Pages

Sunday, November 10, 2013

ಜಟ್ಟ

ಒಂದು ಸಿನಿಮಾಕ್ಕೆ ಅದರದೇ ಆದ ಗತಿ ಭಾವ ಮತ್ತು ವಿಭಾಗಗಳಿವೆ. ಎಷ್ಟೇ ಬುದ್ದಿವಂತಿಕೆಯಿಂದ ಆ ತರಹ ಏನೂ ಇಲ್ಲ, ಸಿನಿಮಾ ಸಿನಿಮಾ ಅಷ್ಟೇ ಎನ್ನುವವರು ಇದ್ದಾರೆಯಾದರೂ ಆದಷ್ಟು ಸಮಂಜಸವಲ್ಲ. ಹೊಟ್ಟೆಗೆ ಬಿದ್ದರೆ ಸಾಕು, ಹಸಿವಿ ನೀಗಿದರೆ ಸಾಕು, ಊಟ ಯಾವುದಾದರೇನು ಎನ್ನುವುದು ಸರಿಯೇ ಆದರೂ ಊಟದ ರುಚಿಯಿಲ್ಲದಾಗ ಹೊಟ್ಟೆ ತುಂಬಬಹುದು, ಸಂತೃಪ್ತಿ ಸಿಗುವುದು ಕಷ್ಟ. ಜಟ್ಟ ಸಿನಿಮಾ ನೋಡುತ್ತಿದ್ದ ಹಾಗೆ ಈ ರೀತಿ ಅನಿಸಲು ಪ್ರಾರಂಭಿಸುತ್ತದೆ. ಇಷ್ಟಕ್ಕೂ ಜಟ್ಟ ಯಾವ ವಿಭಾಗದ ಚಿತ್ರ, ಏನು ಚಿತ್ರ ನಿರ್ದೇಶಕರು ಏನನ್ನು ಹೇಳಲು ಹೊರಟಿದ್ದಾರೆ ಎಂಬುದು ಕಲವೊಮ್ಮೆ ನಿಚ್ಚಳವಾದರೆ ಮತ್ತೆ ಕೆಲವೊಮ್ಮೆ ಅಸ್ಪಷ್ಟ ಎನಿಸುತ್ತದೆ. ಹಾಗಾಗಿಯೇ ಇತ್ತ ನಾಟಕವಾಗಿಯೂ ಅತ್ತ ಭಾಷಣದಂತೆಯೂ, ಕೆಲವು ಕಡೆ ಶೋಷಿತರ ನುಡಿಯ ರೀತಿಯೂ ಚಿತ್ರ ಭಾಸವಾಗುತ್ತದೆ. ಚಿತ್ರದಲ್ಲಿ ನಾಲ್ಕು ಪಾತ್ರಗಳಿವೆ. ಒಬ್ಬ ಅಮಾಯಕನಲ್ಲವಾದರೂ ನಾಗರೀಕತೆಯಿಂದ ಸ್ವಲ್ಪ ದೂರವೇ ಇರುವ ಕೋಪಿಷ್ಠ. ಆಕೆಯ ಹೆಂಡತಿ, ಮತ್ತೊಂದು ಶೋಷಣೆಗೊಳಗಾದ ಹೆಣ್ಣು ಮತ್ತು ಒಬ್ಬ ಅಧಿಕಾರಿ. ಕತೆ ಈ ನಾಲ್ವರ ಸುತ್ತಲೇ ಸುತ್ತುತ್ತದೆ. ಒಂದೊಂದು ಪಾತ್ರಕ್ಕೂ ಅದರದೇ ಆದ ಗುಣಾವಗುಣಗಳಿವೆ. ನಿರ್ದೇಶಕರು ಅವುಗಳನ್ನು ತುಂಬಾ ಚೆನ್ನಾಗಿ ಕೊನೆಯವರೆಗೂ ಕಾಯ್ದುಕೊಂಡಿದ್ದಾರೆ. ಚಿತ್ರದ ಕಥಾಹಂದರ ಎಲ್ಲೆಲ್ಲಿಯೋ ಸುತ್ತಿ ಬಂದರೂ ಅದರ ಮೂಲವಿರುವುದು ಸಂಸಾರದಲ್ಲಿ. ಗಂಡ ಹೆಂಡತಿ ನಡುವಣ ದಾಂಪತ್ಯ ಜೀವನದಲ್ಲಿ, ನಂಬಿಕೆಯಲ್ಲಿ. ಇದೆಲ್ಲದರ ಜೊತೆಗೆ ಇತ್ತೀಚಿಗೆ ಕ್ಲೀಷೆಯಾಗುತ್ತಿರುವ ರಾಜಕಾರಣಿಯ ಪಾತ್ರವೂ ಇದೆ.
