Pages

Sunday, November 10, 2013

ಗೂಗ್ಲಿ

ಹೊಸ ಬಾಟಲಿನಲ್ಲಿ ಹಳೆಯ ಮದ್ಯ ಎನ್ನುವ ಮಾತು ಕ್ಲೀಷೆ ಎನಿಸಿದರೇ ಗೂಗ್ಲಿ ಚಿತ್ರವೂ ಒಮ್ಮೊಮ್ಮೆ ಹಾಗೆ ಎನಿಸುತ್ತದೆ.ಒಂದು ಹುಡುಗ ಒಂದು ಹುಡುಗಿ, ಸಿಕ್ಕರು ಅದರ ಕಾರಣ ಬಿಡಿ, ನಕ್ಕರು ಅದಕ್ಕೂ ಕಾರಣ ಬೇಕಿಲ್ಲ, ಆನಂತರ ಮಾಮೂಲಿಯಂತೆ ಚಿತ್ರಗಳಲ್ಲಿ ಮಾಡಲೇ ಬೇಕಾದ ಪ್ರೀತಿಯನ್ನು ಎಗ್ಗು ಸಿಗ್ಗಿಲ್ಲದೇ ಮಾಡಿದರು, ಆ ನೆಪದಲ್ಲಿ ಯುಗಳ ಗೀತೆ ಸುಂದರ ಪರಿಸರದಲ್ಲಿ ಹಾಡು ಕುಣಿತಗಳೂ ಆದವು. ಆಮೇಲೆ ಅವರು ಮದುವೆಯಾಗುವುದು ಒಂದಾಗುವುದು ಚಿತ್ರದ ಅಂತ್ಯ ಎನಿಸಿಕೊಳ್ಳುತ್ತಾದ್ದರಿಂದ ಅಲ್ಲಿಯವರೆಗೆ ಏನಾದರೊಂದು ಅಡೆತಡೆ, ಖಳರು ಹೀಗೆ...ಯಾವುದಾದರೊಂದು ಇರಲೆ ಬೆಕಲ್ಲ. ಈ ಕಥೆ, ಅಥವಾ ಈ ಕಥೆಯ ಚಿತ್ರವನ್ನು ನಾವೀಗಾಗಲೇ ನೋಡಿದ್ದಿವಿ ಎನ್ನಬಹುದು. ಆದರೇ ನಾನು ಮಾಡಿದ್ದು ಇದೇ ಮೊದಲು ಎನ್ನುತ್ತಾರೆ ಪವನ್ ಒಡೆಯರ್.
ಪವನ್ ಒಡೆಯರ್ ಅವರಿಗೆ ಎಲ್ಲವೂ ಸುಲಭ. ಯಸ್ ನಂತಹ ನಾಯಕ, ಕೃತಿ ಕರಬಂದಳಂತಹ ನಾಯಕಿ, ಪೋಷಕ ಪಾತ್ರಕ್ಕೆ ಅನಂತನಾಗ್, ಸುಧಾಬೆಳವಾಡಿ ಮತ್ತು ದುಡ್ಡು ಸುರಿಯಲು ಜಯಣ್ಣ ಭೋಗೇಂದ್ರ. ಇವರಷ್ಟೂ ಜನ ಇದ್ದ ಮೇಲೇ ಒಂದು ಸದಭಿರುಚಿಯ ಚಿತ್ರ ನಿರ್ಮಿಸಲು ಕಾರಣವೇ ಸಲ್ಲದು, ಕಥೆ ಎಂಬುದನ್ನು ಹೊರತು ಪಡಿಸಿ. ಇಲ್ಲಿ ಪವನ್ ಒಡೆಯರ್ ಗೆ ಎಲ್ಲವೂ ಸಿಕ್ಕಿದೆ. ಕಥೆ-ಚಿತ್ರಕಥೆ ಸಿಕ್ಕಿಲ್ಲ, ಹಾಗಾಗಿ ಚಿತ್ರ ಪೇಲವ.
ಚಿತ್ರದ ಕಥೆಯನ್ನು ಹೇಳಲೆಬೇಕೆನಿಸಿದರೇಃ ಅಪ್ಪ ಅಮ್ಮನ ಮುದ್ದಿನ ಮಗ ಯಶ್, ತಿಕ್ಕಲು ತಿಕ್ಕಲಾಗಿ ಆಡುವ ಅದ್ಭುತ ಪ್ರತಿಭಾವಂತ, ತಲೆ ಹರಟೆ. ನಾಯಕಿ ಸ್ವಾತಿ ಅನಾಥೆಯಾದರೂ ವೈದ್ಯಳಾಗಬೇಕೆಂಬಾಸೆಯ ಹುಡುಗಿ. ಸಿಕ್ಕಾಗ ಇಬ್ಬರಿಗೂ ಮೊದಲ ಸಾರಿ ಪ್ರೀತಿಯ ಜನನ. ಇಲ್ಲಿ ಇವರ ಪ್ರೀತಿಗೆ ಅಡೆತಡೇ ಮಾಡಲು ಖಳರಿಲ್ಲ. ಆದರೂ ಚಿತ್ರದ ಅವಧಿ ಎರಡು ಘಂಟೆ ಇಪ್ಪತ್ತು ನಿಮಿಷಗಳು. ಅಷ್ಟೊತ್ತಿನವರೆಗೆ ಏನಾಗಬಹುದೆಂಬ ಕುತೂಹಲವಿದ್ದರೇ ಒಮ್ಮೆ ಚಿತ್ರವನ್ನೊಮ್ಮೆ ನೋಡಬಹುದು.
