Pages

Sunday, November 10, 2013

ಕಡ್ಡಿಪುಡಿ



ಒಂದು ಸಹನೀಯ ಸಂಗತಿಯೆಂದರೆ ಈ ಚಿತ್ರದಲ್ಲಿ ಅತಿರೇಕದ ಉದ್ದನೆಯ ದೊಡ್ಡ ದೊಡ್ಡ ಸಂಭಾಷಣೆಗಳಿಲ್ಲ. ಕೊಲೆ ಅತ್ಯಾಚಾರಗಳು ಇದ್ದರೂ ಬರ್ಬರತೆಯಿಲ್ಲ. ಹೊಡೆದಾಟಗಳಿವೆಯಾದರೂ ಅದಕ್ಕೆ ನೈಜತೆಯ ಸ್ಪರ್ಶವಿದೆ. ಹಾಗೆಯೇ ಕೆಳಮಧ್ಯಮ ವರ್ಗದ ಜೀವನ, ಚಿಲ್ಲರೆ ರೌಡಿಗಳ ಅವಕಾಶವಾದಿತನಗಳು ತುಂಬಾ ನಿಜವಾಗಿ ಮೂಡಿಬಂದಿವೆ. ಇನ್ನುಳಿದಂತೆ ಪೋಲಿಸ್ ವ್ಯವಸ್ಥೆಯ ಎರಡು ಮುಖಗಳು, ರಾಜಕೀಯದವರ ದೊಂಬರಾಟಗಳು ಚಿತ್ರದಲ್ಲಿ ಅಗತ್ಯಕ್ಕೆ ತಕ್ಕಂತೆ ಬಂದು ಹೋಗಿವೆ. ಹಾಗಾಗಿಯೇ ಚಿತ್ರ ತೀರಾ ರೌಡಿಸಂ, ಹೊಡೆದಾಟ ಬಡಿದಾಟಗಳ ಚಿತ್ರವಾಗದೆ ಸೂಕ್ಷ್ಮ ಸಂವೆದಿತನದ ಕಥೆಯನ್ನು ಹೊಂದಿರುವ ಚಿತ್ರವಾಗಿದೆ. ಚಿತ್ರದ ಕಥೆಯ ವಿಸ್ತಾರವೇ ವಿಶಾಲವಾದದ್ದು ಮತ್ತು ಸೂಕ್ಷ್ಮವಾದದ್ದು.   ರೌಡಿಯೊಬ್ಬ ಸಂಭಾವಿತನಾಗಲು ಪಡುವ ಪರಿಪಾಟಲುಗಳನ್ನು ಚಿತ್ರವಾಗಿಸಿದ್ದಾರೆ ಸೂರಿ.
ಆದರೆ ಅದರಲ್ಲಿ ಸಂಪೂರ್ಣ ಯಶಸ್ಸು ಕಂಡಿದ್ದಾರೆಯೇ..?
ಅಜ್ಜಿಯ ಕಡ್ಡಿಪುಡಿ ಅಂಗಡಿಯಿಂದಾಗಿ ಆನಂದನಿಗೆ ಕಡ್ಡಿಪುಡಿ ಎನ್ನುವ ಹೆಸರು ಬಂದಿದೆ. ಆದರೆ ಆಕೆ ಕ್ಯಾನ್ಸರ್ ಬಂದು ಸತ್ತ ಮೇಲೆ ಅಂಗಡಿ ಮುಚ್ಚುವ ಆನಂದ ಅಲಿಯಾಸ್ ಕಡ್ಡಿಪುಡಿ ರಾಜಕೀಯ ನೇತಾರ ರೇಣುಕಾ ಹತ್ತಿರ ಕೆಲಸಕ್ಕೆ ಸೇರಿಕೊಳ್ಳುತ್ತಾನೆ. ರೇಣುಕ ಮಗ ಗಾಳಿ  ಕಡ್ಡಿಪುಡಿಯ ಪ್ರಾಣ ಸ್ನೇಹಿತ. ಆಮೇಲೆ ಯಾವಯಾವದೋ ಸಲ್ಲದ ಕಾರಣದಿಂದ ಲಾಂಗು ಕೈಗೆತ್ತಿಕ್ಕೊಳ್ಳುತ್ತಾನೆ, ಕೊಲ್ಲುತ್ತಾನೆ, ಭೂಗತದೊರೆಯಾಗುತ್ತಾನೆ. ಆಮೇಲೆ ಇದೆಲ್ಲಾ ಸಾಕು ಎಂದೆನಿಸಿ ಸಾಮಾನ್ಯನಂತೆ ಬದುಕಬೇಕೆಂದು ಆಸೆ ಪಡುತ್ತಾನೆ. ಇಷ್ಟು ಕಥೆಯನ್ನು ಕ್ರೈಂ ಡೈರಿಯ ಮಾದರಿಯಲ್ಲಿ ಮೊದಲ ಹತ್ತು ನಿಮಿಷದಲ್ಲಿ ನಿರ್ದೇಶಕರು ನಮ್ಮ ಮುಂದಿಟ್ಟು ಬಿಡುತ್ತಾರೆ. ಮುಂದಿನದ್ದು ಹೇಗೆ ಕಡ್ಡಿಪುಡಿ ಭೂಗತಲೋಕದಿಂದ ಹೊರಬರಲು ಕಷ್ಟಪಟ್ಟ, ವೈರಿಗಳನ್ನು ಹೇಗೆ ಮಟ್ಟ ಹಾಕಿದ, ಆತನ ವೈಯಕ್ತಿಕ ಬದುಕು ಹೇಗಾಯಿತು ಎಂಬುದಾಗಿದೆ. ಎಲ್ಲರಿಗೂ ಗೊತ್ತಿರುವ ಸಾಮಾನ್ಯ ವಿಷಯವೆಂದರೆ ಭೂಗತಲೋಕವನ್ನು ದೂರ ಮಾಡಿದಷ್ಟೂ ಅಂಟಿಕೊಳ್ಳಲು, ಕೊಲ್ಲಲು ನೋಡುತ್ತದೆ. ಕಡ್ಡಿಪುಡಿಯ ಕಥಾ ಹಂದರದಲ್ಲಿ ವಿಶೇಷವಿಲ್ಲ. ನಿರೂಪಣೆಯಲ್ಲೂ ಹೊಸತೇನಿಲ್ಲ. ಇಲ್ಲಿ ಎಲ್ಲವೂ ನಿರೀಕ್ಷಿತ. ನನಗಿನ್ನ ಈ ಭೂಗತಲೋಕದ ನಂಟು ಸಾಕು ಎಂದು ರೌಡಿಯೊಬ್ಬ ಲಾಂಗು ಕೆಳಗಿಳಿಸಿದ ತಕ್ಷಣ ಏನಾಗುತ್ತದೆ ಎಂಬುದು ಎಲ್ಲರಿಗೂ ಗೊತ್ತು. ಅದು ಇಲ್ಲೂ ಆಗುತ್ತದೆ. ಲಾಂಗು ಕೆಳಗಿಳಿಸಿದಾಕ್ಷಣ ಚಿಲ್ಟು ರೌಡಿಗಳು ಗರಿಗೆದರುತ್ತಾರೆ, ಅಷ್ಟೇ ಅಲ್ಲ ನಾಯಕನನ್ನೇ ಮುಗಿಸಿಬಿಡಲು ಮುಂದಾಗುತ್ತಾರೆ. ಆದರೆ ನಾಯಕ ತನ್ನ ಬುದ್ದಿವಂತಿಕೆ ಉಪಯೋಗಿಸುತ್ತಾನೆ. ಅವರನ್ನು ತನ್ನದೇ ರೀತಿಯಲ್ಲಿ ಶೈಲಿಯಲ್ಲಿ ಮಟ್ಟಹಾಕುತ್ತಾನೆ. ಮತ್ತು ತನ್ನನ್ನು ರಕ್ಷಿಸಿಕೊಳ್ಳಲು ರಾಜಕೀಯದ ಮೊರೆಹೋಗುತ್ತಾನೆ...ಆದರೂ...ಎನ್ನುವಲ್ಲಿಗೆ ಚಿತ್ರ ಅಂತ್ಯ ಕಾಣುತ್ತದೆ. ಚಿತ್ರದ ಕೊನೆಯ ಘಟ್ಟದವರೆಗೂ ಸೂರಿ ಹೊಸದೇನನ್ನೂ ಹೇಳುವ ಗೋಜಿಗೆ ಹೋಗದೆ ಅಲ್ಲಲ್ಲೇ ಸುತ್ತಾಡಿದ್ದಾರೆ. ಆದರೆ ಕೊನೆಯ ಹತ್ತು ನಿಮಿಷ ಅನಿರೀಕ್ಷಿತ ಅಂತ್ಯ ನೀಡುವ ಮೂಲಕ ಅಚ್ಚರಿ ಮೂಡಿಸುತ್ತಾರೆ.
