Pages

Sunday, November 10, 2013

ಚೆಲ್ಲಾಪಿಲ್ಲಿ –ಗಲಿಬಿಲಿ:

ಚಲನಚಿತ್ರ ಕ್ಷೇತ್ರದಲ್ಲಿ ಹಾಸ್ಯಮಯ ಕಥಾವಸ್ತು ಹೊಂದಿರುವ ಚಿತ್ರಗಳಿಗೆ ಅದರದೇ ಆದ ಸ್ಥಾನಮಾನವಿದೆ. ಹಾಗೆಯೇ ಒಂದು ಒಳ್ಳೆಯ ಹಾಸ್ಯಮಯ ಚಿತ್ರಕ್ಕೆ ಬರೀ ನಗಿಸುವುದಷ್ಟೇ ಉದ್ದೇಶವಾಗಿರಬಾರದು ಅದರಲ್ಲಿ ಒಂದು ಸಂದೇಶವೂ ಇದ್ದಾಗ ಚಿತ್ರದ ಆಶಯ ಸಂಪೂರ್ಣವಗುತ್ತದೆ.ಉದಾಹರಣೆಗೆ ಮುನ್ನಾಭಾಯಿ ಸರಣಿಗಳು ಎನ್ನಬಹುದು.
ಸಂದೇಶವೂ ಬೇಡ ಬೇರೇನೂ ಬೇಡ ದುಡ್ಡು ಕೊಟ್ಟು ಚಿತ್ರಮಂದಿರದ ಒಳಗೆ ಬಂದ ಪ್ರೇಕ್ಷಕ ತನ್ನೆಲ್ಲಾ ಸುಖ ದುಖಗಳನ್ನು ಮರೆತು ಆರಾಮವಾಗಿ ಎರಡೂವರೆ ಘಂಟೆ ನಕ್ಕು ನಲಿದು ಖುಷಿಪಡುವ ರೀತಿಯ ಚಿತ್ರ ಮಾಡಿದಾಗಲೂ ಹಾಸ್ಯಮಯ ಚಿತ್ರದ ಆಶಯ ಸಂಪೂರ್ಣವಾಗುತ್ತದೆ ಎನ್ನಬಹುದೇನೋ..ಆದರೆ ಇತ್ತ ಒಳಬಂದ ಮೇಲೆ ನಗಲೂ ಆಗದೆ ಅಳಲೂ ಆಗದೆ ಹೊರಗಡೆ ಹೋಗಲೂ ಆಗದ ಪರಿಸ್ಥಿತಿ ಕೆಲವು ಹಾಸ್ಯಮಯ ಎಂದು ಹಣೆಪಟ್ಟಿ ಹೊತ್ತುಕೊಂಡ ಚಿತ್ರಗಳಿಗೆ ಹೋದಾಗ ಆಗಿಬಿಡುತ್ತದೆ. ಕೇವಲ ಮಂಗನಾಟ, ಕಪಿಚೇಷ್ಟೆ, ಮುಖ ಮೂತಿಯನ್ನು ವಕ್ರವಕ್ರವಾಗಿ ತಿರುಗಿಸುವುದು, ಅವಾಸ್ತವಿಕ ದೃಶ್ಯಗಳು, ಪಾತ್ರಧಾರಿಗಳು ಚಿತ್ರದಲ್ಲಿನ ತಮ್ಮ ಸ್ಥಾನಮಾನವನ್ನೂ ಲೆಕ್ಕಿಸದೆ ತಿಕ್ಕಲು ತಿಕ್ಕಲಾಗಿ ಆಡುವುದು ಬರೀ ಇವಿಷ್ಟೇ ಒಂದು ಚಿತ್ರವನ್ನು ಹಾಸ್ಯಮಯ ಚಿತ್ರವನ್ನಾಗಿ ಮಾಡುವುದಿಲ್ಲ ಎಂಬುದನ್ನು ನಮ್ಮ ನಿರ್ದೇಶಕರುಗಳು ತಿಳಿದುಕೊಳ್ಳಬೇಕು.
