Pages

Sunday, November 10, 2013

ಸಕ್ಕರೆ

ಅಭಯ ಸಿಂಹ ತಮ್ಮ ಮೂರನೆಯ ಚಿತ್ರದೊಂದಿಗೆ ಬಂದಿದ್ದಾರೆ. ಮೊದಲ ಚಿತ್ರ ಗುಬ್ಬಚ್ಚಿಗಳಿಗೆ ವಿಮರ್ಶಕರಿಂದ
ಪ್ರಶಂಸೆಗಳಿಸಿಕೊಂಡ ನಂತರ ಮಮ್ಮುಟ್ಟಿ ಅಭಿನಯದ ಶಿಕಾರಿ ಮಾಡಿದರು. ಅದು ಸೋಲನ್ನಪ್ಪಿತ್ತು. ಈಗ ಸಕ್ಕರೆ
ಮಾಡಿದ್ದಾರೆ. ಸಕ್ಕರೆ ಚಿತ್ರ ಸಿಹಿಯಾಗಿದೆ. ಇಡೀ ಚಿತ್ರದಲ್ಲಿ ಸಕ್ಕರೆಯೆ ಸಿಹಿಯೇ ತುಂಬಿದೆಯಾದರೂ ಬರೀ ಸಕ್ಕರೆಯನ್ನಷ್ಟೇ ತಿನ್ನಲು ಸ್ವಲ್ಪ ಕಷ್ಟವಾಗುವಂತಿದೆ ಚಿತ್ರಕಥೆ. ಚಿತ್ರದಲ್ಲಿ ಒಂದು ಸುಂದರವಾದ ಪ್ರೇಮಕಥೆಯಿದೆ. ಸುಳ್ಳೇಳುವ ನಾಯಕ ವಿನಯ ನಾಯಕಿಯನ್ನು ಪಟಾಯಿಸಿಕೊಳ್ಳುತ್ತಾನೆ. ನಾಯಕಿಯೋ ಈಗಾಗಲೇ ಇಬ್ಬರನ್ನು ಪ್ರೀತಿಸಿರುತ್ತಾಳೆ. ಇಬ್ಬರಿಂದ ಮೋಸ ಹೋದೆ ಎಂದುಕೊಂಡಿರುತ್ತಾಳೆ. ಆತ್ಮಹತ್ಯೆಗೂ ಪ್ರಯತ್ನಿಸಿರುತ್ತಾಳೆ. ಆಗ ಸಿಗುವ ನಾಯಕ ತಾನೊಂದು ಕಥೆ ಕಟ್ಟಿ
ಅವಳನ್ನು ಒಲಿಸಿಕೊಳ್ಳುತ್ತಾನೆ.ಆನಂತರ ಏನಾಗುತ್ತದೆ..? ಅದು ಸುಳ್ಳು ಎಂದು ಗೊತ್ತಾದಾಗ ನಾಯಕಿ ಏನು ಮಾಡುತ್ತಾಳೆ.
ಚಿತ್ರದ ಅವಧಿ ಕೇವಲ ಎರಡು ಘಂಟೆ ಮೂರು ನಿಮಿಷಗಳು. ಹಾಗಾಗಿ ಮೊದಲಾರ್ಧದಲ್ಲಿ ಗಮನಾರ್ಹವಾದದ್ದು ಏನೂ ನಡೆಯುವುದೂ ಇಲ್ಲ. ನಾಯಕಿಯ ಹಿಂದೆ ಮುಂದೆ ಸುತ್ತುವ ನಾಯಕ ಮತ್ತು ನಾಯಕಿಯ ಹಳೆಯ ಚರಿತ್ರೆ ಮೂರ್ನಾಲ್ಕು ದೃಶ್ಯಗಳಲ್ಲಿ ಬಂದು ಹೋಗುತ್ತದೆ. ಎರಡನೆಯ ಭಾಗದಲ್ಲೂ ಅಂತಹ ತಿರುವುಗಳಿಲ್ಲ. ಆದರೆ ಚಿತ್ರ ಬೋರಾಗುವುದಿಲ್ಲ. ಆದರೂ ಚಿತ್ರದಲ್ಲಿನ ಪ್ರೀತಿಯ ಉತ್ಕಟತೆ ಮನಸ್ಸಿಗೆ ನಾಟುವಲ್ಲಿ ಸೋಲುತ್ತದೆ. ಅದಕ್ಕೆ ಕಾರಣ ಚಿತ್ರಕಥೆ. ಮೊದಲ ಒಂದು ದೃಶ್ಯವನ್ನೇ ತೆಗೆದುಕೊಳ್ಳಿ. ನಾಯಕಿ ಭಗ್ನ ಪ್ರೇಮಿಯಾಗಿ ನೋವಿನಿಂದ ಊರಿಗೆ ಬಂದಿದ್ದಾಳೆ. ಅವಳನ್ನು ಮೊದಲ ನೋಟದಲ್ಲೇ ಕಂಡು ಮನ ಸೋಲುವ ನಾಯಕ ಸಕ್ಕರೆ ಕೇಳುವ ನೆಪದಲ್ಲಿ ಅವಳ ಮನೆಗೆ ಬಂದಾಗ ಆಕೆ ಬೈದು ಆತನ ತಲೆಯ ಮೇಲೆ ಹೂಕುಂಡ ಬಿಸಾಡುತ್ತಾಳೆ. ಆದರೆ ಎರಡನೆಯ ದೃಶ್ಯದಲ್ಲೇ ಇಬ್ಬರು ಆಪ್ತ ಸ್ನೇಹಿತರಂತೆ ತಮ್ಮ ಕಷ್ಟ ಸುಖ ಹಂಚಿಕೊಳ್ಳುತ್ತಾರೆ.