Pages

Sunday, November 10, 2013

ದಿಲ್ ವಾಲಾ


ಓಡುವ ರೈಲಿನ ಜೊತೆಯಲ್ಲಿ ನಾಯಕಿ ರಾಧಿಕಾ ಪಂಡಿತ್, ಹಾರುವ ಕುದುರೆಯ ಜೊತೆ ನಾಯಕ ಶಮಂತನನ್ನು ಅದ್ದೂರಿಯಾಗಿ ಪರಿಚಯ ಮಾಡಿಕೊಡುತ್ತಾರೆ ನಿರ್ದೇಶಕ ಅನಿಲ್ ಕುಮಾರ್. ಚಿತ್ರದ ಶೀರ್ಷಿಕೆಯ ಸಮಯದಲ್ಲೇ ಇದೊಂದು ಅನನ್ಯ ಪ್ರೇಮಕಥೆಯಿರಬಹುದು ಎನ್ನುವ ಅನಿಸಿಕೆಯನ್ನು ಹುಟ್ಟುಹಾಕುತ್ತಾರೆ.
ಆದರೆ ಚಿತ್ರ ಮುಂದುವರೆದಂತೆ ಅತ್ತ ಪ್ರೇಮಕಥೆಯೂ ಅಲ್ಲದ, ಸಾಹಸಮಯ ಚಿತ್ರವೂ ಅಲ್ಲದ ಹಾಸ್ಯವೂ ಅಲ್ಲದ ಎಡಬಿಡಂಗಿ ಚಿತ್ರ ಎನ್ನುವುದು ಪ್ರೇಕ್ಷಕನಿಗೆ ಗೊತ್ತಾಗಿಬಿಡುತ್ತದೆ. ಚಿತ್ರದಲ್ಲಿ ಭರ್ಜರಿ ಹೊಡೆದಾಟ ಬರುತ್ತದೆ. ಎಲ್ಲೆಂದರೆ ಅಲ್ಲಿ ಬರುವ ಹೊಡೆದಾಟಗಳು ಆ ಕ್ಷಣಕ್ಕೆ ರಂಜಿಸುತ್ತವೆ ಹೊರತು ಕಥೆಯ ಗತಿಗಾಗಲಿ, ಓಘಕ್ಕಾಗಲಿ ಸಹಾಯ ಮಾಡುವುದಿಲ್ಲ. ರಸ್ತೆಯಲ್ಲಿ, ಕಾಲೇಜಿನಲ್ಲಿ, ಮಾರುಕಟ್ಟೆಯಲ್ಲಿ ರೆಸಾರ್ಟಿನಲ್ಲಿ ಹೀಗೆ. ಅಲ್ಲಿಗೇಕೆ ನಾಯಕ ಹೋಗಿದ್ದ ಎಂಬ ಪ್ರಶ್ನೆಯನ್ನು ನೀವು ನಾವು ಕೇಳಬಾರದು.
ಇಡೀ ಚಿತ್ರ ಬಜೆಟ್ಟು ಮತ್ತು ತಾಂತ್ರಿಕವಾಗಿ ಅದ್ದೂರಿಯಾಗಿದೆ. ಶ್ರೀಮಂತಿಕೆ ಪ್ರತಿ ಪ್ರೇಮಿನಲ್ಲೂ ಎದ್ದು ಕಾಣುತ್ತಿದೆ. ಹಾಡುಗಳು ಸಾದಾರಣ ಎನಿಸಿದರೂ ತೆಗೆದುಹಾಕುವ ಹಾಗಿಲ್ಲ. ಹೊಡೆದಾಟಗಳಂತೂ ಸೂಪರ್. ಕಥೆಯೂ ಇದೆ. ಆದರೆ ಅದಕ್ಕೆ ತಲೆಬುಡವಿಲ್ಲ. ಹೇಗೋ ದ್ವಿತೀಯಾರ್ಧದವರೆಗೆ ಚಿತ್ರವನ್ನು ತಳ್ಳಿಕೊಂಡು ಹೋಗುವ ನಿರ್ದೇಶಕರು ದ್ವಿತೀಯಾರ್ಧದಲ್ಲಿ ಗೊಂದಲಕ್ಕೆ ಬಿದ್ದು ಬಿಟ್ಟಿದ್ದಾರೆ. ಸಿನಿಮಾ ಹೇಗೇಗೋ ಸಾಗಿ ತಲೆ ಚಿಟ್ಟು ಹಿಡಿಸುತ್ತದೆ.
