Pages

Sunday, November 10, 2013

ಧನು

ಹೊಸಬರ ಚಿತ್ರ ಎಂದಾಗ ಏನೋ ಹೊಸತನವಿರುತ್ತದೆ ಎಂಬುದು ಎಲ್ಲಾ ಸಮಯದಲ್ಲೂ ಸತ್ಯವಾಗುವುದಿಲ್ಲ ಎನ್ನುವುದಕ್ಕೆ ತಕ್ಕ ಉದಾಹರಣೆ ಧನು ಚಿತ್ರ ಎನ್ನಬಹುದು. ಅತೀ ಸಾದಾರನವಾದ ಕಥೆ ಅಷ್ಟೇ ಅಥವಾ ಅದಕ್ಕಿಂತಲೂ ಸಾದಾರಣವಾದ ಚಿತ್ರಕಥೆ ಹೆಣೆದು ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ ನಿರ್ದೇಶಕ ಕೆ.ದೇವು.
ಚಿತ್ರದ ಆರಂಭ, ಮದ್ಯಂತರ ಅಂತ್ಯ ಚಿತ್ರಕಥೆ ಸಂಭಾಷಣೆ ಹೀಗೆ ಯಾವ ವಿಷಯದ ಮೇಲೂ ನಿರ್ದೇಶಕರು ಹಿಡಿತ ಸಾಧಿಸುವ ಪ್ರಯತ್ನಕ್ಕೆ ಕೈ ಹಾಕಿಲ್ಲ. ಅವರೇನಿದ್ದರೂ ನಾನಿ೦ಗೆ ಸಿನ್ಮಾ ತೆಗೀತೀನಿ ನೀವಂಗೆ ನೋಡ್ತೀರಿ ಎನ್ನುತ್ತಾರೆ.
ಸಿನೆಮಾಕ್ಕೊಮ್ದು ಕಥೆಯಿದೆ. ಅದಕ್ಕೆ ಚಿತ್ರಕಥೆಯೂ ಇದೆ. ಅಪ್ಪ ಅಮ್ಮನನ್ನು ಕಂಡರೆ ಮಗನಿಗೆ ಪ್ರೀತಿ..ಅವರಿಂದಾಗಿ ಒಂದು ಕೊಲೆ.ಜೈಲಿನಿಂದ ಹೊರಬರಲು ಒಬ್ಬಾತ ಸಹಾಯ ಮಾಡುತ್ತಾನೆ. ಹೊರಬಂದವನಿಗೆ ಸಮಾಜ ರೌಡಿ ಪಟ್ಟ ಕಟ್ಟುತ್ತದೆ. ಈ ಎಲ್ಲಾ ಗ್ಯಾಪಿನ ಮದ್ಯೆ ಒಂದು ಲವ್ ಮಾಡುತ್ತಾನೆ ನಾಯಕ. ಹಾದಿ ಕುಣಿಯ ಬೇಕಲ್ಲ...ಅದಕ್ಕೆ ಎನ್ನಬಹುದು. ಎದುರಾಳಿ ರೌಡಿಗಳು ಬಿಡುತ್ತಾರಾ? ಅಟ್ಟಾಡಿಸುತ್ತಾರೆ. ಇಂವ ಹೀರೋ ತಾನೂ ಓಡಾಡಿಸುತ್ತಾನೆ. ಅವಳನ್ನು ಮದುವೆಯಾಗಬೇಕು, ಎದುರಾಳಿಗಳನ್ನು ಮಟ್ಟ ಹಾಕಬೇಕು ಇವಿಷ್ಟನ್ನೂ ಕ್ಲೈಮಾಕ್ಸ್ ನಲ್ಲಿ ಮಾಡಿಕೊಳ್ಳೋಣ ಎಂದು ಕೊಂಡು ಅಲ್ಲಿಯವರೆಗೆ ಏನೇನೋ ಮಾಡಿ ಪರದೆಯ ಮೇಲೆ ಟೈಮ್ ಪಾಸ್ ಮಾಡುತ್ತಾನೆ ನಾಯಕ. ಅವನ ಜೊತೆಗೆ ಇಡೀ ಚಿತ್ರತಂಡ ಸಾಥ್ ಕೊಡುತ್ತದೆ. ಆದರೆ ಹೊರಗೆ ಕುಳಿತ ಪ್ರೇಕ್ಷಕ ಮಾತ್ರ ಟೈಮ್ ಅನ್ನೋದು ಪಕ್ಕಾ 420 ಗುರು..