ಶಿವಣ್ಣ ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ರೌಡಿಯಾಗಿ, ಪ್ರೇಮಿಯಾಗಿ, ಗಂಡನಾಗಿ ಗೆಳೆಯನಾಗಿ ಅವರ ಅಭಿನಯ ಸೂಪರ್. ಹೊಡೆದಾಟದಲ್ಲಿ ಅವರಲ್ಲಿ ಚಿರತೆಯ ವೇಗವಿದೆ.ರಾಧಿಕಾ ಪಂಡಿತ್ ಕೊಳಗೇರಿಯ ಹುಡುಗಿಯಾಗಿ ಗಮನಸೆಳೆಯುತ್ತಾರೆ. ರಾಜೇಶ್, ರಂಗಾಯಣ ರಘು, ಅನಂತನಾಗ್, ಅವಿನಾಶ್ ಶರತ್ ಲೋಹಿತಾಶ್ವ, ರೇಣುಕಾಪ್ರಸಾದ್ ಪಾತ್ರೋಚಿತ ಅಭಿನಯ ಮಾಡಿದ್ದಾರೆ. ಹಿನ್ನೆಲೆ ಸಂಗೀತದಲ್ಲಿ ಫುಲ್ ಸ್ಕೋರ್ ಮಾಡಿರುವ ವಿ.ಹರಿಕೃಷ್ಣ, ಹಾಡುಗಳ ಸಂಗೀತದಲ್ಲಿ ಸಾದಾರಣ ಎನಿಸುತ್ತಾರೆ. ಕೃಷ್ಣರ ಛಾಯಾಗ್ರಹಣದ ಕಣ್ಣುಗಳಲ್ಲಿ ಚುರುಕಿದೆ, ನೈಜತೆಯಿದೆ.ಒಂದು ದೃಶ್ಯ, ಒಂದು ಹಾಡಿನಲ್ಲಿ ಐದ್ರಿಂತ ರೈ ಬಂದು ಹೋಗುತ್ತಾರೆ.
ಚಿತ್ರದಲ್ಲಿ ನಾಯಕ-ನಾಯಕಿ ಮೊದಲ ಬಾರಿಯ ಭೇಟಿ, ಅವರ ನಡುವೆ ಪ್ರೀತಿ ಹುಟ್ಟುವ ರೀತಿ, ಅವರ ಮದುವೆ ಮುಂತಾದವುಗಳಲ್ಲಿ ತಾಜಾತನವಿದೆ. ಹಾಗೆಯೇ ಲವಲವಿಕೆಯಿದೆ. ಮೊದಲಾರ್ಧ ಶರವೇಗದಲ್ಲಿ ಸಾಗುತ್ತದಾದರೂ ದ್ವಿತೀಯಾರ್ಧ ಸ್ವಲ್ಪ ನಿಧಾನವಾಗುತ್ತದೆ ಮತ್ತು ಸ್ವಲ್ಪ ಹಳಿ ತಪ್ಪಿದಂತೆ ಭಾಸವಾಗುತ್ತದೆ. ಒಂಚೂರು ಗೊಂದಲವೂ ಕಥೆಯಲ್ಲಿ ಕಾಣಸಿಗುತ್ತದೆ. ಇವೆಲ್ಲವನ್ನೂ ಸಹಿಸಿಕೊಂಡು ನೋಡಿದಾಗ ಎರಡು ಘಂಟೆ ಇಪ್ಪತ್ತಮೂರು ನಿಮಿಷಗಳಷ್ಟು ಉದ್ದವಿರುವ ‘ಕಡ್ಡಿಪುಡಿ’ ಚಿತ್ರ ಒಂದು ಸಾಮಾನ್ಯ ರೌಡಿಸಂ ಚಿತ್ರವಾದರೂ ಭಿನ್ನ ಪ್ರಯತ್ನದಿಂದಾಗಿ ಗಮನಸೆಳೆಯುತ್ತದೆ. ಆದರೆ ಕಥೆಯ ವಿಸ್ತಾರ, ಸಂವೇದನೆಗೆ ತಕ್ಕಂತಹ ಚಿತ್ರಕಥೆಯ ಕೊರತೆ ಚಿತ್ರದಲ್ಲಿ ಎದ್ದು ಕಾಣುವುದರಿಂದ ಎಲ್ಲರೀತಿಯಿಂದಲೂ ಅತ್ಯುತ್ತಮ ಚಿತ್ರವಾಗುವಲ್ಲಿ ಜಸ್ಟ್ ಮಿಸ್ ಆಗಿದೆ ಎನ್ನಬಹುದು.                 

No comments:

Post a Comment