Pages

Sunday, November 10, 2013

ಆಟೋ ರಾಜ:

ಶಂಕರನಾಗ್ ಕನ್ನಡ ಚಿತ್ರರಂಗ ಕಂಡ ಅದ್ಭುತ ನಿರ್ದೇಶಕ ಮತ್ತು ನಟ. ಕಲಾತ್ಮಕ ಚಿತ್ರ, ಮನರಂಜನೀಯ ಚಿತ್ರ ಮತ್ತು ಮಸಾಲೆ ಚಿತ್ರ ಹೀಗೆ ಎಲ್ಲಾ ರೀತಿಯ ಎಲ್ಲ ವರ್ಗದ ಚಿತ್ರಗಳಲ್ಲೂ ತನ್ನದೇ ಆದ ಛಾಪು ಮೂಡಿಸಿದ ವ್ಯಕ್ತಿ. ಶಂಕರನಾಗ್ ತನ್ನದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದವರು. ಅವರು ಕಣ್ಮರೆಯಾಗಿ ದಶಕಗಳೇ ಕಳೆದರೂ ಈವತ್ತಿಗೂ ಕನ್ನಡಿಗರ ಮನದಲ್ಲಿ ಶಂಕರನಾಗ್ ನೆನಪು ಹಚ್ಚ ಹಸಿರಾಗಿದೆ. ಹಾಗೆ ಆಟೋ ರಾಜ ಚಿತ್ರವೇನೂ ಕನ್ನಡ ಚಿತ್ರರಂಗದ ಮಾಸ್ಟರ್ ಪೀಸ್ ಅಲ್ಲ. ಒಂದು ರಂಜನೀಯ ಮಸಾಲೆ ಚಿತ್ರ. ಆದರೆ ಶಂಕರನಾಗ್ ವ್ಯಕ್ತಿತ್ವ, ಅವರ ಪ್ರತಿಭೆಯೇ ಚಿತ್ರಕ್ಕೊಂದು ಮೆರುಗು ಕೊಟ್ತಿತ್ತಲ್ಲದೆ ಶಂಕರನಾಗ್ ಅವರನ್ನು ಆಟೋದವರ ಕಣ್ಮಣಿಯನ್ನಾಗಿ ಮಾಡಿತ್ತು.
ಶಂಕರನಾಗ್ ಹೆಸರಿಟ್ಟುಕೊಂಡು ಮೂನಾಲ್ಕು ಚಿತ್ರಗಳು ಸೆಟ್ಟೇರಿದವಾದರೂ ಒಂದು ಬಿಡುಗಡೆಯಾಗಲಿಲ್ಲ. ಈಗ ಗಣೇಶ್ ಅಭಿನಯದಲ್ಲಿ ಚಿತ್ರ ಬಂದಿದೆ. ಶಂಕರನಾಗ್, ಅವರ ಪ್ರತಿಭೆ ಮುಂತಾದವುಗಳನ್ನು ಮನಸಲ್ಲಿಟ್ಟುಕೊಂಡು ಚಿತ್ರ ಮಂದಿರಕ್ಕೆ ಹೋದರೆ ನಿರಾಸೆ ಗ್ಯಾರಂಟಿ. ಕಾರಣ ಇಲ್ಲಿ ಹಳೆಯ ಆಟೋರಾಜನಿಗಾಗಲಿ, ಶಂಕರನಾಗ್ ಗಾಗಲಿ ಯಾವುದೇ ಸಂಬಂಧವಿಲ್ಲ. ಈ ಚಿತ್ರದ ನಾಯಕನ ಹೆಸರು ರಾಜ ಮತ್ತು ಆತ ಆಟೋ ಚಾಲಕ ಜೊತೆಗೆ ಆತ ಶಂಕರನಾಗ್ ಅಭಿಮಾನಿ ಎಂಬುದಷ್ಟೇ ಚಿತ್ರದ ಶೀರ್ಷಿಕೆಗೆ ನಿರ್ದೇಶಕರು ಕೊಡಬಹುದಾದ ಸಮರ್ಥನೆ ಎನ್ನಬಹುದು.
ಚಿತ್ರದ ಕಥೆ ಕೇಳಿ. ರಾಜ ಆಟೋಚಾಲಕ. ಹಾಗೆ ಕಷ್ಟದಲ್ಲಿದವರಿಗೆ ಹಿಂದೆ ಮುಂದೆ ನೋಡದೆ ಸಹಾಯ ಮಾಡುವ ಹಾಗೆಯೇ ಖಳರಿಗೆ ಯದ್ವಾತದ್ವಾ ತದುಕುವ ಹೀರೋ. ಶಂಕರನಾಗ್ ನಂತೆಯೇ ಮಾತನಾಡಿ ತನ್ನ ಪ್ರಯಾಣಿಕರನ್ನು ರಂಜಿಸುತ್ತಾನೆ. ಅರಳುಹುರಿದಂತೆ ಪಟಪಟನೆ ತಮಾಷೆಯಾಗಿ ಮಾತನಾಡಿ ಸುತ್ತಮುತ್ತಲಿನವರನ್ನುನಕ್ಕು ನಲಿಸುತ್ತಾನೆ. ಹಾಗಾಗಿ ಆಟೋ ರಾಜಾ ಎಲ್ಲರಿಗೂ ಅಚ್ಚುಮೆಚ್ಚು. ಒಂದು ದಿನ ಮುದ್ದುಮುಖದ ಕಲಾವಿದೆಯಾಗಬೇಕೆನ್ನುವ ತುಡಿತಯಿರುವ ರಾಣಿ ನಮ್ಮ ಆಟೋರಾಜನ ಆಟೋ ಇರುತ್ತಾಳೆ. ಅಲ್ಲಿಂದ ಪರಿಚಯ..ಅವಳ ಹಿಂದೆ ಖಳರ ಗುಂಪೊಂದಿದೆ.ರಾಣಿಯನ್ನು ಅಪಹರಿಸಿ ಒಂದು ಅಶ್ಲೀಲ ಚಿತ್ರ ನಿರ್ಮಿಸಬೇಕೆನ್ನುವ ಬಯಕೆ ಅವರದು. ಇದನ್ನು ಚಿತ್ರದ ಮುಖ್ಯವಾಹಿನಿಯಲ್ಲಿ ಬರುವ ಕಥೆ ಎನ್ನಬಹುದು. ಉಳಿದಂತೆ ಉಪಕಥೆಗಳಿವೆ. ತಮಾಷೆಯ ಪ್ರಸಂಗಗಳಿವೆ. ಅವು ನಮಗೆ ಬೇರೆ ಭಾಷೆಯ ಚಿತ್ರಗಳನ್ನು ಆರಾಮಾವಾಗಿ ನೆನಪಿಸಿದರೆ ನಿರ್ದೇಶಕರು ಹೆಗಲು ಮುಟ್ಟಿನೋಡಿ ಕೊಂಡಾರು..? ಚಿತ್ರದ ಮೊದಲ ಭಾಗದಲ್ಲಿ ಅನಾವಶ್ಯಕ ದೃಶ್ಯಗಳು ನಗಿಸಿದರೂ ಚಿತ್ರದ ಕಥೆಯನ್ನು ಪೇಲವ ಮಾಡಿಬಿಟ್ಟಿದೆ. ದ್ವಿತೀಯಾರ್ಧ ಗಂಭೀರವಾದರೂ ಕುತೂಹಲಕಾರಿಯಾಗಿಲ್ಲ.
ಗಣೇಶ್ ತ್ರಾಸಿಲ್ಲದೆ ಆರಾಮವಾಗಿ ನಟಿಸಿದ್ದಾರೆ. ಭಾಮ ಕೂಡ ಆರಾಮವಾಗಿಯೇ ನಟಿಸಿದ್ದಾರೆ. ಉಳಿದಂತೆ ಮಮತಾರಾವತ್, ಸಾಧುಕೋಕಿಲ,ದೀಪಿಕಾ ಕಾಮಯ್ಯ ಮುಂತಾದವರಿದ್ದರೂ ಚಿತ್ರದ ಕಥೆಗೆ ಅವರ ಪಾತ್ರಗಳು ಪೂರಕವಾದದ್ದೇನಲ್ಲ.
ತಾಂತ್ರಿಕ ಅಂಶದಲ್ಲಿ ಚಿತ್ರ ಚೆನ್ನಾಗಿದೆ. ಅರ್ಜುನ್ ಜನ್ಯರ ಸಂಗೀತ, ಮಂಜುನಾಥ ನಾಯಕ್ ಛಾಯಾಗ್ರಹಣಕ್ಕೆ ಫುಲ್ ಮಾರ್ಕ್ಸ್ ಕೊಡಬಹುದು. ಆದರೆ ಇದೆ ಮಾತನ್ನು ನಿರ್ದೇಶಕರಿಗೆ ಹೇಳುವ ಹಾಗಿಲ್ಲ.
ಶಂಕರನಾಗ್ ಅಭಿಮಾನಿಗಳು ಮೊದಲು ಶೀರ್ಷಿಕೆಯ ಸಂದರ್ಭದಲ್ಲಿ ಬರುವ ನಿಜವಾದ ಆಟೋರಾಜನ ದೃಶ್ಯನೋಡಿ ತೃಪ್ತರಾಗಬಹುದು. ಆಮೇಲಿನದ್ದೆಲ್ಲಾ ಗಣೇಶ್ ಅಭಿಮಾನಿಗಳಿಗೆ ಮೀಸಲು.

No comments:

Post a Comment