Pages

Sunday, November 10, 2013

ಪ್ಯಾರ್ ಗೆ ಅಗ್ಬುಟೈತೆ..

ಪ್ಯಾರ್ ಗೆ ಒಂದು ಸರಳ ಕಥೆಯಾಧಾರಿತ ಸರಳವಾದ ಚಿತ್ರ. ಇಡೀ ಚಿತ್ರದಲ್ಲಿ ಎರಡೇ ಪಾತ್ರಗಳು ಅತ್ತಿಂದಿತ್ತ ಓಡಾಡುತ್ತಾ ಮಾತಾಡುತ್ತಾ ಟೈಮ್ ಪಾಸ್ ಮಾಡುತ್ತವೆ. ಅಲ್ಲಲ್ಲೀ ಕುಳಿತು ಏನೇನೋ ಮಾಡುತ್ತವೆ, ಮಧ್ಯದಲ್ಲಿ ಹಾಡುತ್ತವೆ. ದೇವಸ್ಥಾನಕ್ಕೆ ಹೋಗುತ್ತವೆ. ಇದು ಸರಿ ಸುಮಾರು ಚಿತ್ರದ ಕೊನೆಯವರೆಗೂ ನಡೆಯುತ್ತದೆ. ಕೊನೆಯಲ್ಲಿ ಚಿಕ್ಕ ತಿರುವು.. ಆಮೇಲೆ ಶುಭಂ.
ಮರಾಠಿಯಲ್ಲಿ ಮುಂಬೈ ಪೂನಾ ಮುಂಬೈ ಹೆಸರಿನ ಚಿತ್ರದ ಕನ್ನಡಾನುವಾದ ಇದು. ಅದರ ಕಥೆಯನ್ನು ಒಂಚೂರು ಬದಲಿಸುವ ಪ್ರಯತ್ನವನ್ನೂ ನಿರ್ದೇಶಕರು ಮಾಡಿಲ್ಲ. ಅದನ್ನು ಹೇಗಿತ್ತೋ ಹಾಗೆಯೇ ಇಲ್ಲಿ ತಂದಿದ್ದಾರೆ.ಹುಡುಗಿಗೆ ಮದುವೆ ನಿಗದಿಯಾಗುತ್ತದೆ. ಆಗ ಹುಡುಗನನ್ನು ವೈಯಕ್ತಿಕವಾಗಿ ಭೇಟಿ ಮಾಡಲು ಆಕೆ ಅವನೂರಿಗೆ ಬರುತ್ತಾಳೆ. ಆದರೆ ಆಕಸ್ಮಿಕವಾಗಿ ಅವಳು ನಾಯಕನನ್ನು ಭೇಟಿಯಾಗುತ್ತಾಳೆ. ಕೆಲವು ಸನ್ನಿವೇಶಗಳು ಅವರಿಬ್ಬರನ್ನು ಜೊತೆಯಲ್ಲಿಯೇ ಇರುವಂತೆ ಮಾಡಿಬಿಡುತ್ತವೆ. ಮುಂದೆ..ಅಷ್ಟೇ ಕೊನೆಯವರೆಗೂ ಅವರದು ಅದೇ ಕಥೆ. ಪ್ರೇಕ್ಷಕ ಮಾತ್ರ ಮುಂದಕ್ಕೆ ಏನಾದರೂ ಮಾಡ್ರಪ್ಪ..ಎಂದು ಬೊಬ್ಬೆ ಹಾಕುತ್ತಾನೆ. ಸಂಜೆಯಾಗುತ್ತದೆ. ಆಕೆ ಊರಿಗೆ ಹೋರಾಡಬೇಕು..ಅಷ್ಟರಲ್ಲಿ ನಡೆಯುವ ಒಂದು ತಿರುವು ಸಿನಿಮಾವನ್ನು ಅಂತ್ಯದೆಡೆಗೆ ಕರೆದೊಯ್ಯುತ್ತದೆ.
ಚಿತ್ರದ ಕಥೆ ಒಂದೆ ದಿನದಲ್ಲಿ ನಡೆಯುವುದರಿಂದ ಚಿತ್ರದಲ್ಲಿ ಹಾಡಲ್ಲಿ ಮಾತ್ರ ಬಟ್ಟೆ ಬದಲಾಗುತ್ತದೆ. ಇಬ್ಬರೇ ಪಾತ್ರಧಾರಿಗಳು ಜನರನ್ನು ರಂಜಿಸುವ ಪ್ರಯತ್ನಮಾಡುತ್ತಾರೆ. ಆ ನಿಟ್ಟಿನಲ್ಲಿ ಕೋಮಲ್ ಒಂದಷ್ಟು ನಗಿಸಲು ಯತ್ನಿಸಿದ್ದಾರೆ. ಆದರೇಕೋ ಅದು ಮಧ್ಯಂತರದ ನಂತರ ನಗು ಬರಿಸುವುದೇ ಇಲ್ಲ. ರಂಜಿಸುವುದೂ ಇಲ್ಲ. ಎಲ್ಲಾ ನೀರಸ ಪೇಲವ ಎನಿಸಲು ಪ್ರಾರಂಭಿಸುತ್ತದೆ.
