Pages

Sunday, November 10, 2013

ಮಹಾನದಿ


ಸಿನೆಮಾ ಹೇಗಿದೆ..
ಪ್ರೇಕ್ಷಕ: ಏನ್ ಸಿನೆಮಾ ಗುರು...ಯಾಕಾದ್ರೂ ಇಂತ ಫಿಲಂ ಮಾಡ್ತಾರೋ..
ಪ್ರೇಕ್ಷಕ 2 :ಒಂದಕ್ಕೊಂದ್ ಸಂಬಂಧಾನೆ ಇಲ್ಲ...ಏನ್ ಕಥೆನೋ ಏನೋ..ಸುಮ್ಮನೆ ದುಡ್ಡು ವೇಸ್ಟ್...
ಪ್ರೇಕ್ಷಕ ಇಂತಹದ್ದೇ ಕಥೆಯಿರುವ ಚಿತ್ರ ಬೇಕೆಂದು ಕೇಳುವುದಿಲ್ಲ. ಆದರೆ ಯಾವುದೇ ಕಥೆಯ ಚಿತ್ರವನ್ನೇ ಕೊಡಲಿ ಅದು ಮನರಂಜಿಸುವಂತಿರಲಿ, ಪ್ರೇಕ್ಷಕರನ್ನು ಹಿಡಿದಿಡುವ ಹಾಗಿರಲಿ ಎನ್ನುತ್ತಾನೆ. ನಿಜವಾಗಿಯೂ ಪ್ರೇಕ್ಷಕ ನಿರೀಕ್ಷಿಸುವುದೂ ಒಂದು ಕಥೆಯನ್ನು ಸಶಕ್ತಭಾವದೊಂದಿಗೆ ತೆರೆಗೆ ತರುವುದಷ್ಟೇ. ಬಹುಶ ಕಥೆಯನ್ನು ಸಿನಿಮಾಕ್ಕೆ ರೂಪಾಂತರಗೊಳಿಸುವಲ್ಲಿ ಬಹುಮುಖ್ಯವಾಗಿ ಬೇಕಾಗಿರುವುದು ಚಿತ್ರಕಥೆ.
ಮಹಾನದಿ ಚಿತ್ರ ನೋಡಿದ ನಂತರ ವಿಮರ್ಶೆ ಎನ್ನುವುದು ಏಕಮುಖವಾಗದಿರಲಿ ಎಂಬ ಉದ್ದೇಶದಿಂದ ಚಿತ್ರ ನೋಡಿದ ಒಂದಷ್ಟು ಪ್ರೇಕ್ಷಕರನ್ನು ವಿಚಾರಿಸಿದಾಗ ಬೇಸರದ ಮುಖಭಾವದೊಂದಿಗೆ ಮೇಲಿನ ಅಭಿಪ್ರಾಯಗಳು ವ್ಯಕ್ತವಾದವು.
ಮಹಾನದಿ ಕಡಲ ತೀರದ ಕಥೆ. ಹಾಗೆ ಸ್ವಲ್ಪ ಹಳೆಯ ಕಾಲಘಟ್ಟದಲ್ಲಿ ನಡೆಯುವ ಕಥೆ. ಹಾಗಾಗಿ ನಿಮಗೆ ಹಳೆಯ ನೂರರ ನೋಟು, ಚಿತ್ರಮಂದಿರದಲ್ಲಿ ಹಳೆಯ ಚಿತ್ರ ಮುಂತಾದವುಗಳು ಕಾಣಸಿಗುತ್ತವೆ. ಆದರೆ ನಿಮಗೆಲ್ಲೂ ಇದೊಂದು ಎಂಬತ್ತರ ದಶಕದಲ್ಲಿ ನಡೆಯುವ ಕಥೆ ಎನಿಸುವುದಿಲ್ಲ. ಮೀನು ಹಿಡಿಯುವ ನಾಯಕಿಗೆ ಮುಂಬೈ ಹುಡುಗನನ್ನು ಮದುವೆಯಾಗುವಾಸೆ..ಕಾರಣ ಸರಳ..ಮುಂಬೈನ ಹುಡುಗನನ್ನು ಮದುವೆಯಾದರೆ ಐಶರಾಮಿ ಜೀವನ ನಡೆಸಬಹುದು ಎಂಬ ಕನಸು...ಅವಳ ಕನಸಿನ ಬೆನ್ನುಬಿದ್ದು ಸಾಗುವ ಕಥೆಯಲ್ಲಿ, ಆ ಪಯಣದಲ್ಲಿ ನಾಯಕಿಯ ಜೀವನದಲ್ಲಿ ಏನೇನಲ್ಲಾ ನಡೆದುಹೋಗುತ್ತವೆ...ಎಂಬುದೇ ಕಥೆಯ ತಿರುಳು.
