Pages

Sunday, November 10, 2013

ಜಿಂಕೆಮರಿ-ವಿಮರ್ಶೆ.



ಇತ್ತೀಚಿಗೆ ಲೂಸ್ ಮಾದ ಯೋಗೀಶ್ ಚಿತ್ರಗಳು ಸುಮಾರಷ್ಟು ಬಂದವಾದರೂ ಯಾವುದೂ ಗಮನಸೆಳೆಯುವ ಹಾಗಿರಲಿಲ್ಲ. ಜಿಂಕೆ ಮರಿ ಕೂಡ ಅದೇ ಸಾಲಿನ ಮತ್ತೊಂದು ಚಿತ್ರ ಎನ್ನಬಹುದು. ಚಿತ್ರದಲ್ಲಿ ವಿಶೇಷವನ್ನಾಗಲಿ, ವಿಭಿನ್ನತೆಯನ್ನಾಗಲಿ ಹುಡುಕಲು ಹೊರಟರೆ ಅದೇ ಒಂದು ಅಪರಾಧವಾದೀತು.ಯಾಕೆಂದರೆ ಜಿಂಕೆಮರಿ ಹೇಳಿಕೇಳಿ ತೆಲುಗು ಚಿತ್ರ ಬಿಂದಾಸ್ ನ  ರೀಮೇಕು. ಹಾಗಾಗಿ ಒಂದು ಸರಳಾತಿಸರಳ ಕಥೆಗೆ ಒಂದಷ್ಟು ಹೊಡೆದಾಟ  ಬಡಿದಾಟ ಹಾಡು ಕುಣಿತ ಒಂದಷ್ಟು ಹಾಸ್ಯ ದೃಶ್ಯಗಳನ್ನು ಸೇರಿಸಲಾಗಿದೆ. ಇಡೀ ಚಿತ್ರ ಏಕಮುಖವಾಗಿ ಸಾಗುತ್ತದೆ. ಮುಂದೇನಾಗುತ್ತದೆ ಎಂಬುದನ್ನು ಸುಮ್ಮನೆ ಊಹಿಸುತ್ತಾ ಹೋಗಬಹುದು. ಹಾಗೆ ಮಧ್ಯದಲ್ಲಿ ಎದ್ದು ಹೊರಹೋಗಿ  ಸ್ವಲ್ಪ ಹೊತ್ತು ಇದ್ದು ಬಂದರೂ ನಮಗೇನೂ ಮಿಸ್ ಆದಂತ ನಿಸುವುದಿಲ್ಲವೆಂದರೆ ನಿರ್ದೇಶಕರು ಬೇಸರಿಸಕೊಳ್ಳಬಾರದು.
ಆದಾಗ್ಯೂ ಚಿತ್ರದಲ್ಲಿನ ಕಥೆ ಅಥವಾ ಕಥೆಯ ಎಳೆ ಇಂತಿದೆ. ಎರಡು ಕುಟುಂಬಗಳು...ಅವುಗಳ ನಡುವೆ ದ್ವೇಷ. ಇಲ್ಲಿ ರಾಜಕೀಯವೂ ಇಣುಕಿದೆ. ನಾಯಕ ಈ ಎರಡು ಕುಟುಂಬದಲ್ಲಿ ಒಂದು ಕುಟುಂಬದವನು...ಕಾರಣಾಂತರದಿಂದ ಮನೆಯಿಂದ ಹೊರಬೀಳುತ್ತಾನೆ. ಆದಂತಹ ದೊಡ್ಡ ಕಾರಣವಲ್ಲ ಎಂದು ನೀವನ್ನಬಹುದು. ಆದರೆ ನಿರ್ದೇಶಕರು ಅದೇ ಬಹುದೊಡ್ಡ ಕಾರಣ ಎನ್ನುವುದಕ್ಕೆ ನಿದರ್ಶನ ಕೂಡ ಕೊಡುತ್ತಾರೆ. ಅಲ್ಲಿಂದ ಹೊರಬಿದ್ದವನು  ಇನ್ನೊಂದು ಕುಟುಂಬಕ್ಕೆ ಕಾಲಾಕುತ್ತಾನೆ...ಅವನ ಮುಖ್ಯೋದ್ದೇಶವೇ ಆ ಎರಡು ಕುಟುಂಬಗಳನ್ನು ಒಂದು ಮಾಡುವುದು. ಅಂತ್ಯ ನಿಮಗೆಲ್ಲಾ ಗೊತ್ತಾಗಿರಬೇಕು...ಆದರೂ ದ್ವೇಷದ ಕಾರಣ, ಅದನ್ನು ನಾಯಕ ತೊಡೆದು



