Pages

Sunday, November 10, 2013

ಟುಸ್ ಪಟಾಕಿ:



ಒಂದು ಹಾಸ್ಯಮಯ ಚಿತ್ರಕ್ಕೆ ಪೂರ್ವ ತಯಾರಿ ಎನ್ನುವುದು ಅತ್ಯಗತ್ಯ. ಒಂದು ಕಥೆ ಅಥವಾ
ಕಥಾ ಎಳೆ ಕೇಳುವಾಗ ಹಾಸ್ಯಮಯ ಚಿತ್ರಕ್ಕೆ ಸೂಕ್ತ ವಸ್ತು ಎನಿಸಬಹುದು. ಆದರೆ ಅದನ್ನು ದೃಶ್ಯರೂಪಕ್ಕೆ ತಂದಾಗ ಅದೇ ಭಾವ ಉಳಿದುಕೊಳ್ಳುತ್ತದಾ..? ಒಬ್ಬ ನಿರ್ದೇಶಕನಿಗೆ ಸವಾಲಿನ ಕೆಲಸವೆಂದರೆ ಇದೆ. ಬರಹ ರೂಪದಲ್ಲಿನ ಭಾವವನ್ನು ಯಥಾವತ್ತಾಗಿ ಚಿತ್ರೀಕರಿಸಿದಲ್ಲಿ ಅದನ್ನು ನಾವು ನೂರಕ್ಕೆ ನೂರು ಯಶಸ್ಸಿನ ಕೆಲಸ ಎನ್ನಬಹುದು. ಆನೆ ಪಟಾಕಿ ನೋಡಿದ ಮೇಲೆ ಈ ಮಾತುಗಳನ್ನು ಹೇಳಬೇಕೆನಿಸಿದ್ದು ನಿಜ. ಆನೆಪಟಾಕಿ ೧೯೬೮ರಲ್ಲಿ ತೆರೆಗೆ ಬಂದು ಭಾರತದಲ್ಲಿ ನಿಷೇಧಕ್ಕೊಳಗಾಗಿದ್ದ ಪೀಟರ್ ಸೆಲ್ಲರ್ಸ್ ನಿರ್ದೇಶನದ ಪಾರ್ಟಿ ಚಿತ್ರದ ಯಥಾವತ್ತು ರೂಪ. ಒಂದು ಐಟಂ  ಹಾಡಷ್ಟೇ ಹೊಸ ಜೋಡಣೆ. ಅದನ್ನೇ ನಮ್ಮ ಸೊಗಡಿಗೆ ಬದಲಾಯಿಸುವಲ್ಲಿ ಮಾಡಿಕೊಂಡ ಬದಲಾವಣೆ ಎಂದರೆ ಅದೇ ಒಂದು ಹಾಸ್ಯದ ಸಂಗತಿಯಾದೀತು.
 ಚಿತ್ರದಲ್ಲಿನ ಕಥೆ ನಡೆಯುವುದೂ ಚಿತ್ರರಂಗದ ಹಿನ್ನೆಲೆಯಲ್ಲೇ. ಒಬ್ಬ ಯಡವಟ್ಟು ಬುದ್ದಿಯ ನವನಾಯಕನೊಬ್ಬ ನಿರ್ಮಾಪಕರ ಮದುವೆ ವಾರ್ಷಿಕೋತ್ಸವಕ್ಕೆ ಬಂದಾಗ ಆಗುವ ಅನಾಹುತಗಳೇ ಚಿತ್ರದ ಕಥಾವಸ್ತುವಿನ ಮೂಲದ್ರವ್ಯ. ನಾಯಕನಾಗಿ ಚಿತ್ರರಂಗಕ್ಕೆ ಬಂದು ಪೋಷಕನಟನಾಗಿ ಆನಂತರ ಕಿರುತೆರೆ ನಿರೂಪಕನಾಗಿದ್ದ ಸೃಜನ್ ಲೋಕೇಶ್ರವರಿಗೆ  ಮತ್ತೆ ನಾಯಕನ ಪಟ್ಟ ಕೊಟ್ಟಿರುವ ಚಿತ್ರ ಇದು. ಆದರೆ ಎಲ್ಲೂ ಗಮನಸೆಳೆಯುವುದಿಲ್ಲ. ಹಾಸ್ಯವೆಂದರೆ ಬರೀ ಮಾತು, ಅದರಲ್ಲೊಂದಷ್ಟು ಪಂಚಿಂಗ್, ಒಂದಷ್ಟು ಪೋಲಿತನ ಎಂದುಕೊಂಡ ನಿರ್ದೇಶಕರು ಕಲಾವಿದರ ಕೈಯಲ್ಲಿ ಹೆಚ್ಚುಕಡಿಮೆ ಮಂಗಾಟವನ್ನೇ ಆಡಿಸಿಬಿಟ್ಟಿದ್ದಾರೆ. ಕಲಾವಿದರುಗಳೂ ಅಷ್ಟೇ. ಬಲವಂತವಾಗಿಯಾದರೂ ನಗಿಸಲೇ ಬೇಕೆಂಬ ಹಠಕ್ಕೆ ಬಿದ್ದವರಂತೆ ಅಗತ್ಯಗಿಂತ ಹೆಚ್ಚು ಕಿರುಚಾಡಿ ಶಬ್ಧಮಾಲಿನ್ಯವನ್ನೇ ಸೃಷ್ಟಿಸಿದ್ದಾರೆ. ಇದೆ ಚಿತ್ರವನ್ನ ಸಹಿಸಲಸಾಧ್ಯವನ್ನಾಗಿ ಮಾಡಿಬಿಟ್ಟಿದೆ. ಪ್ರಾರಂಭದಲ್ಲಿ ಮುಂದೇನೋ ಇದೆ ಎನಿಸುತ್ತಾದರೂ ಬರುಬರುತ್ತಾ ಹಳಸಲು ಜೋಕುಗಳು ನಗಿಸುವಲ್ಲಿ ವಿಫಲವಾಗುತ್ತವೆ.