Pages

Sunday, November 10, 2013

ಲೂಸ್ ಗಳು

ಮೊದಲ ಮಾತುಃ ನಿರ್ದೇಶಕ ಅರುಣ ತಮ್ಮ ಮೊದಲ ಚಿತ್ರದಲ್ಲಿ ಭರವಸೆ ಹುಟ್ಟಿಸಿದ್ದಾರೆ. ಹಾಗೆಯೇ ಸಂಗೀತ ನಿರ್ದೇಶಕಿ ವಾಣಿ ಹರಿಕೃಷ್ಣ, ಛಾಯಾಗ್ರಾಹಕ ಚಿದಾನಂದ್,ಸಂಕಲನಕಾರ ಅಕ್ಷಯ್ ಮುಂತಾದವರಿಗೆ ಅವಕಾಶ ಕೊಡುವ ಮೂಲಕ ಒಂದಷ್ಟು ಹೊಸ ಪ್ರತಿಭೆಗಳು ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಲು ಸಹಾಯ ಮಾಡಿದ್ದಾರೆ. ಇದೆಲ್ಲದಕ್ಕೂ ಅರುಣ್ ಅವರನ್ನು ಮೆಚ್ಚಬೇಕಾಗುತ್ತದೆ.
ಲೂಸ್ ಗಳು ಚಿತ್ರ ಮೂರು ಜನ ಹುಡುಗರ ಚಿತ್ರ. ಮೂವರೂ ಭಿನ್ನ ಸ್ತರದವರು, ಭಿನ್ನ ಮನಸ್ಥಿತಿಯವರು. ಆದರೆ ಅವರ ಗುರಿ, ಅದಕ್ಕೆ ಬೇಕಾದದ್ದು ಒಂದೇ. ಅದೇನು? ಹಣ!.
ಹಣದ ಹಿಂದೆ ಬಿದ್ದರೇ ಏನೆಲ್ಲಾ ಅವಾಂತರಗಳು ಆಗುತ್ತವೆ ಎಂಬುದನ್ನು ಮೂರು ಮಂದಿಯ ಹುಚ್ಚಾಟದ ಮೂಲಕ ಹೇಳಹೊರಟಿದ್ದಾರೆ. ಅದಕ್ಕೆ ಒಂದು ಗಟ್ಟಿಯಾದ ಕಥೆಯನ್ನು ಮಾಡಿಕೊಂಡಿದ್ದಾರೆ. ಕುತೂಹಲಕಾರಿಯಾದ ಚಿತ್ರಕಥೆ ಹೆಣೆದಿದ್ದಾರೆ. ಸೂಕ್ತವಾದ ಕಲಾವಿದರನ್ನು ತಾರಾಮಂಡಲದಲ್ಲಿರಿಸಿದ್ದಾರೆ.ಇಷ್ಟೆಲ್ಲಾ ಇಟ್ಟುಕೊಂಡು ತಮ್ಮ ಸಾರಥ್ಯದಲ್ಲಿ ಪ್ರೇಕ್ಷಕರ ಮುಂದೆ ಲೂಸ್ ಗಳು ಚಿತ್ರವನ್ನು ತಂದಿಟ್ಟಿದ್ದಾರೆ.