Pages

Sunday, November 10, 2013

ಶತ್ರು



ಒಂದು ಪೋಲಿಸ್ ಅಧಿಕಾರಿಯ ಕಥೆಯುಳ್ಳ ಚಿತ್ರ ಎಂದಾಗ ಅಲ್ಲೇನೂ ತಾನೇ ವಿಭಿನ್ನವಾಗಿ ನಿರೀಕ್ಷಿಸಲು ಸಾಧ್ಯ. ಒಬ್ಬ ಖಳ..ಅವನನ್ನು ಮಟ್ಟ ಹಾಕಲೇ ಬೇಕಾದ ನಾಯಕ. ಚಿತ್ರರಂಗದ ಇತಿಹಾಸದಲ್ಲಿ ಇದೆಲ್ಲವನ್ನೂ ಮೀರಿ ಮಾಡಿದ ಪೋಲಿಸ್ ಕಥೆ ಯಾವುದಾದರೂ ಇದೆಯಾ..? ಆದರೂ ಒಂದು ಮನರಂಜನೀಯ ಮಸಾಲೆ ಕಥೆಗೆ ಪೋಲಿಸ್ ಪಾತ್ರ ಹೇಳಿಮಾಡಿಸಿದ ಪಾತ್ರ ಎನ್ನಬಹುದು.
ಕನ್ನಡದ ಮಟ್ಟಿಗೆ ಸಾಂಗ್ಲಿಯಾನ ಚಿತ್ರಗಳು ಮನೆ ಮಂದಿಯಲ್ಲ ಕುಳಿತು ನೋಡುವ ಪೋಲಿಸ್ ಸಿನಿಮಾಗಳಾದರೆ ಪೋಲಿಸ್ ಸ್ಟೋರಿ ಸ್ವಲ್ಪ ಅತಿರೇಕದ ಚಿತ್ರ ವಾಗಿತ್ತದು.
ಈಗ ಶತ್ರು ಚಿತ್ರವನ್ನೇ ತೆಗೆದುಕೊಳ್ಳಿ ನಾಯಕ ವಿಜಯ್ ಸೂರ್ಯ ಒಬ್ಬ ನಿಷ್ಠಾವಂತ ಖಡಕ್ ಪೋಲಿಸ್ ಅಧಿಕಾರಿ. ಈಗ ಅವನೇನು ಮಾಡಬೇಕು. ದುಷ್ಟರನ್ನು ಸಂಹಾರ ಮಾಡಬೇಕು. ಹಾಗಾಗಿ ನಿರ್ದೇಶಕರು ಒಬ್ಬ ದುಷ್ಟನನ್ನು ಸೃಷ್ಟಿಸಿದ್ದಾರೆ. ಅದು ಗಾಂಧಿಪುರ ಎಂಬ ಕಾಲ್ಪನಿಕ ಊರು. ಊರಲ್ಲಿ ಆದರ್ಶ ಜಾಸ್ತಿ. ಅಲ್ಲಿಗೆ ಬರುವ ಆದಿಶೇಷನಿಗೆ ಆ ನೆಲದ ಮೇಲೆ ಕಣ್ಣು. ಕಾರಣ ಅದರಡಿಯಲ್ಲಿ ಕೋಟ್ಯಾಂತರ ಹಣ ಕೊಳೆಯುತ್ತಾ ಬಿದ್ದಿದೆ. ಈಗ ಅದನ್ನು ಅವನದನ್ನಾಗಿ ಮಾಡಿಕೊಳ್ಳಬೇಕು. ಹಾಗಾಗಿ ಊರಲ್ಲಿ ನೆಲೆನಿಂತು ಊರಿನ ಹೆಸರನ್ನೇ ಬದಲಿಸಿ,ಅದನ್ನು ಕೇಶವಪುರ ಮಾಡಿ ತನ್ನ ದಬ್ಬಾಳಿಕೆ ಶೋಷಣೆ ಮಾಡಿ ಅಟ್ಟಹಾಸದಿಂದ ಮೆರೆಯುತ್ತಿದ್ದಾನೆ.
