Pages

Sunday, November 10, 2013

ಡೈರೆಕ್ಟರ್ ಸ್ಪೆಷಲ್


ಮಾತಿನಲ್ಲೇ ಮನೆ ಕಟ್ಟುವವರು ತುಂಬಾ ಜನರಿದ್ದಾರೆ. ಹಾಗೆ ಬರೀ ಮಾತಿನಲ್ಲೇ ಸಿನಿಮಾ ಮಾಡುವವರಲ್ಲಿ ನಿರ್ದೇಶಕ ಗುರುಪ್ರಸಾದ್ ಮೊದಲಿಗರೆನ್ನಬಹುದು. ಅವರ ಮಠ, ಎದ್ದೇಳು ಮಂಜುನಾಥ ಚಿತ್ರಗಳೂ ಕೂಡ ಮಾತಿನ ಮಂಟಪಗಳೇ ಆಗಿದ್ದವು. ಡೈರೆಕ್ಟರ್ ಸ್ಪೆಷಲ್ ಕೂಡ ಅಂತಹದ್ದೇ ಒಂದು ಮಾತಿನ ಚಿತ್ರ. ನೀವು ಇಡೀ ಚಿತ್ರವನ್ನು ಕಣ್ಮುಚ್ಚಿಕೊಂಡು ಆಸ್ವಾದಿಸಬಹುದು. ಒಂಥರಾ ಹರಿಕಥೆ, ರೇಡಿಯೋ ನಾಟಕದ ರೀತಿಯಾ..ಎಂದು ಕೇಳಿದರೆ ಕಣ್ಣು ಮುಚ್ಚಿಕೊಂಡೆ ಹೌದೆನ್ನಬೇಕಾಗುತ್ತದೆ.
ಇನ್ನು ಚಿತ್ರದ ಕಥೆಗೆ ಬರೋಣ.ಅಡಿಗರ ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ ಕವನದ ಸಾಲಿನಲ್ಲಿ ಸಿನಿಮಾದ ಎಳೆಯಿದೆ. ಮಾನವ ತನ್ನಲ್ಲಿರುವುದಕ್ಕಿಂತ ಇರದುದರೆಡೆಗೆ ವಾಲುವುದು ಜಾಸ್ತಿ. ಅದು ಮನುಷ್ಯನ ಸಹಜ ಗುಣವೂ ಹೌದು. ಅದೇ ರೀತಿ ಚಿತ್ರದ ನಾಯಕ ಅನಾಥನಾದ್ದರಿಂದ ಆತನಿಗೆ ತುಂಬು ಕುಟುಂಬದ ಕನಸು. ಅದನ್ನು ನನಸು ಮಾಡಿಕೊಳ್ಳುವುದು ಹೇಗೆ..? ತಾನು ಜೂಜಾಟದಲ್ಲಿ ಗೆದ್ದ ಲಕ್ಷಾಂತರ ಹಣದಿಂದ ಅದನ್ನು ಸಾಕ್ಷಾತ್ಕಾರಗೊಳಿಸಿಕೊಳ್ಳಲು ಮುಂದಾಗುತ್ತಾನೆ.ಬಾಡಿಗೆಯ ತಂದೆ, ತಾಯಿ, ತಂಗಿ, ಅಣ್ಣ ಎಲ್ಲವನ್ನೂ ಎಲ್ಲರನ್ನೂ ತನ್ನ ಮನೆಯಲ್ಲಿರಿಸಿಕೊಳ್ಳುತ್ತಾನೆ . ಆ ಮೂಲಕ ತಾನು ಅನುಭವಿಸಿರದ ಮಾತೃ,ಪಿತೃ,ಭಾತೃ ಪ್ರೇಮವನ್ನು ಮನಸೋ ಇಚ್ಛೆ ಅನುಭವಿಸಲು ಆಶಿಸುತ್ತಾನೆ...ಆದರೆ ಆ ಬಾಡಿಗೆ ಸಂಬಂಧಿಕರಿಗೆ ಹಣದ ಮೇಲೆಯೇ ಕಣ್ಣು...