ಒಬ್ಬ ಹುಡುಗ ಒಂದು ಹುಡುಗಿ ಕಾಲೇಜಿನಲ್ಲಿ ಬೇಟಿಯಾಗಿ ಪ್ರೀತಿಸಿ ಕೊನೆಗೆ ಮದುವೆಯಾಗುತ್ತಾರೆ ಎಂಬುದಷ್ಟೇ ಕಥೆ. ಆದರೆ ಚಿತ್ರಕಥೆ ಸೂತ್ರ ಹರಿದ ಗಾಳಿಪಟ. ಪಾತ್ರಪೋಷಣೆಯಲ್ಲೂ ನಿರ್ದೇಶಕರಿಗೆ ಸ್ಪಷ್ಟ ನಿಲುವಿಲ್ಲ. ಹಾಗಾಗಿ ಇಡೀ ಚಿತ್ರ ಸೊರಗಿದೆ.
ಅಲ್ಲಲ್ಲಿ ಕಚಗುಳಿಯಿಕ್ಕುವ ಸಂಭಾಷಣೆ ನಗಿಸುತ್ತದೆ. ಕೊನೆಯಲ್ಲಿ ಬರುವ ಐದಾರು ನಿಮಿಷಗಳ ರವಿಶಂಕರ್ ದೊಂಬರಾಟ ನಗೆಯುಕ್ಕಿಸಿದರೂ ಅದು ತೀರಾ ಅತಿಯಾಯಿತು ಎಣಿಸದೆ ಇರುವುದಿಲ್ಲ.
ಅಭಿನಯದ ವಿಷಯಕ್ಕೆ ಬಂದರೆ ಶಮಂತ್ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಲು ಪ್ರಯತ್ನಿಸಿದ್ದಾರೆ. ರಾಧಿಕಾ, ಜೈಜಗದೀಶ್, ವೀಣಾ ಸುಂದರ್, ರವಿಶಂಕರ್, ಶರತ್ ಲೋಹಿತಾಶ್ವ, ರಮೇಶ್ ಭಟ್, ಸಾಧುಕೋಕಿಲ ತಮ್ಮ ಪಾತ್ರಗಳನ್ನೂ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.ಅರ್ಜುನ್ ಜನ್ಯರ ಸಂಗೀತ ಸುಧಾಕರ್ ಛಾಯಾಗ್ರಹಣ ಪ್ರಶಂಸನೀಯ.
 ಆದರೆ ನಿರ್ದೇಶಕರ ಕೆಲಸವೇ ಇಲ್ಲಿ ಅತೃಪ್ತಕರವಾದದ್ದು. ಈ ಮೊದಲಿಗೆ ಶಕ್ತಿ ಎಂಬ ಮಾಲಾಶ್ರೀ ಅಭಿನಯದ ಚಿತ್ರವನ್ನು ನಿರ್ದೇಶನ ಮಾಡಿದ್ದ ಅನಿಲ್ ಕುಮಾರ್ ಗೆ ಇಲ್ಲಿ ಭರ್ತಿ ಅವಕಾಶಗಳಿತ್ತು.ಆದರೆ ಕಥೆ ಚಿತ್ರಕತೆಯನ್ನು ಹಳ್ಳ ಹಿಡಿಸಿರುವ ಅನಿಲ್ ಕುಮಾರ್ ಚಿತ್ರದಲ್ಲಿನ ಅಷ್ಟೂ ಪ್ರಯತ್ನಕ್ಕೆ ತಿಲಾಂಜಲಿ ಇಟ್ಟುಬಿಟ್ಟಿದ್ದಾರೆ.
ಇನ್ನಾದರೂ ಅನಿಲ್ ಕುಮಾರ್ ತರಹದ ನಿರ್ದೇಶಕರು ತಮಗೆ ಒಳ್ಳೆಯ ಅವಕಾಶ ಸಿಕ್ಕಿದಾಗ ಉತ್ತಮ ಕಥೆ-ಚಿತ್ರಕಥೆ ಯನ್ನು ಹೆಣೆದು ಚಿತ್ರ ಮಾಡಿದಾಗ ಅದು ಸಾರ್ಥಕ ಎನಿಸಿಕೊಳ್ಳುತ್ತದೆ.

No comments:

Post a Comment