Pages

Sunday, November 10, 2013

ಬರ್ಫೀ

ನಮ್ಮಲ್ಲಿ ಮಾತಿನ ಸಿನಿಮಾಗಳು ಆಗಾಗ ಬಂದು ಗೆಲ್ಲುತ್ತವೆ. ಅದೇ ತರಹದ ಇನ್ನಷ್ಟು ಸಿನಿಮಾ ಬಂದು ಕಿರಿಕಿರಿಯನ್ನೂ ಉಂಟುಮಾಡುತ್ತವೆ. ಯೋಗರಾಜ್ ಭಟ್, ಗುರುಪ್ರಸಾದ್ ಇತ್ತೀಚಿನ ಸಿಂಪಲಾಗ್ ಒಂದ್ ಲವ್ ಸ್ಟೋರಿ ಚಿತ್ರದ ನಿರ್ದೇಶಕ ಸುನೀ ಮುಂತಾದವರು ಮಾತಿನಲ್ಲಿ ಮಂಟಪ ಕಟ್ಟುವವರು ಎನ್ನಬಹುದು. ಇವರ ಚಿತ್ರಗಳಲಿ ಕಥೆಗೆ ಸಂಪೂರ್ಣ ಅನ್ಯಾಯ. ಉಳಿದೆಲ್ಲವೂ ಸಂಭಾಷಣೆಯ ಪಾಲು. ಬರ್ಫೀ ಕೂಡ ಅದೇ ರೀತಿಯ ಅದೇ ಶೈಲಿಯ ಸಿನಿಮಾ. ಅಂದರೆ ಇಲ್ಲೂ ಕಥೆಯಿಲ್ಲ. ಹಾಗಂತ ಅಂತಹ ಚಿನಕುರುಳಿ ಸಂಭಾಷಣೆಯೂ ಇಲ್ಲ. ಹಾಗಾಗಿ ಇಲ್ಲಿ ಬರೀ ಮಾತು, ದೃಶ್ಯ , ಹಾಡುಗಳ ಸಹಾಯದಿಂದ
ಒಂದು ಸಿನಿಮಾವನ್ನು ಗೆಲ್ಲಿಸಬಹುದು ಎಂದುಕೊಂಡ ಸಿನೆಮಾ ಈ ಬರ್ಫೀ ಎನ್ನಬಹುದು. ಇಲ್ಲಿನ ಕಥೆಯ ಎಳೆ ತೀರಾ ಸರಳವಾದದ್ದು. ಒಂದು ಹುಡುಗ ವಯಸಿಗೆ ಬಂದವನು. ಮದುವೆ ಮಾಡಲು ಮನೆಯವರು ಯಾರನ್ನು ತೋರಿಸಿದರೂ ಒಪ್ಪದಿರುವವನು. ಒಂದು ಹುಡುಗಿಗೆ ಮನಸೋಲುತ್ತಾನೆ. ಆದರೆ ಆಕೆ ಇಲ್ಲಿಯವಳಲ್ಲ. ದೂರದ ಪಂಜಾಬಿನ ಬೆಡಗಿ. ಮೊಬೈಲಿನಲ್ಲಿ ಅರ್ಧ ಪ್ರೇಮ ಪಕ್ಕಾಗುತ್ತದೆ. ಆದರೆ ಮದುವೆಯನ್ನೂ ಕೂಡ ಮೊಬೈಲಿನಲ್ಲಿ ಮಾಡಿಕೊಳ್ಳಲಾಗುವುದಿಲ್ಲವಲ್ಲ, ಹಾಗಾಗಿ ನಾಯಕ ಆಕೆಯನ್ನು ಹುಡುಕಿಕೊಂಡು ಹೋಗಲೇ ಬೇಕಾಗುತ್ತದೆ. ಹೋಗುತ್ತಾನಾ..? ಮದುವೆಯಾಗುತ್ತಾನಾ..? ಎಂಬುದರ ವಿವರವನ್ನು ಚಿತ್ರ ನೋಡಿ ತಿಳಿದುಕೊಳ್ಳಬಹುದು.