Pages

Sunday, November 10, 2013

ಮಂಗನ ಕೈಲಿ ಮಾಣಿಕ್ಯ

ಇಂಥ ಚಿತ್ರದ ಶೀರ್ಷಿಕೆ ಇಟ್ಟು ಸಿನಿಮಾ ಮಾಡುವಾಗ ಸ್ವಲ್ಪ ಯಾಮಾರಿದರೂ ನಿರ್ದೇಶನದಲ್ಲಿ ಎಡವಿದರೂ ಅದೇ ನಿರ್ದೇಶಕನನ್ನು ಬೈಯ್ಯುವ ಮೊದಲ ಬೈಗುಳಾಗಬಹುದೇನೋ..?
ನಗಿಸುವುದು ಬಹಳ ಕಷ್ಟ. ಅದಕ್ಕೆ ಉತ್ತಮ ಕಥೆ, ಅದಕ್ಕೊಪ್ಪುವ ಕಲಾವಿದರು ಮತ್ತು ಹಾಸ್ಯಚಿತ್ರಣಕ್ಕೊಪ್ಪುವ ನಿರ್ದೇಶನ ಮೂರು ಅತ್ಯಗತ್ಯ.ಮೊದಲೆರಡರ ವಿಷಯದಲ್ಲಿ ನಿರ್ದೇಶಕ ರಾಜೇಂದ್ರ ಕಾರಂತ್ ಗೆದ್ದಿದ್ದಾರೆ. ಚಿತ್ರಕ್ಕೆ ಬೇಕಾದ ಕಥೆಯನ್ನು ವುಡಿ ಅಲೆನ್ ಚಿತ್ರ ಹಾಲಿವುಡ್ ಎಂಡಿಂಗ್ ಚಿತ್ರದಿಂದ ಎರವಲು ಪಡೆದಿದ್ದಾರೆ. ಸಿನಿಮಾಕ್ಕೆ ಅತ್ಯಗತ್ಯವಾದ ಪಾತ್ರಧಾರಿಗಳಾಗಿ ರಮೇಶ್, ರಘು ರಂಗಾಯಣ, ರವಿಶಂಕರ್ ಅವರುಗಳನ್ನು ಆಯ್ಕೆ ಮಾಡಿದ್ದಾರೆ. ಆದರೆ ಮೂರನೆಯ ವಿಷಯವಾದ ನಿರ್ದೇಶನ..? ಮೊದಲ ಬಾರಿಗೆ ಚಿತ್ರ ನಿರ್ದೇಶನ ಮಾಡಿರುವ ರಾಜೇಂದ್ರ ಕಾರಂತ್ ಎಡವಿರುವುದು ಅಲ್ಲೆ.
ಒಬ್ಬ ನಿರ್ದೇಶಕ  ಕುರುಡನಾದಾಗಲೂ ಚಿತ್ರ ನಿರ್ದೇಶನ ಮಾಡಲು ಹೋದರೇ ಏನಾಗುತ್ತದೆ..? ಇದಿಷ್ಟನ್ನು ಹೇಳಿದರೇ ಪೂರ್ತಿ ಕಥೆಯನ್ನು ಹೇಳಿದಂತೆಯೇ. ಚಿತ್ರರಂಗ ಕುರಿತಂತೆ ಮೊನ್ನೆ ಮೊನ್ನೆ ರಾಧನ ಗಂಡ ಚಿತ್ರ ಬಂದಿತ್ತು. ಅದಕ್ಕೂ ಮುನ್ನ ಉಪೇಂದ್ರರ ಎ, ಶ್ ಚಿತ್ರಗಳೂ ಚಿತ್ರದೊಳಗೆ ಚಿತ್ರರಂಗವನ್ನು ಆಧರಿಸಿದ್ದವು.ಹೀಗೆ ಸುಮಾರಷ್ಟು ಚಿತ್ರಗಲು ಬಂದಿವೆಯಾದರೂ ಸಿನಿಮಾಮಂದಿಯನ್ನು, ಚಿತ್ರರಂಗದ ಬಗ್ಗೆ ಗಂಭೀರವಾಗಿ ತೋರಿಸದೇ ಅದನ್ನು ತಮಾಷೆಯ ವಸ್ತುವನ್ನಾಗಿ ಬಳಸಿಕೊಂಡ ಉದಾಹರಣೆಗಳೇ ಜಾಸ್ತಿ.