Pages

Sunday, November 10, 2013

ಸ್ಟೋರಿ, ಕಥೆ:



ಹೊಸಬರ ಚಿತ್ರಗಳೆಂದರೆ ಯಾವತ್ತಿಗೂ ನಿರೀಕ್ಷೆ ಜಾಸ್ತಿ. ಇತ್ತೀಚಿಗೆ ಕನ್ನಡದಲ್ಲಿ ಅದು ಕಡಿಮೆಯಾಗಿರಬಹುದು. ಆದರೂ ಒಬ್ಬ ನಿರ್ದೇಶಕ ಹೊಸದಾಗಿ ಚಿತ್ರರಂಗಕ್ಕೆ ಕಾಲಿರಿಸಿದನೆಂದರೆ ಅವನ ಮೊದಲ ಕನಸಿನಕೂಸಿನ ಜೊತೆಯೇ ಹೆಜ್ಜೆಯಿಕ್ಕಿರುತ್ತಾನೆ. ಹಾಗಾಗಿ ಆತನ ವ್ಯಕ್ತಿತ್ವ, ಜಗತಿನೆಡೆಗೆ ಅಥವಾ ಸಿನಿಮಾದೆಡೆಗೆ ಅವನಿಗಿರುವ ದೃಷ್ಟಿಕೋನ ಆ ಚಿತ್ರದಲ್ಲಿ ಬಿಂಬಿತವಾಗುತ್ತದೆ.
ಸ್ಟೋರಿ ಕಥೆ ನಿರ್ದೇಶಕ ಜಗದೀಶ್ ರವರ ಮೊದಲ ನಿರ್ದೇಶನದ ಚಿತ್ರ. ಅವರು ಮೊದಲ ಚಿತ್ರದ ನಿರೂಪಣೆಯನ್ನು ಸ್ವಲ್ಪ ವಿಭಿನ್ನ ರೂಪದಲ್ಲಿ ತೆರೆ ಮುಂದಿಡಲು ಪ್ರಯತ್ನಿಸಿದ್ದಾರೆ. ಎರಡು ಕಥೆಯನ್ನು ಸಮಾನಾಂತರ ರೇಖೆಯ ಮೂಲಕ ಪ್ರೇಕ್ಷಕರಿಗೆ ಹೇಳಲು ಪ್ರಯತ್ನಿಸಿ ದ್ದಾರೆ. ಅದರಲ್ಲಿ ಸಂಪೂರ್ಣವಾಗಿ ಯಶಸ್ವಿಯಗಿದ್ದಾರಾ..? ಆ ಪ್ರಶ್ನೆಗೆ ಉತ್ತರ ಹುಡುಕುವ ಮುನ್ನ ಒಂದು ಮಾತಂತೂ ಹೇಳಲೇಬೇಕು:ಏನಾದರೂ ಹೊಸದನ್ನು ಮಾಡಬೇಕೆಂಬ ತುಡಿತವಂತೂ ನಿರ್ದೇಶಕರಿಗೆ ಇದೆ.ಎರಡು ಭಿನ್ನವಾದ ಕಥೆಗಳಿವೆ. ಎರಡರಲ್ಲೂ ಸಮಾನ ಅಂಶವಾಗಿರುವುದು ಮಾತ್ರ ಹಣ ಮತ್ತು ಜೀವನ. ಇಬ್ಬರು ಪ್ರೇಮಿಗಳು ಚೆನ್ನಾಗಿ ಬದುಕಲು ಪ್ರೀತಿಯಷ್ಟೇ ಸಾಲದು ಹಣವೂ ಬೇಕು ಎಂದು ಬಲವಾಗಿ ನಂಬಿರುವವರು.ಹಾಗಾಗಿ ಹಣ ಸಂಪಾದಿಸಿಬೇಕೆಂಬುದು ಆತನ ಕನಸು. ಅದನ್ನು ನನಸು ಮಾಡಿಕೊಳ್ಳಲು ಅವನು ಛಲವಾದಿಯಂತೆ  ದುಡ್ಡಿನ ಬೆನ್ನುಬೀಳುತ್ತಾನೆ.