ಮೊದಲೇ ಹೇಳಿದಂತೆ ಬರೀ ಚಿತ್ರಕಥೆಯನ್ನೇ ನಂಬಿಕೊಂಡ ಚಿತ್ರವಿದು. ಹಾಗಾಗಿ ಪ್ರತಿ ದೃಶ್ಯವೂ ಮಾತನ್ನೇ ನಂಬಿಕೊಂಡಿದೆ. ಕಥೆ ಅಷ್ಟೇ ಆದರಿಂದ ದೃಶ್ಯಗಳ ಮೂಲಕ ಚಿತ್ರವನ್ನು ವೇಗವಾಗಿ ಓಡಿಸುವ ಪ್ರಯತ್ನವನ್ನು ನಿರ್ದೇಶಕರು ಮಾಡುತ್ತಾರಾದರೂ ಅದು ನಿಂತಲ್ಲೇ ಸುತ್ತುತ್ತದೆ. ಚಿತ್ರದ ಮಧ್ಯಂತರ ಮುಗಿದು ಸುಮಾರು ಹೊತ್ತಿನನಂತರ ಕಥೆಯಲ್ಲಿ ಸ್ವಲ್ಪ ತಿರುವಿದೆಯಾದರೂ ಅಲ್ಲಿಯವರೆಗಿನ ಪಯಣ ಪ್ರೇಕ್ಷಕನಿಗೆ ಆಯಾಸದಾಯಕವಾಗಿದೆ. ಪ್ರತಿ ದೃಶ್ಯದಲ್ಲೂ ಪ್ರೀತಿಯ ಪ್ರಲಾಪವಿದೆ. ಅದೇ ಕೆಲವು ಕಡೆ ಅತಿಯಾಗಿದೆಯೇನೋ ಅನಿಸುತ್ತದೆ. ತಾರಾಗಣದಲ್ಲಿ ದಿಗಂತ್ ಭಾಮಾ ಮತ್ತು ದಿಲೀಪ್ ರಾಜ್ ಅಭಿನಯ ಚೆನ್ನಾಗಿದೆ. ದಿಗಂತ್ ಹುಡುಗಾಟದ ಲವಲವಿಕೆಯ ಹುಡುಗನಾಗಿ ಗಮನಸೆಳೆಯುತ್ತಾರೆ. ಭಾಮಾ ತಮ್ಮ ಸ್ನಿಗ್ಧ ಸೌಂದರ್ಯದಿಂದ ಕಣ್ಮನ ತಣಿಸುತ್ತಾರೆ. ಇನ್ನುಳಿದ ತಾರಾಗಣ. ಪಾತ್ರಗಳಿಗೆ ಚಿತ್ರದಲ್ಲೇ ಅಂತಹ ಪ್ರಾಮುಖ್ಯತೆ ಇಲ್ಲದಿರುವುದು ಹೀಗೆ ಬಂದು ಹಾಗೆ ಹೋಗುತ್ತವೆ.ಗುಂಡ್ಲುಪೇಟೆ ಸುರೇಶ ಛಾಯಾಗ್ರಹಣದಲ್ಲಿ ಹೊರಾಂಗಣ ದೃಶ್ಯಗಳು ಅತ್ಯುತ್ತಮವಾಗಿ ಮೂಡಿಬಂದಿವೆ. ಅರ್ಜುನ್ ಜನ್ಯ ಸಂಗೀತದಲ್ಲಿ ಎರಡು ಹಾಡುಗಳು ಗುನುಗುವಂತಿವೆ. ನಿರ್ದೇಶಕ ರಾಜಶೇಖರ್ ಈ ಹಿಂದೆ ಪೆರೋಲ್ ಎನ್ನುವ ಚಿತ್ರ ನಿರ್ದೇಶನ ಮಾಡಿದ್ದರು. ಈಗ ಸಂಪೂರ್ಣ ಕೌಟುಂಬಿಕ ಪ್ರೇಮಮಯ ಚಿತ್ರಮಾಡಲು ಪ್ರಯತ್ನಿಸಿದ್ದಾರೆ. ಅದರಲ್ಲಿ ಭಾಗಶಃ ಯಶಸ್ವಿಯಾಗಿದ್ದಾರೆ.

No comments:

Post a Comment