ಚಿತ್ರದಲ್ಲಿ ನಿರ್ದೇಶಕರು ಹಲವಾರು ವಿಷಯಗಳನ್ನು ಹೇಳಲೇಬೇಕು ಎಂಬ ಹಠಕ್ಕೆ ಬಿದ್ದಿದ್ದಾರೆ. ಹಾಗಾಗಿಯೇ ಭಾಷಣದಿಂದ ಪ್ರಾರಂಭವಾಗುವ ಸಿನಿಮಾದಲ್ಲಿ ಪ್ರತಿಯೊಂದಕ್ಕೂ ಮಾತು, ವಾದವಿದೆ. ಎಲ್ಲೆಲ್ಲಿ ಏನೆಲ್ಲಾ ಆಗಿತ್ತು, ಆಗುತ್ತಿತ್ತು..ಶೋಷಣೆ, ದಮನಿತ....ಹೀಗೆ. ಇಡೀ ಚಿತ್ರವನ್ನು ಈ ಅಂಶಗಳು ತುಸು ಹೆಚ್ಚಾಗಿಯೇ ಆವರಿಸಿಕೊಂಡಿವೆ.ಒಂದಷ್ಟು ನೇರ ಕ್ರಾಂತಿಕಾರಕ
ಮಾತುಗಳೂ ಅಲ್ಲಲ್ಲಿ ಬಂದು ಮೆಚ್ಚೆಗೆಗೆ ಪಾತ್ರವಾಗುತ್ತವೆ. ಇನ್ನೊಂದಷ್ಟು ವಿಷಯಗಳು ಅಯ್ಯೋ..ಇದನ್ನು ಆವಾಗಲಿಂದಲೂ ಜನ ಚರ್ಚಿಸುತ್ತಲೇ ಇರುವರಲ್ಲ, ಅದರಲ್ಲಿ ಹೊಸದೇನಿದೆ ಎಂತಲೂ ಅನಿಸುತ್ತದೆ.
ಚಿತ್ರದ ಕಥೆ - ಚಿತ್ರಕಥೆಗೆ ನೋಡಿಸಿಕೊಂಡು ಹೋಗುವ ಗುಣ ಸ್ವಲ್ಪ ಮಟ್ಟಿಗೆ ಕಡಿಮೆ ಎನ್ನಬಹುದು.ಯಾಕೆಂದರೆ ಒಮ್ಮೆಲೇ ವೇಗವಾಗಿ ಸಾಗುವ ಚಿತ್ರಕಥೆ ಅಲ್ಲಲ್ಲಿ ಮಂದಗತಿಯಾಗುತ್ತದೆ. ಒಮ್ಮೆಲೇ ಇಷ್ಟವಾಗುವ ದೃಶ್ಯರಚನೆ ಒಮ್ಮೊಮ್ಮೆ
ಅಪಥ್ಯವಾಗುತ್ತದೆ. ಹಾಗಾಗಿ ಇದೊಂದು ಮಿಶ್ರ ರುಚಿಯ ಔತಣ ಎನ್ನಬಹುದು. ಚಿತ್ರದ ಕಥೆ ನಡೆಯುವುದು ಕಾಡಿನಲ್ಲಿ.
ಹಾಗಾಗಿ ಕಾಡು, ಅದರ ನಡುವಣ ವಿಷಯಗಳು, ಅಲ್ಲಿನ ಜನಜೀವನ ಮುಂತಾದವು ಚಿತ್ರಕ್ಕೆ ಬೇರೆಯದೇ ಆದ ನೋಟವನ್ನು
ತಂದುಕೊಟ್ಟಿವೆ. ಮತ್ತು ಮಾಮೂಲಿ ಚಿತ್ರಗಳಿಗಿಂತ ಜಟ್ಟ ಬೇರೆ ಎನಿಸುತ್ತದೆ.ಛಾಯಾಗ್ರಾಹಕ ಸೂರ್ಯ ಚಂದ್ರರ