ಕಥೆಯಿದೆಯಾದರೂ ಅದು ಎಲ್ಲರಿಗೂ ಇಷ್ಟವಾಗುವಾ ಕಥೆಯಾ..? ಮೂರು ಜನ ಹುಡುಗರು ಮೂವರು ಹುಡುಗಿಯರು ಎಂದಾಕ್ಷಣ ತುಂಟುತನ, ಸರಸ ಸಲ್ಲಾಪಗಳನ್ನು ಊಹಿಸಿ ಬರುವ ಪ್ರೇಕ್ಷಕನಿಗೆ ಚಿತ್ರ ಭ್ರಮಾನಿರಸನ ಮಾಡಬಹುದು. ಕಾರಣ ಚಿತ್ರದ ಕಥೆಯೇ ಹಾಗಿದೆ. ಒಮ್ಮೆ ಜಾಲಿಯಾಗಿ ಖುಷಿಯಾಗಿ ಚಿತ್ರ ಮುಂದುವರೆದರೇ ಒಮ್ಮೊಮ್ಮೆ ಇದ್ದಕ್ಕಿದ್ದಂತೇ ಇಡೀ ಚಿತ್ರವೇ ಗಂಭೀರವಾಗಿಬಿಡುತ್ತದೆ. ಆನಂತರ ಒಂದು ರೀತಿಯ ಸಸ್ಪೆನ್ಸ್ ಚಿತ್ರದಂತೆ ಭಾಸವಾಗಿ ಕುತೂಹಲ ಕೆರಳಿಸುತ್ತದೆ. ಇದೇ ಚಿತ್ರದ ಧನಾತ್ಮಕ ಅಂಶ ಮತ್ತು ಹಾಗೆಯೇ ಋಣಾತ್ಮಕ ಅಂಶ ಎನ್ನಬಹುದು. ಯಾಕೇಂದರೇ ಚಿತ್ರದಲ್ಲಿ ಒಂದು ಭಾವ ಕ್ಯಾರಿಯಾಗುವುದಿಲ್ಲ. ಪ್ರೇಕ್ಶಕನಿಗೆ ಪದೇ ಪದೇ ಮೂಡು ಬದಲಾಯಿಸಬೇಕಾದ ಅನಿವಾರ್ಯತೆ ಎದುರಾಗುವುದು ಕಿರಿಕಿರಿ ಉಂಟುಮಾಡುತ್ತದೇನೋ.?
ಅಕುಲ್ ಬಾಲಾಜಿ ಟ್ಯಾಕ್ಸಿ ಚಾಲಕ, ಅಮ್ಮನಿಗೆ ಖಾಯಿಲೆಯಿರುವುದರಿಂದ ಮೈತುಂಬಾ ಸಾಲ ಮಾಡಿಕೊಂಡಿದ್ದಾನೆ.ಅವನಿಗೆ ಚಂದನೆಯ ಗೆಳತಿ ಇದ್ದಾಳೆ. ಶ್ರೀಕಿ ಒಬ್ಬ ಮೆಕ್ಯಾನಿಕ್. ಬಡತನ, ಸಮಾಜೆಡೆಗಿನ ರೋಷಾವೇಶದ ಜೊತೆ ಮುದ್ದಾದ ಪ್ರೇಯಸಿ ಅವನಿಗೂ ಇದ್ದಾಳೆ. ಶ್ರೀಮುರಳಿ ಒಬ್ಬ ಶೋಕಿಲಾಲ, ಹಣವಿದೆ. ಅವನಿಗೂ ಅವನದೇ ರೀತಿಯ ಗೆಳತಿಯಿದ್ದಾಳೆ. ಮೂರುಜನ ಯುವಕರು ಒಂದು ಅನೂಹ್ಯ ಪರಿಸ್ಥಿತಿಯಿಂದಾಗಿ ಒಂದೆಡೇ ಸೇರುತ್ತಾರೆ. ಮುಂದೇನಾಗುತ್ತದೆ ಎಂಬುದನ್ನು ಒಂದು ಸಾಲಿನಲ್ಲಿ ಹೇಳಲಾಗುವುದಿಲ್ಲ. ಅದಕ್ಕೆ ಇಡೀ ಚಿತ್ರವನ್ನು ನೋಡಬೇಕು.