ಇಷ್ಟು ದೊಡ್ಡದಾದ ಪೀಠಿಕೆಯನ್ನು ಓದಿದಾಗಲೇ ಚೆಲ್ಲಾಪಿಲ್ಲಿ ಚಿತ್ರದ ಅಂದಾಜು ನಿಮಗೆ ಗೊತ್ತಾಗಿರಬೇಕು. ಹೌದು ಚೆಲ್ಲಾಪಿಲ್ಲಿ ಸಂಪೂರ್ಣ ಹಾಸ್ಯಮಯ ಚಿತ್ರವಾಗುವ ಬದಲಿಗೆ ಅಪಹಾಸ್ಯಮಯ ಚಿತ್ರವಾಗಿಬಿಟ್ಟಿದೆ. ಚಿತ್ರದ ನಾಯಕ ಹೇಮಂತ್, ಪರೋಪಕಾರಿಯಾದರೂ ಏನಾದರೊಂದು ಯಡವಟ್ಟುಗಳಿಗೆ ಸಿಕ್ಕಿಕೊಂಡು ನರಳುತ್ತಾನೆ. ಆತನ ಪ್ರೇಯಸಿ ಪೋಲಿಸ್ ಅಧಿಕಾರಿಯ ಸಂಬಂಧಿ. ಅಲ್ಲೊಬ್ಬ ಖಳ ಮಾದಕ ವಸ್ತುಗಳನ್ನು ಸಾಗಣೆ ಮಾಡುವವ..ಮತ್ತು ಇವೆಲ್ಲದರ ನಡುವೆ ಐದು ಕೋಟಿ ರೂಪಾಯಿ ಹಣ. ಹೇಮಂತನಿಗೆ ಅರಿವಿಲ್ಲದೆ ಹಣವಿದ್ದ ಬೊಂಬೆ ಅವನ ಕೈಸೇರುತ್ತದೆ. ಖಳ ಹೇಮಂತನ ಹಿಂದೆ..ಇದೆ ಕಥೆ.
ಚಿತ್ರದ ಪ್ರಾರಂಭ ಚೆನ್ನಾಗಿದೆ. ಆದರೆ ಬರುಬರುತ್ತಾ ಚಿತ್ರವೂ ಮಂಗನಾಟದ ಪರಮಾವಧಿ ತಲುಪುತ್ತದೆ. ಒಂದು ಸಹನೀಯ ಸಂಗತಿಯೆಂದರೆ ದ್ವಂದ್ವಾರ್ಥದ ಸಂಭಾಷನೆಯಿಲ್ಲದಿರುವುದು. ಪೊಲೀಸರು ಪೆದ್ದರಂತೆಯೂ ಆಡುತ್ತಾರೆ. ನಾಯಕನ ಪಾತ್ರಧಾರಿ ಅವಶ್ಯವಿಲ್ಲದಿದ್ದರೂ ಹೆಂಗಸಿನ ವೇಷದಲ್ಲಿ ಕುಣಿಯುತ್ತಾನೆ..ಹೀಗೆ. ಇಡೀ ಚಿತ್ರದ ತುಂಬಾ ನಗಿಸಬೇಕೆನ್ನುವ ಅನಾವಶ್ಯಕ ಹಾಸ್ಯ ದೃಶ್ಯಗಳ ತುಣುಕುಗಳೇ ತುಂಬಿಹೋಗಿರುವುದು ವಾಹಿನಿಗಳಲ್ಲಿ ಬರುವ ಹಾಸ್ಯ ಕಾರ್ಯಕ್ರಮವನ್ನು ನೋಡುತ್ತಿದ್ದೇವೆಯೇ ಎಂಬ ಅನುಮಾನ ಮೂಡಿಸದೆ ಇರದು. ಚಿತ್ರದಲ್ಲಿ ಕಲಾವಿದರ ದಂಡೆ ಇದೆ. ಆದರೆ ಕೊರತೆಯಿರುವುದು ಕಥೆ ಮತ್ತು ಚಿತ್ರಕಥೆಯಲ್ಲಿ. ಯಾವುದೇ ಚಿತ್ರಕ್ಕೂ ಚಿತ್ರಕಥೆಯೆಂಬುದು ಜೀವಾಳವಾಗುತ್ತದೆ. ಅದರಲ್ಲೂ ಚಿತ್ರದ ಪ್ರಮುಖ ಅಂಶವೇ ಹಾಸ್ಯ ಎಂದಾಗ ಪ್ರತಿ ದೃಶ್ಯವನ್ನೂ ಬಾರೀ ಜಾಗರೂಕತೆಯಿಂದ, ನಾಜೂಕಿನಿಂದ ಮತ್ತು ಬುದ್ದಿವಂತಿಕೆಯಿಂದ ರಚಿಸಬೇಕಾಗುತ್ತದೆ. ಈ ಚಿತ್ರದಲ್ಲಿ ಪ್ರೇಕ್ಷಕರಿಗೆ ಇಷ್ಟು ಸಾಕು, ಬಿದ್ದು ಬಿದ್ದು ನಗುತ್ತಾರೆ ಎಂದು ತಿಳಿದುಕೊಂಡು