ಛಾಯಾಗ್ರಹಣ ಮೆಚ್ಚುಗೆಗೆ ಪಾತ್ರವಾಗುತ್ತದೆ. ಹಾಗೆಯೇ ಆಶ್ಲೆ ಅಭಿಲಾಶ್ ಅವರ ಸಂಗೀತ ಕೂಡ ಖುಷಿ ಕೊಡುತ್ತದೆ.ಕಿಶೋರ್
ಅಟ್ಟಹಾಸದಲ್ಲಿ ವೀರಪ್ಪನ್ ಪಾತ್ರ ಮಾಡಿದ್ದವರು. ಅವರು ಆ ಪಾತ್ರದಿಂದ ಹೊರಬಂದು ಜಟ್ಟನ ಪಾತ್ರ ನಿರ್ವಹಿಸಿದ್ದರೂ
ಅಲ್ಲಲ್ಲಿ ಅದೇ ನಮಗೆ ಕಾಣಸಿಗುತ್ತದೆ. ಕೆಲವೊಮ್ಮೆ ಪಿತಾಮಗನ್ ನ ವಿಕ್ರಂ ಕೂಡ ನುಸುಳುತ್ತಾರೆ. ನಾಯಕಿಯಾಗಿ ಸುಕ್ರುತಾ
ವಾಗ್ಲೆ, ಪಾವನಾ ತಮ್ಮ ಪಾತ್ರವನ್ನು ಚೆನ್ನಾಗಿ ನಿರ್ವಹಿಸಿದ್ದಾರೆ.
ನವಿಲಾದವರು ಕಿರುಚಿತ್ರದ ಮೂಲಕ ಬೆಳಕಿಗೆ ಬಂದವರು ರಂಗಕರ್ಮಿ ಗಿರಿರಾಜ್. ಒಂದಷ್ಟು ಸಾಹಿತ್ಯ, ಬಂಡಾಯದ
ಮನೋಭಾವ ಹೊಂದಿರುವ ಗಿರಿರಾಜ್ ಚಿತ್ರ ಎಂದಾಗ ನಿರೀಕ್ಷೆ ಇದ್ದೆ ಇರುತ್ತದೆ. ಆದರೆ ದೃಶ್ಯ ಮಾಧ್ಯಮದ ಹೊಳಹುಗಳನ್ನು
ಅವರು ಇನ್ನೂ ಸ್ವಲ್ಪ ತಮ್ಮದಾಗಿಸಿಕೊಳ್ಳಬೇಕು. ಯಾಕೆಂದರೆ ಒಂದು ಕಥೆ ಎಷ್ಟೇ ಹೊಸದಾಗಿ ಉತ್ತಮ ಅಂಶವಿದ್ದರೂ
ಜನರನ್ನು ತಲುಪದಿದ್ದಾಗ ಅಥವಾ ಹೆಚ್ಚು ಜನರನ್ನು ಆಕರ್ಷಣೆ ಮಾಡದಿದ್ದಾಗ, ಜನ ಸಾಮಾನ್ಯನಿಗೆ ಅರ್ಥವಾಗದಿದ್ದಾಗ
ಅದರ ಸಾರ್ಥಕತೆ ಅಷ್ಟಿರುವುದಿಲ್ಲ. ಒಳ್ಳೆಯ ವಿಷಯಗಳು ಬರೀ ಪ್ರಜ್ಞಾವಂತರಿಗೆ ಮನವರಿಕೆಯಾದರೆ ಸಾಲದು
ಸಾಮಾನ್ಯನಿಗೂ ಪಥ್ಯವಾಗಬೇಕು..ಸಿನಿಮಾ ತೀರಾ ಸಾಮಾನ್ಯ ಮಾಧ್ಯಮ. ಹಾಗಾಗಿ ಗಿರಿರಾಜ್ ತಮ್ಮ ಮುಂದಿನ ಚಿತ್ರದಲ್ಲಿ
ವಿಷಯವನ್ನು ಸರಳವಾಗಿ ಹೇಳಲಿ ಎಂಬುದು ಚಿತ್ರರಸಿಕನ ಆಶಯ.

No comments:

Post a Comment