ಮೊದಲಾರ್ಧದ ಚಿತ್ರಕಥೆಗೆ ನೋಡಿಸಿಕೊಂಡು ಹೋಗುವ ಗುಣವಿದೆ. ಪ್ರತಿ ಪಾತ್ರದ ಹಿನ್ನೆಲೆಗಳನ್ನು ತೆರೆಯ ಮುಂದಿಡುವ ನಿರ್ದೇಶಕ ಶೈಲಿಯೂ ಸೊಗಸಾಗಿದೆಯಾದರೂ ಕೆಲವು ದೃಷ್ಯಗಳನ್ನು ವಿನಾಕಾರನ ಹಿಗ್ಗಿಸಿ ಬೋರು ತರಿಸಿಬಿಡುತ್ತಾರೆ ನಿರ್ದೇಶಕರು. ದ್ವಿತಿಯಾರ್ಧದಲ್ಲಿ ಒಂದಷ್ಟು ತಿರುವುಗಳು ಚಿತ್ರವನ್ನು ಕುತೂಹಲಕಾರಿಯಾಗಿ ಮಾಡುತ್ತವಾದರೂ ಅಂತ್ಯ ಉದ್ದವಾಯಿತೇನೋ ಎನಿಸುತ್ತದೆ. ಚಿತ್ರ ಮುಗಿದೇಹೋಯಿತು ಎನ್ನುವಷ್ತರಲ್ಲಿ ಮತ್ತೆ ಪ್ರಾರಂಭವಾಗುತ್ತದೆ.
ಅಲ್ಲಲ್ಲಿ ಬರುವ ಚುರುಕಾದ ಸಂಭಾಷಣೆಗಳು ಮನಸ್ಸಿಗೆ ಪಂಚ್ ಕೊಡುತ್ತವಾದರೂ ಕೆಲವು ಕಡೆ ಸಭ್ಯತೆಯನ್ನು ಮೀರಿದೆ ಎನಿಸುತ್ತದೆ. ಕೆಲವು ಘಟನೆಗಳಿಗೆ ಸಮರ್ಥನೆ ಇಲ್ಲ. ಹಾಗೆಯೇ ಕೊನೆಯಲ್ಲಿ ಬರುವ ಹಾಡು ಚಿತ್ರದ ಉದ್ದವನ್ನು ಹಿಗ್ಗಿಸಿದೆಯೇ ಹೊರತು ಅದರಿಂದ ಚಿತ್ರಕ್ಕೆ, ಚಿತ್ರದ ಕಥೆಗೆ ಯಾವುದೇ ಲಾಭವಾಗಿಲ್ಲ.
ಅಕುಲ್ ಬಾಲಾಜಿ, ಶ್ರೀಕಿ, ಶ್ರೀಮುರಳಿ ತಮ್ಮ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಐಶ್ವರ್ಯಾನಾಗ್, ಶ್ರಾವ್ಯ, ರೇಖಾರದು ಪಾತ್ರೋಚಿತ ಅಭಿನಯ. ಇನ್ನುಳಿದ ಪಾತ್ರಗಳಿಗೆ ಅವಕಾಶ ಕಡಿಮೆ.ವಾಣಿ ಹರಿಕೃಷ್ಣರ ಸಂಗೀತದಲ್ಲಿ ಎರಡು ಹಾಡುಗಳು ಚೆನ್ನಾಗಿವೆ.
ಕಥೆಯಲ್ಲಿ ಒಂದಷ್ಟು ಲವಲವಿಕೆ ಮತ್ತು ಪಾತ್ರಪೋಷಣೆಯಲ್ಲಿ ಗಟ್ಟಿತನವಿರಬೇಕಾಗಿತ್ತು ಎನಿಸಿದರೂ ನಿರ್ದೇಶಕ ಅರುಣ ರ ಮೊದಲ ಚಿತ್ರ ಇದಾದ್ದರಿಂದ ಅದನ್ನೆಲ್ಲಾ ಪಕ್ಕಕ್ಕಿರಿಸಿ ನೋಡಿದರೇ ಲೂಸ್ಗಳು ಚಿತ್ರಾ ತೀರಾ ಪಕ್ಕಕ್ಕೆತ್ತಿಡುವ ಚಿತ್ರವಲ್ಲ ಎನ್ನಬಹುದು.

No comments:

Post a Comment