿನಲ್ಲಿ ನಿರೂಪಿಸಲು ಸಾಧ್ಯತೆಗಳಿದ್ದವು. ಆದರೆ ಬರೇ ತ್ರಿಕೋನ ಪ್ರೇಮಕಥೆಗಷ್ಟೇ ನಿರ್ದೇಶಕರು ಪ್ರಾಮುಖ್ಯತೆ ಕೊಟ್ಟಿಲ್ಲ. ತಾಯಿ ಸೆಂಟಿಮೆಂಟ್, ತಂಗಿ ಸೆಂಟಿಮೆಂಟ್, ಭೂಗತಲೋಕ, ರೌಡಿಸಂ, ಏನ್ ಕೌಂಟರ್ . ಹೀಗೆ ಹತ್ತು ಹಲವು ಕಿರುಕಥೆಗಳನ್ನು ಒಂದೇ ಚೌಕಟ್ಟಿನಲ್ಲಿ ಕಟ್ಟಿಕೊಡುವ ಪ್ರಯತ್ನ  ಮಾಡಿದ್ದಾರೆ. ಹಾಗಾಗಿಯೇ ಚಿತ್ರ ಎಲ್ಲ ಅಂಶಗಳಿದ್ದರೂ ಎಲ್ಲೋ ಏನೋ ಕೊರತೆ ಇದೆಯಲ್ಲ ಎನಿಸುತ್ತದೆ.
ಹಾಗೆ ಇಡೀ ಚಿತ್ರದಲ್ಲಿ ಎಲ್ಲವೂ ಬೇಗ ಬೇಗ ನಡೆದುಹೋಗುತ್ತವೆ.ಒಂದೇ ಮಾತಿಗೆ ಅಕ್ಕ ನಾಯಕನಿಗೆ ಮನಸೋತರೆ, ಒಂದು ಹೊಡೆದಾಟದಲ್ಲಿ ತಂಗಿ ನಾಯಕನಿಗೆ ಅನುರಕ್ತೆಯಾಗುತ್ತಾಳೆ. ಒಂದೆ ತಪ್ಪಿಗೆ ಜೈಲು ಪಾಲಾಗಿ, ಆಮೇಲೆ ರೌಡಿಗಳೇ ಆಗಿಬಿಡುವ ಸ್ನೇಹಿತರು, ನಾಯಕಿಯ ತಂದೆಯ ಪಿತೂರಿಯಿಂದ ಸ್ಮರಣಶಕ್ತಿಯನ್ನು ಕಳೆದುಕೊಳ್ಳುವ ನಾಯಕ, ಅಷ್ಟೇ ಬೇಗ ಸ್ಮರಣಶಕ್ತಿಯನ್ನು ಗಳಿಸಿಕೊಂಡು ಹೊಡೆದಾಟಕ್ಕೆ ನಿಂತುಬಿಡುತ್ತಾನೆ. ನಾಯಕ ಮನು ಕಾರಿನ ಚಾಲನೆ ಗೊತ್ತಿಲ್ಲದೆಯೇ ಚಾಲಕನಾಗಿ ಸೇರಿಕೊಳ್ಳುವುದು, ಒಂದೇ ಸಲಕ್ಕೆ ನಾಯಕಿಯಿಂದ ಕಾರು ಕಲಿತು ಆರಾಮವಾಗಿ ಪರಿಣಿತ ಚಾಲಕನಂತೆ ಕಾರು ಓಡಿಸುವುದನ್ನು ಅರಗಿಸಿಕೊಳ್ಳುವುದು ಕಷ್ಟ.
ನಾಯಕ ಕೃಷ್ಣ ಅಭಿನಯ, ಹೊಡೆದಾಟದಲ್ಲಿ ಮಿಂಚಿದ್ದಾರೆ ಮತ್ತು ಕನ್ನಡದಲ್ಲಿ ಭರವಸೆಯ ನಾಯಕನಾಗುವ ಎಲ್ಲಾ ಲಕ್ಷಣ ತೋರಿಸಿದ್ದಾರೆ. ನಾಯಕನನ್ನು ಪ್ರೀತಿಸಿ, ಆ ಪ್ರೀತಿಯನ್ನು ಮನಸ್ಸಿನಲ್ಲೇ ಇಟ್ಟುಕೊಂಡು ಕೊರಗುವ ಮೃದು ಸ್ವಭಾವದ ಹುಡುಗಿಯಾಗಿ ಸುಶ್ಮಾರಾಜ್
ಅಭಿನಯ ಇಷ್ಟವಾಗುತ್ತದೆ. ಹಾಗೆ ಚೆಲ್ಲು ಹುಡುಗಿಯ ಪಾತ್ರದಲ್ಲಿ ನಕ್ಷಾ ಶೆಟ್ಟಿ, ನಾಯಕಿಯ ತಂದೆಯಾಗಿ ಅವಿನಾಶ್, ನಾಯಕನ ತಾಯಿಯಾಗಿ ವಿನಯಾ ಪ್ರಕಾಶ್ ಗಮನಸೆಳೆಯುತ್ತಾರೆ. ಸಾಧುಕೋಕಿಲ, ಕುರಿ ಪ್ರತಾಪ್ ಇರುವಷ್ಟು ಸಮಯ ನಗಿಸುವ ಪ್ರಯತ್ನ ಪಡುತ್ತಾರೆ. ಅನೂಪ್ ಸೀಳಿನ್ ಅವರ ಸಂಗೀತದಲ್ಲಿ  ಮೂರು ಹಾಡುಗಳು ಕೇಳುವಂತಿವೆ. ಗಿರೀಶ್ ರವರ ಛಾಯಾಗ್ರಹಣ, ಡಿಫರೆಂಟ್ ಡ್ಯಾನಿಯವರ ಸಾಹಸ ಮೆಚ್ಚುಗೆ ಗಳಿಸುತ್ತವೆ.
ಒಟ್ಟಾರೆಯಾಗಿ ಅತ್ಯುತ್ತಮ ಚಿತ್ರವಲ್ಲದಿದ್ದರೂ ಕೊಟ್ಟ ಕಾಸಿಗೆ ಮೋಸ ಮಾಡದ ಮನರಂಜನೀಯ ಚಿತ್ರವಾಗಿ ಸಾದಾರಣ ಮಟ್ಟಕ್ಕಿಂತ ‘ಮದರಂಗಿ’ ಸ್ವಲ್ಪ ಮೇಲಿದೆ ಎಂದು ಹೇಳಬಹುದು.

No comments:

Post a Comment