Pages

Sunday, November 10, 2013

ಪ್ರೀತಿ ಕಷ್ಟ ಸ್ವಾಮೀ..

ಈ ವಾರ ಬಿಡುಗಡೆಯಾಗಿರುವ ಮತ್ತೊಂದು ಚಿತ್ರ ಐಯಾಮ್ ಇನ್ ಲವ್. ಚಿತ್ರದಲ್ಲಿ ಹೆಸರಲ್ಲೇ ಕಥೆಯಿದೆ. ಇಂತಹ ಅಸಂಖ್ಯಾತ ಚಿತ್ರಗಳನ್ನು ನೋಡಿ ಬೀಸಾಕಿರುವ ಪ್ರೇಕ್ಷಕನಿಗೆ ಕಥೆ ಏನು ಅಮ್ಬುದರ ಅರಿವೂ ಆಗಿಬಿಡುತ್ತದೆ. ಅದನ್ನು ಸುಳ್ಳು ಮಾಡಿ ಬೇರೆಯದೇ ಪ್ರೀತಿಯ ಆಯಾಮವನ್ನು ಕೊಡುವ ಪ್ರಯತ್ನವನ್ನು ನಿರ್ದೇಶಕರು ಮಾಡಿಲ್ಲ. ಬಹುಶ ಅವರು ಅದೆಲ್ಲವನ್ನು ತಲೆ ಕೆಡಿಸಿಕೊಂಡಿಲ್ಲ. ಎಲ್ಲಾ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ ನಾನೂ ಒಂದು ಮಾಡಿಬಿಡೋಣ ಎನ್ನುವ ಮನೋಭಾವದಲ್ಲಿ ಅವರು ಚಿತ್ರ ಮಾಡಿರುವುದು ಎದ್ದು ಕಾಣುತ್ತದೆ. ಚಿತ್ರದ ಭಾಷೆ, ವ್ಯಾಕರಣ ಯಾವುದನ್ನೂ ಅವರು ತಲೆ ಕೆಡಿಸಿಕೊಂಡಿಲ್ಲ. ಸುಮ್ಮನೆ ತಮಗನಿಸಿದ ಕಥೆ ಬರೆದು ಚಿತ್ರ ನಿರ್ದೇಶನ ಮಾಡಿ ಹೊರತಂದಿದ್ದಾರೆ. ಮತ್ತು ಉಳಿದದ್ದನ್ನು ಪ್ರೇಕ್ಷಕರಿಗೆ ಬಿಟ್ಟುಬಿಟ್ಟಿದ್ದಾರೆ.
ಚಿತ್ರದ ಕಥೆ ಹೇಳುವುದು ಹೆಸರು ಹೇಳಿದಷ್ಟೇ ಸುಲಭ. ನಾಯಕ ನಾಯಕಿ ಭೇಟಿಯಾದಾಗ ಪ್ರೀತಿ ಹುಟ್ಟುತ್ತದೆ. ಅದೆಲ್ಲಿ ಭೇಟಿಯಾದರು? ಅದೇಕೆ ಭೇಟಿಯಾದರು ಎಂಬ ಪ್ರಶ್ನೆಗಳಿಗೆ ಉತ್ತರವಿದೆಯಾದರೂ ಅದು ಆಸಕ್ತಿಕರವಾದದಲ್ಲ. ಆಮೇಲೆ ಹುಡುಗಿಯಾ ಅಣ್ಣ ಅಬ್ಬರಿಸುತ್ತಾನೆ. ನಾನು ನಿನಗೆ ನನ್ನ ತಂಗಿಯನ್ನು ಕೊಟ್ಟು ಮದುವೆ ಮಾಡುವುದಿಲ್ಲ ಎನ್ನುತ್ತಾನೆ. ಈ ಮಧ್ಯದಲ್ಲಿ ನನ್ನದೂ ಒಂದಿರಲಿ ಎನ್ನುವಂತೆ ಖಳನಾಯಕ ಬರುತ್ತಾನೆ. ಆಮೇಲೆ ಒಂದಷ್ಟು ಅರ್ಥಹೀನ ಘಟನೆಗಳು ನಡೆಯುತ್ತವೆ. ಚಿತ್ರ ಮುಗಿಯುವಾಗ ನಾಯಕ ಸಾಯುತ್ತಾನೆ, ಕಣ್ಣು ದಾನ ಮಾಡುತ್ತಾನೆ. ಪ್ರೇಕ್ಷಕ ಸೋಲುತ್ತಾರೆ. ಅಲ್ಲಿಯವರೆಗೆ ಕುರ್ಚಿಯ ಮೇಲೆ ಕುಳಿತು ಆವಾಗವಾಗ ಕೈಗಡಿಯಾರ ನೋಡಿ ಕುಟ್ಟಿ ಕಿವಿಯ ಹತ್ತಿರ ಹಿಡಿದು ಅದರ ಕಾರ್ಯತತ್ಪರತೆಯನ್ನು ಪರೀಕ್ಷೆ ಮಾಡಿದ್ದ ,ಒದ್ದಾಡಿದ್ದ ಪ್ರೇಕ್ಷಕರು ದುಸ್ವಪ್ನದಿಂದ ಹೊರಬಂದಷ್ಟು ನಿರಾಳರಾಗಿ ಚಿತ್ರ ಮಂದಿರದಿಂದ ಹೊರಬರುತ್ತಾರೆ.
ಇಷ್ಟರಲ್ಲೇ ಇಡೀ ಚಿತ್ರದ ಬಗ್ಗೆ ನಿಮಗೆ ತಿಳಿದು ಹೊಗಿರಲಕ್ಕೂ ಸಾಕು. ಯಾವುದೇ ವಿಶೇಷವಿಲ್ಲದ ಸಾದಾರಣ ಚಿತ್ರ ಇದು. ಎಲ್ಲೂ ಏರಿಳಿತ ತಿರುವುಗಳು ಇಲ್ಲವೇ ಇಲ್ಲ. ಚಿತ್ರ ಸುಮ್ಮನೆ ಸಾಗುತದೆಯೇ ಹೊರತು ಅಲ್ಲಿ ಆಸಕ್ತಿದಾಯಕ ವಿಷಯವಿಲ್ಲ. ಹೋಗಲಿ ನಗು ತಮಾಷೆ ಲವಲವಿಕೆ..ಊಹೂ. ಯಾವುದೂ ಇಲ್ಲ. ನವನಾಯಕ ಮಹೇಶ್ ಅಭಿನಯಿಸುವ ಪ್ರಯತ್ನ ಮಾಡಿದ್ದಾರೆ, ಇದೆ ಮಾತನ್ನು ನಾಯಕಿ ಕಾವ್ಯ ಶೆಟ್ಟಿಗೂ ಹೇಳಬಹುದು. ಉಳಿದ ಪಾತ್ರಗಳು, ಪಾತ್ರಧಾರಿಗಳು ಅವರುಗಳ ಬಗ್ಗೆ ಹೇಳುವುದು ಯಾವುದೂ ಆಸಕ್ತಿಕರವಾದುದಲ್ಲ. ತಾಂತ್ರಿಕ ವಿಷಯದಲ್ಲಿ ಏನೇನೂ ಇಲ್ಲ. ಛಾಯಾಗ್ರಾಹಕರು ನಡೆಯುವುದನ್ನು ಕ್ಯಾಮೆರಾದಲ್ಲಿ ಮುದ್ರಿಸಿದ್ದಾರೆ. ಅಷ್ಟೇ. ಸಂಗೀತ, ಹಿನ್ನೆಲೆ ಸಂಗೀತ ಸಾದಾರಣ.
ಇನ್ನು ಮುಂದಾದರೂ ನಿರ್ದೇಶಕರು ಈವತ್ತಿನ ಚಿತ್ರಗಳನ್ನು ಪ್ರೇಕ್ಷಕರನ್ನು ಅವರ ಅಭಿರುಚಿಯನ್ನು ಗಮನಿಸಿ ಚಿತ್ರಗಳನ್ನು ನಿರ್ದೇಶಿಸಿದರೆ ಒಳಿತು. ಇಲ್ಲವಾದಲ್ಲಿ ಅಥವಾ ಇಂತಹ ಸಿನಿಮಾಗಳಿಂದ ಹಣ ಸಮಯ ಅಭಿರುಚಿ ಮತ್ತು ಪ್ರೇಕ್ಷಕನಲ್ಲಿ ಆಸಕ್ತಿ ಕಳೆದುಹೋಗುವ ಎಲ್ಲಾ ಸಾಧ್ಯತೆಗಳನ್ನು ತಳ್ಳಿ ಹಾಕುವ ಹಾಗಿಲ್ಲ.

No comments:

Post a Comment