Pages

Sunday, November 10, 2013

ಜಯಮ್ಮನ ಮಗ


ಇದು ಹೀರೋ ಓರಿಎಂಟೆಡ್ ಚಿತ್ರವಲ್ಲ, ಕಥೆಯನ್ನಾಧರಿಸಿದ್ದು, ಕಥೆಯನ್ನವಲಂಬಿಸಿದ್ದು. ಹಾಗಾಗಿಯೇ ಇಡೀ ಚಿತ್ರ ನೋಡಲಾರ್ಹ ಎಂಬ ಒಂದು ಮಾತೆ ಚಿತ್ರದ ಪೂರ್ಣ ಚಿತ್ರಣ ಕೊಡಬಹುದೇನೋ..?
ಸಾಮಾನ್ಯವಾಗಿ ಒಬ್ಬ ನಾಯಕ ಸ್ಟಾರ್ ಗಿರಿಯನ್ನು ಪಡೆದ ನಂತರ ಆತನ ಚಿತ್ರಗಳ ಸ್ವರೂಪವೇ ಬದಲಾಗಿಬಿಡುತ್ತದೆ. ಅಲ್ಲಿ ನಾಯಕ ಎಲ್ಲವೂ ಆಗಿರುತ್ತಾನೆ. ಅವನನ್ನು ಸ್ತುತಿಸುವ ಜನರು, ಒಳ್ಳೆಯದನ್ನೇ ಮಾಡುವ ಅವನ ಗುಣ ಹೀಗೆ. ಹಾಗಾದಾಗ ಚಿತ್ರದ ಕಥೆಗಳಲ್ಲಿ ಸ್ವಲ್ಪ ಮಟ್ಟಗಿನ ಬದಲಾವಣೆ ಇದ್ದೆ ಇರುತ್ತದೆ. ದುನಿಯಾ ವಿಜಯ ತಮ್ಮದೇ ಸ್ವಂತ ಬ್ಯಾನರ್ ನಲ್ಲಿ ಚಿತ್ರ ನಿರ್ಮಿಸುತ್ತಿದ್ದಾರೆ ಎಂದಾಗ ಎಲ್ಲರಲ್ಲೂ ಅದು ಹೀರೋ ಓರಿಎಂಟೆಡ್ ಎಂಬ ಊಹೆ ಇದ್ದದ್ದು ನಿಜ. ಆದರೆ ವಿಜಯ ಕಥೆಯ ಮೊರೆ ಹೋಗಿದ್ದಾರೆ.ಇಲ್ಲಿ ಅವರ ಹೀರೋಗಿರಿಗಿಂತ ಕಥೆ ಮುಖ್ಯವಾಗಿದೆ. ಹಾಗಾಗಿ ಕಥೆಗೆ ಎಲ್ಲಿ ಬೇಕೋ ಅಲ್ಲಷ್ಟೇ ವಿಜಯ ಕಾಣಿಸಿಕೊಂಡಿದ್ದಾರೆ.
ಜಯಮ್ಮನ ಮಗ ಕಥೆ ವಾಮಾಚಾರ, ದೆವ್ವ ಭೂತಾರಾಧನೆ ಮತ್ತು ದೈವ ಶಕ್ತಿಗೆ ಸಂಬಂಧಿಸಿದ್ದು. ತೆಲುಗಿನ ಆರುಂಧತಿಯಂತಹ ಚಿತ್ರ. ಚಿತ್ರದ ಪ್ರಾರಂಭದಿಂದ ಮಧ್ಯಂತರದವರೆಗೆ ಒಂದಷ್ಟು ತಮಾಷೆಯ ಜೊತೆ ಜೊತೆಗೆ ಸಿನಿಮಾ ಸಾಗುತ್ತದೆ. ವಾಮಾಚಾರದ ಮಜಲುಗಳು ಪರಿಣಾಮಗಳು ಮುಂತಾದವುಗಳನ್ನು ಮಧ್ಯ ಮಧ್ಯ ಸೇರಿಸಿಡ ಚಿತ್ರಕಥೆ ಎಲ್ಲೂ ಬೋರ್ ಹೊಡೆಸುವುದಿಲ್ಲ. ಹಾಗೆಯೇ ಸರಾಗವಾಗಿ ಮಾತನಾಡುವ ವಿಜಯ್, ರಂಗಾಯಣ ರಘು ಸಿನಿಮಾವನ್ನು ಬೋರಿಲ್ಲದಂತೆ ಹೊತ್ತೊಯ್ಯುತ್ತಾರೆ. ಮಧ್ಯಂತರದ ನಂತರ ಚಿತ್ರ ನಿರೀಕ್ಷಿತವಾಗುತ್ತದೆ. ಆದರೂ ಚಿತ್ರ ಆಕಳಿಕೆ ತರಿಸುವುದಿಲ್ಲ.