ಇನ್ನೊ೦ದು ಕಥೆ ಒಬ್ಬ ವೈದ್ಯವಿಜ್ಞಾನಿಯದು. ಮನುಷ್ಯನನ್ನು ಅಮರನನ್ನಾಗಿ ಮಾಡಿಬಿಡುವ ಸಂಜೀವಿನಿಯ ಅನ್ವೇಷಣೆ ಆತನದು. ಅದರ ಮೂಲಕ ಹಣದ ಸುರಿಮಳೆಯಾಗುತ್ತದೆ ಎಂಬುದು ಅವನ ಅನಿಸಿಕೆ. ದುಡ್ಡಿನ  ಹಿಂದೆ ಬಿದ್ದಾಗ ಬೇರೆಲ್ಲಾ ಅಂಶಗಳೂ ಗೌಣವಾಗುತ್ತವಲ್ಲವೇ..ಇಲ್ಲಿಯೂ ಅದೇ ಆಗುತ್ತದೆ.ಅವರ ಹಾದಿ ಸುಗಮವಾಗುತ್ತದೆಯೇ....ಈ ದಾರಿಯಲ್ಲಿ ಅವರು ಪಡೆದುಕೊಳ್ಳುವುದಾದರೋ ಏನು..ಕಳೆದುಕೊಂಡಿದ್ದಾದರೂ ಏನು...ಎನ್ನುವ ಪ್ರಶ್ನೆಗಳಿಗೆ ಉತ್ತರಬೇಕೆಂದರೆ ಸ್ಟೋರಿ ಕಥೆಯ ಒಳಹೊಕ್ಕು ಬರಬೇಕು.
ಎರಡೂ ಕಥೆಗಳೂ ಭಿನ್ನವಾಗಿವೆ. ಹಾಗಂತ ಇದು ಬಾಂಬೆ ಟಾಕೀಸ್, ಕಥಾಸಂಗಮದ ತರಹದ ಪ್ರತ್ಯೇಕ ಕಥೆಯ ಸಿನಿಮಾಗಳಲ್ಲ. ಇಲ್ಲಿ ನಿರ್ದೇಶಕರು ಎರಡೂ ಕಥೆಯ ಚಿತ್ರಕಥೆಯನ್ನು ಆಸಕ್ತಿಕರವಾಗಿ ಜೋಡಿಸಿದ್ದಾರೆ. ಒಂದು ದೃಶ್ಯಕ್ಕೂ ಇನ್ನೊದು ದೃಶ್ಯಕ್ಕೂ ನಡುವಿನ ರೂಪಾಂತರದಲ್ಲಿ ಭಿನ್ನತೆ ಮೆರೆದಿದ್ದಾರೆ. ಹಾಗಂತ ಒಂದು ಪರಿಪೂರ್ಣ ಥ್ರಿಲ್ಲರ್ ಚಿತ್ರವಾಗಿ ಸ್ಟೋರಿ ಕಥೆ ಹೊರಹೊಮ್ಮಿದೆ ಎಂಬರ್ಥವಲ್ಲ. ಕಥೆಗಳು ಆಸಕ್ತಿಕರವಾಗಿದ್ದರೂ ಎಲ್ಲೋ ಏನೋ ಕೊರತೆ ಎದ್ದು ಕಾಣುತ್ತದೆ. ಬಹುಶ ಕೆಲವು ದೃಶ್ಯಗಳು ಉದ್ದ ಅದಕ್ಕೆ ಕಾರಣವಿರಬಹುದು. ಹಾಗೆ ಚಿತ್ರದ ಅಂತ್ಯ ಕೂಡ ಅಂತಹ ಸರ್ಪ್ರೈಸ್ ಅಥವಾ ಥ್ರಿಲ್ಲಿಂಗ್ ಎನಿಸುವುದಿಲ್ಲ. ಛಾಯಾಗ್ರಹಣ, ಹಿನ್ನೆಲೆ ಸಂಗೀತ ಸಿನಿಮಾಕ್ಕೆ ತಕ್ಕಂತಿದೆ. ಸಂಕಲನದಲ್ಲಿ ಇನ್ನೂ ಸ್ವಲ್ಪ ಹರಿತವಿದ್ದರೆ ಚೆನ್ನಾಗಿರುತ್ತಿತ್ತೇನೋ...? ತಿಲಕ್, ಪ್ರತಾಪ್ , ನೇಹಾ ಪಾಟೀಲ್, ಪಾರ್ವತಿ ನಾರಾಯಣ್ , ನಾರಾಯಣ ಸ್ವಾಮೀ ಮುಂತಾದ ಕಲಾವಿದರ ಕಥೆಗೆ ತಕ್ಕಂತೆ ಅಭಿನಯಿಸಿದ್ದಾರೆ. ಒಟ್ಟಾರೆಯಾಗಿ ಹೇಳಬೇಕೆಂದರೆ ಇಡೀ ಚಿತ್ರತಂಡ ನವೀನತೆಯ ತುಡಿತಕ್ಕಾಗಿ ಮಾಡಿರುವ ಪ್ರಯತ್ನವನ್ನು ಒಮ್ಮೆ ನೋಡಿ ಪ್ರಶಂಸಿಸಬಹುದಾಗಿದೆ.

No comments:

Post a Comment