ಇದೋ ನೋಡಿ. ನಮ್ಮ ನಾಯಕ ವಿಜಯ್. ಖಡಕ್ ಪೋಲಿಸ್ ಅಧಿಕಾರಿ. ಒಮ್ಮೆ ದುಷ್ಟ ಸಂಹಾರ ಕಾರ್ಯದಲ್ಲಿ ಸುತ್ತಮುತ್ತಲಿನ ಪರಿವಿಲ್ಲದೇ ಒಬ್ಬನನ್ನು ಎನ್ಕೌಂಟರ್ ಮಾಡುತ್ತಾನೆ.ಅಲ್ಲಿಂದ ಅವನನ್ನು ಗಾಂಧಿಪುರಕ್ಕೆ ವರ್ಗಾವಣೆ ಮಾಡಲಾಗುತ್ತದೆ.
ಅಲ್ಲಿಗೆ ಇಲ್ಲಿಯವರೆಗೆ ಯಾವೊಬ್ಬ ಪೋಲಿಸ್ ಅಧಿಕಾರಿಯೂ ಕಾಲಿಕ್ಕಿಲ್ಲ. ಅಲ್ಲೂ ಒಂದು ಪೋಲಿಸ್ ಠಾಣೆಯಿದೆಯಾದರೂ ಅಲ್ಲಿರುವ ಪೇದೆಗಳು ಸುಮ್ಮನಿದ್ದಾರೆ ಅಷ್ಟೇ. ಹಾಗಾಗಿ ಅವರಿಗೆ ಅಲ್ಲಿ ಜಾಗ. ಇಂತಿಪ್ಪ ಠಾಣೆಗೆ ಇಂತಿಪ್ಪ ನಾಯಕ ಬಂದು ಅದೇನೇನನ್ನು ಮಾಡಬೇಕೋ ಮಾಡುವಲ್ಲಿಗೆ ಚಿತ್ರಕ್ಕೆ ಶುಭಂ. ಕೆಂಪೇಗೌಡ/ಸಿಂಘಂ ನಲ್ಲಿ ನಾಯಕ ಹಳ್ಳಿಯಿಂದ ದಿಲ್ಲಿಗೆ ಹೋಗುತ್ತಾನೆ, ದುಷ್ಟನನ್ನು ಮಟ್ಟ ಹಾಕುತ್ತಾನೆ, ಇಲ್ಲಿ ನಾಯಕ ದಿಲ್ಲಿಯಿಂದ ಹಳ್ಳಿಗೆ ಬರುತ್ತಾನೆ..ಅದೆಲ್ಲಾ ಸರಿ. ಅದನ್ನೇ ನೋಡುವ ಸಿನಿಮಾವನ್ನಾಗಿ ಆ ಖದರಿನ ಸಿನಿಮಾವನ್ನಾಗಿ ಮಾಡಿದ್ದಾರೆಯೇ ನಿರ್ದೇಶಕರು ಎಂಬ ಪ್ರಶ್ನೆಗೆ ಹೌದು ಎನ್ನಲಾಗದ ಇಲ್ಲಾ ಎನ್ನಲೂ ಆಗದ ತ್ರಿಶಂಕು ಪರಿಸ್ಥಿತಿ ನೋಡುಗನದು. ಚಿತ್ರದಲ್ಲಿ ಎಲ್ಲವೂ ಇದೆ.ಹೊಡೆದಾಟ, ಖಳ, ಶ್ರೀಮಂತಿಕೆ ಆದರೆ ಕೊರತೆಯಿರುವುದು ಕುತೂಹಲಕಾರಿ ಚಿತ್ರಕಥೆಯಲ್ಲಿ. ಖಳನ ತಂಗಿಯನ್ನು ಪ್ರೀತಿಸುವ ನಾಯಕ, ಅಬ್ಬರಿಸುವ ಖಳ, ಮಂಗನಂತಾಡುವ ಪೇದೆಗಳು ಹೀಗೆ.ಆದರೆ ಚಿತ್ರದ ಗತಿ ನಿಧಾನವಾಗಿದೆ. ಹಾಗೆಯೇ ನಾಯಕ ಬುದ್ದಿವಾದ ಹೇಳುತ್ತಾನೆ, ಇಲ್ಲಿ ಕೈಗೆ ಸಿಕ್ಕವರನ್ನು ಬಡಿಯುತ್ತಾನೆ ಎಂಬಂತಿದೆ ಚಿತ್ರಕಥೆ.