ಮುಂದೆ ಅವರೆಲ್ಲರೂ ನಾಯಕನನ್ನು ಕೊಂದು ಹಣವನ್ನು ತಮ್ಮದಾಗಿಸಿಕೊಳ್ಳಲು ಹೊಂಚುಹಾಕುತ್ತಾರೆ. ಅವರು ಯಶಸ್ವಿಯಾಗುತ್ತಾರಾ..? ಇಲ್ಲವಾ ಎನ್ನುವುದು ಬೇರೆ ಮಾತು. ಆದರೆ ನಿರ್ದೇಶಕ ಗುರುಪ್ರಸಾದರ ಕಥೆಯಂತೂ ಜೀವಂತವಾಗಿದೆ. ಮಾನವೀಯ ಸಂಬಂಧಗಳ ಸೂಕ್ಷ್ಮತೆ, ಮಾನವೀಯ ಮೌಲ್ಯಗಳಿಗೆ ಪ್ರಸ್ತುತ ಇರುವ ಬೆಲೆಯನ್ನು ಇಡೀ ಚಿತ್ರದ ಮೂಲಕ ಕಟ್ಟಿಕೊಡುವ ಪ್ರಯತ್ನ ನಿರ್ದೇಶಕರಲ್ಲಿ ಎದ್ದು ಕಾಣುತ್ತದೆ.ಆದರೆ ಅದರಲ್ಲಿ ಸಂಪೂರ್ಣ ಯಶಸ್ವಿಯಾಗಿದ್ದಾರೆಯೇ..? ಎಂಬ ಪ್ರಶ್ನೆಗೆ ಇಲ್ಲ ಎಂಬ ಉತ್ತರ ರಾಚಿದಂತೆ ಬಂದುಬಿಡುತ್ತದೆ.
ಇಡೀ ಚಿತ್ರ ಹೆಚ್ಚುಕಡಿಮೆ ಒಂದೆ ಮನೆಯಲ್ಲಿ ನಡೆಯುತ್ತದೆ. ಚಟುವಟಿಕೆಗಳಿಗಿಂತ,  ಆಂಗಿಕ ಅಭಿನಯಕ್ಕಿಂತ ಬರೀ ಸಂಭಾಷಣೆಯೇ ಚಿತ್ರವನ್ನು ಪೂರ್ತಿಯಾಗಿ ಆವರಿಸಿಬಿಟ್ಟಿದೆ. ಅದು ನಿರ್ದೇಶಕರ ಶೈಲಿ ಎಂದು ಬಿಟ್ಟುಬಿಡೋಣ ಎನಿಸಿದರೂ ಅದರಿಂದ ಸಿನಿಮಾಕ್ಕೆ ಅಷ್ಟೊಂದು ಲಾಭವಾಗಿಲ್ಲವಾದ್ದರಿಂದ ಇಡೀ ಚಿತ್ರ ವಾಚ್ಯ ಎನಿಸಿ ನಿರೀಕ್ಷಿತ ಪರಿಣಾಮ ಬೀರುವಲ್ಲಿ ಸೋತಿದೆ. ಮೊದಲಾರ್ಧ ಸ್ವಲ್ಪ ಆರಾಮವಾಗಿ ಕಚಗುಳಿಯಿಡುತ್ತ ಸಾಗಿದರೂ ದ್ವಿತೀಯಾರ್ಧ ಬೋರಾಗುತ್ತದೆ. ಅಲ್ಲಲ್ಲಿ ಬರುವ ಸಂಭಾಷಣೆಗಳು ನಗಿಸಿದರೂ ದೃಶ್ಯದ ವಸ್ತುವೇ ಹಾಗಿರುವುದರಿಂದ ಆಕಳಿಕೆಯನ್ನು ತಡೆ ಹಿಡಿಯಲಾಗದು. ಗುರುಪ್ರಸಾದರ ಹಿಂದಿನ ಚಿತ್ರಗಳಲ್ಲಿದ್ದ ಲವಲವಿಕೆ, ತುಂಟತನ ಈ ಚಿತ್ರದಲ್ಲಿಲ್ಲ. ಮಠ ಚಿತ್ರದಲ್ಲಿ ಮಧ್ಯ ಮಧ್ಯ ಬರುತ್ತಿದ್ದ ಉಪಕಥೆ ತಂತ್ರವನ್ನು ಇಲ್ಲಿಯೂ ಬಳಸಿಕೊಳ್ಳಲಾಗಿದೆಯಾದರೂ ಅದರ ಪರಿಣಾಮ ಅಷ್ಟಕಷ್ಟೇ.