ಚಿತ್ರಕಥೆ ರಚಿಸಿದೆಯೇನೋ ಎಂಬ ಅನುಮಾನ ಬರುವಂತೆ ಚಿತ್ರದ ನಿರೂಪಣೆಯಿದೆ. ಹಾಗಾಗಿಯೇ ಇಡೀ ಚಿತ್ರ ವಾಹಿನಿಗಳಲ್ಲಿ ಬರುವ ದೈನಂದಿನ ಧಾರಾವಾಹಿಯೋಪಾದಿಯಲ್ಲಿ ನಿರೂಪಿತವಾಗಿದೆಯಾದರೂ ಅವುಗಳಲ್ಲಿರುವ ಪಂಚಿಂಗ್ ಮಾಯಾವಾಗಿದೆ. ಚಿತ್ರದಲ್ಲಿನ ಸಂಭಾಷಣೆಯೂ ಅಷ್ಟೇ. ಕೆಲವು ಕಡೆ ಹಾಸ್ಯ ಎನಿಸುವುದಕ್ಕಿಂತ ತಲೆಹರಟೆ ಎನಿಸತೊಡಗುತ್ತದೆ.
ವಿಜಯ ರಾಘವೇಂದ್ರ ನಿರ್ದೇಶಕರು ಹೇಳಿಕೊಟ್ಟದ್ದನ್ನು ನಿಷ್ಥೆಯಿಂದ ಮಾಡಿದ್ದಾರೆ. ಅವರ ಪಾತ್ರದಲ್ಲಿ ಅಂತಹ ವಿಶೇಷವೇನಿಲ್ಲ. ಹಾಗೆಯೇ ಅಭಿನಯದಲ್ಲೂ. ಇನ್ನುಳಿದಂತೆ ಶೋಭರಾಜ್ ಶಹಬ್ಬಾಸ್ ಗಿಟ್ಟಿಸಿದರೆ, ಮಂಗಳೂರಿನ ಹಾಸ್ಯಕಲಾವಿದ ನವೀನ ಡಿ.ಪಡೀಲ್ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಇನ್ನುಳಿದಂತೆ ಭೋಜರಾಜ್, ಅರವಿಂದ, ನಾಯಕಿಯಾಗಿ ಐಶ್ವರ್ಯಾನಾಗ್ ರ ಪಾತ್ರಗಳಿಗೆ ತಕ್ಕಂತೆ ತಮ್ಮ ನಟನಾ ಸಾಮಾರ್ಥ್ಯವನ್ನು ತೋರಿದ್ದಾರೆ ಎನ್ನಬಹುದು.
ತಾಂತ್ರಿಕ ಅಂಶಗಳೂ ಚೆನ್ನಾಗಿವೆ. ಪಿ.ಎಲ್.ರವೀಯವರ ಛಾಯಾಗ್ರಹಣ, ಮಿಶ್ತಾ ಅವರ ಸಂಗೀತವನ್ನು ತೆಗೆದುಹಾಕುವಂತಿಲ್ಲ.
ನಿರ್ದೇಶಕರು ತಮ್ಮ ಮೊದಲ ಚಿತ್ರವನ್ನು ಸದಭಿರುಚಿಯ ಹಾಸ್ಯ ಚಿತ್ರವನ್ನಾಗಿ ಮಾಡಬೇಕೆಂದು ಶ್ರಮವಹಿಸಿರುವುದು ಚಿತ್ರದುದ್ದಕ್ಕೂ ಗೊತ್ತಾಗುತ್ತದೆ. ಕಥೆಯ ಬಗ್ಗೆ ಚಿತ್ರಕಥೆಯ ಬಗ್ಗೆ ಇನ್ನಷ್ಟು ಯೋಚಿಸಿ, ಪೂರ್ವ ತಯಾರಿ ಮಾಡಿಕೊಂಡಿದ್ದಾರೆ ಚಿತ್ರದ ದಿಕ್ಕೇ ಬದಲಾಗುತ್ತಿತ್ತೇನೋ..?
ಅವರ ಮುಂದಿನ ಚಿತ್ರದಲ್ಲಾದರೂ ಆ ಕಡೆ ನಿಗಾವಹಿಸಲಿ ಎಂಬುದು ಸಿನಿಪ್ರೇಮಿಯ ಆಶಯ.

No comments:

Post a Comment