Pages

Sunday, November 10, 2013

ಕಾಡುವ ನೆರಳು ಸ್ವಲ್ಪ ಮಸುಕು..

ನೆರಳು ಒಂದು ರಹಸ್ಯಮಯ ರೋಮಾನ್ಹಕ ಚಿತ್ರ. ಅದನ್ನು ಆ ಚಿತ್ರದ ಭಿತ್ತಿಪತ್ರಗಳು ಸಾದರ ಪಡಿಸುತ್ತವೆ. ಅದೇನು ರಹಸ್ಯ ಒಮ್ಮೆ ನೋಡೇ ಬಿಡೋಣ ಎಂದು ಹೊರಟರೆ ನಿಮಗೇನೂ ಅಂತಹ ನಿರಾಸೆಯಾಗುವುದಿಲ್ಲ. ಹಾಗಂತ ಅಂತಹ ರೋಮಾಂಚನವೂ ಆಗುವುದಿಲ್ಲ ಎಂದರೆ ನಿರ್ದೇಶಕರು ಬೇಸರ ಮಾಡಿಕೊಳ್ಳಬಾರದು.
ಇದು ನಿರ್ದೇಶಕ ವಿನೋದ್ ರ ಮೊದಲ ಚಿತ್ರ. ಈ ಚಿತ್ರ ಬಿಡುಗಡೆಯಾಗುವ ಮೊದಲೇ ಅವರು ದಿವಂಗತರಾಗಿರುವುದರಿಂದ ಕೊನೆಯ ಚಿತ್ರವೂ ಹೌದು. ಕಥೆಯಾ ವಿಷಯಕ್ಕೆ ಬಂದರೆ ಒಂದು ರಹಸ್ಯಮಯ ವಿಭಾಗದ ಚಿತ್ರಕ್ಕೆ ಇರಬೇಕಾದ ಕಥೆ ಇದೆ. ಆದರೆ ಇಲ್ಲಿ ತಪ್ಪಿರುವುದು ಚಿತ್ರಕಥೆ. ಇಬ್ಬರು ಪ್ರೇಮಿಗಳ ನಡುವೆ ಮತ್ತೊಬ್ಬಳು ಬರುತ್ತಾಳೆ. ಅಲ್ಲಿ ಜಟಾಪಟಿ ನಡೆದು ಅದೆಲ್ಲಾ ಪೋಲಿಸ್ ಸಮ್ಮುಖದಲ್ಲಿ ಸರಿಹೋಗುತ್ತದೆ. ಇದೆಲ್ಲಾ ಕಾಲೇಜಿನಲ್ಲಿ ನಡೆಯುತ್ತದೆ. ಸರಿ. ಕಾಲೇಜು ಮುಗಿಯಿತು. ಈಗ ಮಧ್ಯ ಬಂದವಳ ಮದುವೆಯಾಗಿದೆ. ತನ್ನ ಸಂಸಾರದ ಜೊತೆ ಆರಾಮಾವಾಗಿದ್ದಾಳೆ. ಆಗ ಶುರುವಾಗುತ್ತದೆ ನೋಡಿ ಫೋನಿನ ಕಾಟ..ಅನಾಮಿಕನ ಕಾಟ..ಅವನ್ಯಾರು..ಅದ್ಯಾರು ನೆರಳಾಗಿ ಕಾದುವವನು..? ಕಾಲೇಜಿನಲ್ಲಿದ್ದ ದ್ವೇಷಿಯಾ..? ಇದನ್ನೆಲ್ಲಾ ನಾಯಕಿ ಸುಲಭದಲ್ಲಿ ಬಿಡಿಸಲು ಸಾಧ್ಯವಾಗುವುದಿಲ್ಲ. ಅದಕ್ಕೆ ಪತ್ತೇದಾರಿ ಬರುತ್ತಾನೆ. ಅವನೇನು ಮಾಡುತ್ತಾನೆ..? ಹೇಗೆ ಕಂಡು ಹಿಡಿಯುತ್ತಾನೆ ಎಂಬುದೆಲ್ಲರ ಕುತೂಹಲಕ್ಕೆ ಒಮ್ಮೆ ಚಿತ್ರ ಮಂದಿರಕ್ಕೆ ಧಾವಿಸಬಹುದು.