ಹಾಕಿ ಎರಡು ಕುಟುಂಬಗಳ ನಡುವೆ ಸಾಮರಸ್ಯ ಹುಟ್ಟುಹಾಕುವ ಪರಿಗಳನ್ನೂ ತಿಳಿದುಕೊಳ್ಳೋಣ ಎನಿಸಿದರೆ ಒಮ್ಮೆ ಚಿತ್ರಮಂದಿರದತ್ತ ಹೆಜ್ಜೆ ಹಾಕಬಹುದು. ಇದೆ ಕಥೆಯ ಸಿನಿಮಾವನ್ನು ನೀವೀಗಾಗಲೇ ಬೇರೆ ಭಾಷೆಗಳಲ್ಲಿ ನಮ್ಮದೇ ಕನ್ನಡದಲ್ಲಿ ಬೇರೆ ಬೇರೆ ಕಲಾವಿದರ ಅಭಿನಯದಲ್ಲಿ ಸುಮಾರಷ್ಟು ನೋಡಿರಬಹುದು. ಆದರೂ ನಿರ್ದೇಶಕ ನವೀನ ಕುಮಾರ್. ತೆಲುಗು ಚಿತ್ರದ ಕಥೆ ಚಿತ್ರಕಥೆಯನ್ನು ಒಂದಿಷ್ಟು ಬದಲಾಯಿಸದೆ ಹಾಗೆ ಕನ್ನಡೀಕರಿಸಿದ್ದಾರೆ. ಅವರು ನಾಯಕನ ಹೆಸರನ್ನೂ ಬದಲಾಯಿಸುವ ಗೋಜಿಗೆ ಹೋಗುವುದಿಲ್ಲ. ಅಲ್ಲಿನ ನಾಯ್ಡು ಕುಟುಂಬ ಇಲ್ಲಿ ಗೌಡರ ಕುಟುಂಬವಾಗಿರುವುದೇ ನಮ್ಮ ನೆಲದ ಸೊಗಡಿಗಾಗಿ ಮಾಡಿಕೊಂಡ ಬದಲಾವಣೆ. ಹೊಡೆದಾಟಗಳು ಮಾಮೂಲಿಯಂತಿವೆ. ಒದೆ ತಿನ್ನುವ ಖಳರಿಗೇನೂ ಕಮ್ಮಿಯಿಲ್ಲ. ಯೋಗೀಶ್ ಹೊಡೆದಾಟಗಳಲ್ಲಿ ಮಿಂಚಿದ್ದಾರೆ. ಹಾಗೆ ತಮ್ಮದೇ ಶೈಲಿಯಲ್ಲಿ ಸಂಭಾಷಣೆ ಒಪ್ಪಿಸಿ ಶಿಳ್ಳೆ ಗಿಟ್ಟಿಸುತ್ತಾರೆ. ನಾಯಕಿ ಸೋನಿಯಾ ಗೌಡ, ಅವಿನಾಶ್ , ಶರತ್ ಲೋಹಿತಾಶ್ವ, ರಮೇಶ್ ಭಟ್, ಜೈಜಗದೀಶ್ ಎಲ್ಲರದೂ ಸಾದಾರಣ ಪಾತ್ರವಾದ್ದರಿಂದ ಅಭಿನಯದಲ್ಲಿ ಹೊಸತನ್ನೇನೂ ನಿರೀಕ್ಷಿಸುವ ಹಾಗಿಲ್ಲ.ವೀನಸ್ ಮೂರ್ತಿಯವರ ಛಾಯಾಗ್ರಹಣ,ಸಾಯಿ ಕಾರ್ತಿಕ್ ಸಂಗೀತ ತೆಗೆದುಹಾಕುವ ಹಾಗಿಲ್ಲ. ಎರಡೂವರೆ ಗಂಟೆಯ ಈ ಸಿನಿಮಾ ಬೋರಾಗುವದಿಲ್ಲವಾದ್ದರಿಂದ ಒಮ್ಮೆ  ನೋಡಬಹುದು.
ಆದರೂ ಇಷ್ಟು ಸರಳ ಕಥೆಯನ್ನೂ ಸೃಷ್ಟಿಸಲಾಗದೆ  ರೀಮೇಕ್ ಮಾಡಿರುವುದನ್ನು ಬೌದ್ದಿಕ ಬಡತನ ಎನ್ನಬಹುದೇ ...ನಿರ್ದೇಶಕ/ನಿರ್ಮಾಪಕರೇ ಉತ್ತರಿಸಬೇಕು.

No comments:

Post a Comment