ಇಂತ ಸಿನ್ಮಾಕ್ಕೆ ಬಂದಾಗಲೇ ಮುಂದಕ್ಕೆ ಓಡದೆ ಇಲ್ಲ ಅಂದುಕೊಂಡು ಪದೇ ಪದೇ ಗಡಿಯಾರವನ್ನೂ ಮೊಬೈಲನ್ನೂ ನೋಡಿಕೊಳ್ಳುತ್ತಾನೆ.
ಅಭಿನಯದ ವಿಷಯಕ್ಕೆ ಬಂದರೆ ನಾಯಕ ಸಂತೋಷ ನಟಿಸಿದ್ದಾರೆ. ಆದರೆ ಹೊಡೆದಾಟದಲ್ಲಿ ಹೆಚ್ಚು ಆಸಕ್ತಿ ವಹಿಸಿದ್ದಾರೆ.ಮಾತಾಡುವಾಗ, ಭಾವನಾತ್ಮಕ ಸನ್ನಿವೇಶಗಳಲ್ಲಿ ಅವರ ಅಭಿನಯ ಅಷ್ಟಕಷ್ಟೇ.ನಾಯಕಿ ಖುಷಿ ಚಿತ್ರದುದ್ದಕ್ಕೂ ಖುಷಿಯಾಗಿದ್ದಾರೆ. ನಗುತ್ತಾರೆ. ಅಳುತ್ತಾರೆ..ಎಲ್ಲವನ್ನೂ ನಾಯಕನಿಗೆ ಬಿಟ್ಟು ತಾವು ಸುಮ್ಮನಿದ್ದು ಬಿಡುತ್ತಾರೆ.ಮುನಿ ಖಳನಟನಾಗಿ ಅರಚುತ್ತಾರೆ.ಪೆಟ್ರೋಲ್ ಪ್ರಸನ್ನ ಕಿರುಚುತ್ತಾರೆ.ಬುಲೆಟ್ ನಗಿಸಲು ಪ್ರಯತ್ನಿಸುತ್ತಾರೆ.
ಸಾಹಿತ್ಯವಾಗಲಿ ಸಂಗೀತವಾಗಲಿ ಗಮನ ಸೆಳೆಯುವುದಿಲ್ಲ. ಛಾಯಾಗ್ರಹಣವೂ ಅಷ್ಟೇ.ಇನ್ನುಳಿದಂತೆ ಬೇರೆ ವಿಭಾಗಗಳು ಚಿತ್ರದಲ್ಲಿವೆ ಎಂದಷ್ಟೇ ಹೇಳಬಹುದು ಅಷ್ಟು ಬಿಟ್ಟರೆ ಅವುಗಳ ಕುಶಲತೆ ಕುಸುರಿ ಕೆಲಸ ಕಾಣಿಸುವುದಿಲ್ಲ.
ನಿರ್ದೇಶಕರು ಒಂದಷ್ಟು ಸಿನಿಮಾ ನೋಡಿ ಈ ಸಿನಿಮಾ ಮಾಡಿದ್ದಾರೆ. ಇಷ್ಟಿದ್ದರೆ ಸಾಕು ಬಿಡು ಎನ್ನುವ ಧೋರಣೆ ಅವರದಿರಬಹುದು. ಆದರೆ ಪ್ರೇಕ್ಷಕನಿಗೆ ಅಷ್ಟು ಸಾಲುವುದಿಲ್ಲ. ಹಾಗಾಗಿ ಇನ್ನು ಮುಂದಾದರೂ ನಿರ್ದೇಶಕರು ಸಿಕ್ಕ ಅವಕಾಶವನ್ನು ಬಳಸಿಕೊಂಡರೆ ಉತ್ತಮ ಚಿತ್ರಗಳನ್ನು ನೀಡಲು ಸಾಧ್ಯ.

No comments:

Post a Comment