ಅವಳು ತನ್ನ ಕಥೆಯನ್ನು ಬಿಡಿಸಿ ಹೇಳಲು ಶುರು ಮಾಡಿಬಿಡುತ್ತಾಳೆ. ಈ ತರಹದ ದೃಶ್ಯಗಳಿಂದಾಗಿ ಸಕ್ಕರೆ ಅಲ್ಲಲ್ಲಿ ಪೇಲವ ಎನಿಸುತ್ತದೆ. ಕೆಲವು ಕಡೆ ಬಾಲಿಶ ಎನಿಸುತ್ತದೆ. ಆದರೆ ಒಟ್ಟಾರೆಯಾಗಿ ಸದಭಿರುಚಿಯ ಚಿತ್ರ ಎನಿಸಿಕೊಳ್ಳುತ್ತದೆ. ಹಾಡುಗಳ ನೃತ್ಯ ಸಂಯೋಜನೆ ಚೆನ್ನಾಗಿದೆ, ಹಾಡುಗಳು ಇನ್ನೂ ಚೆನ್ನಾಗಿರಬೇಕಿತ್ತೇನೋ ಎನಿಸುತ್ತದೆ. ಎರಡು ಹಾಡುಗಳು ತಾಳಬದ್ದವಾಗಿ ಕಿವಿಗೆ ಇಂಪು ಎನಿಸಿದರೂ ಚಿತ್ರದ ಕಥೆಗೆ ತಮ್ಮ ಸಿಹಿಯನ್ನು ಸೇರಿಸಿಲ್ಲ. ಗಣೇಶ್ ಲವಲವಿಕೆಯಿಂದ ಚಿತ್ರದುದ್ದಕ್ಕೂ ಅಭಿನಯಿಸಿದ್ದಾರೆ. ಹಾಗೆ ದೀಪಾಸನ್ನಿಧಿ ಆತುರದ ಹುಡುಗಿಯಾಗಿ ಅವರ ಪಾತ್ರ ಚೆನ್ನಾಗಿದೆಯಾದರೂ ಅದಕ್ಕೊಂದು ಸ್ಪಷ್ಟ ನೆಲೆಗಟ್ಟನ್ನು ನಿರ್ದೇಶಕರು ಕೊಟ್ಟಿಲ್ಲ. ಚಿತ್ರದಲ್ಲಿ ಬರುವ ಉಪ ಪ್ರೇಮಕಥೆಯಲ್ಲಿ ಅನಂತ ನಾಗ್ ವಿನಯಾ ಪ್ರಸಾದ್ ಇಷ್ಟವಾಗುತ್ತಾರೆ. ಇನ್ನುಳಿದಂತೆ ಅನುಪ್ರಭಾಕರ್, ಅಚ್ಯುತ ಕುಮಾರ್, ರಾಜೇಶ್ ನಟರಂಗ ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ.
ಇಡೀ ಚಿತ್ರ ಅದ್ದೂರಿಯಾಗಿ ಮೂಡಿಬಂದಿದೆ. ನಿರ್ಮಾಪಕ ಬಿ ಸುರೇಶ ನಿರ್ದೇಶಕರ ಆಶಯಕ್ಕೆ ಏನೋ ಬೇಕೋ ಎಲ್ಲವನ್ನೂ ಒದಗಿಸಿದ್ದಾರೆ. ವಿ. ಹರಿಕೃಷ್ಣರ ಸಂಗೀತ ಅಲ್ಲಲ್ಲಿ ಬೇರೆ ಸಿನಿಮಾಗಳನ್ನು ರಾಗಗಳನ್ನು ನೆನಪಿಸುತ್ತದೆ. ಹಿನ್ನೆಲೆ ಸಂಗೀತ ಇನ್ನೂ ಚೆನ್ನಾಗಿರಬೇಕಿತ್ತು. ಒಟ್ಟಿನಲ್ಲಿ ಅಭಯ ಸಿಂಹ ಒಂದೊಳ್ಳೆ ಕಥೆಯನ್ನೇ ಸಿನೆಮಾ ಮಾಡಿದ್ದಾರೆ. ಆದರೆ ಚಿತ್ರಕಥೆಯನ್ನು ಇನ್ನೂ ಸ್ವಲ್ಪ ಬಿಗಿಯಾಗಿಸಿದ್ದರೆ ಅದರ ಕಥೆಯೇ ಬೇರೆಯಾಗುತ್ತಿತ್ತು. ಈಗಲೂ ಯಾವುದೇ ಧಾವಂತವಿಲ್ಲದೆ ಮನೆ ಮಂದಿಯಲ್ಲ
ಕುಳಿತು ನೋಡಬಹುದಾದ ಸಿಹಿಯಾದ ಸಿನಿಮಾ ಸಕ್ಕರೆ ಎನ್ನಲಡ್ಡಿಯಿಲ್ಲ.

No comments:

Post a Comment