Pages

Sunday, November 10, 2013

ಮಂದಹಾಸ ಚಿತ್ರ ವಿಮರ್ಶೆ

ಮಂದಹಾಸ ಹೆಸರೇ ಸೂಚಿಸುವಂತೆ ಮಂದಗತಿ ನಿರೂಪಣೆಯ ಪ್ರೇಮಕಥಾನಕ. ಬಾಲಿವುಡ್ ನ ರಾಜೇಶ್ ನಾಯರ್ ಈ ಚಿತ್ರದ ನಿರ್ದೇಶಕರು. ಸ್ವತಂತ್ರ ನಿರ್ದೇಶಕನಾಗಿ ಕನ್ನಡ ಭಾಷೆಯಲ್ಲಿ ಪ್ರಥಮ ಚಿತ್ರವನ್ನು ನಿರ್ದೇಶಿಸಿರುವ ರಾಜೇಶ್ ರವರ ಪ್ರಯತ್ನಕ್ಕೆ ನಿರ್ಮಾಪಕ ಬಸವರೆಡ್ಡಿ ಹಣ ಸುರಿದಿದ್ದಾರೆ.ಮಂದಹಾಸದಲ್ಲಿ ಇಬ್ಬರು ಯುವ ನಾಯಕರಿದ್ದಾರೆ. ಒಬ್ಬರು ಚೇತನ್ ಮತ್ತು ರಾಕೇಶ್ ಅಡಿಗ. ರಾಕೇಶ್ ಹಲವಾರು ಚಿತ್ರಗಳಲ್ಲಿ ಈಗಾಗಲೇ ಅಭಿನಯಿಸಿದ್ದರೂ ನಾಯಕನಾಗಿ ಅಷ್ಟಾಗಿ ಕನ್ನಡ ಚಿತ್ರರಂಗದಲ್ಲಿ ಹೆಸರು ಮಾಡಿಲ್ಲ. . ಚೇತನ್ ಗೆ ಇದು ಮೊದಲ ಚಿತ್ರ. ಇನ್ನು ಮುಂಬೈ ಮೂಲದ ಬೆಡಗಿ ನಿಕ್ಕಿದಾಸ್ ಈ ಚಿತ್ರದ ನಾಯಕಿ.ಇಬ್ಬರು ಯುವಕರು ಒಂದು ಹುಡುಗಿ ಚಿತ್ರದ ಪ್ರಮುಖ ಪಾತ್ರಧಾರಿಗಳು ಎಂದ ಮೇಲೆ ಒಬ್ಬ ಚಿತ್ರರಸಿಕ ಅಲ್ಲೊಂದು ತ್ರಿಕೋನ ಪ್ರೇಮಕಥೆಯನ್ನು ನಿರೀಕ್ಷಿಸುತ್ತಾನೆ.ಅದು ಸಾಮಾನ್ಯ.ಆದರೆ ಮಂದಹಾಸದ ಮಟ್ಟಿಗೆ ಆ ನಿರೀಕ್ಷೆ ಸುಳ್ಳಾಗುತ್ತದೆ. ಇಲ್ಲಿ ಇಬ್ಬರು ನಾಯಕರೂ ಒಬ್ಬಳೇ ಹುಡುಗಿಯನ್ನು ಪ್ರೀತಿಸುತ್ತಾರೆ. ಆದರೂ ಇದು ತ್ರಿಕೋನ ಪ್ರೆಮಕಥೆಯಲ್ಲ ಎಂದರೆ ಮತ್ತೇನು ಎಂಬ ಪ್ರಶ್ನೆಗೆ ನೀವು ಚಿತ್ರಮಂದಿರದಲ್ಲೇ ಉತ್ತರ ಕಂಡುಕೊಳ್ಳಬೇಕಾಗುತ್ತದೆ. ಯಾಕೆಂದರೆ ಚಿತ್ರದ ತಿರುಳು