Pages

Sunday, November 10, 2013

ಪಗಡೆ:



ಬಾಲಿವುಡಿನಲ್ಲಿ ತಮಿಳಿನಲ್ಲಿ ಸಾಮಾನ್ಯವಾಗಿ ಕಡಿಮೆ ವೆಚ್ಚದ ಚಿತ್ರಗಳೆಂದರೆ ಒಳ್ಳೆಯ ಕಥೆ/ನಿರೂಪಣೆಯಿರುವ ಚಿತ್ರಗಳು ಎನ್ನಬಹುದು. ಎ ವೆಡ್ನೆಸ್ ಡೆ, ಭೇಜಾ ಪ್ರೈ, ಪಿಜ್ಜಾ, ಅಳಗಿರಿ ಸಮಿಯನ್ ಕುದುರೈ, ಎನ್ಗೆಯಂ ಎಪ್ಪೋದಂ ಮುಂತಾದವು ಇದಕ್ಕೆ ಗಟ್ಟಿಯಾದ ಉದಾಹರಣೆಗಳು ಎನ್ನಬಹುದು. ಆದರೆ ಕನ್ನಡದಲ್ಲಿ ಲೋ ಬಜೆಟ್ ಚಿತ್ರಗಳೆಂದರೆ ಜಾಳುಜಾಳು ನಿರೂಪಣೆಯ, ಟಿವಿ ಉಪಗ್ರಹ ಹಕ್ಕಿಗಾಗಿ ತಯಾರಿಸಿದ ಕೀಳು ಅಭಿರುಚಿಯ ಸಂತೆಗೆ ಮೂರು ಮೊಳ ತರಹದ ಚಿತ್ರಗಳು ಎನ್ನುವ ಮಾತೊಂದಿದೆ. ಚಿತ್ರದ ಬಜೆಟ್ ಕಡಿಮೆಯಿದ್ದಾಗ ಚಿತ್ರಕರ್ಮಿ ಅದರ ಕಥೆಗೆ, ಚಿತ್ರಕಥೆಗೆ ಬುದ್ದಿವಂತಿಕೆಯನ್ನು ಹೆಚ್ಚು ಖರ್ಚು ಮಾಡಬೇಕಾಗುತ್ತದೆ.
ಪಗಡೆ ಈ ಎರಡೂ ದೃಷ್ಟಿಯಲ್ಲೂ ಕಡಿಮೆ ವೆಚ್ಚದ ಚಿತ್ರವೇ. ಗೃಹಮಂತ್ರಿಯ ಮಗನನ್ನು ಹತ್ಯೆಗೈಯಲು ಸೌಹಾರ್ದ ನಗರವೆಂಬ ಕಾಲ್ಪನಿಕ ನಗರಕ್ಕೆ ಬರುವ ಪಾಕಿಸ್ತಾನಿ ಜೆಹಾದಿಯೊಬ್ಬ ಅಲ್ಲಿನ ಜನರ ಪ್ರೀತಿ ಸೌಹಾರ್ದತೆಗೆ ಕರಗಿಹೋಗಿ ಮನಪರಿವರ್ತನೆಗೊಂಡು ತನ್ನ ಹೇಯ ಕೃತ್ಯವನ್ನು ಕೈಬಿಡುವ ಕಥೆ ಹೊಂದಿರುವ ಚಿತ್ರ ಪಗಡೆ. ಆದರೆ ನಿರೂಪಣೆ ಮಾತ್ರ ಬಾಲಿಶ. ಪಾತ್ರಗಳ ಸೃಷ್ಟಿ ನಗು ತರಿಸುತ್ತಲ್ಲದೆ ಒಬ್ಬ ನಿರ್ದೇಶಕ ಪ್ರೇಕ್ಷಕರನ್ನು ಕಡೆಗಣಿಸಿರುವ ರೀತಿ ನೋಡಿ ಕೋಪವೂ ಬರುತ್ತದೆ. ಚಿತ್ರವೆಂದರೆ ಮಕ್ಕಳಾಟ ಎಂದುಕೊಂಡಂತಿದೆ ನಿರ್ದೇಶಕರು. ಹಾಗಾಗಿಯೇ ದೃಶ್ಯಗಳನ್ನು ಇಷ್ಟ ಬಂದಹಾಗೆ ಸೃಷ್ಟಿ ಮಾಡಿದ್ದಾರೆ. ಭಯೋತ್ಪಾದನೆಯನ್ನು ಕಥಾವಸ್ತುವನ್ನಾಗಿ ತೆಗೆದುಕೊಂಡಾಗ ಅದಕ್ಕೆ ಬೇಕಾದ ಪೂರ್ವ ಸಿದ್ಧತೆ ಬಗ್ಗೆ ಕಿಂಚಿತ್ತೂ ತಲೆಕೆಡಿಸಿಕೊಂಡಿಲ್ಲ. ಹಾಸ್ಯ ದೃಶ್ಯಗಳು ಅಪಹಾಸ್ಯ ದೃಶ್ಯಗಳಾಗಿವೆ. ಎಲ್ಲಾ ಪಾತ್ರಗಳೂ ತಮಗಿಷ್ಟ ಬಂದ ಹಾಗೆ ವರ್ತಿಸುತ್ತವೆ, ಮಾತನಾಡುತ್ತವೆ. ಚಿತ್ರದ ಮೊದಲರ್ಧವಂತೂ ಅಯೋಮಯ. ಎರಡನೇ ಭಾಗದಲ್ಲಿ ಸ್ವಲ್ಪ ಕಥೆ ಹೇಳಲು ಪ್ರಯತ್ನಿಸುವ ನಿರ್ದೇಶಕರು ಅದರಲ್ಲೂ ಪಾಸ್ ಮಾರ್ಕ್ಸ್ ಗಳಿಸಿಲ್ಲ. ಚಿತ್ರದ ನಾಯಕನ ಪಾತ್ರ ವಹಿಸಿರುವ ವಿಶ್ವಾಸ್ ಭಾರದ್ವಾಜ್ ರದು ಎಲ್ಲಾ ಕಡೆಯಲ್ಲೂ ಒಂದೇ ಭಾವ. ಮುಖ ಗಂಟಿಕ್ಕಿಕೊಳ್ಳುವುದು ಇಲ್ಲ ನಗುವುದು. ನಾಯಕಿ ಆಗಾಗ ನಕ್ಕು ಅವರೂ ಗಂಟಿಕ್ಕಿ ಕೊಳ್ಳುತ್ತಾರೆ. ಇನ್ನು ನಟ ಧರ್ಮರದು ತೀರಾ ಬಾಲಿಶ ಪಾತ್ರ.
ಕ್ರಿಶ್ ಜೋಷಿಯವರ ಚಿತ್ರಕಥೆ ಸಂಭಾಷಣೆಯಲ್ಲಿ ಹುರುಳಿಲ್ಲ. ಹಿನ್ನೆಲೆ ಸಂಗೀತ ಮತ್ತು ಸಂಗೀತ ಚಿತ್ರದ ಅಧಪತನಕ್ಕೆ ಇನ್ನಷ್ಟು ಕಾರಣವಾಗಿದೆ. ಛಾಯಾಗ್ರಹಣ ಸಂಕಲನ  ಸಾದಾರಣ ಮಟ್ಟಕ್ಕಿಂತಲೂ ಒಂದು ಮೆಟ್ಟಿಲು ಕೆಳಗಿವೆ.
ಕಡಿಮೆ ವೆಚ್ಚದ ಚಿತ್ರವೆಂದರೆ ಮೂಗುಮುರಿಯುವ ಚಿತ್ರಗಳ ಸಾಲಿಗೆ ಸೇರ್ಪಡೆಯಾಗುವ ಪಗಡೆ ಚಿತ್ರವು ಪ್ರೇಕ್ಷಕರ ಸಮಯ, ಹಣಕ್ಕೆ ಕವಡೆ ಕಾಸಿನ ಕಿಮ್ಮತ್ತು ಕೊಡದ ಚಿತ್ರ ಎನ್ನಬಹುದು.

No comments:

Post a Comment