Pages

Sunday, November 10, 2013

ಜಟಾಯು,...


ಸಿನಿಮಾ ಒಂದು ಟೀಮ್ ವರ್ಕ್. ಒಬ್ಬೇ ಒಬ್ಬ ವ್ಯಕ್ತಿ ತನಗಿಷ್ಟ ಬಂದಹಾಗೆ ಸಿನಿಮಾ ಮಾಡಿ ಪ್ರೇಕ್ಷಕರನ್ನು ಮೆಚ್ಚಿಸುವುದು ಸುಲಭವಲ್ಲ. ಒಬ್ಬ ನಟ, ನಿರ್ಮಾಪಕನ ಮೊದಲ ಸಿನಿಮಾ ಸೋತಾಗ ಅದಕ್ಕೆ ಹಲವಾರು ಕಾರಣಗಳಿದ್ದರೂ ನಿರ್ದೇಶಕ ಮೊದಲು ತಲೆಕೊಡಬೇಕಾಗುತ್ತದೆ. ಹಾಗೆ ಆದಾಗ ನಿರ್ದೇಶಕ ಚಿತ್ರ ಚೆನ್ನಾಗಿ ಮಾಡಲಿಲ್ಲ ಎಂದುಕೊಂಡು ಮತ್ತೊಂದು ಚಿತ್ರಕ್ಕೆ ಬೇರೊಬ್ಬ ನಿರ್ದೇಶಕನನ್ನು ಆಯ್ಕೆ ಮಾಡುವ ಬದಲಿಗೆ ತಾನೇ ಏಕೆ ನಿರ್ದೇಶಿಸಬಾರದು ಎಂಬ ನಿರ್ಧಾರಕ್ಕೆ ನಿರ್ಮಾಪಕರು, ನಟರು ಬಂದು ಅದಕ್ಕೆ ಕೈಹಾಕಿಬಿಡುತ್ತಾರೆ. ಇದು ಬೇರೆಲ್ಲಾ ಭಾಷೆಗಳಿಗಿಂತ ಕನ್ನಡದಲ್ಲೇ ಹೆಚ್ಚು. ನಮ್ಮಲ್ಲಿ ಎಲ್ಲರಿಗೂ ನಿರ್ದೇಶಕನ ಕುರ್ಚಿಯ ಮೇಲೆಯೇ ಕಣ್ಣು. ನಿರ್ದೇಶನ ಎಂದರೆ ಇಷ್ಟೇ..? ಎಂಬಂತಹ ನಿರ್ಧಾರಗಳು ಇಂಥ ಚಿತ್ರಗಳಿಗೆ ಕಾರಣವಾಗುತ್ತವೆ.
ಸುಮಾರು ಚಿತ್ರಗಳಲ್ಲಿ ಸಹನಟನಾಗಿ ದುಡಿದಿದ್ದ ರಾಜ್ ಸಂಚಾರಿಯಲ್ಲಿ ಮೊದಲ ಬಾರಿಗೆ ನಾಯಕನಟನಾಗಿ ಅಭಿನಯಿಸಿದ್ದರು.ಚಿತ್ರದಲ್ಲಿ ಸುಮಧುರ ಹಾಡುಗಳಿದ್ದರೂ ಚಿತ್ರ ಗಮನಸೆಳೆದಿರಲಿಲ್ಲ. ಈಗ ರಾಜ್ ಮತ್ತೊಂದು ಚಿತ್ರ ’ಜಟಾಯು’ ವನ್ನು ನಮ್ಮ ಮುಂದಿಟ್ಟಿದ್ದಾರೆ. ಈ ಚಿತ್ರದಲ್ಲಿ ನಟಿಸುವುದರ ಜೊತೆಗೆ ಕಥೆ-ಚಿತ್ರಕಥೆ ಬರೆದು ನಿರ್ದೇಶನದ ದೊಡ್ಡ ಜವಾಬ್ದಾರಿಯನ್ನೂ ತಮ್ಮ ಹೆಗಲ ಮೇಲೆ ಎಳೆದುಕೊಂಡಿದ್ದಾರೆ. ಆದರೆ ಅದರಲ್ಲಿ ಯಶಸ್ಸು ಕಂಡಿದ್ದಾರೆಯೇ?