ಕಥೆಯಲ್ಲೂ ಇನ್ನೂ ಸ್ವಲ್ಪ ಗಟ್ಟಿತನವಿದ್ದು ಸ್ವಲ್ಪ ಮಟ್ಟದ ವಾಸ್ತವತೆಯನ್ನು ಬೆರೆಸಿದ್ದಾರೆ ಒಂದೊಳ್ಳೆ ಆಕ್ಷನ್ ಪ್ಯಾಕೇಜ್ ಕನ್ನಡಕ್ಕೆ ಆಗುತ್ತಿತ್ತೇನೋ?
ಲವ್ಲೀ ಸ್ಟಾರ್ ಪ್ರೇಂ ತಮ್ಮ ಇಮೇಜ್ ಮರೆತು ಖಡಕ್ಕಾಗಿ ಅಭಿನಯಿಸುವ ಪ್ರಯತ್ನ ಮಾಡಿದ್ದಾರೆ. ಕೆಲವು ಕಡೆ ಅವರ ಅಭಿನಯ ಸೋಗಸಾಗಿದ್ದರೂ ಅವರ ಮಾತಿನ ಶೈಲಿ ಬಲವಂತವಾಗಿದೆ ಎನಿಸುತ್ತದೆ. ನಾಯಕಿ ಡಿಂಪಲ್ ಚೋಪ್ರಾಗೆ ಹೆಚ್ಚಿನ ಕೆಲಸವೇನೂ ಇಲ್ಲ. ಹಾಡುಗಳಲ್ಲಿ ಹಾಜರಾಗಿ ತಮ್ಮ ಸಹಿ ಹಾಕಿ ಹೋಗುತ್ತಾರೆ.ಶರತ್ ಅಬ್ಬರಿಸಿದ್ದಾರೆ. ಇನ್ನುಳಿದಂತೆ ತಬಲಾ ನಾಣಿ, ಬುಲೆಟ್ ಪ್ರಕಾಶ್ ತಮ್ಮ ಪಾತ್ರಗಳಿಗೆ ಜೀವ ತುಂಬುವ ಪ್ರಯತ್ನಗಳನ್ನು ಮಾಡಿದ್ದಾರೆ. ಸುಜಿತ ಶೆಟ್ಟಿ ಸಂಗೀತದಲ್ಲಿ ಅಬ್ಬರವೇ ಜಾಸ್ತಿ. ಹಾಡುಗಳಿವೆಯಾದರೂ ಅವು ಚಿತ್ರಕಥೆಗೆ ಪೂರಕವಾಗಿಲ್ಲದೇ ಇರುವುದರಿಂದ ಮೊಸರಿನಲ್ಲಿ ಕಲ್ಲು ಹಾಕಿದ ಅನುಭವವಾಗುತ್ತದೆ. ಮ್ಯಾಥ್ಯು ರಾಜನ್ ಛಾಯಾಗ್ರಹಣ ಸಿನೆಮಾದ ಬಜೆಟ್ಟಿಗೆ ಅನುಗುಣವಾಗಿದೆ. ಮೊದಲ ಚಿತ್ರದಲ್ಲೇ ಆಕ್ಷನ್ ಚಿತ್ರದ ಕಥೆಯನ್ನು ಕೈಗೆತ್ತಿಕೊಂಡಿರುವ ನಿರ್ದೇಶಕ ಜೆ.ಕೆ. ಚಿತ್ರವನ್ನು ಸಾದಾರಣ ಚಿತ್ರ ಮಾಡಿ ತೃಪ್ತಿ ಪಟ್ಟಿಕೊಂಡಿದ್ದಾರೆ.
ಪ್ರೇಂ ರನ್ನು ಪೋಲಿಸ್ ಅಧಿಕಾರಿಯ ಪಾತ್ರದಲ್ಲಿ ನೋಡಲಿಚ್ಚಿಸುವವರು, ಸಾಹಸ ದೃಶ್ಯಗಳನ್ನ ಇಷ್ಟಪಡುವವರು ಒಮ್ಮೆ ಚಿತ್ರವನ್ನು ನೋಡಬಹುದು

No comments:

Post a Comment