ಇರುವುದು ಅಲ್ಲೇ. ಒಬ್ಬ ಹುಡುಗ. ನೃತ್ಯ ಪಟು. ಆತನ ಕುಣಿತಕ್ಕೆ ಸುಮ್ಮನೆ ಕುಳಿತವರೂ ಹೆಜ್ಜೆ ಹಾಕಬೇಕಾಗುತ್ತದೆ. ಅಂತಹ ಪ್ರತಿಭಾವಂತ. ಮತ್ತೊಬ್ಬ ಹಾಡುಗಾರ. ಅವನ ಹಾಡಿಗೆ ತಲೆ ತೂಗದಿರುವವರಿಲ್ಲ.ಇಂತಹ ಹುಡುಗರಿಗೆ ಜೋತೆಯಾಗುವವಳು ನಾಯಕಿ.
 ಎಲ್ಲವನ್ನೂ ಒಮ್ಮೆಯೇ ಸವಿದು ಬಿಡಬೇಕು ಎನ್ನುವ ಮನಸ್ಥಿತಿಯ ಹುಡುಗಿ ಅವಳು. ನೃತ್ಯಪಟುವಿಗೆ ಮನಸೋಲುತ್ತಾಳೆ. ಅವನೂ ಮನಸೋಲುತ್ತಾನೆ ಪ್ರೇಮಾಂಕುರವಾಗಿ ಅವರ ಬದುಕು ಅಮರ ಮಧುರ ಪ್ರೇಮ ಎನ್ನುವಷ್ಟರಲ್ಲಿ ವಿಧಿ ತನ್ನ ಆಟ ತೋರಿಸುತ್ತದೆ. ಮುಂದೆ ಕಥೆ ವಿಭಿನ್ನವಾದ ವಿಚಿತ್ರವಾದ ಮಗ್ಗಲಿಗೆ ಬದಲಾಗುತ್ತದೆ.ಚಿತ್ರದ ನಿರೂಪಣೆಯಲ್ಲಿ ಮಂದಗತಿಯಿದ್ದರೂ ಚಿತ್ರಕಥೆ ಕಥೆಗೆ ಪೂರಕವಾಗಿಯೇ ಸಾಗುವುದರಿಂದ ಎಲ್ಲೂ ಬೋರ್ ಎನಿಸುವುದಿಲ್ಲ. ಕೆಲವು ಕಡೆ ಮಾತುಗಳು ಉದ್ದುದ್ದ ಎನಿಸುತ್ತದೆ. ಹಾಡುಗಳು ಇಂಪಾಗಿದ್ದು ನಾಲ್ಕು ಹಾಡುಗಳಲ್ಲಿ ಧಮ್ ಇದೆ. ಇದಕ್ಕೆ ಸಂಗೀತ ನಿರ್ದೇಶಕ ವೀರ ಸಮರ್ಥ ರವರಿಗೆ ಶಹಬ್ಬಾಸ್ ಹೇಳಲೇಬೇಕಾಗುತ್ತದೆ.ಗುರುಪ್ರಶಾಂತ್ ರೈ ತಮ್ಮ ಕ್ಯಾಮೆರಾ ಕೈಚಳಕವನ್ನು ಮೆಚ್ಚುವಂತೆ ತೋರಿಸಿದ್ದಾರೆ.
ಹೊಡಿಬಡಿ, ಲಾಂಗು ಮಚ್ಚು ಗಳ ಅಬ್ಬರದ ನಡುವೆ ಭಿನ್ನ ಎನ್ನಬಹುದಾದ ಕೌಟುಂಬಿಕ ಚಿತ್ರವಿದು. ಒಮ್ಮೆ
ನೋಡಬಹುದಾದ ಚಿತ್ರ ಎಂದು ಧೈರ್ಯವಾಗಿ ಹೇಳಬಹುದಾಗಿದೆ.

No comments:

Post a Comment