ಮಂಗನ ಕೈಲಿ ಮಾಣಿಕ್ಯ ಚಿತ್ರದ ಕಥಾವಸ್ತುವೇ ಹಾಗಿದೆ. ಒಬ್ಬ ನಿರ್ಮಾಪಕ ಮತ್ತೊಬ್ಬ ನಿರ್ದೇಶಕನೊಂದಿಗೆ ಸವಾಲು ಹಾಕಿ, ಸವಾಲಿಗಾಗಿ ಮತ್ತೊಬ್ಬ ನಿರ್ದೇಶಕನನ್ನು ತನ್ನ ಚಿತ್ರಕ್ಕೆ ಆಯ್ಕೆ ಮಾಡುತ್ತಾನೆ. ಆದರೆ ಎಲ್ಲವೂ ಸರಿಹೋಗಿ ಸಿನಿಮಾ ಪ್ರಾರಂಭವಾಗುವಷ್ಟರಲ್ಲಿ ಚಿತ್ರನಿರ್ದೇಶಕ ಕುರುಡಾಗುತ್ತಾನೆ. ಆ ನಂತರ ತನ್ನ ಕುರುಡುತನವನ್ನು ಮುಚ್ಚಿಟ್ಟು ಸಹಾಯಕನ ಸಹಾಯದಿಂದ ಚಿತ್ರ ನಿರ್ದೇಶನ ಮಾಡುವ ಸಾಹಸಕ್ಕೆ ಇಳಿಯುತ್ತಾನೆ..ಮುಂದಾಗುವ ಅನಾಹುತಗಳು, ಗೊಂದಲಗಳು ಒಂದಷ್ಟು ಹಾಸ್ಯ ಪ್ರಸಂಗಗಳಿಗೆ ಎಡೆ ಮಾಡಿಕೊಡುತ್ತವೆ.
ಹಾಗಾದರೇ ಇಡೀ ಚಿತ್ರ ಹಾಸ್ಯ ಚಿತ್ರವಾ..? ಖಂಡಿತ ಇಲ್ಲ. ಪ್ರಾರಂಭದಲ್ಲಿ ಸ್ವಲ್ಪ ಹೊತ್ತು ನಗೆಯುಕ್ಕಿಸಲು ಯಶಸ್ವಿಯಾದರೂ ಆ ನಂತರ ಗಂಭೀರವಾಗಿ ಪರಿವರ್ತನೆಯಾಗುತ್ತದೆ. ಕೆಲವು ಘಟನೆಗಳು ನಗೆಯುಕ್ಕಿಸುವ ಪ್ರಯತ್ನ ಪಡುತ್ತವೆಯಾದರೂ ಯಶಸ್ವಿಯಾಗುವುದಿಲ್ಲ. ಅದಕ್ಕೆ ಕಾರಣ ನಿರ್ದೇಶಕರು ಮತ್ತು ಚಿತ್ರಕಥೆ. ಚಿತ್ರದಲ್ಲಿ ನಗೆಯಷ್ಟೇ ಅಲ್ಲದೇ ಸ್ವಲ್ಪ ಗಂಭೀರ ವಸ್ತುವೂ ಇರಲಿ ಎಂದೋ ಏನೋ..ಎರೆಡೆರೆಡು ಪ್ಯಾಥೋ ಹಾಡುಗಳನ್ನು ಚಿತ್ರದಲ್ಲಿಟ್ಟಿದ್ದಾರೆ. ಉಳಿದ ಹಾಡುಗಳು ಚಿತ್ರಕ್ಕೆ ಸಹಾಯ ಮಾಡಿಲ್ಲ. ಹಾಗೆಯೇ ಸಂಭಾಷಣೆ ಕೆಲವು ಕಡೆ ಚುರುಕಾಗಿದೆಯಾದರೂ ಉಳಿದೆಡೆ ಸ್ವಲ್ಪ ಸಭ್ಯತೆ ಮೀರಿದೆ. ಹಾಸ್ಯ ಚಿತ್ರಗಳಲ್ಲಿ ಸಂಭಾಷಣೆ ಮತ್ತು ದೃಶೀಕರಣ ಪ್ರಮುಖ ಪಾತ್ರವಹಿಸುತ್ತದೆ. ಆದರೆ ಈ ಚಿತ್ರದಲ್ಲಿ ಮೊದಲನೆಯದು ಸ್ವಲ್ಪ ವರ್ಕೌಟ್ ಆಗಿದೆಯಾದರೂ ಎರಡನೆಯದು ಪೇಲವವಾಗಿದೆ.