ಒಬ್ಬ ದುರುಳ ಊರ ಗೌಡ, ಅವನಲ್ಲಿಯೇ ಕೆಲಸ ಮಾಡುವ ನಾಯಕ, ಅವನಿಗೊಬ್ಬಳು ಪ್ರೀತಿಯ ತಂಗಿ..ಮುಂದೆ  ತಂಗಿಯ ಮೇಲೆ ಗೌಡನ ಕಣ್ಣು..ಅತ್ಯಾಚಾರ, ಅನಾಚಾರ..ನಾಯಕನ ರೌದ್ರಾವತಾರ..ದುಷ್ಟಸಂಹಾರ..ಇಷ್ಟೆಲ್ಲಾ ಹೊಡೆದಾಡುವ ನಾಯಕನಿಗೆ ನಾಯಕಿ ಇಲ್ಲದಿದ್ದರೆ ಹೇಗೆ..ಮಧ್ಯ ಮಧ್ಯ ಹಾಡುಗಳು..ಇದಿಷ್ಟೇ  ಕಥೆ. ನಿಮಗೆ ಈವತ್ತಿಗೂ ಟಿವಿಯಲ್ಲಿ ಬರುವ ಹಲವಾರು ಹಳೆಯ ಚಿತ್ರಗಳು ನೆನಪಾಗುತ್ತವಲ್ಲವೇ..?
ಕಥೆ ಇಷ್ಟೇ ಆದರೂ ಪರವಾಗಿಲ್ಲ. ಆದರೆ ನಿರೂಪಣೆಯಲ್ಲಾದರೂ ಹೊಸತಿದ್ದರೆ  ಚಿತ್ರ ಸಹನೀಯವಾಗುತಿತ್ತು. ಆದರೆ ರಾಜ್ ಅದರ ಬಗ್ಗೆ ತಲೆಕೆಡಿಸಿಕೊಂಡಿಲ್ಲ.  ಅವರು ತಲೆಕೆಡಿಸಿಕೊಂಡಿರುವುದು ತಮ್ಮ ದೇಹವನ್ನು ಹುರಿಗೊಳಿಸಿಕೊಂಡು ಸಿಕ್ಸ್ ಪ್ಯಾಕ್ ಮಾಡಿಕೊಳ್ಳುವುದಕ್ಕೆ ಹಾಗೆ ಸಿನಿಮಾದಲ್ಲಿನ ಹೊಡೆದಾಟಕ್ಕೆ. ಹೌದು. ರಾಜ್ ಅಭಿನಯಕ್ಕಿಂತ ಹೆಚ್ಚು ಪ್ರಾಶಸ್ತ್ಯ ಕೊಟ್ಟಿರುವುದು ಹೊಡೆದಾಟಕ್ಕೆ. ಮಾತು ಮಾತಿಗೂ ಹೊಡೆದಾಟ..! ಹಾಗಾಗಿಯೇ ಅಯ್ಯೋ ಮುಗೀತಾನೆ ಇಲ್ವಲ್ಲಪ್ಪ..ಎಷ್ಟೊತ್ತೂಂತ ಹೊಡೇದಾಡ್ತಾನೋ ಎನಿಸುವಷ್ಟು ದೀರ್ಘಾವಧಿಯ ಹೊಡೆದಾಟಗಳಿವೆ.ಅದೇ ಸಿನಿಮಾವನ್ನು ಇನ್ನಷ್ಟು ಅಸಹನೀಯವನ್ನಾಗಿ ಮಾಡಿದೆ ಎಂದರೆ ತಪ್ಪಾಗಲಾರದು.
ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದಾರೆ, ಸುರಭಿ ಮತ್ತು ರೂಪಶ್ರೀ. ಸುರಭಿ ಚಿತ್ರದಲ್ಲಿ ಚೆನ್ನಾಗಿ ಕಾಣಿಸುತ್ತಾರೆ ಹಾಗೆ ನಟಿಸಿದ್ದಾರೆ.ಊರಗೌಡನಾಗಿ ಅವಿನಾಶ್ ಪಾತ್ರೋಚಿತ ಅಭಿನಯ ಮಾಡಿದ್ದಾರೆ. ಉಳಿದ ಹಲವಾರು ಪಾತ್ರಧಾರಿಗಳು ಹೀಗೆ ಬಂದು ಹಾಗೆ ಹೋಗುತ್ತಾರೆ.
ಇನ್ನು ತಾಂತ್ರಿಕ ಅಂಶಗಳ ಬಗ್ಗೆ ಹೇಳುವುದಾದರೆ ನಂದಕುಮಾರ್ ರ ಛಾಯಾಗ್ರಹಣ ಪರವಾಗಿಲ್ಲ. ಹಾಗೆ ವಿನಯ್ ಚಂದ್ರರ ಸಂಗೀತಕ್ಕೂ ಇದೇ ಮಾತು ಅನ್ವಯಿಸುತ್ತದೆ.
ಇಷ್ಟು ಹೇಳಿದ ಮೇಲೂ ಒಬ್ಬ ನಿರ್ದೇಶಕ ತನ್ನ ಮೊದಲ ಚಿತ್ರ ನಿರ್ದೇಶಿಸಿದಾಗ ಕೆಲವು ತಪ್ಪುಗಳನ್ನು ನಗಣ್ಯಮಾಡಬೇಕಾಗುತ್ತದೆ. ಮೊದಲ ಚಿತ್ರವೇ ಶ್ರೇಷ್ಠ ಚಿತ್ರವಾಗಿರಬೇಕೆಂದೇನೂ ಇಲ್ಲ. ಆದರೆ ಬಲವಂತವಾಗಿ ಎಲ್ಲವನ್ನೂ ನಾನೇ ಮಾಡುತ್ತೇನೆ,ನನಗೆ ಗೊತ್ತಿರುವುದಷ್ಟೇ ಸತ್ಯ ಎಂಬ ಅತಿಭರವಸೆ, ಸೂಕ್ತವಾದ ಅದ್ಯಯನದ ಕೊರತೆ, ಕಥೆಯ ಬಗ್ಗೆ ಒಂದು ಪರಿಪೂರ್ಣತೆ, ನಿರ್ದೇಶನದ ಮೇಲೆ ಹಿಡಿತ ಇಲ್ಲದಿರುವುದು ಹಾಗೂ ಚಿತ್ರದ ಒಟ್ಟಾರೆ ಆಶಯದ ಬಗ್ಗೆ ಸ್ಪಷ್ಟ ಚಿತ್ರಣ, ದೃಷ್ಟಿ ಇಲ್ಲದಿದ್ದರೆ ಪ್ರೇಕ್ಷಕನ ಹಣಕ್ಕೇ, ಆತನ ಕುತೂಹಲಕ್ಕೆ ಸಿನಿಮಾದೆಡೆಗಿನ ವ್ಯಾಮೋಹಕ್ಕೆ ದೊಡ್ಡ ಪೆಟ್ಟು ಕೊಡುತ್ತವೆ. ಜಟಾಯು ಕೊಡ ಪ್ರೇಕ್ಷಕನಿಗೆ ನೋವಾಗುವಂತಹ ಪೆಟ್ಟುಕೊಡುವುದರಲ್ಲಿ ಹಿಂಜರಿದಿಲ್ಲ.

No comments:

Post a Comment