ಚಿತ್ರದ ಕಥೆಯಲ್ಲಿನ ನಾಯಕಿಯ ಪಾತ್ರದಲ್ಲಿ ಶಕ್ತಿಯಿದೆ. ಆದರೆ ಅದನ್ನು ಪ್ರಭಾವಿ ಚಿತ್ರಕಥೆಯೊಂದಿಗೆ ತೆರೆಗೆ ತರುವಲ್ಲಿ ನಿರ್ದೇಶಕರು ಸಂಪೂರ್ಣ ಸೋತಿದ್ದಾರೆ. ಒಂದಷ್ಟು ವಿಭಿನ್ನ ಪಾತ್ರಗಳನ್ನ ಸೃಷ್ಟಿ ಮಾಡಿದ್ದಾರಾದರೂ ಅವ್ಯಾವೂ ಚಿತ್ರದ ಕಥೆಗೆ ಸಹಾಯ ಮಾಡುವುದಿಲ್ಲ. ಪ್ರತಿ ಪಾತ್ರದ ನಡೆ ನುಡಿ ಕ್ಲೀಷೆ ಎನಿಸುತ್ತದೆ. ನಿರ್ದೇಶಕರು ಬಾಂಬೆ ಎಂದರೆ ವೇಶ್ಯಾವಾಟಿಕೆ ಎಂದು ತಿಳಿದಂತಿದೆ. ಹಾಗಾಗಿಯೇ ಬಾಂಬೆಯಲ್ಲಿ ನಿರ್ದೇಶಕರಿಗೆ ಬರೀ ಕಾಮುಕರೆ, ತಲೆಹಿಡುಕರೆ ಅವರಿಗೆ ಕಾಣಿಸಿದ್ದಾರೆ. ಅದನ್ನು ಯಥಾವತ್ತಾಗಿ ನಮಗೂ ತೋರಿಸಿ ಬಾಂಬೆ ಎಂದರೆ ಬೆಚ್ಚಿಬೀಳುವಂತೆ ಮಾಡಿದ್ದಾರೆ. ಮಟಕಾದಿಂದ ಸರ್ವನಾಶ ಎಂಬುದನ್ನು ರಂಗಾಯಣ ರಘು ಪಾತ್ರದ ಮೂಲಕ ಅಭಿವ್ಯಕ್ತಪಡಿಸಲು ಪ್ರಯತ್ನಿಸಿರುವ ಕೃಷ್ಣಪ್ಪ ಉಪ್ಪೂರು ಅದರಲ್ಲೂ ಸೋತಿದ್ದಾರೆ. ಇಡೀ ಚಿತ್ರದ ತುಂಬಾ ಬಾಲಿಶ ದೃಶ್ಯಗಳು ದಂಡಿಗಟ್ಟಲೆ ಸಿಗುವುದರಿಂದ ನಾಯಕಿಯ ನೋವು ನಲಿವು ಪ್ರೇಕ್ಷಕನಿಗೆ ತಾಕುವುದಿಲ್ಲ.
ಇಲ್ಲಿನ ನಾಯಕಿಯನ್ನು, ಹೆಣ್ಣನ್ನು ಮಹಾನದಿಗೆ ಹೋಲಿಸಲಾಗಿದೆ. ಆದರೆ ಅದೆಲ್ಲೂ ಹೆಣ್ಣಿನ ಮನಸಿನ ತಲ್ಲಣಗಳ ಅಲೆಯನ್ನು ಅವುಗಳ ಮೊರೆತವನ್ನು ತೋರಿಸುವುದಿಲ್ಲ. ಪ್ರತಿ ಚಿತ್ರಿಕೆಯಲ್ಲೂ ನಟಿ ಸಂಜನಾ ಇದ್ದಾರೆ. ಆದರೆ ಅವರು ತಮಗೊದಗಿದ ಅವಕಾಶವನ್ನು ಸರಿಯಾಗಿ ಬಳಸಿಕೊಂಡಿಲ್ಲ. ಇಡೀ ಚಿತ್ರದಲ್ಲಿ ಸಂಜನಾ ಗ್ಲಾಮರ್ ಬೊಂಬೆಯಂತೆಯೇ ಕಾಣಿಸುತ್ತಾರೆ. ಆಕೆಯ ಪ್ರಸಾದನ, ಕೇಶಶೈಲಿ ಯಾವುವೂ ಮೀನುಗಾರರ ಹೆಣ್ಣುಮಗಳು ಎನಿಸುವುದಿಲ್ಲ. ಅವರ ಅಭಿನಯ. ಭಾಷೆಯಲ್ಲಂತೂ ಅದನ್ನು ನಿರೀಕ್ಷಿಸುವುದು ಅಪರಾಧ. ಹೆಸರಿಗೆ ನಾಯಕನಾದರೂ ದಿಲೀಪ್ ರಾಜ್ ಗೆ ಹೆಚ್ಚು ಅವಕಾಶವಿಲ್ಲ.
ಎ.ಎಂ.ನೀಲ್ ಸಂಗೀತವಾಗಲಿ, ಸುಂದರನಾಥ ಸುವರ್ಣರ ಛಾಯಾಗ್ರಹಣವಾಗಲಿ ಅಬ್ಬಬ್ಬಾ ಎನಿಸುವುದಿಲ್ಲ. ನಿರ್ದೇಶಕರಂತೂ ಸಮಾಜದ ಯಾವ ವಾಸ್ತವಿಕ ಅಂಶವನ್ನೂ ಗಮನಿಸದೆ ಚಿತ್ರಕಥೆ ರಚಿಸಿದ್ದಾರೆ. ಹಾಗೆ ತಮಗಿಷ್ಟ ಬಂದಂತೆ ಚಿತ್ರವನ್ನೂ ನಿರ್ದೇಶಿಸಿದ್ದಾರೆ.
ಬರೀ ಒಂದು ಕಥೆಯನ್ನೇ ನಂಬಿ ಅದಕ್ಕೆ ಪರಿಣಾಮಕಾರಿ ಚಿತ್ರಕಥೆ ರಚಿಸದಿದ್ದಾಗ ಮಹಾನದಿಯಂತಹ ಚಿತ್ರಗಳು ರೂಪತಾಳುತ್ತವೆ ಮತ್ತು ಪ್ರೇಕ್ಷಕರನ್ನು ಚಿತ್ರಮಂದಿರದಿಂದ ದೂರತಳ್ಳುತ್ತವೆ ಎನ್ನಬಹುದು.

No comments:

Post a Comment