Pages

Sunday, November 10, 2013

ರಾಧನಗಂಡ

ಸೂಪರ್ ಸ್ಟಾರ್ ರಜನಿಕಾಂತ್ ಚಿತ್ರಗಳನ್ನು ನೀವು ಗಮನಿಸಬಹುದು. ಅದೇ ತೆರನಾಗಿ ಕೋಮಲ್ ಕುಮಾರ್ ರವರ ಹೆಸರು ತೆರೆಯ ಮೇಲೆ ಮೂಡುತ್ತದೆ. ಹಾಡೊಂದರಲ್ಲಿ ರಜನಿಕಾಂತ್, ಚಾರ್ಲಿಚಾಪ್ಲಿನ್, ಜಾಕಿಚಾನ್ ರವರನ್ನು ಕೋಮಲ್ ಗೆ ಹೋಲಿಸಲಾಗುತ್ತದೆ. ಇಷ್ಟಾದ ಮೇಲೆ ನಿಮಗೆ ಗೊತ್ತಾಗಿರಬೇಕು ಕೋಮಲ್ ಯಾವದಾರಿಯಲ್ಲಿ ಸಾಗುತ್ತಿದ್ದಾರೆ ಎಂಬುದು. ನಾಯಕನಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ಆನಂತರ ಹಾಸ್ಯನಟನಾಗಿ ಬೆಳೆದ ಕೋಮಲ್ ಕುಮಾರ್ ಮತ್ತೆ ನಾಯಕನಾಗಿ ಗೋವಿಂದಾಯ ನಮಃ ಚಿತ್ರದಲ್ಲಿ ಮಿಂಚಿದ್ದರು. ಈಗ ರಾಧನಗಂಡ ಚಿತ್ರದಲ್ಲಿ ನಾಯಕಿಯ ರಾಧಿಕಾಳ ಗಂಡನ ಪಾತ್ರದಲ್ಲಿ ನಟಿಸಿದ್ದಾರೆ.
ಚಿತ್ರದ ಕಥೆಯ ಮೊದಲಾರ್ಧ ಅಚ್ಚುಕಟ್ಟಾಗಿದೆ. ನಿರುದ್ಯೋಗಿ ನಾಯಕ ಕೃಷ್ಣ ಮೈತುಂಬಾ ಸಾಲಮಾಡಿಕೊಂಡಿರುತ್ತಾನೆ. ಆತ ಪ್ರೀತಿಸಿದ ಹುಡುಗಿಯನ್ನು ಮದುವೆಯಾಗಲಾರದೆ ಫೋನಿನಲ್ಲೇ ಹರಸುವಷ್ಟು ಒಳ್ಳೆಯ ಮನಸ್ಸಿನವನು. ಆದರೆ ಇಂತಹ ನಾಯಕ ಕೃಷ್ಣನನ್ನು ಬಿಡುವುದಾದರೂ ಹೇಗೆ..? ಹಾಗಾಗಿ ರಾಧಿಕಾ ಮನೆ ಬಿಟ್ಟು ಓಡಿ ಬಂದು ಕೃಷ್ಣನ ತೆಕ್ಕೆಗೆ ಬೀಳುತ್ತಾಳೆ. ಕೃಷ್ಣ ಚಿತ್ರರಂಗದಲ್ಲಿ ಕೆಲಸ ಮಾಡುವ ಗೆಳೆಯನ ಸಹಾಯ ಕೋರಿದಾಗ,ಆತ ಅವರಿಬ್ಬರಿಗೂ ಮದುವೆ ಮಾಡಿಸುತ್ತಾನೆ. ಹಾಗೆ ಒಂದು ದಿನದ ಮಟ್ಟಿಗೆ ಚಿತ್ರದಲ್ಲಿನ ಚಿತ್ರದ ನಾಯಕಿಯ ಕೋಣೆಯನ್ನು ಕೃಷ್ಣ ರಾಧಿಕಾಗೆ ಬಿಟ್ಟುಕೊಡುತ್ತಾನೆ. ಅಲ್ಲಿಂದ ಪ್ರಾರಂಭವಾಗುತ್ತದೆ ಚಿತ್ರದ ನಿಜವಾದ ಕಥೆ. ರಾಧಿಕಾಳನ್ನು ಅನಿವಾರ್ಯ ಕಾರಣಗಳಿಂದ ಆ ಚಿತ್ರಕ್ಕೆ ನಾಯಕಿಯನ್ನಾಗಿ ಆಯ್ಕೆ ಮಾಡುತ್ತಾರೆ. ದುಡ್ಡಿಗಾಗಿ ಇಬ್ಬರೂ ಒಪ್ಪಿಕೊಳ್ಳುತ್ತಾರೆ. ಆದರೆ ಬಣ್ಣದಲೋಕದ ಬೆರಗು ಸೊಬಗು ದಂಪತಿಗಳ ನಡುವಿನ ಗೋಡೆಗೆ ಕಾರಣವಾಗುತ್ತದೆ. ನಿರ್ದೇಶಕನ ಕಥೆಗೆ ನಾಯಕಿ ಮರುಳಾಗುತ್ತಾಳೆ. ಅದನ್ನೇ ಕೃಷ್ಣ ತಪ್ಪು ತಿಳಿಯುತ್ತಾನೆ. ಅವಳಿಂದ ದೂರಾಗಿ ಅವರಿಬ್ಬರಿಗೂ ಬುದ್ದಿ ಕಲಿಸುವ ಛಲ ತೊಡುತ್ತಾನೆ. ಇಲ್ಲಿಯವರೆಗೆ ಕಥೆಯೆಂಬ ಹಳಿಯ ಮೇಲೆಯೇ ಸಾಗುತ್ತಿದ್ದ ರಾಧನಗಂಡ ಚಿತ್ರ ಮುಂದಕ್ಕೆ ಹಳ್ಳಿ ತಪ್ಪುತ್ತದೆ. ಚಿತ್ರರಂಗದ ವಾಸ್ತವಂಶಗಳಿಂದಾಗಿ ಗಮನಸೆಳೆದಿದ್ದ ಚಿತ್ರ ತದನಂತರ ತೀರಾ ಸಿನಿಮೀಯವಾಗುತ್ತದೆ. ಯಾವುದಕ್ಕೂ ಬೇಡದ ಒಳ್ಳೆಯ ಗಂಡನಾಗಿದ್ದ ಕೃಷ್ಣ ದ್ವಿತೀಯಾರ್ಧದ ನಂತರ ರಿಯಲ್ ಹೀರೋ ಆಗುತ್ತಾನೆ.
ನಿರ್ದೇಶಕನನ್ನು ಬಗ್ಗು ಬಡಿದು ಅವನ ಕೆಲಸವನ್ನು ಮಣ್ಣು ಮಾಡಿ ಆ ಮೂಲಕ ತನ್ನ ಹೆಂಡತಿಗೆ ನಾನೇ ಹೆಚ್ಚು ಎಂದು ತೋರಿಸಲು ಹೊರಡುತ್ತಾನೆ. ಅವನು ಮಾಡುವ ಕೆಲಸವೆಲ್ಲಾ ಸರಿಯಾ..ನ್ಯಾಯಯುತವಾ...ಅದೆಲ್ಲಾ ಕೇಳಬೇಡಿ. ಇಲ್ಲಿ ಕೋಮಲ್ ಹೀರೋ. ಹಾಗಾಗಿ ಕೋಮಲ್ ಸರಿಯಾಗಿಯೇ ಮಾಡುತ್ತಾರೆ ಎಂದುಕೊಂಡು ಚಿತ್ರ ನೋಡಬೇಕಾಗುತ್ತದೆ. ಆಮೇಲಿನದೆಲ್ಲಾ ಕೋಮಲ್ ಮಯ.
ಒಟ್ಟಾರೆಯಾಗಿ ನೋಡುವುದಾದರೆ ರಾಧನಗಂಡ ಚಿತ್ರದಲ್ಲಿ ಚಂದನೆಯ ಕಥೆಯಿದೆ.ಆದರೆ ಆ ಕಥೆಯನ್ನು ತೀರಾ ಸಿನಿಮೀಯ ಮಾಡಲು ಹೋಗಿ, ಮಸಾಲೆ ಅಂಶಗಳನ್ನು ತುಂಬಲು ಹೋಗಿ ಚಿತ್ರದ ಕಥೆಯ ಭಾವತೀವ್ರತೆ ಕಡಿಮೆಯಾಗಿದೆ. ದ್ವಿತೀಯಾರ್ಧದಲ್ಲಿ ಬರುವ ಹೊಡೆದಾಟಗಳು, ಖಳನಾಯಕ ಎಲ್ಲವೂ ಸಿನೆಮಾದ ದೃಷ್ಟಿಯಿಂದ, ಅದರಲ್ಲಿನ ಕಥೆಯ ದೃಷ್ಟಿಯಿಂದ ಅನವಶ್ಯಕ ಎನಿಸುತ್ತದೆ. ಅದರಲ್ಲೂ ಚಿತ್ರದಲ್ಲಿನ ನಿರ್ದೇಶಕ ಆರ್ಯನ ಪಾತ್ರವನ್ನು ಮೊದಲಿಗೆ ಕಡಕ್ ನಿರ್ದೇಶಕನಂತೆ ತೋರಿಸಿ, ಆನಂತರ ವಂಚಕನಾಗಿ, ಕೊಲೆಗಡುಕನನ್ನಾಗಿ ಪರಿವರ್ತಿಸಿರುವುದು ಮಸಾಲೆಗೆ ಖಾರ ಅರೆಯುವ ಹುನ್ನಾರ ಎನಿಸುತ್ತದೆ.
ಚಿತ್ರದಲ್ಲಿನ ನಾಯಕನ ಪಾತ್ರಕ್ಕಿಂತ ಹೊರತಾಗಿಯೂ ನಾಯಕನಾಗಿ ಅಭಿನಯಿಸಿರುವ ಕೋಮಲ್ ಹೊಡೆದಾಟ ಹಾಡುಗಳಲ್ಲಿ ಮಿಂಚಿದ್ದಾರೆ. ಪೂರ್ಣ ಅಭಿನಯಿಸಿದ್ದಾರೆ, ತಮ್ಮ ಸೌಂದರ್ಯದಿಂದ ಗಮನಸೆಳೆದಿದ್ದಾರೆ. ಮುರುಗನ್ ನಿರ್ದೇಶನ, ಸೆಲ್ವಂ ಛಾಯಾಗ್ರಹಣ, ಮಣಿಕಾಂತ ಕದ್ರಿಯವರ ಸಂಗೀತಕ್ಕೆ ಶಹಬ್ಬಾಸ್ ಹೇಳಬಹುದು

No comments:

Post a Comment