ಚಿತ್ರದ ಆರಂಭದಲ್ಲಿ ಸ್ವಲ್ಪ ಜಾಳು ಜಾಳು ಎನಿಸುತ್ತದೆ. ಅಂದರೆ ಮಧ್ಯಂತರದ ನಂತರದ ಕಥೆಯ ಬಗ್ಗೆ ನಿರ್ದೇಶಕರಿಗೆ ಸ್ಪಷ್ಟ ಚಿತ್ರಣ ಇದೆಯಾದರೂ ಅಳಿಯವರೆಗಿನ ಕಥೆಗೆ ಚಿತ್ರಕಥೆಗೆ ಅವರು ಹೆಚ್ಚು ಗಮನ ಕೊಟ್ಟಿಲ್ಲ. ಹಾಗಾಗಿಯೇ ಮೊದಲಾರ್ಧ ಆಕಳಿಕೆ ತರಿಸುತ್ತದೆ. ಅಂದರೆ ಕೆಲವು ದೃಶ್ಯಗಳನ್ನು ಅನಾವಶ್ಯಕವಾಗಿ ತುರುಕಿದಂತೆ ಭಾಸವಾಗುತ್ತದೆ. ಆದರೆ ಚಿತ್ರದ ಸತ್ವ ವಿರುವುದು ದ್ವಿತೀಯ ಭಾಗದಲ್ಲಿ. ದ್ವಿತೀಯ ಭಾಗದ ಕಥೆ ಚೆನ್ನಾಗಿದೆ. ಚಿತ್ರಕಥೆಯೂ ಪೂರಕವಾಗಿದೆ.ಅಲ್ಲಲ್ಲಿ ಗೊಂದಲ ಮತ್ತು ಅವುಗಳ ನಿವಾರಣೆ ಮುಂತಾದವುಗಳನ್ನು ನಿರ್ದೇಶಕರು ಜಾಣತನದಿಂದ ನಿರ್ವಹಿಸಿದ್ದರೂ ಅದರಲ್ಲಿ ಇನ್ನೂ ಜಾಗರೂಕತೆ ಬೇಕಾಗಿತ್ತು. ಯಾಕೆಂದರೆ ಒಂದು ರೋಮಾಂಚಕ ಚಿತ್ರಕ್ಕೆ ಅದೇ ಅಂದರೆ ನಿರೂಪಣೆಯೇ ಜೀವಾಳ. ಆ ನಿರೂಪಣೆಯನ್ನು ಸ್ವಲ್ಪ ಬಿಗಿಗೊಳಿಸಿದ್ದರೆ ಚಿತ್ರವನ್ನು ಪ್ರೇಕ್ಷಕ ಉಸಿರುಗಟ್ಟಿ ನೋಡುವನ್ತಿರುತ್ತಿತ್ತು. ಹಾಗಂತ ಇಡೀ ಚಿತ್ರ ತೆಗೆದು ಹಾಕುವ ಹಾಗೂ ಇಲ್ಲ.
ತಾರಾಗಣದ ವಿಷಯದಲ್ಲಿ ಆಕಾಶ ಮತ್ತು ಸಂಜೀವ್ ತಕ್ಕ ಮಟ್ಟಿಗೆ ಅಭಿನಯಿಸಿದ್ದಾರೆ.ನಾಯಕಿ ಶ್ರುತಿ ರಾಜ್ ರನ್ನು ಭಾವುಕ ಸನ್ನಿವೇಶಗಳಲ್ಲಿ ಅರಗಿಸಿಕೊಳ್ಳಗದು.ಹಾಡುಗಳಲ್ಲಿ ಕಾಣುವ ಅವರ ತನ್ಮಯತೆ ನಟನೆಯಲ್ಲಿ ಕಾಣುವುದಿಲ್ಲ.ಇನ್ನುಳಿದ ಪೋಷಕ ಪಾತ್ರಧಾರಿಗಳು ಅನುಭವಿಗಲಾದ್ದರಿಂದ ಅವರ ಅಭಿನಯದ ಬಗ್ಗೆ ಸೊಲ್ಲು ಎತ್ತುವಂತಿಲ್ಲ. ಶಂಕರ್ ಛಾಯಾಗ್ರಹಣ ಮತ್ತು ಶ್ರೀಹರ್ಷರ ಸಂಗೀತ ಸಾದಾರಣ. ಅದರಲ್ಲೂ ಹಿನ್ನೆಲೆ ಸಂಗೀತ ಇನ್ನೂ ಪರಿಣಾಮಕಾರಿಯಾಗಿದ್ದರೆ ಚಿತ್ರಕ್ಕೆ ಇನ್ನೂ ಬಲಬರುತ್ತಿತ್ತೇನೋ.. ಒಟ್ಟಿನಲ್ಲಿ ಥ್ರಿಲ್ಲರ್ ಪ್ರಿಯರು ಒಮ್ಮೆ ನೋಡಬಹುದಾದ ಚಿತ್ರ 'ನೆರಳು'

No comments:

Post a Comment