ಹಾಲಿವುಡ್ ಚಿತ್ರಗಳನ್ನು ನಮ್ಮ ಭಾಷೆಗೆ ರೂಪಾಂತರಿಸುವಾಗ ಸಾಕಷ್ಟು ಕೆಲಸ ಮಾಡಬೇಕಾಗುತ್ತದೆ. ಅಲ್ಲಿನ ಹಾಸ್ಯ ತೀರಾ ಸರಳವಾದದ್ದು. ಆದರೆ ನಮಗೆ ಅಷ್ಟೇ ಆದರೆ ನಗೆ ಬರುವುದಿಲ್ಲ. ಅದಕ್ಕೆ ಹಿನ್ನೆಲೆ ಮುನ್ನೆಲೆ ಜೊತೆಗೆ ವಸ್ತು ವಿಷ್ಯ ಎಲ್ಲವೂ ಗಾಢವಾಗಿ ಬೇಕಾಗುತ್ತದೆ. ನಮ್ಮ ಭಾರತೀಯರ ಮನಸ್ಥಿತಿಯೇ ಅಂತಹದ್ದು. ಉದಾಹರಣೆಗೆ ಹಾಲಿವುಡ್ ಚಿತ್ರ ಜ್ಯಾಕ್ ಅಂಡ್ ಮಿರಿ ಮೇಕ್ ಎ ಪೊರ್ನ್ ಎನ್ನುವ ಚಿತ್ರದಲ್ಲಿರುವಂತೆಯೇ ಈ ಚಿತ್ರದಲ್ಲೂ ಒಂದು ದೃಶ್ಯವಿದೆ. ಚಿತ್ರಗಳಿಗೆ ಹೆಸರಿಡಲು ಹೆಸರುಗಳನ್ನು ಸೂಚಿಸುವ ದೃಶ್ಯ್ವಾದರೂ ಅಲ್ಲಿ ನಗೆಯುಕ್ಕಿಸುವಷ್ಟು ಇಲ್ಲಿ ನಗೆ ತರಿಸುವುದಿಲ್ಲ.
ರಾಜೇಂದ್ರ ಕಾರಂತ್ ತಮ್ಮ ಮೊದಲ ನಿರ್ದೇಷನದ ಚಿತ್ರ ಉತ್ತಮ ಕಥೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಅದಕ್ಕೆ ಹಾಸ್ಯ ಚಿತ್ರದ ಲೇಪ ಕೊಡುವಲ್ಲಿ, ಸಂಪೂರ್ಣ ಹಾಸ್ಯಮಯ ಚಿತ್ರವನಾಗಿಸಲು ಬೇಕಾಗಿದ್ದ ಚಿತ್ರಕಥೆಯಲ್ಲಿ ಸೋತಿದ್ದಾರೆ.
ತಮ್ಮ ಮುಂದಿನ ಚಿತ್ರದಲ್ಲಾದರೂ ಅವರು ನಿರ್ದೇಶನ ಮತ್ತು ಚಿತ್ರಕಥೆಯ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡರೇ ಉತ್ತಮ ಚಿತ್ರ ನೀಡುವಲ್ಲಿ ಯಶಸ್ವಿಯಾಗಬಹುದು.
ರಾಜೇಶ್ ರಾಮಾನಾಥರ ಸಂಗೀತ, ಜೆಜಿಕೃಷ್ಣರ ಛಾಯಾಗ್ರಹಣದ ಬಗ್ಗೆ ಸಾದಾರಣ ಎನ್ನಬಹುದಷ್ಟೇ.ಒಟ್ಟಿನಲ್ಲಿ ಇಡೀ ಚಿತ್ರದ ತುಂಬಾ ಹಾಸ್ಯವನ್ನೇ ನಿರೀಕ್ಶಿಸಿ ಚಿತ್ರಮಂದಿರದ ಒಳಗೆ ಕಾಲಿಕ್ಕಿದರೇ ನಿರಾಶೆಯಾಗಬಹುದೇನೋ.. ಸುಮ್ಮನೆ ಹೋಗಿ ಕುಳಿತರೇ ಒಂದಷ್ಟಂತೂ ಮನರಂಜನೆಯನ್ನು ಮಂಗನಕೈಲಿ ಮಾಣಿಕ್ಯ ಕೊಡುತ್ತದೆ ಎಂದು ಧೈರ್ಯವಾಗಿ ಹೇಳಬಹುದು.

No comments:

Post a Comment