ಚಿತ್ರದಲ್ಲಿ ಏರಿಳಿತವಿಲ್ಲ. ನಿರೂಪಣೆ ಸುಮ್ಮನೆ ಹಾಗೆ ಹರಿವ ನೀರಂತೆ ಸಾಗುತ್ತದೆ. ಹಾಗಾಗಿ ಸ್ವಲ್ಪ ಹೊತ್ತಿನ ನಂತರ ಚಿತ್ರ ಆಯಾಸದಾಯಕವಾಗುತ್ತದೆ. ಕೆಶವಾದಿತ್ಯರ ಸಂಭಾಷಣೆಯಲ್ಲಿ ಕೆಲವು ಕಡೆ ಚುರುಕುತನವಿದೆಯಾದರೂ ಅದು ಕೆಲವೊಮ್ಮೆ ಸಾದಾರಣ ಮಟ್ಟದಲ್ಲಿದೆ. ಹಾಗಾಗಿ ಮಾತೆ ಬಂಡವಾಳವಾಗಿರಬೇಕಾದ ಚಿತ್ರದಲ್ಲಿ ಅದಾಗಿಲ್ಲ. ಇನ್ನೂ ದೃಶ್ಯ ವೈಭವದ ಬಗ್ಗೆ ಮಾತಾಡುವ ಹಾಗಿಲ್ಲ. ಇಡೀ ಚಿತ್ರದಲ್ಲಿ ಖರ್ಚಿಗೆ ದಾರಿಯಿಲ್ಲ. ಒಂದೆ ಊರಿನಲ್ಲಿ ನಡೆಯುವ ಕಥೆಯಾದ್ದರಿಂದ ಸಿನಿಮಾ ಅತ್ತಿಂದಿತ್ತ ಇತ್ತಿಂದತ್ತ ಸಾಗುತ್ತದೆ ಹೊರತು ಬೇರಾವ ವೈಭವಕ್ಕೂ ಆಸ್ಪದ ಕೊಟ್ಟಿಲ್ಲ. ಸಂಗೀತ ಮತ್ತು ಛಾಯಾಗ್ರಹಣ ಅಂತಹ ಮಹತ್ವವನ್ನು ಕೊಟ್ಟಿಲ್ಲವಾದ್ದರಿಂದ ಅವುಗಳ ಬಗ್ಗೆ ವಿಶೇಷವಾಗಿ ಹೇಳುವುದು ಏನೂ ಇಲ್ಲ.
ಕೋಮಲ್ ನಟಿಸಿದ್ದಾರೆ.ನಗಿಸಲು ಪ್ರಯತ್ನಿಸಿದ್ದಾರೆ. ಕೆಲವೊಮೆ ಪೆದ್ದು ಪೆದ್ದಾಗಿ, ಪ್ರೇಮದಲ್ಲಿ ಬೀಳುವ ಹುಡುಗನಾಗಿ ಅವರ ಅಭಿನಯ ಓಕೆ. ಆದರೂ ಯಾಕೋ ಈ ಪಾತ್ರಕ್ಕೆ ಅವರು ಸೂಕ್ತವಾ? ಎನ್ನುವ ಪ್ರಶ್ನೆ ಕಾಡುತ್ತದೆ. ಯಾಕೆಂದರೆ ಕೋಮಲ್ ಎಂದರೆ ಅಲಿ ಭರಪೂರ ಹಾಸ್ಯವನ್ನು ಜನರು ನಿರೀಕ್ಷಿಸುವ ಕಾರಣದಿಂದ.. ನಾಯಕಿ ಪ್ರಾರ್ಥನೆ ಸಾದಾರಣ.
ಒಟ್ಟಿನಲ್ಲಿ ಚಿತ್ರದ ಕಥೆಯಂತೆಯೇ ಇಡೀ ಸಿನಿಮಾ ಒಂದು ಸಾದಾರಣ ಚಿತ್ರ ಎನ್ನುವ ಹಣೆಪಟ್ಟಿ ಕಟ್ಟಬಹುದಾಗಿದೆ.

No comments:

Post a Comment