ಭೈರೇಗೌಡ ಎಂಬುದು ನಾಯಕನ ಹೆಸರು. ರಕ್ಷಿತಾ ನಾಯಕಿಯ ಹೆಸರಾದರೆ, ನಾಯಕನ ಗೆಳೆಯನ ಪಾತ್ರದ ಹೆಸರು ಆದಿ. ಹಾಗಾಗಿ ಇಲ್ಲಿ ನಿರ್ದೇಶಕರು ಮತ್ತೊಬ್ಬ ನಿರ್ದೇಶಕರ ಕಾಲು ಎಳೆಯುವ ಪ್ರಯತ್ನಮಾಡಿದ್ದರೂ ಅದು ಅಂತಹ ಆರೋಗ್ಯಕರವೆನಿಸುವುದಿಲ್ಲ. ಈಗಾಗಲೇ ನಾವು ನೋಡಿರುವ ಬಹುತೇಕ ಹಾಸ್ಯಕಲಾವಿದರೆಲ್ಲರೂ ಈ ಚಿತ್ರದಲ್ಲಿದ್ದಾರೆ. ಸರದಿಯ ಮೇಲೆ ಒಬ್ಬರಾದ ಮೇಲೆ ಮತ್ತೊಬ್ಬ ಕಲಾವಿದರು ಬಂದು ನಗಿಸುವ ವಿಫಲ ಪ್ರಯತ್ನಮಾಡುತ್ತಾರೆ.
ಪಾರ್ಟಿಯ ಕಥಾವಸ್ತು ಚೆನ್ನಾಗಿತ್ತು. ನಿರ್ದೇಶಕ/ಚಿತ್ರಕಥೆಗಾರ ಅದನ್ನು ಒಂದಷ್ಟು ಸಮಯ ತೆಗೆದುಕೊಂಡು ಸ್ಕ್ರಿಪ್ಟ್ ಮಾಡಿದ್ದರೆ ಒಂದು ಭೇಜಾ ಫ್ರೈ ತರಹದ ಚಿತ್ರವಾಗುತ್ತಿತ್ತೇನೋ. ಆದರೆ ನಿರ್ದೇಶಕರು ಅಂತಹ ರಿಸ್ಕ್ ತೆಗೆದುಕೊಂಡಿಲ್ಲ. ಹಾಸ್ಯ ಕಲಾವಿದರಿದ್ದರೇ ಸಾಕು ಜನರನ್ನು ನಗಿಸಬಹುದು ಎಂದುಕೊಂಡಿದ್ದಾರೆ. ಹಾಗಾಗಿಯೇ ಉತ್ತಮ ಕಥೆಯ ಎಳೆಯಿದ್ದ ಚಿತ್ರ ಇಲ್ಲಿ ಪೇಲವವಾಗಿ ಜನರ ಕಾಸಿಗೆ, ನಿರೀಕ್ಷೆಗೆ ನ್ಯಾಯ ಒದಗಿಸಿಲ್ಲ.
ಸೃಜನ್ ಲೋಕೇಶ್ ಸೇರಿದಂತೆ ರಂಗಾಯಣ ರಘು, ಸಾಧುಕೋಕಿಲ, ಜೈಜಗಧೀಶ್ ಮುಂತಾದ ಕಲಾವಿದರು ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದರೂ ಪಾತ್ರಪೋಷಣೆಯೇ ಗಟ್ಟಿಯಿಲ್ಲದಿರುವುದರಿಂದಾಗಿ ಅವರ ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿಲ್ಲ.
ತಾಂತ್ರಿಕ ವಿಭಾಗದಲ್ಲಿ ಧರ್ಮರ  ಸಂಗೀತ ಹೊಸದೆನಿಸುವುದಿಲ್ಲ. ಹಾಗೆ ಜೆ.ಎಸ್.ವಾಲಿ ಛಾಯಾಗ್ರಹಣವೂ. ಇನ್ನು ರಾಜೇಂದ್ರ ಕಾರಂತರ ಸಂಭಾಷಣೆಯಲ್ಲಿ ಹಳೆಯ ಸವಕಲು ಜೋಕುಗಳು ಎರ್ರಾಬಿರ್ರಿ ಇಣುಕಿರುವುದರಿಂದ ಚಿತ್ರದ ಗುಣಮಟ್ಟವನ್ನು  ಒಂದು ಹೆಜ್ಜೆ ಹಿಮ್ಮೆಟ್ಟಿಸಿದೆ.
ಒಟ್ಟಾರೆಯಾಗಿ ಆನೆಪಟಾಕಿ ಜೋರಾಗಿ ಸದ್ದು ಮಾಡಿ ನಗೆ ಬಾಂಬಾಗದೆ, ಟುಸ್ ಪಟಾಕಿಯಾಗಿಬಿಟ್ಟಿದೆ .

No comments:

Post a Comment