ಮೊದಲ ಚಿತ್ರದಲ್ಲಿ ಮಾತಿನಲ್ಲೇ ಗಮನಸೆಳೆದಿದ್ದ ಪವನ್ ಒದೆಯರ್ ಇಲ್ಲೂ ಕೆಲವು ಕಡೆ ಮಾತಿನಲ್ಲಿ ಖುಷಿಕೊಡುತ್ತಾರೆ. ಆದರೆ ದೃಶ್ಯ ರೂಪದ ಪ್ರೇಮಕಾವ್ಯ ಬರೆಯುವುದರಲ್ಲಿ ಸೋತಿದ್ದಾರೆ. ಯಾವುದೇ ದೃಶ್ಯದ ಭಾವವು ಪ್ರೇಕ್ಷಕನಿಗೆ ಗಾಢವಾಗಿ ತಾಕುವುದೇ ಇಲ್ಲ. ಇದಕ್ಕೆ ಕಾರಣ ಪವನ್ ರ ಪೇಲವ ಚಿತ್ರಕಥೆ.ನಾಯಕನ ಪಾತ್ರ ಪೋಷನೆಯ , ನಟನ ಸ್ಟಾರ್ ಗಿರಿಯನ್ನು ಎತ್ತಿಹಿಡಿಯುವ ಭರದಲ್ಲಿ ಉಳಿದ ಪಾತ್ರಗಳನ್ನು ತೀರಾ ಕಡೆಗಾಣಿಸಿ ಅವುಗಳ ಮರ್ಯಾದೆ ತೆಗೆದುಬಿಟ್ಟಿದ್ದಾರೆ. ಹಾಗಾಗಿಯೇ ಹಾಸ್ಯಮಾತುಗಾರ ಕೃಷ್ಣೇಗೌಡ, ದಿವಂಗತ ಪಾರ್ಥಸಾರಥಿ, ಹೊನ್ನವಳಿ ಕೃಷ್ಣ ಮುಂತಾದವರ ಪಾತ್ರಗಳು ಹಾಸ್ಯಾಸ್ಪದವಾಗಿಬಿಟ್ಟಿವೆ. ಒಂದು ಕಾಲೇಜು ಅದರಲ್ಲಿನ ಪಾತ್ರಗಳನ್ನು ಸೃಷ್ಟಿಸುವಾಗ ಏನೆ ಸಿನಿಮೀಯ ಎನಿಸಿದರೂ ಅದರಲ್ಲಿ ವಾಸ್ತವದ ಅಂಶ ಇದ್ದಷ್ಟೂ ಪ್ರೇಕ್ಷಕರಿಗೆ ಹತ್ತಿರವಾಗುತ್ತದೆ. ಅದರ ಹೊರತಾಗಿ ಪ್ರಾಂಶುಪಾಲರು, ಗುರುಗಳು ಎಲ್ಲರೂ ಬಫೂನುಗಳಾದರೇ ಚಿತ್ರಕ್ಕೆ ಅಂತಹ ಉಪಯೊಗವಾಗುವುದಿಲ್ಲ.
ಜೋಶ್ವಾ ರವರ ಸಂಗೀತದಲ್ಲಿ ಮಜಾ ಇದೆ. ಹಾಡುಗಳೂ ಇನ್ನೂ ಇಂಪಾಗಿರಬೇಕಿತ್ತು ಎನಿಸಿದರೂ ತೀರಾ ತೆಗೆದುಹಾಕುವ ಹಾಗಿಲ್ಲ. ವೈದಿ ಅಾಯಾಗ್ರಹಣದಲ್ಲಿ ಸೊಗಸಿದೆ. ಬಣ್ಣಗಳಿವೆ. ಹಾಗಾಗಿ ಪ್ರತಿ ಚಿತ್ರಿಕೆಯೂ ವರ್ಣರಂಜಿತವಾಗಿ ಕಾಣುತ್ತದೆ. ಇನ್ನುಳಿದಂತೆ ಕಲಾವಿದರೆಲ್ಲಾ ಅನುಭವಿಗಳಾದ್ದರಿಂದ ಪಾತ್ರಗಳಿಗೆ ನ್ಯಾಯ ಸಿಕ್ಕಿದೆ.
 ಒಟ್ಟಿನಲ್ಲಿ ಯಶ್ ಅಭಿಮಾನಿಗಳಿಗೆ ಟೈಮ್ ಪಾಸ್ ಮಾಡುವವರಿಗೆ ಒಮ್ಮೆ ನೋಡಲಡ್ಡಿಯಿಲ್ಲದ ಸಿನಿಮಾ ಗೂಗ್ಲಿ.

No comments:

Post a Comment