ಚಿತ್ರದಲ್ಲಿನ ದೃಶ್ಯಗಳನ್ನು ತಾರ್ಕಿಕ ನೆಲೆಗಟ್ಟಿನಲ್ಲಿ ನೋಡುವ ಹಾಗಿಲ್ಲ. ಇದು ನಿಜವಾ ಎನ್ನುವ ಹಾಗಿಲ್ಲ. ದೇವಿ, ಮಾತೆ ದೆವ್ವ ಮಾಟ ಹೀಗೆ ಎಲ್ಲವನ್ನೂ ನಿರ್ದೇಶಕರು ತಾರ್ಕಿಕ ಆಲೋಚನೆಯಿಲ್ಲದೆ ಚಿತ್ರ ಮಾಡಿದ್ದಾರೆ. ಅಂದರೆ ಒಂದು ಕಥೆಯನ್ನು ಮನರಂಜನೀಯವಾಗಿ ಚಿತ್ರಿಸಿದ್ದಾರೆ. ಹಾಗಾಗಿ ಇಲ್ಲಿ ನೋ ಲಾಜಿಕ್ ಓನ್ಲಿ ಮ್ಯಾಜಿಕ್ ಎನ್ನುವ ತಂತ್ರವನ್ನು ತಲೆಯಲ್ಲಿಟ್ಟುಕೊಂಡು ಸಿನಿಮಾ ನೋಡಬೇಕಾಗುತ್ತದೆ.
ಚಿತ್ರದಲ್ಲಿನ ಗ್ರಾಫಿಕ್ಸ್ ಸಾದಾರಣವಾದರೂ ಅದೇನು ಅಂತಹ ಋಣಾತ್ಮಕವಾಗಿಲ್ಲ.ಛಾಯಾಗ್ರಹಣ ಚೆನ್ನಾಗಿದೆ. ಹಿನ್ನೆಲೆ ಸಂಗೀತದಲ್ಲಿ ಸ್ವಲ್ಪ ಅಬ್ಬರ ಕಡಿಮೆ ಮಾಡಿ, ನಿಶ್ಯಬ್ದದ ಜೊತೆ ಆಟವಾಡಿದ್ದರೆ ಇನ್ನೂ ಪರಿಣಾಮಕಾರಿಯಾಗಿರುತ್ತಿತ್ತು.
ಚಿತ್ರಕ್ಕೆ ಚಿತ್ರಕಥೆಯನ್ನು, ಸಂಭಾಷಣೆಯನ್ನು ಚಿಂತನ ಮಾಡಿದ್ದಾರೆ.ಅರ್ಜುನ್ ಜನ್ಯರ ಸಂಗೀತದಲ್ಲಿ ಮೂರು ಹಾಡುಗಳು ಕೇಳುವಂತಿವೆ.
ವಿಜಯ್ ಸಲೀಸಾಗಿ ಅಭಿನಯಿಸಿದ್ದಾರೆ. ಕೊನೆ ಕೊನೆಯಲ್ಲಿ ಅಬ್ಬರಿಸಿದ್ದಾರೆ. ರಂಗಾಯಣ ರಘು ತಮ್ಮ ಎಂದಿನ ಶೈಲಿಯ ಮಾತುಗಳಿಂದ ನಗಿಸುತ್ತಾರೆ.ನಾಯಕಿಯಾಗಿ ಭಾರತಿಯವರದು ಓಕೆ ಎನ್ನುವಂತಹ ಅಭಿನಯ. ಇನ್ನುಳಿದ ತಾರಾಗಣದಲ್ಲಿ ಮುನಿ, ನರೇಂದ್ರಬಾಬು ಮುಂತಾದವರ ಪಾತ್ರೋಚಿತ ಅಭಿನಯ ನೀಡಿದ್ದಾರೆ.
ಮನೆ ಮಂದಿಯಲ್ಲ, ದೈವ ಭಕ್ತ ಕುಟುಂಬವೆಲ್ಲಾ ನೋಡಬಹುದಾದ ಜಯಮ್ಮನ ಮಗ ದುನಿಯಾ ವಿಜಯ್  ಅಭಿನಯದ ಉತ್ತಮ ಚಿತ್ರವಾದರೂ ಅವರ ಅಭಿಮಾನಿಗಳು ಅವರ ಎಂದಿನ ಸಾಹಸಮಯ ಹೊಡೆದಾಟಗಳನ್ನ ನಿರೀಕ್ಷಿಸಿ ಸಿನಿಮಾಕ್ಕೆ ಹೊರಟರೆ ಸ್ವಲ್ಪ ನಿರಾಸರಾಗಬಹುದೇನೋ..?

No comments:

Post a Comment