ಅಭಿನಯದ ವಿಷಯಕ್ಕೆ ಬಂದರೆ ನಾಯಕನಾಗಿ ಮೊದಲ ಬಾರಿಗೆ ಅಭಿನಯಿಸಿರುವ ಧನಂಜಯ್ ಭರವಸೆ ಮೂಡಿಸುತ್ತಾರೆ. ಇಡೀ ಚಿತ್ರಕ್ಕೆ ಕಂಬದಂತೆ ಹೆಗಲು ಕೊಟ್ಟಿರುವವರು ರಂಗಾಯಣ ರಘು. ಒಂದೇ ಮಾತಲ್ಲಿ ಹೇಳುವುದಾದರೆ ಅವರ ಅಭಿನಯ ಸೂಪರ್. ಇನ್ನುಳಿದಂತೆ ವತ್ಸಲಾ ಮೋಹನ್ ರಾಮ್ ಮತ್ತಿತರು ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಅನೂಪ್ ಸೀಳಿನ್ ರವರ ಹಿನ್ನೆಲೆ ಸಂಗೀತ ಚಿತ್ರದ ಮತ್ತೊಂದು ಮೆಚ್ಚಲಾರ್ಹ ಅಂಶವಾಗಿದೆ. ಎರಡೇ ಹಾಡುಗಳಿರುವ ಚಿತ್ರದಲ್ಲಿ ಪೂಜಾ ಗಾಂಧೀ ಅಭಿನಯದ ಐಟಂ ಹಾಡು ಗಮನ ಸೆಳೆಯುತ್ತದೆ.
ಗುರುಪ್ರಸಾದ್ ಕನ್ನಡ ಚಿತ್ರರಂಗ ಕಂಡ ಅಪರೂಪದ ನಿರ್ದೇಶಕರು ಎನ್ನುವುದರಲ್ಲಿ ಎರಡು ಮಾತಿಲ್ಲ. ಅವರು ತಮ್ಮ ವಿಶಿಷ್ಟ ಶೈಲಿಯ ಚಿತ್ರಕಥೆ-ನಿರೂಪಣೆಯಿಂದ ಗಮನ ಸೆಳೆದವರು. ಆದರೂ ಸಿನಿಮಾ ಒಂದು ದೃಶ್ಯ ಮಾಧ್ಯಮ. ಮಾತು-ಕಥೆ ಏನೇ ಚಂದವಿದ್ದರೂ ಅದರ ಜೊತೆಗೆ ದೃಶ್ಯೀಕರಣವೂ ಭವ್ಯವಾಗಿದ್ದರೆ ಸಿನಿಮಾದ ಒಟ್ಟು ಆಶಯ ಪ್ರೇಕ್ಷಕರನ್ನು ತಲುಪುವಲ್ಲಿ ಜಾಸ್ತಿ ಕಷ್ಟ ಪಡಬೇಕಾಗಿಲ್ಲ. ಇದು ಗುರುಪ್ರಸಾದರಿಗೆ ಗೊತ್ತಿಲ್ಲದಿರುವುದೇನಲ್ಲ.ಆದರೆ ಗುರುಪ್ರಸಾದ್ ತಮ್ಮ ಜಾಡನ್ನು ಬಿಟ್ಟು ಸರಿಯದೆ, ಅದರಲ್ಲೂ ಹೊಸತನ ತೋರದೆ ಮುಂದುವರೆಯುತ್ತಿರುವುದು ಚಿತ್ರರಸಿಕರ ನಿರೀಕ್ಷೆಗಳಿಗೆ ತಣ್ಣೀರೆರಚಿದಂತಾಗಿದೆ. ಹಾಗೆ ಗುರುಪ್ರಸಾದ್ ತಾವೇ ಹಾಕಿಕೊಂಡ ಚೌಕಟ್ಟಿನಿಂದ ಹೊರಬರಲಿ ಸಂಭಾಷನೆಯಾಚೆಗಿನ ದೃಶ್ಯರೂಪದ ಕಥಾನಕವನ್ನು ನಮ್ಮ ಮುಂದಿಡಲಿ ಎಂಬುದು ನಮ್ಮ ಆಶಯ.

No comments:

Post a Comment